Wednesday, August 19, 2009

ಹೀಗೊಂದು ತರ್ಕ!

ಇದು, ಇತ್ತೀಚಿಗೆ ಮೂಡಿ, ಕಾಡಿದ ಕನಸುಗಳಲ್ಲೊಂದು.

ನಸಿನಲ್ಲಿ ಕಣ್ತೆರೆದಾಗ ಒಂದು ವಿಚಿತ್ರವಾದ ಪರಿಸರದಲ್ಲಿದ್ದೆ. ಪಾಳು ಪಾಳಾದ ಜಾಗದ ನಡುವೆ ಕುರ್ಚಿ, ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ನಾನು ಹೊಸ ಅನುಭವವೊ೦ದರ ವೈಚಿತ್ರ್ಯಕ್ಕೆ ಹೊ೦ದಿಕೊಳ್ಳುವಷ್ಟರಲ್ಲಿ ಗುಂಪೊಂದರ ಶಿಸ್ತಾದ ನಡುಗೆಯ ಸದ್ದು ಕಿವಿತಾಗಿತು. ಅತ್ತ ಕತ್ತು ತಿರುಗಿಸಿ ಒಂದು ಕ್ಷಣ ಸ್ತಬ್ಧವಾಗಿ ಹೋದೆ.'ಶಿರ'ಗಳೇ ಇಲ್ಲದ ಮನುಜರ ಗುಂಪೊಂದನ್ನು ಶಿರವೆತ್ತಿ ನಡೆಯುತ್ತಿದ್ದ ಯುವತಿಯೊಬ್ಬಳು ಮುನ್ನಡೆಸಿಕೊಂಡು ಬರುತ್ತಿದ್ದಳು. ಅವರೆಲ್ಲಾ ಬೆಲೆ ಬಾಳುವ ಉಡುಗೆಗಳನ್ನು ತೊಟ್ಟಿದ್ದರು. ಗುಂಪು ನನ್ನ ಸನಿಹದಲ್ಲೇ ಹಾದು ಹೋಯಿತು. ಆಕೆ ಒಮ್ಮೆ ನನ್ನನ್ನು ದಿಟ್ಟಿಸಿ ನೋಡಿ ಮುನ್ನಡೆದಳು. ಎಲ್ಲರೂ ಅಲ್ಲಿಯೇ ಜೋಡಿಸಿದ್ದ ಕುರ್ಚಿಗಳಲ್ಲಿ ಕುಳಿತುಕೊ೦ಡರು.

ಎಲ್ಲವೂ ನನಗೆ ವಿಚಿತ್ರಕ್ಕಿ೦ತ ಹಚ್ಚೇ 'ಕಗ್ಗಂಟಾಗಿ' ಕಂಡಿತು. ಆಕೆ ಅಧಿಕಾರಯುತ ವಾಣಿಯಲ್ಲಿ ನನಗೆ ತಿಳಿಯದ ಕೆಲವು ವಿಷಯಗಳನ್ನು ಕುರಿತು ಎಲ್ಲರನ್ನುದ್ದೇಶಿಸಿ ಮಾತನಾಡಲಾರ೦ಭಿಸಿದಳು. ಹತ್ತಿರದಲ್ಲೇ ಮಂಡಿಯೂರಿ ನಾನು ನೋಡುತ್ತಾ ಕುಳಿತೆ. ಆಕೆ ಏನೇ ವಿಷಯವನ್ನು ಪ್ರಸ್ತಾಪಿಸಿದರೂ, ಮಧ್ಯ ಮಾತು ತುಂಡರಿಸಿ ನಿಲ್ಲಿಸಿದರೂ 'ತಲೆ'ಯಿಲ್ಲದ ಮನುಜರು ಚಪ್ಪಾಳೆ ತಟ್ಟುತ್ತಿದ್ದರು. ಇದು ಹೀಗೇ ಮುಂದುವರೆಯಿತು.

ಚಪ್ಪಾಳೆಗಳು ಎಲ್ಲೆಲ್ಲೂ ಪ್ರತಿಧ್ವನಿಸಿದವು. ಅಷ್ಟರಲ್ಲಿ ಆಕೆ ನನ್ನನ್ನೇ ಸುಧೀರ್ಘವಾಗಿ ನಿಟ್ಟಿಸುತ್ತಾ ತನ್ನ ಎಂದಿನ ಧಾಟಿಯನ್ನು ಕಾಯ್ದುಕೊಂಡು ಹೀಗೆ೦ದಳು.. "ಆತ್ಮಿಯರೇ, ಉನ್ನತ ಆಲೋಚನೆಗಳಿರುವುದೇ ಒಪ್ಪಿಕೊಂಡು ಅನುಸರಿಸಲು. ಅಂತಹುದನ್ನು ಪ್ರಶ್ನಿಸುವ ಧೈರ್ಯ ತೋರುವವರನ್ನು ಶಿಕ್ಷಿಸದೇ ಬಿಡಲಾಗದು." ಆಶ್ಚರ್ಯ, ತುಸು ಗಾಬರಿಗಳೆರಡೂ ನನ್ನನ್ನು ಕಾಡ ಹತ್ತಿದವು. ಆಕೆಯ ಮಾತು ಸಾಗಿತು, "ಅಮೂಲ್ಯ ವಿಚಾರಗಳು ಬೆಂಬಲಿಗರನ್ನು ಗೆಲ್ಲುತ್ತವೆ. ಚಿ೦ತಿಸಬಲ್ಲವ ಮುನ್ನಡೆಸುತ್ತಾನೆ. ಆಗದವ ಹಿಂಬಾಲಿಸುತ್ತಾನೆ. ನಾಯಕತ್ವ ವಹಿಸಲು ಬೆಂಬಲಿಗರೂ ಇಲ್ಲದ, ಹೆಜ್ಜೆ ಸೇರಿಸಲು ಜೊತೆಗಾರರನ್ನೂ ಹೊಂದಿರದ, ಗೊತ್ತು ಗುರಿಯಿಲ್ಲದ ಅಲೆಮಾರಿ ನಮ್ಮ ಸಮಾಜಕ್ಕೆ, ಸಾಮಾಜಿಕ ವ್ಯವಸ್ಥೆಗೇ ಕಳ೦ಕವಿದ್ದ೦ತೆ. ಸ್ನೇಹಿತರೇ, ಇಲ್ಲಿಯೇ ನನಗೊಂದು 'ತಲೆ'ಯಿರುವ ಜೀವಿ ಗೊಚರಿಸುತ್ತಿದೆ!! ಅದು ಕೆಲಸ, ಉದ್ದೇಶವಿಲ್ಲದೆ ಅಲ್ಲಿ ಇಲ್ಲಿ ತಿರುಗಾಡುತ್ತಾ, ಅನಾವಶ್ಯಕವಾಗಿ ಚಿಂತಿಸುತ್ತಿದೆ. ಅದಕ್ಕೆ ತನ್ನ ಅಮೋಘ ಅಭಿವ್ಯಕ್ತಿಯಿ೦ದ ಜನರನ್ನು ಮೆಚ್ಚಿಸಲಿಕ್ಕೂ ಆಗದು, ಇಲ್ಲವೇ ಸುಮ್ಮನೆ ಸಾಮಾಜಿಕವಾಗಿ 'ಶ್ರೇಷ್ಥ'ವೆಂದು ಪರಿಗಣಿತವಾಗಿರುವ ಮೌಲ್ಯಗಳನ್ನು ಅನುಸರಿಸಲೂ ಆಗದು. ನಿಮಗೆ ಕುತೂಹಲವಿದ್ದರೆ ಒಮ್ಮೆ ಅದನ್ನು ನೋಡಿ ಬರಬಹುದು.." ಮಾತು ನಿಂತಿತು. ಚಪ್ಪಾಳೆಗಳು ಆರ್ಭಟಿಸಿದವು. ಆಕೆಯ ನಿಂದನೆ ಆಪಾದನೆಗಳಿ೦ದ ಬೇಸತ್ತು , ಸಾಕೆನ್ನದ೦ಬ೦ತೆ ನನ್ನನ್ನು 'ಅದು' ಎನ್ನುವಷ್ಟರ ಮಟ್ಟಿಗೆ ಸಂಭೋಧಿಸಿದ ರೀತಿಯಿಂದ ಅವಮಾನಿತಳಾಗಿ ನಾನು ಆಕೆಯನ್ನು ವಿರೋಧಿಸ ಬಯಸಿದೆ. ಆಕೆಯ ವಿತ೦ಡವಾದ, ಒಪ್ಪಲಸಾಧ್ಯವೆನಿಸಿದ ತರ್ಕದ ವಿರುದ್ದ ಧನಿಯೆತ್ತ ಬಯಸಿದೆ. ಇಲ್ಲ... ಆಗುತ್ತಿಲ್ಲ ಒಂದು ಪದವನ್ನೂ ಬಾಯಿ ಹೊರಗೆಡುವಲಿಲ್ಲ.ಸಂಪೂರ್ಣವಾಗಿ 'ಮೂಕ'ಳಾಗಿ ಹೋಗಿರುವ೦ತೆನಿಸಿತು. ಅಷ್ಟರಲ್ಲೇ ಅನಿಯಂತ್ರಿತವಾಗಿ ಕಾಲುಗಳು ಹಿಮ್ಮುಖವಾಗಿ ಚಲಿಸಲಾರ೦ಭಿಸಿದವು.... ಹೆಜ್ಜೆಗಳು ಹಿಂದೆ ಹಿಂದೆ.. ಕಡೆಗೆ, ನಿಜವಾಗಲೂ ಕಣ್ತೆರೆದಿದ್ದೆ!

(ಚಿತ್ರ - ಅ೦ತರ್ಜಾಲ)
This dream has been spinned in the online dream group ‘Dream Wheel’

Tuesday, August 11, 2009

ಕನಸು ಕದ್ದ ತಾಣ ಮಾಯವಾಗಿದೆ!

ಹಾಯ್,
ಕನಸು ಕದ್ದ ಬಗೆಗೆ ನೀಡಿದ ಬಹಳಷ್ಟು ಎಚ್ಚರಿಕೆ, ವಿರೋಧಗಳ ನಂತರ ಮಿ.ಪ್ಯಾ೦ಕಿ ಕಡೆಗೆ ತನ್ನ ಬ್ಲಾಗನ್ನೇ ಬ್ಲಾಗ್ ಲೋಕದಿ0ದ ತೆಗೆದು ಹಾಕಿದ್ದಾನೆ. ಈ ನಿಟ್ಟಿನಲ್ಲಿ ಕೈಜೋಡಿಸಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ತು೦ಬಾ ಧನ್ಯವಾಧಗಳು. ಮು೦ದೆ ಇ೦ತಹ ಯಾವುದೇ ಅಚಾತುರ್ಯ, ಸ೦ಕಷ್ಟಗಳು ಬ್ಲಾಗ್ ಪ್ರಪ೦ಚದಲ್ಲಿ ಎದುರಾಗುವುದಿಲ್ಲವೆ೦ದು ಆಶಿಸುತ್ತಾ ಮತ್ತೆ ಬ್ಲಾಗ್ ನಲ್ಲಿ ಕನಸುಗಳು ತೆರೆದುಕೊಳ್ಳಲು ಸಕಾಲವೆ೦ದು ಭಾವಿಸುತ್ತೇನೆ.
ಸದ್ಯದಲ್ಲೇ ಮತ್ತೊ೦ದು ಕನಸಿನ ಅನುಭವವನ್ನು ಬ್ಲಾಗ್ ಸೇರಿಸುತ್ತೇನೆ..
'ಇಲ್ಲಿ ಪ್ರಕಟವಾಗುವ ಬರಹಗಳ ಮೇಲಿನ ಹಕ್ಕುಗಳು ಖ೦ಡಿತ ನನ್ನ ಬಳಿಯಿರುತ್ತವೆ.'!!
ಇತ್ತ ಬರುತ್ತಿರಿ :)