Thursday, August 2, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 5


ಅಂದಿನ ನನ್ನ ಹತಾಶಸ್ಥಿತಿ, ಸಂದರ್ಭವನ್ನು ಗಣನೆಗೇ ತೆಗೆದುಕೊಳ್ಳದಂತೆ ಕನಸು ಬರುತ್ತದೆ ಎಂಬ ನನ್ನದೇ ಭಾವನೆಯನ್ನು ಪಕ್ಕಕ್ಕೆ ನೂಕಲು ಆ ಸಂಭಾಷಣೆಕಾರಣವಾಯಿತು. ನನ್ನ ಕನಸುಗಳ ಅನುಭವವ ಯಾರ ಮುಂದೆ ಬಿಚ್ಚಿಡಲೂ ನನಗೆ ಧೈರ್ಯವೇ ಬರುತ್ತಿರಲಿಲ್ಲ. ಕಾರಣ, ನಾನು ಜಗಜ್ಜನಿತವೆಂದು ಕಂಡು ಕೊಂಡಿದ್ದ ಜನಪ್ರಿಯ ನಂಬಿಕೆ! ಅನುಭವ ಎಲ್ಲವನ್ನೂ ಕಲಿಸುತ್ತದೆ ಹಾಗೂ ಅನುಭವವಿರುವ ವ್ಯಕ್ತಿಯೇ ಎಲ್ಲವನ್ನೂ ಹೇಳಿಕೊಳ್ಳಲು ಯೋಗ್ಯ!ಈ ನಂಬಿಕೆಯನ್ನು ಹಲವು ಸನ್ನಿವೇಶಗಳಲ್ಲಿ ಹಲವರು ತೆರೆದಿಟ್ಟಿಂದರಿದ್ದಲೋ ಏನೋ ನಾನು ಅದರ ಅಬ್ಬರಕ್ಕೆ ಹೆದರಿ ಬೆದರಿಕೊಂಡು ತಣ್ಣಗಿದ್ದೆ.

ಹಾಗಾಗಿ, ಅಂದಿನ ಕನಸಿನ ಸಂಭಾಷಣೆ ನನಗೆಂದೇ ಆಡಿದಂತೆ ಅಂದೇ ನನಗೆ ತೋರಿತು!

ಕನಸ ದನಿ ಕೇಳುವುದು- ಅನುಭವ ಎಂದರೇನು?”
ನಾನೆನ್ನುವೆ- ಕಲಿಯುತ್ತಾ ಕಲಿಯುತ್ತಾ ವಯಸ್ಸಾದಾಗ ಆದ ಸಂಗ್ರಹ
ದನಿಯ ಪ್ರತಿಕ್ರಿಯೆ – ಹ್ಞಾಂ! ಹೌದೇ? ನೀನು ಏನೋ ಕೆಟ್ಟದ್ದು ಮಾಡಲು ಕಲಿಯಲು ಹೊರಟು ಅದನ್ನು ಮಾಡುವುದ ಕಲಿಯುತ್ತಾ ಕಲಿಯುತ್ತಾ ವಯಸ್ಸಾದರೆ ಅದನ್ನು ಅನುಭವಎಂಬ ಗಂಟಿನೊಳಗೆ ಸೇರಿಸಿಬಿಡುವೆಯಾ?”
ನಾನು ಇಲ್ಲವೆನ್ನುವೆ,
ಮತ್ತೆ ಪ್ರಶ್ನೆ – ಹಾಗೆಯೇ. ವಯಸ್ಸಾದಾಗ ಎಂದರೆ ಎಷ್ಟು ವಯಸ್ಸದು? ೭೦-೮೦? ಸರಿ, ಎಂಭತ್ತೆಂದುಕೊಂಡರೆ ಎಂಭತ್ತೊಂದರ ಅನುಭವಕ್ಕೆ ಆ ವ್ಯಕ್ತಿ ಹೊಸಬನೇ ಆದ್ದರಿಂದ ಅನುಭವಿಎನ್ನಲು ಹೇಗೆ ಸಾಧ್ಯ?”
ತೆಪ್ಪಗಾದ ನನಗೆ ತರ್ಕವೇ ಉತ್ತರವನ್ನೂ ಒದಗಿಸಿತು.
ಕೇಳು.. ಅನುಭವ ಎಂಬುದು ಎಂದೋ ತಲುಪಿಕೊಳ್ಳುವ ಸ್ಥಿತಿಯಲ್ಲ. ಅದು ಪ್ರತಿ ಗಳಿಗೆಯಲ್ಲಿ ಮಿಳಿತವಾಗಿದೆ. ಕಣ್ಣು ರೆಪ್ಪೆಯ ಮುಚ್ಚಿ ತೆರೆಯುವ ನಡುವಿರುವ ಅಂತರವಿದೆಯಲ್ಲ, ಅದುವೇ ಅನುಭವ! ಮುಚ್ಚಿದ ರೆಪ್ಪೆಯೊಳಗೆ ಹಳೆಯದು ಹುದುಗಿಕೊಳ್ಳುತ್ತಾ, ತೆರೆದ ಕಣ್ಣುಗಳೊಳಗೆ ಹೊಸದು ದಾಖಲಾಗುತ್ತಾ ನಮ್ಮನ್ನು ಅನುಭವಿಗಳನ್ನಾಗಿಸುತ್ತಲೇ ಇದೆ!

ನನಗೆ ಆ ಕನಸು ಮಾತ್ರ ನನಗಾಗಿಎನ್ನಿಸಿತು. ಆದರೂ ಕನಸು ನನ್ನದೇ ಅಂಶ ಎಂಬ ಮನಃ ಸ್ಥಿತಿಗೆ ತಲುಪಲು ಅವಕಾಶವೇ ನೀಡದಂತೆ ಪರಿಸ್ಥಿತಿಗಳು ಜರ್ಝರಿತವಾಗಿಸುವವು. ಏನೀ ಪರಿಸ್ಥಿತಿ? ಬೆಳಗಾಗೆದ್ದರೆ- ಮಧ್ಯಾಹ್ನವಾದರೆ- ರಾತ್ರಿ ಬಂದರೆ ಎಂದಿಗೂ ಎಂದೆಂದಿಗೂ  ಏನು ಮಾಡಲಿ?’ ಎಂಬ ಪ್ರಶ್ನೆ . ವಿದ್ಯಾರ್ಥಿಯಾಗಿ ಮಾಡಲು ದಂಡಿಗಟ್ಟಲೆ ಕೆಲಸಗಳು ಕಾದು ಕುಳಿತಿರುವಾಗ ವಿದ್ಯಾರ್ಥಿಎಂಬ ಪಾತ್ರವೇ ಮನದಟ್ಟಾಗದಂತೆ ಮಬ್ಬು ಹಿಡಿದಿರುವ ಮನಸ್ಸು! ಬೆಳಕು ಕಂಡರೆ ಮುಚ್ಚುವ ಕಣ್ಣುಗಳು. ಒಬ್ಬಳೇ ಇದ್ದರೆ ಹಿಂದೆ ಯಾರದೋ ನೆರಳಿದೆಯೆಂಬ ಭಯ. ಎದ್ದರೂ ಬಿದ್ದರೂ ಬೆನ್ನು ಬಿಡದಂತೆ ಕಾಡುವ, ಅಂದು ನಾನು ಏನೋಎಂದು ಭಾವಿಸಿದ್ದ ನನಗರಿಯದ ನನ್ನದೇ ಸೃಷ್ಟಿಗಳು!

ಇವುಗಳ ಮಧ್ಯೆ ಹೀಗೆ ಯಾರಿಗೂ ಬರಬಾರದಾದಕನಸುಗಳೂ ಬಂದು ಕುಂತರೆ ನನ್ನ ಬಗ್ಗೆ ನಾನು ಏನೆಂಬ ಭಾವನೆ ಇಟ್ಟುಕೊಳ್ಳಲು ಸಾಧ್ಯ?

ಪರಿಸ್ಥಿತಿ- ಮನಃಸ್ಥಿತಿಗಳು ಹೀಗಿರುವಾಗ ಮತ್ತೊಂದು ಕನಸು ಎದುರಾಯಿತು.

ನಾನು ಕತ್ತಲಿನಲ್ಲಿ ಮನೆಯ ಟೆರೇಸಿನ ಮೇಲೆ ನಿಂತಿರುವೆ. ದನಿ ಕತ್ತಲಿಂದ ಬರುವುದು, ಕೇಳುವುದು- 
ಹೇ! ಉತ್ತರಿಸು. ನಾನು ನಿನ್ನನ್ನು ಎಷ್ಟೆಷ್ಟೋ ಬಾರಿ ಸಂಧಿಸಿರುವೆ, ಅಲ್ಲವೆ? ಉತ್ತರಿಸಿರುವೆ ಅಲ್ಲವೆ? ಹಾಗಾದರೆ ನಾನ್ಯಾರು?”
ಯಾರು?” ನನ್ನ ಪ್ರತಿ ಪ್ರಶ್ನೆ
ಯಾರಿರಬಹುದು?” ಸ್ವಲ್ಪ ದನಿಯು ಗಡುಸಾಗಿಯೂ, ಹೆಚ್ಚೆಚ್ಚು ಗಂಭೀರವಾಗಿಯೂ ಆಗುತ್ತಾ ಮುಂದುವರೆಯುವುದು.
ಹೇಳು? ನಾನು ಹೊರಗಿನಿಂದ ನಿನ್ನ ನಿಯಂತ್ರಿಸ ಹೊರಟಿರುವ ಶಕ್ತಿಯಾ, ನಿನ್ನ ಅಸ್ತಿತ್ವವ ಕೀಳಲು ಬಯಸಿರುವ ಪಿಶಾಚಿಯಾ? ಯಾರು ನಾನು?”
ಶಕ್ತಿ- ಪಿಶಾಚಿಯೆಂಬ ಪದಗಳು ಪದೇ ಪದೇ ಪನರಾವರ್ತನೆಯಾಗುತ್ತಾ ನನ್ನನ್ನು ನಡುಗಿಸುತ್ತಾ, ತಲೆಯನ್ನು ಚಿಟ್ಟು ಹಿಡಿಸುತ್ತಾ ಪ್ರತಿಕ್ರಿಯಿಸಲೇಬೇಕೆಂದು ಪಟ್ಟು ಹಿಡಿಯುವವು.
ನಜ್ಜುಗುಜ್ಜಾಗಿ ಹೋದ ನಾನು ಆ ಸ್ಥಿತಿಯಿಂದ ಚೆಂಗನೆದ್ದು ಬಂದಂತೆ ಉಸುರುವೆ ನೀನು ಅದ್ಯಾವುದೂ ಅಲ್ಲ. ನಾನು! ನೀನು, ನಾನೇ! ಮತ್ತೇನೂ ಅಲ್ಲ
ದನಿ ಮೆದುವಾಗುವುದು ಶಕ್ತಿಯೆಂದರೆ ಆ ರೂಪದಲ್ಲಿ ಮಾರ್ಗದರ್ಶಿಸುತ್ತಾ, ಪಿಶಾಚಿಯೆಂದರೆ ಆ ರೂಪದಲ್ಲಿ ದರ್ಶಿಸುತ್ತಾ ಬರುವ ಅಂತಃಶಕ್ತಿಯ ನೀನು ನೀನೇ ಎಂದಿರುವೆ. ಹಾಗಾಗಿ ನಿನಗೆ ನಾನು ನೀನೇ!

ನನ್ನ ಮನಸ್ಸು ಏನುಎಂಬುದರಿಂದ ನಾನುಎಂಬುದರೆಡೆಗೆ ಸಾಗಿತು. ಎಲ್ಲವೂ ನಾನೇ ಆಗಿದ್ದರೂ, ನನಗೆ ಮಾತ್ರ ಕನಸಿನ ಅನುಭವಗಳನ್ನು ಅದು- ನಾನುಎಂದು ವಿಂಗಡಿಸುವುದರಲ್ಲೇ, ನನಗಿಂತ ಶಕ್ತಿಯುತವಾದ ನನ್ನಂಶ ಎಂದು ಪರಿಗಣಿಸುವುದರಲ್ಲೇ ಅಪರಿಮಿತ ಆನಂದ ಕಂಡಿತು. - ನಮಗಿಂತ ಶಕ್ತಿಯುತವಾದುದು ನಮ್ಮನ್ನು ಕಾಪಾಡುತ್ತಿದೆ, ಅಂತೆಯೇ ಅದರ ಪರ್ಯಾಯವಾಗಿ ಮತ್ತೊಂದು ಶಕ್ತಿ ನಮ್ಮನ್ನು ಕಾಡುತ್ತಿದೆ ಎಂಬುದು ಎಲ್ಲರೂ ಒಪ್ಪುವ ಮತ್ತು ಇತರರೆಲ್ಲರೂ ಒಪ್ಪಲೇ ಬೇಕೆಂದು ಬಯಸುವ ನಂಬಿಕೆಯಾಗಿದೆ. ಆ ಶಕ್ತಿಗಳೆರಡೂ ನಮ್ಮಲ್ಲೇ ಅಡಗಿದೆ ಎಂಬ ತಿಳಿವೂ ಇದೆಯಾದರೂ ಅದರ ಅಸ್ಥಿತ್ವಕ್ಕೆ ಅಷ್ಟು ಮಾನ್ಯತೆ ದೊರೆತಿಲ್ಲ! ನನ್ನ ಮನಸ್ಸೂ ಅಂದು ಹಾಗೆಯೇ ಮಾನ್ಯತೆ ಇರುವ ನಂಬಿಕೆಯನ್ನು ಕೊಂಚ ಬೇರೆಯದೇ ರೂಪದಲ್ಲಿ (ಅದು- ನಾನು!) ಸ್ವೀಕರಿಸಲು ಬಯಸಿತ್ತು ಎನಿಸುತ್ತದೆ...

(¸À±ÉõÀ)
(Image- Web)

3 comments:

Badarinath Palavalli said...

ಮನೋ ವಿಕಸನ ಅಂಕಣ. ಸಂಗ್ರಹ ಯೋಗ್ಯ ಬರಹ.

ಗಿರೀಶ್.ಎಸ್ said...

ಜೀವನ ಅರ್ಥ ಆಗುವುದೇ ಅನುಭವದಿಂದ ಅಲ್ಲವೇ?...ಅದು ಸೋಲಿನ ಅನುಭವ ಆಗಿರಬಹುದು.ಗೆಲುವಿನ ಅನುಭವ ಆಗಿರಬಹುದು... ಲೌಕಿಕ ಜೀವನದ ಅನುಭವದಿಂದ ಮನುಷ್ಯ ಅನುಭವಿ ಆದರೆ,ಆಧ್ಯಾತ್ಮದ ಪಳಗಿನ ಅನುಭಾವದಿಂದ ಅನುಭಾವಿ ಆಗುತ್ತಾನೆ...ಅನುಭವ ಮತ್ತು ಅನುಭಾವ ಇವೆರಡಕ್ಕೂ ವಯಸ್ಸಿನ ಪರಿಮಿತಿ ಇಲ್ಲ ಎಂಬುದು ನನ್ನ ಅನಿಸಿಕೆ..ವಯಸ್ಸು ಒಂದಲ್ಲ ಎರಡಲ್ಲೂ ಇನ್ನು ಎಷ್ಟು ಮುಂದಕ್ಕೆ ಹೋದರು ಹುದುಗಿರುವ ಹಿಂದಿನ ದಿನಗಳ ಅನುಭವ ಸಾಕಷ್ಟು ಸಹಾಯ ಆಗುತ್ತದೆ ಅಲ್ಲವೇ?

sunaath said...

ಕನಸಿನಲ್ಲಿ ತತ್ವಸಂಧಾನವಾಗುವ ಈ ಪರಿ ಅಚ್ಚರಿಗೊಳಿಸುತ್ತದೆ!