Tuesday, September 8, 2009

ಸ್ಥಿತ್ಯಂತರ

ಈ ಕನಸಿಗೀಗ ಐದು ವರುಷಗಳು. ಮೊದಲಬಾರಿಗೆ ಸಂಭಾಷಣೆಗಳು ಮೂಡಿದ ಮೊದಲ ಪುಟ್ಟ ಕನಸಿದು. ನಂತರದ ಕನಸುಗಳು ಮತ್ತಷ್ಟು ವಿಸ್ತೃತವಾಗುತ್ತಾ ಹೋದವು

ಸ್ಥಿತ್ಯಂತರ

ನಿಚ್ಚಳವಾಗಿ ಹಸಿರಿರುವ, ಸಮೃದ್ಧ ವಾತಾವರಣದ ಶ್ರೀಮಂತಿಕೆಯನ್ನು ದಿಟ್ಟಿಸುತ್ತಾ ನಡುವೆ ನಾನು ನಿಂತಿದ್ದೆ. ಮನಸ್ಸು ಮಾತ್ರ ಅಸಂಬದ್ದ ಆಲೋಚನೆಗಳ ಮೇಲೆ ಸವಾರಿ ಮಾಡುತ್ತಾ ಖಿನ್ನವಾದಂತಿತ್ತು. ಯಾವ ಯೋಚನೆಗಳೂ ನಾನು ಬೊಟ್ಟುಮಾಡಿ ಪರೀಕ್ಷಿಸುವಷ್ಟು ಸ್ಪಷ್ಟವಾಗಿರಲಿಲ್ಲ. ಹೀಗಿದ್ದಾಗ, ವಸ್ತುವೊಂದು ಸರ್ರನೆ ನನ್ನಿಂದ ಸ್ವಲ್ಪ ದೂರದಲ್ಲಿ ಚಲಿಸಿತು.

ಅಲ್ಲೊಂದು ಅತ್ಯಾಕರ್ಷಕವಾದ ಕೊಡೆ ನನ್ನ ಗಮನವನ್ನು ತನ್ನತ್ತ ಸೆಳೆದುಕೊಂಡಿತು. ಅದು ಕಾಮನಬಿಲ್ಲಿನ ವರ್ಣಗಳಿ೦ದ ಲೇಪಗೊ೦ಡು ಗಾಳಿ ಬಂದತ್ತ ಓಡುತ್ತಲಿತ್ತು. ನಾನು ಅರಿವಾಗುವ ಮೊದಲೇ ಕೊಡೆಯನ್ನು ಹಿಡಿಯುವುದೇ ನನ್ನ ಪರಮ ಗುರಿಯೇನೋ ಎಂಬಂತೆ ಅದರ ಹಿಂದೆ ಓಡಲಾರ೦ಭಿಸಿದೆ. ನನ್ನ ದೃಷ್ಟಿ ಎಷ್ಟು ಸೀಮಿತವಾಗಿತ್ತೆ೦ದರೆ ನಾನೆಲ್ಲಿ ಹೋಗುತ್ತಿದ್ದೇನೆ೦ಬುದನ್ನು ಯೋಚಿಸುವ ಗೋಜಿಗೇ ನಾನು ಹೋಗಲಿಲ್ಲ. ಇದರ ಮಧ್ಯದಲ್ಲೇ ನಾನು 'ಕೊಡೆ ಗಾಳಿಗೆ ಅನುಗುಣವಾಗಿ ಚಲಿಸುತ್ತಿಲ್ಲ ಬದಲಾಗಿ ಒಂದು ನಿರ್ಧಿಷ್ಟ ವೇಗದಲ್ಲಿ ಮುನ್ನುಗ್ಗುತ್ತಿದೆ' ಎಂಬುದನ್ನೂ ಕಂಡುಕೊಂಡೆ.

ಹೀಗೇ ಸಾಗುತ್ತಿದ್ದ ಕೊಡೆ ಅಚಾನಕ್ಕಾಗಿ ತನ್ನ ವೇಗ ಹೆಚ್ಚಿಸಿಕೊ೦ಡು ನನ್ನಿಂದ ದೂರ, ದೂರವಾಗಿ ಕಣ್ಮರೆಯಾಯಿತು. ಸುಸ್ತು, ನಿರಾಸೆಗಳ ಕೂಪವಾಗಿ ಅಲ್ಲಿ ನಿಂತ ನಾನು ಸುತ್ತಲೂ ದೃಷ್ಟಿ ಹಾಯಿಸಿದವಳೇ ದಿಗ್ಬ್ರಾ೦ತಳಾದೆ!ಅರೆ! ಅದೊಂದು ಬರಡು, ಬಂಜರು ಭೂಮಿ. ಹಸಿರು, ಸೌ೦ದರ್ಯವೆಲ್ಲಾ ಕಳೆದು ಹೋಗಿದೆ! ಮಂಡಿಯೂರಿ ಅಲ್ಲಿಯೇ ಕುಸಿದೆ. ಕೊಡೆ ಕಣ್ಮರೆಯಾದ ಸ್ಥಳದಿಂದ ಸ್ವರವೊಂದು ಹೊರಟಿತು, "ನೀನು ಓಡಿದೆ, ಓಡಿದೆ..., ಅಂದು ಗಳಿಗೆಯಲ್ಲಿ ಅಗತ್ಯವೇ ಇಲ್ಲದ ವಸ್ತುವಿಗಾಗಿ! ಮಳೆಯಾಗಲಿ, ಬಿಸಿಲಾಗಲಿ ಇಲ್ಲದಿದ್ದ ಜಾಗದಲ್ಲಿ ಒಂದು ಕೊಡೆಯ ಹಿಂದೆ! ಕ್ಷಣ ನಿನಗೆ ಒದಗಿಸಲಾಗಿದ್ದ ಸಂಪತ್ತನ್ನು ನೀನು ಮನಗಾಣಲೇ ಇಲ್ಲ. ಈಗ ನೀನು ಇಲ್ಲಿದ್ದೀಯ. ತನ್ನ ಒಣ ಹುಲ್ಲಿನಷ್ಟೇ ಬರಡಾದ ಆಲೋಚನೆಗಳನ್ನು ಆಹ್ವಾನಿಸುವ ಖಾಲಿ ಖಾಲಿ ಜಾಗದಲ್ಲಿ ಕೈಚೆಲ್ಲಿ ಕುಳಿತಿದ್ದೀಯ..."

(image- web)
ಇದು 'ಡ್ರೀಂ ವೀಲ್'ಗು೦ಪಿನಲ್ಲಿ ಸುತ್ತಿ ಬ೦ದಿರುವ ಕನಸು!