Saturday, November 24, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 7 ಒಳಗಿನ ಕತ್ತಲೆಯನ್ನು ಹೊಡೆದೋಡಿಸುವುದರ ಬಗೆಗೆ ಕೇಳುತ್ತಿರುತ್ತೇವೆ. ಆದರೆ ಕತ್ತಲೆ ಓಡಿದಸ್ಥಿತಿಯೆಂಬುದಿಲ್ಲ. ಕತ್ತಲೆ ಹೋಗುವುದು ಎನ್ನುವುದು ಬೆಳಕನ್ನು ಅದರ ಜಾಗದಲ್ಲಿ ತುಂಬುತ್ತಾಬಂದಂತೆ ಆಗುವಂತದ್ದು. ಇದು ನನಗೆ ಅಚ್ಚುಕಟ್ಟಾಗಿ ಅನ್ವಯವಾಗುವುದಾಗಿತ್ತು. ಅಂದು ಮನೋಬಲವೇ ಮನಕ್ಕೆ ಅತ್ಯುತ್ತಮ ಔಷಧವೆಂದು ಕನಸುಬಂದಿದ್ದು ಗುಳಿಗೆಯನ್ನು ನಿಲ್ಲಿಸುವಷ್ಟು ಬಲವನ್ನೊದಗಿಸಿದ್ದಂತೂ ಹೌದೇ ಆದರೂ ಸಮಸ್ಯೆಯ ಹೆಸರಲ್ಲಿ ಪದರ ಪದರವಾಗಿ ನೆಲೆಸಿರುವ ಕತ್ತಲೆಯನ್ನು ಕಳೆಯಲು ಬೆಳಕು ಮೂಡಿ ಹೋದರೆ ಸಾಲದು, ಅದು ಅಲ್ಲೇ ನೆಲೆಸಬೇಕು! ಹಾಗೆ ನೋಡ ಹೊರಟರೆ ಶಾಶ್ವತವಾದ ಕತ್ತಲೆಯಾಗಲೀ ಸಂಪೂರ್ಣ ಬೆಳಕಾಗಲೀ ಇರುವಂತಹದ್ದು ಕಾಣಸಿಗುವುದಿಲ್ಲ- ಕತ್ತಲೆ ಬೆಳಕನ್ನೂ ಬೆಳಕು ಕತ್ತಲೆಯನ್ನೂ ಒಂದಕ್ಕೊಂದು ತಳಕು ಹಾಕಿಕೊಂಡು ಹೋಗುತ್ತಿರುವುದು ನೈಜವೆನಿಸುತ್ತದೆ. ಬಹಳ ಸಲ ಕತ್ತಲೆಯ ಕೂಪದೊಳಗೆ ಸಿಲುಕಿ ನರಳುವುದೋ ಅಥವಾ ಶಾಶ್ವತ ಬೆಳಕನ್ನು ಮೂಡಿಸಿಕೊಳ್ಳುವುದರತ್ತ ಹವಣಿಸುವುದೋ ಮಾಡುವುದೇ ದುಃಖದ ಮೂಲವಾಗಿ ತೋರುತ್ತದೆ
ಅಸಹಾಯಕತೆಎಂಬ ಪದದ ವ್ಯಾಪ್ತಿ ವಿಸ್ತ?ತವಾದುದ್ದು. ನಾನು ಔಷಧಿಯ ಮೇಲೆ ಅವಲಂಬಿತಳಾಗಿದ್ದವಳು, ಅದನ್ನು ಬಿಟ್ಟು ಸ್ವಾವಲಂಬಿಯಾಗುವ ಬದಲು ಅಸಹಾಯಕಳಾಗಿಬಿಟ್ಟೆ. ಔಷಧಿಯ ನೆಪದಲ್ಲಿ ಮರೆಯಾಗಿದ್ದ ಸಮಸ್ಯೆಗಳೆಲ್ಲಾ ಹಾಗೆಯೇ ಇದ್ದವಲ್ಲಾ ಅವು ಜೋರಾಗಿ ಎದ್ದೆದ್ದು ಕುಣಿದವು! ಅಥವಾ ಕುಣಿಯುವಂತೆ ಕಂಡವು ಎಂಬುದು ಸೂಕ್ತವೇನೋ. ಮಗುವು ತನ್ನ ಕಾಲಮೇಲೆ ನಡೆದರೆ ಸಾಕಪ್ಪಾ ಎಂಬುದು ಪಾಲಕರ ಮೊದಲ ಆಶಯವಷ್ಟೇ. ನಂತರದಲ್ಲಿ ಅದು ನಡೆದರಷ್ಟೇ ಸಾಲದು. ತನ್ನ ಕಾಲಮೇಲೆ ನಡೆಯುತ್ತಾ ಅದು ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದೇ ಅತ್ಯಂತ ಮುಖ್ಯವಾಗಿ ಬಿಡುವುದು! ಹಾಗೆಯೇ ದಿಕ್ಕುದೆಸೆ ಇಲ್ಲದ ಮನಸ್ಸು ಬಹಳ ಅಪಾಯಕಾರಿಯಾದುದು. ನಾನಿಲ್ಲಿ ಅತ್ಯಂತ ಉನ್ನತ ಗುರಿಯನ್ನಿರಿಸಿ ಅದರ ಬಳಿ ಹೋಗಲು ತವಕಿಸುವ ಮನದ ಬಗೆಗೆ ಹೇಳುತ್ತಿಲ್ಲ, ಬದಲಿಗೆ ಬೆಳಗಿನ ಜಾವ ಎದ್ದ ಮೇಲೆ ಈಗೇನು ಮಾಡುವುದು?’ ಎಂದು ಆತಂಕಿಸುವ ಮನದ ಬಗೆಗೆ ಮಾತನಾಡುತ್ತಿರುವೆ. ನನ್ನ ಮನ ಅಂತಹುದೇಆಗಿತ್ತು.. ಅದನ್ನು ದಾರಿಗೆ ತರುವುದು ನನ್ನ ಕೈಲಿಲ್ಲ ಎಂಬುದನ್ನು ನಾನು ನಿಷ್ಠಳಾಗಿ ನಂಬಿದ್ದರಿಂದ ಅದರ ಕೈಹಿಡಿದು ನಡೆಸುವ ಪ್ರಯತ್ನವನ್ನು ನಾನು ಮಾಡಲೇ ಇಲ್ಲ..
ಹೀಗಿರುವಾಗ ಕನಸಿನ ಅನುಭವವೊಂದು ನನ್ನನ್ನೆಚ್ಚರಿಸಲು ಕಾಣಿಸಿದಂತೆ ತೋರಿತು-
ಒಬ್ಬ ಮಧ್ಯವಯಸ್ಕರು ನನ್ನ ಮನೆಗೆ ಬಂದಿಹರು. ನನಗೆ ಅವರೆಂದರೆ ಬಹಳ ಗೌರವವಿರುವುದು. ಅವರು ನನ್ನನ್ನು ಕೋಣೆಯಲ್ಲಿ ಕುಳಿತುಕೊಂಡು ಸಮಯ ಹಾಳು ಮಾಡುವ ಬದಲು ನಡುಮನೆಗೆ ಬರುವಂತೆ ಸಲಹೆ ನೀಡುವರು. ನಾನು ನಿರಾಕರಿಸಿ ನಂತರ ಒಪ್ಪಿ ನಡೆಯುವೆ. ನಂತರ ಅಲ್ಲಿಂದ ವರಾಂಡಕ್ಕೆ, ಮನೆಯ ಗೇಟ್‌ಗೆ ಹೀಗೇ ಮುಂದೆ ಮುಂದೆ ನಡೆದಂತೆ ನನ್ನ ಮನೆಯ ಆವರಣದಿಂದ ಹೊರಗೆ ನಾನು ಕಾಲಿರಿಸುವೆ. ಅಲ್ಲಿಗೆ ಹೋದೊಡನೇ- ಹಂತ ಹಂತವಾಗಿ ಹೋಗುತ್ತಾ ಹೋಗು ಇಲ್ಲೊಂದು ಪ್ರಪಂಚವಿದೆ. ಅದು ಎಲ್ಲರನ್ನೂ ಸ್ವೀಕರಿಸುತ್ತದೆಎಂದು ಹೇಳಿ ನಡೆದು ಹೊರಟು ಹೋಗುವರು..
ಇದೇ ಕನಸು ನನಗೆ ಕೆಲ ದಿನಗಳು ಪದೇಪದೇ ಬರುತ್ತಲೇ ಇತ್ತು.. ನಾನು ನನ್ನನ್ನೇ ಕೇಳಿಕೊಂಡೆ ಅಲ್ಲಾ, ಹಂತಹಂತವಾಗಿ ಹೊರಹೋಗೋದೇನೋ ಸರಿ. ಹೋಗೇನು ಮಾಡುವುದು?’. ನನ್ನ ಮನಸ್ಸು ತನಗೆ ಬೇಕಾದ ಹಾಗೆ ಎಲ್ಲಾ ನೀತಿಗಳನ್ನೂ ತಿರುಚಿ ಬಿಡುತ್ತಿತ್ತು! ಆದರೆ ಆ ಕನಸು ಪದೇಪದೇ ಬರುತ್ತಿತ್ತೆಂದೆನಲ್ಲ. ಕಡೆಗೊಂದು ಬಾರಿ ಸಣ್ಣ ಪ್ರಮಾಣದಲ್ಲಿ ನನಗೆನಿಸಿತ್ತು- ನಾನು ಹೀಗಿರಬಾರದು’. ಹೇಗಿರುವೆ ನಾನು? ಮನೆಯಿಂದ ಹೊರಹೋಗಲು ರುಚಿಸದು, ಯಾರೂ ಏನೂ ಹೇಳಬಾರದು, ನನ್ನ ಭವಿಷ್ಯದ ಬಗ್ಗೆ ಚಿಂತಿಸುವುದೆಂದರೆ ನನಗಾಗದು, ಈ ಪ್ರಪಂಚ ಸರಿ ಇಲ್ಲದಿರುವುದರಿಂz, ಎಲ್ಲರೂ ಸ್ವಾರ್ಥಿಗಳಾಗಿರುವುದರಿಂದ ಯಾವುದೂ ನನಗೆ ಬೇಡ....   ಇದು ಸಣ್ಣ ಪಟ್ಟಿಯಷ್ಟೇ. ನನ್ನ ಬಳಿ ಸಾಕ್ಷ್ಯಾಧಾರ ಸಮೇತ ಇವೆಲ್ಲವನ್ನೂ ನಿರೂಪಿಸುವಂತಹಾ ದೊಡ್ಡ ಪಟ್ಟಿಯೇ ಇತ್ತು. ನಾನೀಗ ಅದನ್ನು ಕ್ಷುಲ್ಲಕ ಎನ್ನುವುದಿಲ್ಲ. ಅದು ಆರ್ಥಹೀನ ಎಂದು ಟೀಕಿಸಲು ಹೋಗುವುದೇ ಇಲ್ಲ- ನಾವು ಸಣ್ಣ ಪುಟ್ಟದ್ದುಎಂದು ಪರಿಗಣಿಸುವ ಕೆಲ ವಿಷಯಗಳು ಮೊದಲ ಹಂತದಲ್ಲಿ ದೊಡ್ಡದಾಗಿ ಕಾಣಿಸಿಕೊಂಡು ನಂತರದ ಹಂತದಲ್ಲಿ ಸಣ್ಣಪುಟ್ಟದಾಗಿರುತ್ತದೆ. ಈ ಮೊದಲ ದೊಡ್ಡಹಂತವನ್ನು ಪಾರುಮಾಡಲಾಗದ ದುರ್ಬಲ ಮನಸ್ಸಿಗೆ ಆಯುಧಗಳ ಅವಶ್ಯಕತೆಯಿರುತ್ತದೆ. ಈ ಆಯುಧಗಳು ಸಬಲತೆಯೆಡೆಗೆ ಮನಸ್ಸನ್ನು ಕೊಂಡೊಯ್ಯುತ್ತದೆ. ಬಹಳಷ್ಟು ಜನರಿಗೆ ಸರಾಗವಾಗಿ ಅನುಭವಗಳು ಸನ್ನದ್ಧರನ್ನಾಗಿಸಿ ಬಿಡುವುದರಿಂದ ಅದನ್ನು ಹೊಂದದಿರುವುದು ವಿಚಿತ್ರವಾಗಿ ತೋರುವುದು ಸಾಮಾನ್ಯವಾಗಿದೆ..ಈ ತೆರನಾಗಿ ಶಸ್ತ್ರಾಸ್ತ್ರ ಸಜ್ಜಿತಳಾಗುವುದು ಅಂದಿನ ಅವಶ್ಯಕತೆಯಾಗಿತ್ತು. ಮನವರಿಕೆ ಮಾತ್ರ ಆ ರೂಪದಲ್ಲಿ ಆಗಿರಲಿಲ್ಲ.
 ನಮ್ಮಲ್ಲಿರುವ ಲೋಪದೋಷಗಳನ್ನು ಗುರುತಿಸುವುದು ಬೆಳವಣಿಗೆಯ ಮೊದಲ ಹೆಜ್ಜೆಯೇ ಆದರೂ ಆ ಹೆಜ್ಜೆಯಲ್ಲೇ ಉಳಿದು ಬಿಡುವುದು ಖಾಯಿಲೆಯ ಲಕ್ಷಣದಂತೆ ಗೋಚರಿಸಲಾರಂಭಿಸುತ್ತದೆ. ಬದಲಾವಣೆಯ ಪ್ರೇರಣೆಯ ನೆರಳಲ್ಲಿ ಗುರುತಿಸಲ್ಪಡುವ ಲೋಪದೋಷಗಳಿಗಷ್ಟೇ ಬೆಳೆಸುವ, ಬದಲಾಯಿಸುವ ಶಕ್ತಿಯಿರುವುದು. ಆ ತರಹದ ವೇದಿಕೆಯೊಂದು ಸೃಷ್ಠಿಯಾಗುವುದು ಅತಿ ಮುಖ್ಯವಾದುದು. ಅಂತಹ ಪ್ರಜ್ಞೆ  ಯಾವುದೋ ಸಮಯದಲ್ಲಿ ಉದಯಿಸಿ ಜೀವನದ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳು ಗಮನಕ್ಕೆ ಬರುತ್ತಲೇ ಇರುತ್ತವೆ. ನನಗನಿಸುವುದು - ಕಿಡಿಯನ್ನು ಹಚ್ಚಿಸುವುದರಷ್ಟೇ ಮುಖ್ಯ ಬೆಂಕಿಯನ್ನು ಕಾಯ್ದು ಕೊಳ್ಳುವುದು! ಈ ರೀತಿ ಕಾಯ್ದುಕೊಳ್ಳುವಿಕೆಆದಾಗ ಮಾತ್ರ ಉರಿಯ ಮುಂದಿನ ಉಪಯೋಗವಾಗಲು ಸಾಧ್ಯವಿದೆ. ಅದರ ಬಗೆಗೆ ಮಾತನಾಡದೇ ಕಿಡಿ ಹೊತ್ತಿದಗಳಿಗೆಯನ್ನಷ್ಟೇ ಉಲ್ಲೇಖಿಸುವುದರಿಂದ ಸಂದೇಶ ಪೂರ್ಣವಾಗದು. ನನ್ನಲ್ಲಿ ಹೀಗೆ ಬದಲಾವಣೆಯ ಸಮಯವನ್ನು ಕಿಡಿ ಹೊತ್ತಿದಸಂದರ್ಭವೆಂದು ನಾನು ಹೇಳಿದರೆ ಅದು ಸತ್ಯವನ್ನು ದೂರ ತಳ್ಳಿದಂತೆಯೇ ಸರಿ. ಅದನ್ನು ನಾನು ಬೋರೆನಿಸುವ ಬೋರಿನ ಬಗ್ಗೆ ಬೋರುಬಂದ ಕ್ಷಣಎನ್ನಲು ಇಚ್ಛಿಸುವೆ- ಅಂದು ನನ್ನದೇ ಪ್ರತಿಬಿಂಬವನ್ನು ನಿರುಕಿಸುತ್ತಾ ಎಂದಿನಂತೆ ನನ್ನ ಬಗೆಗೆ- ನಾ ಕಂಡ ಪ್ರಪಂಚದ ಬಗೆಗೆ ದೋಷಾರೋಪ ಸಲ್ಲಿಸುತ್ತಿದ್ದವಳು ಅಚಾನಕ್ಕಾಗಿ ಅರುಹಿಕೊಂಡೆ ಅಂತಹದ್ದು ನನಗೇನಾಗಿದೆ?’. ಇಷ್ಟು ದಿನ, ‘ಅಂತಹದ್ದು ನಿನಗೇನಾಗಿದೆ?’ ಎಂಬ ದೃಷ್ಟಿಕೋನವನ್ನು ಎದುರಿಸುತ್ತಿದ್ದವಳಲ್ಲಿ ಅಷ್ಟು ಮಟ್ಟದ ಮಾರ್ಪಾಟಾಗಿತ್ತು. ಇದರಲ್ಲಿ ಹೇಳಿಕೊಳ್ಳುವುದೇನಿದೆ? ಎನಿಸಿದರೆ ಅದು ಬಹಳ ನಿಜ. ಏಕೆಂದರೆ ಈಗ ಬರೆಯ ಹೊರಟರೆ ನನಗೂ ಹಾಗೇ ಎನಿಸುವುದುಂಟು! ಆದರೆ ಒಂದಂತೂ ನಿಜ- ಎಲ್ಲರಿಗೂ ತಿಳಿದಿರುವ ಸಾಮಾನ್ಯ ವಿಷಯಗಳು ಸಮಸ್ಯೆ ಇರುವವರಿಗೆ ಒಮ್ಮಮ್ಮೆ ಅವರಿಗಿಂತಲೂ ಚೆನ್ನಾಗಿಯೇ ತಿಳಿದಿರುತ್ತದೆ. ಉದಾಹರಿಸುವುದಾದರೆ, ದುರಭ್ಯಾಸಗಳು ಕೆಟ್ಟವೆಂದು ಯಾವ ಆಭ್ಯಾಸಿಗಾದರೂ ತಿಳಿದಿರದೇ ಇರುವುದೇ? ಇನ್ನೂ ಆಳವಾಗಿ ಮಾತನಾಡಿ ನೋಡಿಸಿದರೆ ಅವರಿಗೆ ಅದರಿಂದುಂಟಾಗುವ ದುಷ್ಪರಿಣಾಮಗಳು ಕೆಲವೊಮ್ಮೆ ವೈದ್ಯರ ಸಮನಾಗೇ ತಿಳಿದಿರುವುದೂ ಉಂಟು! ಆದರೆ ಅಲ್ಲಿ ಇರುವ ಕೊರತೆ ಇದರಿಂದ  ಹೊರಬರಲು ಸಾಧ್ಯವಾಗದಂತಹದ್ದು ನನ್ನಲ್ಲಿ ಏನಿದೆ?’ ಎಂಬ ಬಲವಾದ ಪ್ರಶ್ನೆಯ ಬಲದ್ದು. ಇದನ್ನು ನನಗೆ ಅನ್ವಯಿಸ ಹೊರಟರೆ ಅಂತಹದ್ದು ನನಗೇನಾಗಿದೆ?’ ಎಂದೆದ್ದ ಪ್ರಶ್ನೆಯ ಮಹತ್ವ ಸ್ವಲ್ಪ ಸ್ಪಷ್ಟವಾಗುವುದೇನೋ. ಆದರದು ಮತ್ತು ಅದೇ ಮುಖ್ಯವಾದುದು, ಬದುಕ ಬದಲಾಯಿಸುವಂತದ್ದು ಎನ್ನುವಂತಿಲ್ಲ- ಬದುಕ ಏಕೆ ಬದಲಾಯಿಸಿಕೊಳ್ಳಬೇಕಿದೆ ಎಂಬ ಪ್ರಶ್ನೆಗೆ ಉತ್ತರ ದೊರೆಯುವವರೆಗೂ ಅದು ಬದಲಾಗುವುದಿಲ್ಲ ಮತ್ತು ನಾವು ಕೇಳಿಕೊಂಡ ಪ್ರಶ್ನೆ ಸರಿಯಾಗಿದೆ ಎನಿಸುವವರೆಗೂ ಉತ್ತರವೇ ದೊರೆಯುವುದಿಲ್ಲ!
ನಾನಂತೂ ನನಗೆ ನಾನೇ ಅಪ್ರಯತ್ನಪೂರ್ವಕವಾಗಿ ಹೇಳಿಕೊಂಡು ಬಿಟ್ಟಿದ್ದೆ. ಅದರ ಹಿಂದೆಯೇ ನಿಧಾನವಾಗಿ ಉಪಾಯಗಳೂ ದೊರೆಯಲಾರಂಭಿಸುತ್ತಾ ನಡೆದವು. ನಾನು ಅದನ್ನನ್ವಯಿಸಲು ಹೊರಡುವೆ, ಎಡವುವೆ, ಬೀಳುವೆ, ಏಳಲು ತುಂಬ ಸಮಯ ತೆಗೆದುಕೊಳ್ಳುವೆ. ಅಂತೂ ಏಳುವೆ. ಈ ನಿಟ್ಟಿನಲ್ಲಿ, ನನ್ನ ಭಯಗಳಲ್ಲೊಂದಾದ ಹಿಂದೆ ಯಾರದೋ ನೆರಳಿದೆಯೆಂಬ ಭಯದಲ್ಲಿ ಅತ್ತಿತ್ತ ನೋಡಲು ಅಂಜುತ್ತಿದ್ದವಳಿಗೆ ಮನಸ್ಸಿನ ಮೂಲೆ ಕೂಗಿ ಹೇಳುವುದು- ಸರಿ, ಅದೇನಿದೆಯೋ ನೋಡೇ ಬಿಡೋಣ. ಪ್ರಾಣ ಹೋದರೆ ಹೋಗಲಿ’. ಪದೇ ಪದೇ ಅನಿಸುತ್ತಿದ್ದ ಸೂಚನೆಯ ಮೇರೆಗೆ ನಾನು ಚೂರು ಚೂರೇ ಧೈರ್ಯ ತಂದುಕೊಳ್ಳಲಾರಂಭಿಸಿದೆ. ಯಾವ ಕೋಣೆ ಭಯ ತರುವುದೋ ಅಲ್ಲಿಯೇ ಹೋಗಿ ಕೂತೆದ್ದು ಬರುವೆ.  ಎಲ್ಲೇ ಶಬ್ದವೆನಿಸಿದರೂ ಅದರ ಆಕರ ತಿಳಿಯುವವರೆಗೂ ಮುಂದುವರಿಯುವೆ. ಹಗಲಿರಲಿ ರಾತ್ರಿಯಿರಲಿ ನನ್ನ ಪ್ರಯತ್ನ ಸಾಗುವುದು. ಈಗ ಇದನ್ನೋದಿ ಎನಿಸಬಹುದು- ಇಷ್ಟು ಮಾಡುವುದನ್ನು ಕಂಡುಕೊಳ್ಳಬೇಕಾಯಿತೇ, ಯಾರೂ ಹೇಳಲಿಲ್ಲವೇ ಎಂದು. ನಮ್ಮಲ್ಲಿ ಎಲ್ಲರೂ ಹೇಳುವವರೇಆಗಿರುವುದರಿಂದ ಸಲಹೆ ಬರಲಿಲ್ಲ ಎಂದರ್ಥವಲ್ಲ- ಯಾವ ಮನಸ್ಸು ಪ್ರಪಂಚವೇ ಸರಿಯಿಲ್ಲವೆಂದು ನಿರ್ಧರಿಸಿರುವುದೋ ಅದು ಎಲ್ಲಾ ಸತ್ಯಗಳಿಗೂ, ಸೌಂದರ್ಯಕ್ಕೂ ಕಿವುಡು ಹಾಗೂ ಕುರುಡಾಗಿರುತ್ತದೆ. ಅದು ತನ್ನಲ್ಲೇ ನಿಜವನ್ನು ಕಾಣಬೇಕಿರುವುದು. ಹಾಗೆ ಕಂಡುಕೊಂಡಾಗ ಮಿಥ್ಯಗಳಿಗೂ, ಕುರೂಪಕ್ಕೂ ಕಿವುಡು- ಕುರುಡಾಗುವ ಹಂತಕ್ಕೆ ಅದು ಬೆಳೆಯಬಲ್ಲದು

  (ಸಶೇಷ)
(Image Courtesy- Web)