Thursday, October 20, 2011

ಕಲರವ

ಆ ಕನಸು ಹೀಗೆ ಸಾಗಿತು..


ನಾನು, ಸುಮ್ಮನೆ ಹೀಗೇ ತಿರುಗುವುದೇ ಕೆಲಸವೆನ್ನುವಂತೆ ಅಲೆಯುತ್ತಿದ್ದೆ..ನಡುವೆ ಏನೋ ಸಿಕ್ಕಿ ದಾರಿ ಮತ್ತೇನೋ ಆಗುತ್ತಲೋ, ನಾನು ಸಾಗುವ ದಾರಿಗೆ ಹಿಂದಿರುಗಿ ಹೇಗೆ ಸಮರ್ಥವಾಗಿ ಗುರಿಯೆಡೆಗೆ ಸಂಚರಿಸಬೇಕು ಎನ್ನುವುದನ್ನು ತಿಳಿಸುತ್ತಲೋ ಹಾದಿ ಸಾಗುತ್ತಿತ್ತು... ಹೀಗೇ ಹೋಗುತ್ತಿದ್ದ ನನ್ನಲ್ಲಿಗೆ ಚಿಲಿಪಿಲಿಗುಟ್ಟುತ್ತಾ ಎಲ್ಲಿಂದಲೋ ಒಂದಷ್ಟು ಹಕ್ಕಿಗಳ ಹಿಂಡು ಹಾರಿಬಂತು..ಅವು ತಮ್ಮಲ್ಲೇ ಏನೋ ಮಾತನಾಡಿಕೊಳ್ಳುವಂತೆ ನನಗೆ ಅನ್ನಿಸುತ್ತಿತ್ತು..ಅವು ನನ್ನ ತಲೆಯನ್ನು ಸುತ್ತುವರೆದು ತಮ್ಮ ಮಡಚಿದ್ದ ರೆಕ್ಕೆಗಳನ್ನು ತೆರೆದು ನನ್ನ ಮೇಲೆ ಹೂ ಮಳೆಗೈದವು.. ನನಗೆ ಏನೋ ಸಂತಸ..,ಆಶ್ಚರ್ಯ.. ನಾನು ಮಾಡಿರುವುದಾದರೂ ಏನು..? ಅವು ಏಕೆ ಹಾಗೆ ವರ್ತಿಸಿದವು? ಎಂದು ತಿಳಿಯುವುದರ ಮೊದಲೇ ಅವು ಮತ್ತೆ ತಮ್ಮ ‘ಮಾತು’ಮುಂದುವರೆಸುತ್ತಾ ಮತ್ತೆಲ್ಲಿಗೋ ಹೊರಟು ಹೋದವು...ನಾನು ಈ ಹಿಂದೆ ನಡೆದ ಘಟನೆಯ,ಆ ಕ್ಷಣದ ಗುಂಗಿನಲ್ಲಿ ತೇಲುತ್ತಿದ್ದೆನಾದರೂ ನನಗೇನೂ ಸ್ಪಷ್ಟವಾಗಲಿಲ್ಲ.. ಆ ಗಳಿಗೆಯಿನ್ನೂ ಮನದಲ್ಲಿ ನೆಲೆ ನಿಂತಿರುವಾಗಲೇ ನನಗೆ ಮತ್ತೆ ‘ಚಿಲಿಪಿಲಿ’ ಸದ್ದು ಮರುಕಳಿಸಿದಂತಾಯ್ತು.. ನಾನು ತಲೆಯೆತ್ತಿ ಶಬ್ದದ ಮೂಲವನ್ನು ಹುಡುಕುವಷ್ಟರಲ್ಲೇ ಮತ್ತೊಂದು ಹಿಂಡು ನನ್ನನ್ನಾವರಿಸಿತ್ತು.. ನಾನು ಎಚ್ಚೆತ್ತುಕೊಳ್ಳುವುದರಲ್ಲೇ ನನ್ನ ತಲೆಗೆ , ಮೈ ಕೈಗೆಲ್ಲಾ ತುಂಬಾ ನೋವಾದಂತಾಯ್ತು.....ಅವು ನನಗೆ ಕಲ್ಲಿನಿಂದ ಒಂದೇಸಮನೆ ಹೊಡೆಯುತ್ತಾ ಕಲ್ಲಿನ ಮಳೆಗರೆತ್ತಿದ್ದವು...(!) ನನ್ನ ನೋವು ನನಗೆ ಗ್ರಾಸವಾಗುವುದರಲ್ಲಿ ಆ ಹಿಂಡು ಕಣ್ಮರೆಯಾಯಿತು.. ಅಷ್ಟಕ್ಕೂ ನಾನು ಮಾಡಿದ್ದಿದ್ದಾದರೂ ಏನು? ದೇಹದೊಡನೆ ಮನಸ್ಸಿಗೂ ತಾಳಲಾರದಷ್ಟು ಪೆಟ್ಟಾಗಿತ್ತು..ಹೊಡತದ ನೋವು ಇಂಚಿಚ್ಚೇ ಅನುಭವವಾಗುತ್ತಾ ?ಹೊಡೆಯುವಂತದ್ದು ನಾನೇನು ಮಾಡಿದ್ದೆ??ಎಂಬ ಯೋಚನೆ ಮನಸ್ಸನ್ನು ತುಂಬಿ ಬಿಟ್ಟಿತ್ತು..ಮುಂದಿದ್ದ ದಾರಿಯಲ್ಲಿ ಹೆಜ್ಜೆ ಮರೆತವಳಂತೆ ಹೋಗುತ್ತಿದ್ದೆ...ದಾರಿಯ ಉಬ್ಬು ತಗ್ಗುಗಳು ನನ್ನ ಮನಸ್ಸಿನ ಭಾವನೆಗಳನ್ನು ಪುಷ್ಠೀಕರಿಸುತ್ತಲೇ ದೇಹದ ಸಮತೋಲನವನ್ನು ಏರುಪೇರಾಗಿಸುತ್ತಿದ್ದವು..

ನನ್ನ ಕಣ್ಣುಗಳು ಅತ್ತಿತ್ತ ನೋಡುವತ್ತಲೇ ನಿರತವಾಗಿದ್ದವು..ಹೀಗೇ ನೋಡುತ್ತಿದ್ದವಳಿಗೆ ಕಟ್ಟೆಯ ಮೇಲೆ ಅಕ್ಕ ಪಕ್ಕ ಕುಳಿತಿದ್ದ ಎರಡು ಹಕ್ಕಿಗಳು ಕಣ್ಣಿಗೆ ಬಿದ್ದವು.. ಆಶ್ಚರ್ಯವೆಂದರೆ ಅವೂ ನನ್ನನ್ನೇ ನಿಟ್ಟಿಸುತ್ತಿದ್ದವು... ನಾನು ದಾರಿಯಲ್ಲಿ ಸಾಗುತ್ತಲೇ ಕಟ್ಟೆಯನ್ನು ಸಮೀಪಿಸಿದೆ..ಅವು ಮಾತನಾಡಲಾರಂಭಿಸಿದವು(!) ನನ್ನ ಬಾಹ್ಯ ರೂಪ, ನನ್ನ ಕುಟುಂಬ ಮೂಲದ ಬಗೆಗೆ ಚರ್ಚೆ ಮಾಡುತ್ತಾ ಮಾತು ನನ್ನ ಕಿವಿಯನ್ನು ತಲುಪುವಂತೆ ಅರಚುತ್ತಿದ್ದವು...ಅವುಗಳ ಮನಃಸ್ಥಿತಿ ಕಂಡು ನಾನು ಮತ್ತೂ ಬೆರಗಾದೆ.. ತೀರ ಸಾಮಾನ್ಯವಾಗಿ ನನ್ನ ಹಿರಿಮೆ, ಕೊರತೆಗಳನ್ನು ತಮ್ಮ ಹಕ್ಕೆಂಬಂತೆ ಮಾತನಾಡುತ್ತಿರುವುದನ್ನು ಕಂಡು ಉಸಿರು ಏರುಪೇರಾಯಿತು(!)...ನಾನು ಅವುಗಳಿದ್ದ ಸ್ಥಳವನ್ನು ಮೀರಿ ಮುಂದೆ ನಡೆದು ಬಿಟ್ಟಿದ್ದೆ .ಮುಂದೆ ನಡೆಯುವಾಗ ಹಿಂದಿನಂತೆಯೇ ಇದ್ದ ಮತ್ತೊಂದು ಕಟ್ಟೆ ಎದುರಾಯಿತು... ಅಲ್ಲಿಯೂ ಎರಡು ಪಕ್ಷಿಗಳು ಪಕ್ಕ ಪಕ್ಕ ತಮ್ಮ ಮುಖವನ್ನು ನನ್ನ ವಿರುದ್ದ ದಿಕ್ಕಿಗೆ ತಿರುಗಿಸಿಕೊಂಡು ನನಗೆ ಬೆನ್ನು ಮಾಡಿ ಕುಳಿತಿದ್ದವು..ಅಸ್ಪಷ್ಟವಾಗಿ ನನ್ನ ಕಿವಿ ತಾಗುತ್ತಿದ್ದ ಅವುಗಳ ಮಾತು ನಾನು ಹತ್ತಿರ ಹತ್ತಿರವಾದಂತೆ ಸ್ಪಷ್ಟವಾಗತೊಡಗಿದವು.. ಅವು ನನ್ನ ಮುಗಿದ ಕೆಲಸದಲ್ಲಿ ಸೋಲುಗಳನ್ನು ಪಟ್ಟಿ ಮಾಡುತ್ತಾ.., ನಾನೇ ಮರೆತ ಹಲವನ್ನು ಹೆಕ್ಕಿ ತೆಗೆದು ಚುಚ್ಚಿ ಹೇಳುತ್ತಾ ‘ಇವಳ ಬಂಡವಾಳ ಇಷ್ಟೇ..’ ಎಂಬರ್ಥದಲ್ಲಿ ತಮ್ಮ ತಮ್ಮಲ್ಲೇ ಹರಟುತ್ತಿದ್ದವು..ನಾನಲ್ಲೆಲ್ಲೂ ನಿಲ್ಲಲಿಲ್ಲವಾದರೂ ಅವುಗಳ ಮಾತು ನನ್ನಲ್ಲಿ ನೆಲೆಯೂರಿ ನಿಂತು ಬಿಟ್ಟಿತ್ತು...ನಾನು ಮುಂದುವರೆಯುತ್ತಿದ್ದಂತೆ ಅಲ್ಲಿ ಮತ್ತೊಂದು ಕಟ್ಟೆ(!) ಅರೆ! ಬಂದ ದಾರಿಯಲ್ಲೇ ಮತ್ತೆ ಮತ್ತೆ ಬರುತ್ತಿದ್ದೀನೇನೂ ಎಂದೆನಿಸಿ ಸುತ್ತ ಒಮ್ಮೆ ತಲೆಯಾಡಿಸಿ ನೋಡಿ ನನ್ನ ಅನುಮಾನ ಪರಿಹರಿಸಿಕೊಂಡೆ...ಅಲ್ಲಿ ಸ್ವಲ್ಪ ದೊಡ್ಡದಾದ ಒಂದು ಹಕ್ಕಿ ತನ್ನ ಬದಿಯಲ್ಲಿ ತನಗಿಂತ ಆಕಾರದಲ್ಲಿ ಕಿರಯದಾಗಿದ್ದ ಹಕ್ಕಿಯನ್ನು ಕೂರಿಸಿಕೊಂಡು ಕುಳಿತಿತ್ತು..ದೊಡ್ಡ ಹಕ್ಕಿ ನನ್ನಲ್ಲಿರುವ ಸಾಮರ್ಥ್ಯ, ನನ್ನ ಹವ್ಯಾಸಗಳನ್ನು ಚಿಕ್ಕದಕ್ಕೆ ವಿವರಿಸುತ್ತಿತ್ತು ...ಅದೋ ದೊಡ್ಡಣ್ಣ ಹೇಳಿದ ಮಾತನ್ನು ‘ಹೌದಾ...ಹ್ಞೂಂ..’ಎಂಬ ಉದ್ಗಾರವನ್ನು ಹೊರಡಿಸಿ ಕೇಳಿಸಿಕೊಳ್ಳುತ್ತಾ ನನ್ನೆಡೆಗೆ ಒಂದು ಅಭಿಮಾನ ಪೂರ್ಣವಾದ ನೋಟವನ್ನು ಬೀರುತ್ತಿತ್ತು....ಅಲ್ಲಿಂದಲೂ ಮುಂದೆ ಹೋದದ್ದಾಯಿತು..ಇಷ್ಟೆಲ್ಲಾ ನಡೆದರೂ ನನ್ನ ತಲೆಯನ್ನು ‘ಕಲ್ಲು’ ಹೊಡೆದಿದ್ದ ಆ ದೊಡ್ಡ ಹಕ್ಕಿಗಳೂ, ನನ್ನ ಅಸಮರ್ಥತೆಯನ್ನು, ಸೋಲುಗಳನ್ನು ಪಟ್ಟಿಮಾಡುತ್ತಿದ್ದ ಆ ಎರಡು ಹಕ್ಕಿಗಳೇ ಆವರಿಸಿದ್ದವು....

ಇನ್ನೆಲ್ಲೂ ಯಾವ ಕಟ್ಟೆಯೂ ಕಾಣ ಸಿಗಲಿಲ್ಲ..ಆದರೆ ನಾನು ನಡೆಯುತ್ತಿದ್ದ ಸ್ವಲ್ಪ ಮುಂದೆ ಹಕ್ಕಿಯೊಂದು ನೆಲದ ಮೇಲಿದ್ದ ಮಣ್ಣಲ್ಲಿ ಬಿದ್ದು ಹೊರಳಾಡುತ್ತಿತ್ತು..ನಾನು ‘ಏನಾಗಿದೆಯೋ?’ ಎಂದು ಅದರ ಬಳಿಗೆ ಹೋಗುವಷ್ಟರಲ್ಲಿ ಪಟ್ಟನೆ ಎದ್ದು ನಿಂತು ನನ್ನ ಗಾಬರಿಗೊಡಿದ್ದ ಮೊಗವನ್ನು ನೋಡಿ ನಸುನಕ್ಕಿತು.. ನಾನೇನು ನಗಲಿಲ್ಲ(!) . ಅದನ್ನಲ್ಲಿಯೇ ಬಿಟ್ಟು ಮುಂದೆ ಹೋಗಿದ್ದ ನನ್ನ ಬೆನ್ನ ಮೇಲೆ ಕುಳಿತು, “ಏ.. ನಾನು ನಿನ್ನನ್ನು ಬಹಳ ಹೊತ್ತಿನಿಂದ ಹಿಂಬಾಲಿಸುತ್ತಿದ್ದೇನೆ..ನನಗೆ ನಿನ್ನ ಕಥೆಯೆಲ್ಲಾ ಗೊತ್ತು..(!)” ಎಂದಿತು. ನಾನು ಆಶ್ಚರ್ಯವನ್ನು ಮೊಗದ ಮೇಲೆ ಮೂಡಲು ಬಿಡಲಿಲ್ಲ..ಅದೇ ಮುಂದುವರಿದು “ಬಾ ನಿನಗೆ ನನ್ನ ಮನೆ ತೊರಿಸುತ್ತೇನೆ..” ಎಂದು ನಮ್ಮವರೇ ಕರೆಯುವಂತೆ ಆಹ್ವಾನಿಸಿತು...ನಾನು ಅದು ಹಾರಿದಲ್ಲಿಗೆ ಹೊರಟೆ..ಸ್ವಲ್ಪ ತಗ್ಗು ಪ್ರದೇಶದಲ್ಲಿದ್ದ ಗೀಜಗದ ಗೂಡನ್ನು ಹೋಲುತ್ತಿದ್ದ ಗೂಡಿನ ಬಳಿ ಬರುತ್ತಿದ್ದಂತೆ “ಇದು ನನ್ನ ಸ್ವಂತದ್ದಲ್ಲ.. ಇಲ್ಲೇ ಕೂರು ಬರುತ್ತೇನೆ..” ಎಂದು ಹೇಳಿ ಗೂಡಿನೊಳಗೆ ಕಣ್ಮರೆಯಾಯಿತು.. ನಾನು ಅಲ್ಲೇ ಕೆಳಗಿದ್ದ ಹುಲ್ಲುಹಾಸಿನ ಮೇಲೆ ಕುಳಿತೆ....ಅದೇನು ಮಾಡುತ್ತಿತ್ತೋ? ಗಂಟೆಗಳುರುಳಿದರೂ ಹಿಂದಿರುಗಲಿಲ್ಲ.. ನನಗೆ ಸಾಕಾಗಿ ಮೇಲೇಳಬೇಕೆನಿಸುವಷ್ಟರಲ್ಲಿ ಹೊರ ಬಂದು ತುಂಬಾ ಆತಿಥ್ಯ ಮನೋಭಾವವಿರುವಂತೆ ಮುಖ ಮಾಡಿಕೊಂಡು “ನಿನಗೆ ಸತ್ಕರಿಸಲು ಏನಾದರೂ ಇದೆಯೋ ಎಂದು ಹುಡುಕುತ್ತಿದ್ದೆ...ಕ್ಷಮಿಸು... ಬಾ ನನ್ನ ಮನೆಯನ್ನೊಮ್ಮೆ ನೋಡು..” ಎಂದಿತು. “ನಿನ್ನ ಸ್ವಂತದಲ್ಲವಲ್ಲ..” ಎಂದುಸುರುತ್ತಲೇ ಆ ಗೂಡಿನ ತೂತದೊಳಗೆ ಇಣುಕಿ ನೋಡಿದೆ...ಅಲ್ಲೇನಿದೆ..?ಅಲ್ಲಿನ ಮತ್ತೊಂದು ತೂತದಿಂದ ಮತ್ತೆ ಹೊರಗೇ ಕಾಣಿಸಿತು.. ಅಷ್ಟು ದೊಡ್ಡ ಪಕ್ಷಿ ಕುಳಿತುಕೊಳ್ಳುವುದಿರಲಿ..ಕತ್ತು ತೂರಿಸಲೂ ಅಲ್ಲಿ ಜಾಗವಿರಲಿಲ್ಲ.. ಮತ್ತೆ ಅದು ಹೋಗಿದ್ದಾದರೂ ಎಲ್ಲಿಗೆ? “ಇದೇನಿದು..?” ನಾನು ಉದ್ಗರಿಸಿದೆ ಅದು ಮುಗುಳ್ನಕ್ಕು “ಬಾ ನಾನು ನಿನ್ನೊಡನೆ ಕೆಲವು ವೈಯಕ್ತಿಕ ವಿಷಯಗಳನ್ನು ಚರ್ಚಿಸಬೇಕು..., ಹಿಗೇ ಸಾಗೋಣ..” ಹಾಗೆಂದೊಡನೆ “ಯಾರ ವೈಯಕ್ತಿಕ ವಿಷಯ..?”ಎನ್ನುತ್ತಲೇ ಆದರ ಆಹ್ವಾನದೆಡೆಗೆ ಆಸಕ್ತಿ ವಹಿಸಿ ಅದನ್ನು ಭುಜದಮೇಲೇರಲು ಅನುಮತಿ ನೀಡಿ ನಡೆದೆ..ಅದು ಮಾತಿಗೆ ಶುರುವಿಕ್ಕಿತು..
“ನಾನು ನಿನ್ನನ್ನು ಹಿಂಬಾಲಿಸುತ್ತಿರುವುದನ್ನು ನೀನು ಗಮನಿಸುತ್ತಿರಲಿಲ್ಲ ಎನಿಸುತ್ತೆ.. ನಾನು ನಿನಗೆ ಈ ಪ್ರಪಂಚದವರ ವಿಚಿತ್ರ ರೂಪ ದರ್ಶನ ಮಾಡಿಸಲು ಬಂದೆ..”ಎಂದಿತು. ಸ್ವಲ್ಪ ‘ಅತಿ’ ಎನಿಸಿದ್ದರೂ ಸಹಿಸಿಕೊಂಡೆ..
“ನೀನು ಮೂರು ಕಟ್ಟೆಗಳ ಮೇಲೆ ಕುಳಿತು ಮಾತಿನಲ್ಲಿ ತೊಡಗಿದ್ದನನ್ನ ಮಿತ್ರರನ್ನು ಹಾದು ಹೋದೆ ಅಲ್ಲವಾ?ಅವರ ಬಗ್ಗೆ ಹೇಳಬೇಕಿತ್ತು,ಮತ್ತಿನ್ನೂ ಇನ್ನೇನೇನೋ ಹೇಳುವುದಿತ್ತು.ನಾನು ಹೇಳುತ್ತೇನೆ..ಆದರೆ ಈ ಕ್ಷಣಕ್ಕೆ ನಾನೊಂದು ಪಕ್ಷಿ, ನೀನು ಮನುಷ್ಯಳು ಎನ್ನುವುದನ್ನು, ನಮ್ಮಿಬ್ಬರದ್ದೂ ಬೇರೆ ಬೇರೆಯದೇ ಆದ ನೆಲೆಗಳಿವೆ ಎಂಬುದನ್ನು, ನಾನು ‘ನಾನು, ನೀನು ‘ನೀನು’ ಎನ್ನುವುದನ್ನೂ ಸಹ ಮರೆತು ಬಿಡೋಣ. ಅಂತೆಯೇ ಒಂದು ಷರತ್ತು. ನೀನು ಯಾವುದೇ ಕಾರಣಕ್ಕೂ ನನ್ನೆಡೆಗೆ ನೋಡಬಾರದು.. “ ಎಂದಿತು.. “ಯಾಕೆ?” ಥಟ್ಟನೆ ಕೇಳಿದೆ..
“ಅದು ಷರತ್ತು... ಪ್ರಶ್ನಿಸಬಾರದು...” ನಾನೂ ಸಮ್ಮತಿಸಿದೆ. ಅದು ಮಾತುಗಳನ್ನು ನನ್ನ ಕಿವಿಯಲ್ಲಿ ಅರುಹುವುದು, ಆದರೆ ನಾನು ಯಾವ ಕಾರಣಕ್ಕೂ ಅದನ್ನು ನೋಡುವಂತಿರಲಿಲ್ಲ...
“ನೋಡು ನಾವು ದೂರದಲ್ಲಿ ಕುಳಿತಿರುವವರನ್ನು ನಮ್ಮ ಕಣ್ಣುಗಳಿಂದ ನೋಡುತ್ತೇವೆ... ಅವರ ಪಿಸು ಪಿಸುಮಾತನ್ನು ಕೇಳುವ ಕುತೂಹಲದಿಂದ ಕಿವಿಯನ್ನು ಹೊತ್ತು ಅವರನ್ನು ತಲುಪುತ್ತೇವೆ..ನಮ್ಮ ಕಣ್ಣಿನ ಪಾತ್ರ ಅಲ್ಲಿಗೆ ಮುಗಿಯುತ್ತದೆ. ಮಾತುಗಳು ಕಿವಿಯನ್ನು ತಾಕಿದಂತೆ ‘ನಾನು; ಎಂಬ ಪ್ರಜ್ಞೆ ಜಾಗೃತವಾಗುತ್ತದೆ ‘ನನ್ನ ಬಗ್ಗೆ ಏನಾದರೂ..?’ ಮನಸ್ಸು ಚುರಕಾಗುತ್ತದೆ ಅಲ್ಲೇನಾದರೂ ನಮ್ಮ ಬಗೆಗೆ ಮಾತು ಬಂದಿದ್ದರೆ ಮುಗಿಯಿತು.. ಕಿವಿಯ ಪಾತ್ರವೂ ಮುಗಿದರೂ ‘ಮನಸ್ಸು’ ಆ ಮಾತುಗಳನ್ನು ಬದುಕಿನುದ್ದಕ್ಕೂ ಹೊತ್ತುಕೊಂಡು ಸಾಗುತ್ತದೆ..
.ಪ್ರಪಂಚದಲ್ಲಿ ಮೂರು ತರಹದ ಜನರಿರುತ್ತಾರೆ.. ಕೆಲವರು ಮುಖ ನೋಡಿ ಮಾತನಾಡುತ್ತಾರೆ.., ಕೆಲವರು ತಲೆಯಿಂದ ಮಾತನಾಡುತ್ತಾರೆ ಮತ್ತೆ ಕೆಲವರು ಬೆನ್ನು ತೋರಿಸಿ ಮಾತನಾಡುತ್ತಾರೆ... ನನ್ನ ಸ್ನೇಹಿತರ ವಿಷಯವನ್ನೇ ನೋಡೋಣ..ಮೊದಲು ಪಕ್ಕ ಪಕ್ಕ ಕುಳಿತವರು ನಿನ್ನ ಮುಖವನ್ನು ನೋಡಿ ನಿನ್ನ ಜೀವನದ ಬಗೆಗೆ, ಕಣ್ಣಿಗೆ ನಿನ್ನ ಬಾಹ್ಯ ರೂಪ ಏನೋ ಅದನ್ನು ಹೇಳಿಕೊಳ್ಳುತ್ತಿದ್ದರು..., ನಂತರ ನಿನ್ನ ವಿರುದ್ದ ದಿಕ್ಕಿಗೆ ಮುಖಮಾಡಿ ಕುಳಿತವರು ‘ಬೆನ್ನು’ ತೋರಿಸುವ ಮಂದಿ ...ಅವರು ಪ್ರಪಂಚದ ಯಾವುದೇ ಜೀವಿಗೂ ತಮ್ಮ ಬೆನ್ನುತೋರುತ್ತಲೇ ಮಾತನಾಡಿಸುವವರು.., ಮತ್ತೆ ಬಂದವರು ತಲೆಯಿಂದ ಮಾತನಾಡುವ ಜನ.. ಅಲ್ಲಿ ಎರಡು ದೊಡ್ಡ, ಚಿಕ್ಕ ಪಕ್ಷಿಗಳು ಕುಳಿತಿದ್ದವು..ದೊಡ್ಡದು ತಾನು ಬೇರೆಯವರಲ್ಲಿ ಕಂಡ ಧನಾತ್ಮಕ ವಿಷಯಗಳನ್ನು ತಾನು ಗುರುತಿಸಿ, ಚಿಂತಿಸಿ...ತಲೆಯಲ್ಲಿ ಬರುವ ‘ಉನ್ನತ ಮಟ್ಟದ’ ವಿಚಾರಗಳನ್ನು ಚಿಕ್ಕದಕ್ಕೆ ಹೇಳುವುದು..ಅದು ಪುನಃ ವಿಷಯಗಳನ್ನು ಉಚ್ಚರಿಸಿ ತನ್ನ ತಲೆಯಲ್ಲಿ ತುಂಬಿಕೊಳ್ಳುವುದು....” ನಾನು ಶರತ್ತಿನಂತೆ ಎಲ್ಲೋ ನೋಡುತ್ತಾ ಹ್ಞೂಂಗುಟ್ಟಿದೆ.
“..ಪ್ರಪಂಚ ಮುಂದಕ್ಕೆ ಸಾಗುತ್ತಾ ಬಂತು.. ನಾವು.. ನಮ್ಮವರು ಈ ‘ಮನೆ’ ಕಟ್ಟುವ ಕಲೆಯನ್ನು ಎಂದಿಗೂ ನಮ್ಮ ಜನ್ಮದಲ್ಲೇ ಹೊತ್ತು ತಂದಿದ್ದೆವು.. ನೀವು ಬುದ್ದಿವಂತರೆನಿಸಿಕೊಂಡವರಿಗೆ ಅದರ ಪರಿಕಲ್ಪನೆ ಬರಲೇ ಸಾಕಷ್ಟು ವರ್ಷಗಳು ಬೇಕಾದವು.. ಅಷ್ಟಕ್ಕೂ ಮನೆಯೆಂದರೇನು? ಅದೊಂದು ಜಗತ್ತಲ್ಲವಾ ? ‘ಬಾಗಿಲು’ ನಮ್ಮ ಎರಡು ಜಗತ್ತುಗಳನ್ನು ಬೇರ್ಪಡಿಸುತ್ತಿರುತ್ತದೆ ನಾವು ಮನೆಯೊಳಗೆ ಕಾಲಿಡುತ್ತಿದ್ದೇವೆಂದರೆ ಒಂದು ಪ್ರಪಂಚದಿಂದ ಕಳಚಿ ಹೋಗಿ ಮತ್ತೊಂದನ್ನು ಸೇರಿಕೊಳ್ಳುತ್ತಿದ್ದೇವೆ ಎಂದರ್ಥವಲ್ಲವಾ?ಅದು ಬರೇ ನಾಲ್ಕು ಗೋಡೆಯಲ್ಲ.. ‘ಕೂಪ’ವಲ್ಲ.... ನೀನು ನನ್ನ ಮನೆಯಲ್ಲಿ ನೋಡಿದ್ದೂ ಅದನ್ನೇ. ಮತ್ತೊಂದು ‘ಜಗತ್ತ’ನ್ನು. ಆದರೆ ಅಲ್ಲಿದ್ದ ಬೆಳಕು ನೀನು ಅದು ನೀನು ನಿಂತಿದ್ದೇ ಪ್ರಪಂಚವೆನೋ ಎನ್ನುವಂತೆ ಮಾಡಿತು..?”
ನಾನೂ ಹ್ಞೂಂಗುಟ್ಟುತ್ತಾ ಸಾಗಿದೆ...
“ಜನ ಮುಂದುವರೆದಂತೆ ಮುಂದೆ ತಮ್ಮ ದಾರಿಯನ್ನು ಕಣ್ಣುಗಳಿಂದ ನೋಡುತ್ತಾ ಸಾಗುವ ಬದಲು ತಮ್ಮ ಬದುಕಿನೆಡೆಗೆ, ಗುರಿಯೆಡೆಗೆ ಬೆನ್ನು ತಿರುಗಿಸಿಕೊಂಡು ಹೋಗಲು ಪ್ರಾರಂಭಿಸಿ ಬಿಟ್ಟರು...”ಎಂದಿತು . ನಾನು ಪ್ರಶ್ನಾರ್ಥಕವಾಗಿ ಮುಖ ಮಾಡಿಕೊಂಡೆ..


“ಗಮನಿಸಿದಂತೆ ಹೇಳುತ್ತೇನೆ ಕೇಳು.. ಬೆಳವಣಿಗೆ ಯಾವಾಗಲೂ ಮುಮ್ಮುಖವಾಗಿರಬೇಕೇ ಹೊರತು ಹಿಮ್ಮುಖವಾಗಲ್ಲ..ನನ್ನ ಮಾತಿನ ಅರ್ಥ ಜನ ಹಿಂದೆ ಹೋಗುತ್ತಿದ್ದಾರೆಂದಲ್ಲ.. ತಮ್ಮ ತಾಂತ್ರಿಕತೆಯನ್ನು ತಮ್ಮ ಮನಸ್ಸಿನೊಡನೆ ಬೆಸೆದುಕೊಂಡು ಬಿಟ್ಟಿದ್ದಾರೆ.. ಹಿಮ್ಮುಖವಾಗಿ ನಡೆಯುತ್ತಾ ಯಾರು ನಮ್ಮಿಂದ ಎಷ್ಟು ದೂರದಲ್ಲಿದ್ದಾರೆ.. ಯಾವ ವೇಗದಲ್ಲಿ ಸಾಗುತ್ತಿದ್ದಾರೆ?, ಅವರ ವಯಸ್ಸು, ಅರ್ಹತೆ, ಸಾಧನೆಗಳೇನು ಎಂದು ಅಂದಾಜು ಮಾಡುವುದೇ ಅವರ ಪಾಲಿಗೆ ತಾಂತ್ರಿಕತೆಯಾಗಿದೆಯೇ ಹೊರತು ಅಲ್ಲಿ ನಿಂತಿದ್ದ ಮನುಜನ ಭಾವನೆಗಳು ಆ ‘ಯಂತ್ರ’ಗಳಿಗೆ ಮನವರಿಕೆಯಾಗುವುದೇ ಇಲ್ಲ.. ಅವರು ನಮ್ಮ ಬಗ್ಗೆ ಆಡುವ ಮಾತುಗಳು ಅವರ ಬೆನ್ನಿನಿಂದ ಬಂದವು .. ಅವರ ಕಣ್ಣುಗಳಿಗೆ ನೋಡುವ ಕಾತುರವಿಲ್ಲ.., ಕಿವಿಗಳಿಗೆ ಕುತೂಹಲವಿಲ್ಲ .. ತಮ್ಮ ಪಕ್ಕ ಕಣ್ಣುಬಿಟ್ಟು ಚಲಿಸುತ್ತಿರುವವರು ಅವರಿಗೆ ‘ಹಿಂದುಳಿದವರ’ಲೆಕ್ಕ...! ಸರಿ ಇದೆಲ್ಲವನ್ನೂ ನಿನಗೆ ಹೇಳುವುದು ನನ್ನ ಹಕ್ಕೇನು ಅಲ್ಲ ಆದರೂ ಹೇಳಬೇಕೆನಿಸುತ್ತೆ ಮುಂದುವರೆಸಲಾ?” ನಾನು ಸಮ್ಮತಿಸಿದೆ..
“ಕೇಳು , ಜೀವನದಲ್ಲಿ ಕೆಲವು ಅನುವಗಳು ತನ್ನಿಂತಾನೇ ನಮಗೆ ಅರಿವಿಲ್ಲದೇ ಆಗುತ್ತವೆ.. ಆದರೆ ಕೆಲವನ್ನು ನಾವೇ ಅರಸಬೇಕಾಗುತ್ತದೆ.. ಕೇಳಿ ತಿಳಿಯಬೇಕಾಗುತ್ತದೆ.. ಒಂದು ಕಲ್ಲಿನ ಮುಂದೆ ನಿಂತು , ಮರದ ಮುಂದೆ ನಿಂತು, ಕಡೆಗೆ ನಾವು ಮಲಗಿರುವ ಮಂಚದ ಕಾಲಿನ ಬಳಿ ಕಿವಿಗೊಟ್ಟು .. ಹೀಗೇ ನಿರ್ಜೀವಗಳಿಗೆ ನಮ್ಮ ಮಾತುಗಳಿಂದ ಜೀವ ತುಂಬುತ್ತಾ ಅವುಗಳೊಳಗೆ ನಮ್ಮ ಮನಸ್ಸನ್ನು ತೂರಿ ಬಿಟ್ಟು ಅದರಿಂದಾದ ಅನುಭವವನ್ನು ಅನುಭವಿಸುವುದೂ ಒಂದು ಅನುಭವವೇ ಅಲ್ಲವಾ ‘ನಾವು‘, ‘ನಾನೇನು ಗೋಡೆಯೊಡನೆ ಮಾತನಾಡಲಾ ?’ ಎಂದು ಎಷ್ಟೋ ಬಾರಿ ಪ್ರಶ್ನಿಸಿರುತ್ತೇವೆ.. ಗೋಡೆಯೊಡನೆ ಮಾತನಾಡುವುದೂ ಒಂದು ಕಲೆ.. ನಾವು ಬೋರೆದ್ದು ಆಡುವ ಮಾತುಗಳಿಗೆ ಪ್ರಶ್ನೆಗಳಿಗೆ ಗೋಡೆ ಉತ್ತರಿಸಿಬಿಟ್ಟರೆ ಅದಕ್ಕಿಂತ ಮತ್ತೊಂದು ಸಮಾಧಾನ ಎಲ್ಲೂ ಸಿಗಲು ಸಾದ್ಯವೇ ಇಲ್ಲ... ನಾಲ್ಕು ಗೋಡೆಗಳನ್ನು ಒಂದಕ್ಕೊಂದು ನಾವೇ ಸೇರಿಸಿ ಬಿಟ್ಟು ಅದರೊಳಗೆ ಕುಳಿತು ಇಲ್ಲವೋ ‘ನಾನು ಬಂಧಿ’ ಎನ್ನುತ್ತಲೋ ಅಥವಾ ಆ ಗೋಡೆಯಾಚೆಗಿನ ಬದುಕನ್ನು ಕನಸುತ್ತಲೊ ಕಾಲ ಕಳೆಯುತ್ತೇವೆ.. ಹೊರಗಿನ ಬದುಕು ಬಂಗಾರವೆಂದುಕೊಂಡೇ ಕಾಲಿಡುತ್ತೇವಾದರೂ ಅಲ್ಲಿರುವ ಸಮಸ್ಯೆಗಳೂ ಮುಳ್ಳಾಗಿ ಬಂದು ಎಷ್ಟೋ ಬಾರಿ ಚುಚ್ಚುತ್ತಲೇ ಇರುತ್ತವೆ.. ಆದರೆ ನಾವು ಆ ಮುಳ್ಳುಗಳನ್ನು ನೆನೆಪಿಸಿಕೊಳ್ಳುವಷ್ಟು ಸುಂದರ ಕ್ಷಣಗಳನ್ನು ನೆನೆಪಿಸಿಕೊಳ್ಳುತ್ತೇವಾ? ಆ ಮುಳ್ಳುಗಳು ಪದೇ ಪದೆ ಚುಚ್ಚಿದಾಗಲೇ ನಮಗೆ ನಮ್ಮ ಗೋಡೆಯ, ಕಲ್ಲಿನ ನೆನಪಾಗುವುದು.. ನಮ್ಮ ಮಾತು ನಾವೇ ಕೇಳುವ ವ್ಯವಧಾನ ವಿರಬೇಕಲ್ಲವಾ? ನಾವು ಎಲ್ಲೆಲ್ಲೋ ಹೋದಾಗ ಮುಖ ನೋಡುವ,ಬೆನ್ನು ತಿರುಗಿಸಿದ ಜನ ನಮ್ಮ ಬಗ್ಗೆ ಸಾವಿರ ಕೊಂಕಾಡಬಹುದು.. ನಮ್ಮ ತೆರೆದ ಕಣ್ಣುಗಳನ್ನು ಕಂಡು ಏನೂ ಅರಿಯದ ಮೂಡರು ಎನ್ನಬಹುದು..., ಆದರೆ ನಾವು ವಿಷಯಗಳನ್ನು ಕಣ್ಣಿನಿಂದ ನೋಡಿ ಹೃದಯದಲ್ಲಿಟ್ಟುಕೊಳ್ಲುವಷ್ಟು ‘ಹೃದಯವಂತರು’ ಎನ್ನುವುದು ನಮ್ಮ ವಿಶ್ವಾಸವಲ್ಲವಾ..? ಅಲ್ಲದೇ ತಾಂತ್ರಿಕತೆ ನಮ್ಮ ಕಣ್ಣುಗಳ ‘ಬದಲಿ’ಯಾಗಬಾರದಲ್ಲ....
ನಾನು ನಿನಗೆ ನನ್ನ ಕಡೆಗೆ ಯಾಕೆ ನೋಡದಿರಲು ಹೇಳಿದೆ ಗೊತ್ತಾ? ನನ್ನ ಮುಖದ ಭಾವನೆಗಳಲ್ಲ ನಿನಗೆ ಅರ್ಥವಾಗಬೇಕಿರುವುದು... ನನ್ನ ಭಾವನೆಗಳ ಆಳ...ಈ ಮಾತುಗಳನ್ನು ನಿನಗೆ ತಲುಪಿಸಿರುವುದು ಒಂದು ಹಕ್ಕಿಯಲ್ಲ...ಅದು ನಿನ್ನ ಕಿವಿಗೆ ಕೇಳಿಸಿದ ‘ಸತ್ಯ’ವಷ್ಟೇ. ನಿನ್ನದೇ ಆದ ಕಲ್ಪನೆಯೊಂದು ಈ ಮಾತುಗಳಲ್ಲಿ ಬೆಸೆದುಕೊಡಿದೆ. ಅದು ಈ ಮಾತುಗಳಿಗೆ ಜೀವ ತುಂಬಬೇಕಿದೆ... ನಮಗೀಗ ಸಮಸ್ಯೆಗಳು ಒಂದೆಡೆ ಜಡವಾಗಿ ಕುಳಿತಿರುವ ಬಂಡೆಯಾಗಬೇಕಿಲ್ಲ..ಅದು ರೆಕ್ಕೆಪುಕ್ಕ ಬಂದಿರುವ ಬಣ್ಣ ಬಣ್ಣದ ಹಕ್ಕಿಯಾಗಿ ಎಲ್ಲೆಲ್ಲೋ ಸುತ್ತಿ ನಮಗೆ ಸೂಕ್ತ ಪರಿಹಾರವನ್ನು ನಮ್ಮ ಕಿವಿಗೆ ತಲುಪಿಸಬೇಗಾಕಿದೆ...ನನಗೊಂದು ಆಕಾರ ಬಂದಿದ್ದೇ ‘ಸಮಸ್ಯೆ’ಯಿಂದ. ನಿನ್ನನ್ನು ಬೆಂಬತ್ತಿದಂತೆ ಆ ಕಲ್ಲುಗಳು,ಮಾತುಗಳು ಎಲ್ಲವೂ ನನಗೆ ಬಣ್ಣಬಳಿದು ಜೀವ ತುಂಬಿದವು.. ನಾನು ನನಗೆ ತಿಳಿದದನ್ನು ಹೇಳುವ ಕಾತರದಿಂದ ಬಂದೆ.. ಮಾತುಗಳು ಮುಗಿದಂತೆ ನಾನು ಇಂಚಿಂಚಾಗಿ ಕರಗಿ..ಕುಬ್ಜಳಾಗಿ ಹೋಗುತ್ತಿದ್ದೇನೆ...ನನ್ನ ಮಾತಗಳು ನಿನ್ನ ಕಿವಿಯ ಮುಖಾಂತರ ನಿನ್ನ ತಲೆಯನ್ನು ತಲುಪಿದ್ದರೆ ಸಾಮಾಧಾನ...ಮುಂದಾದರೂ ಸಮಸ್ಯೆಯನ್ನು ಬಂಡೆಗಲ್ಲು ಮಾಡಿಕೊಂಡು ನಿನ್ನ ತಲೆಯ ಮೇಲೆ ನೀನೇ ಎತ್ತಿ ಹಾಕಿಕೊಳ್ಳುತ್ತೀಯೋ...ಅಥವಾ ಅದನ್ನೊಂದು ವಿಹರಿಸುವ ಪಕ್ಷಿ ಮಾಡಿ ‘ಪರಿಹಾರಕ್ಕೆ’ ಜಾಗ ನೀಡುತ್ತಿಯೋ ನಿನಗೆ ಸೇರಿದ್ದು... ನಿನ್ನೊಳಗೊಂದು ಬಣ್ಣದ ಹಕ್ಕಿ ಸದಾ ಜಾಗೃತವಾಗಿರಲಿ...”


ನನ್ನ ತಲೆಯನ್ನುತೂರಿ ಬೆರೆತು ಹೋದಂತಾಯ್ತು....ಅದರ ಧನಿ ಪುನಃ ಕೇಳಿಸಲಿಲ್ಲ.. ನನ್ನ ಭುಜ ಖಾಲಿಯಾಗಿತ್ತು.. ಆದರೆ ಅದರ ಧನಿಯ ‘ಕಲರವ’ ಮನಸಲ್ಲಿ ಪ್ರತಿಧ್ವನಿಸುತ್ತಲೇ ಇತ್ತು...


(Image Courtesy - Net)