Tuesday, May 14, 2013

ಅನುಭವ ಮತ್ತು ನಾನು ... !! ( ಅಂಕಣ ಬರಹ-೧೦)



ಅನುಭವ ಮತ್ತು ನಾನು ... !!

ಮಸ್ತಕದೊಳಗೆ ಏನೇ ಘಟಿಸುತ್ತಿದ್ದರೂ ಅದಕ್ಕೆ ಗಮನವೀಯದೇ ಪುಸ್ತಕದಿಂದ ತೆಗೆದುದನ್ನು ಅದಕ್ಕೆ ಸೇರಿಸುವುದೇ ಅತ್ಯಂತ ಶ್ರೇಷ್ಠವಾದ ಕೆಲಸವೆಂದು ಕಾಣಲ್ಪಡುತ್ತದೆ. ನಂತರದ ಹಂತಗಳಲ್ಲಿ ವಿನಾಯಿತಿ ಇರುವುದೇನೋ ಆದರೆ ವಿದ್ಯಾರ್ಥಿ ಹಂತದಲ್ಲಂತೂ ಅದು ಸತ್ಯವಾದ ವಿಚಾರ. ಅದರ ಹಿಂದೆ ಮಹತ್ತರವಾದ ಕಾರಣವೂ ಇರುವುದು ಹೌದಾದರೂ ಕಲಿಯುವಿಕೆಗಿರುವ ವಿವಿಧ ಮುಖಗಳನ್ನು ಪರಿಗಣಿಸದಿರುವುದು ದುರದೃಷ್ಟಕರವೂ ಹೌದು. ಈ ದುರದೃಷ್ಟ ನನ್ನನ್ನು ಹಲವು ವರುಷ ಕಾಡಿದ್ದು ನಿಜವೆನ್ನಬಹುದೇನೋ. ಹಾಗೆಯೇ ಪುಸ್ತಕದಿಂದ ತೆಗೆದು ಒಳಸೇರಿಸಿ ಕೇಳಿದಾಗ ಹರಿಯಬಿಡುವುದಷ್ಟೇ ಅಲ್ಲ, ಬದಲಿಗೆ ಒಳ ಹೋದ ಪ್ರತಿಯೊಂದು ವಿಚಾರವೂ ಯಾವುದಾದರೊಂದು ರೀತಿಯಲ್ಲಿ ನಮ್ಮ ಮೇಲೆ ಪ್ರಭಾವ ಬೀರಲಿಕ್ಕಾಗಿಯೇ ಬಂದು ಸೇರಿದೆ ಎಂಬ ಪ್ರಜ್ಞೆ ಇಲ್ಲದಿರುವುದೂ ದುಃಖಕರವೇ!
 ನನಗೆ ದಾರಿ ಕಾಣಿಸುತ್ತಾ ಸಾಗಿದ ಕನಸನ್ನು ದಾಖಲಿಸಬೇಕು ಮತ್ತು ಹಂಚಿಕೊಳ್ಳಬೇಕು ಎಂಬ ಆಶಯ ಮೂಡುವ ಹಂತ ನನ್ನದಾಗಿರಲಿಲ್ಲ. ಹಾಗೆನಿಸಿದ್ದು ಅಮ್ಮನಿಗೆ. ಅನಿಸಿದ್ದರ ಹಿಂದೆಯೇ ಆಗಿನ ಸೌಲಭ್ಯದಂತೆ ಟೇಪ್ ರೆಕಾರ್ಡರ್ ತಂದು ಕನಸು ಅಮ್ಮನಿಗೆ ಹೇಳುತ್ತಾ ರೆಕಾರ್ಡ್ ಮಾಡುವುದೂ, ನಾನು ಹೇಳಿದ ಕನಸನ್ನು ಸಮಯವಾದಂತೆ ಅಮ್ಮ ಬರೆಯುವುದೂ ನಡೆದಿತ್ತು. ಆದರೆ ಈ ಬರೆಯಬೇಕೆಂಬ-ಹಂಚಬೇಕೆಂಬ ಆಶಯದ ಹಾದಿಯೂ ಸುಲಲಿತವಾದದ್ದಲ್ಲ ಎಂಬುದೂ ಅರಿವಿಗೆ ಬರಲು ಶುರುವಾದಂತಿತ್ತು. ಮೊದಲನೆಯದಾಗಿ ೧೬ರ ಆಸುಪಾಸಿನಲ್ಲಿ ಇಂತಹುಗಳು ಘಟಿಸುವುದು ಹಲವರ ಪ್ರಕಾರ ಒಳ್ಳೆಯ ಬೆಳವಣಿಗೆಯಲ್ಲ. ಅದಕ್ಕಿಂತ ಮುಖ್ಯವಾಗಿ ಅಂತದುಹಕ್ಕೆಲ್ಲಾ ಅನುಭವ ಸಾಲದು’. ನನಗೆ ಮೊದಲನೆಯ ವಿಚಾರದ ಬಗೆಗೆ ಖುದ್ದು ಏನನಿಸದೇ ಅಭಿಪ್ರಾಯ ಕೇಳಿ ತಿಳಿದು ಗಾಬರಿಯಾಗಿದ್ದು ಹೌದಾದರೂ  ಅಷ್ಟೇನು ಗಮನವಿದ್ದಂತಿರಲಿಲ್ಲ. ಆದರೆ ಅದೇಕೋ ಈ ಅನುಭವಎಂಬುದರ ಬಗ್ಗೆ ಪದೇ ಪದೇ ಎಲ್ಲರಿಂದ ಕೇಳುತ್ತಿದ್ದರಿಂದ ಅದು ಅತಿ ದೊಡ್ಡ ಪ್ರಶ್ನೆ ಹಾಗೂ ಸಮಸ್ಯೆಯಾಗಿ ಉಳಿದಿತ್ತು. ನನಗೆ ನಾನೇ ಕೇಳಿಕೊಳ್ಳುವೆ : ಅನುಭವಿಎಂದು ಕರೆಯುವ ವಯಸ್ಸು ಯಾವುದುನಾನು ೯೯ ವರುಷ ಬುದುಕಿದ್ದೆನೆಂದರೂ ಅದರ ನಂತರದ ದಿನದ ಅನುಭವಕ್ಕೆ ನಾನು ಹೊಸಬಳೇಅನನುಭವಿಯೇ ಅಲ್ಲವೇಮತ್ತೇಕೆ ಈ ತರಹದ ಭಾವನೆಯಿದೆ
ಅದೇ ಸಮಯದಲ್ಲಿ ನನ್ನ ಸುಪ್ತ ಮನಸ್ಸು ಅದಕ್ಕೆ ತನ್ನದೇ ವಿವರಣೆ ನೀಡಲು ಕಾದು ಕುಂತಂತೆ ಒಮ್ಮೆ ಕನಸಿನ ಸಂಭಾಷಣೆಯಲ್ಲಿ ಹೀಳಿತು.. ಅನುಭವ ಎನ್ನುವುದು ಪ್ರತಿ ಕ್ಷಣದಲ್ಲೂ ಅಡಗಿದೆ. ಮುಚ್ಚಿದ ರೆಪ್ಪೆಯಲ್ಲಿ ಕಳೆದ ಕ್ಷಣಗಳು ದಾಖಲಾಗುತ್ತಾ, ತೆರೆದ ಕಣ್ಣುಗಳಲ್ಲಿ ಹೊಸದನ್ನು ಕಾಣುವ ಆಶಯವಿದೆ. ಒಮ್ಮೊಮ್ಮೆ ಕಣ್ಣರೆಪ್ಪೆ ಬಡಿದಾಗಲೂ ಒಳ ಹೋಗಿ ದಾಖಲಾಗುವವುಗಳೇ ಅನುಭವಗಳು. ಈಗ ಹೇಳು ನಮ್ಮಲ್ಯಾರು ಅನನುಭವಿಗಳು?”
ಅನುಭವದ ಬಗೆಗೆ ಇಷ್ಟೆಲ್ಲಾ ಅನ್ನಿಸಲು ಗುರುತರವಾದ ಕಾರಣಗಳೇ ಇವೆ. ಯಾರ ಮುಂದೆ ಕನಸಿನ ಅನುಭವಗಳ ಹೇಳ ಹೊರಟರೂ ಅದು ವಯಸ್ಸಿನ ಕಾರಣಕ್ಕೆ ಅಸ್ವೀಕೃತವಾಗುತ್ತಿದ್ದರಿಂದ ಅದರ ಬಗೆಗೆ  ತುಸು ಹೆಚ್ಚೇ ಚಿಂತೆ-ಚಿಂತನೆಗಳು ನಡೆದಿರುವುದನ್ನು ತೆಗೆದು ಹಾಕುವಂತಿಲ್ಲ. 
ಮೇಲಿನ ಸುಪ್ತ ಮನಸ್ಸಿನ ಸಂಭಾಷಣೆ ಒಂದಾದರೆ. ಮತ್ತೊಮ್ಮೆ  ಪಕ್ಷಿಯೊಡನೆ ನಡೆದ ಮಾತುಕತೆ ಈ ರೀತಿಯಿತ್ತು.
ಪಕ್ಷಿ ಕಟ್ಟೆಯ ಮೇಲೆ ಕುಳಿತ ನನ್ನನ್ನು ಸ್ಥಳವೊಂದಕ್ಕೆ ಕರೆದೊಯ್ಯುವುದು. ಅಲ್ಲಿ ನೋಡಿದರೆ ಮನುಷ್ನೊಬ್ಬ ಕಲ್ಲೊಂದನ್ನು ಕುಟ್ಟುತ್ತಾ ಕುಳಿತಿರುವನು. ಅವನು ಕಣ್ಣು ಮುಚ್ಚಿಕೊಂಡು ಕೈಯಲ್ಲಿರುವ ಹತಾರದಲ್ಲಿ ಮನಬಂದಂತೆ ಕುಟ್ಟುತ್ತಿರುವನು. ಸುತ್ತಲೂ ರಾಶಿ ರಾಶಿ ಕಲ್ಲಿನ ಪುಡಿ- ತುಂಡುಗಳು. ಪಕ್ಷಿ ಹೇಳುವುದು. ಹುಡುಗೀ, ನೋಡವನನ್ನ. ವರ್ಷಗಟ್ಟಲೆಯಿಂದ ಕಲ್ಲನ್ನು ಶ್ರದ್ಧೆಯಿಂದ ಕುಟ್ಟುತ್ತಿರುವ ಅನುಭವಿಯನ್ನ’”
ನಾನೆನ್ನುವೆ, “ಇದೇಕೆ ಹೀಗೆ ಕಣ್ಣು ಮುಚ್ಚಿ ಕಲ್ಲನ್ನು ತುಂಡು ತುಂಡಾಗಿಸಿರುವ? ‘ಅನುಭವಿಯಾವುದರಲ್ಲಿ? ಕಲ್ಲನ್ನು ಚಚ್ಚುವುದರಲ್ಲೇ?”
ಪಕ್ಷಿ- ಅದೇ ಅಲ್ಲವೇ ವಿಪರ್ಯಾಸಪಕೃತಿ ದೃಷ್ಠಿಯ, ಪ್ರತಿಭೆಯನ್ನಿತ್ತು ,ಅದರ ಸಾಕಾರವಾಗಲೆಂದೇ ಕಲ್ಲನ್ನೂ, ಹತಾರವನ್ನೂ ದೊರಕಿಸಿಕೊಟ್ಟಿತು. ಈತನೋ ಕಣ್ಣುಮುಚ್ಚಿ ಕುಳಿತ. ಕಣ್ಣು ಮುಚ್ಚಿದ್ದು ಯಾವುದರಿಂದಲೋ? ಅದೇನು ದರ್ಪವೋ? ಮೂರ್ಖತನವೋ? ಬಲ್ಲವರ್‍ಯಾರು? ಏನೇ ಇರಲಿ ಹೀಗೆ ಜೀವನದುದ್ದಕ್ಕೂ ಕುಳಿತ ಅನುಭವಿಗಳುಎಷ್ಟೋ ಏನೋ..”
ನನಗೀಗ ಅನಿಸುವುದು : ಅನುಭವ ಜೀವನದ ಒಂದೊಂದು ಹಂತವನ್ನೂ ದಾಟುತ್ತಾ ಹೋದ ಮನಸ್ಸು ಬದುಕಿನ ರೂಪುರೇಷೆಗಳ ಕಾಣುತ್ತಾ ಪರಿಪಕ್ವಗೊಂಡಂತೆ ಲಭಿಸುವ ನಿರಂತರ ಸಾರಾಂಶ.  ಯಾವ ಮನಸ್ಸು ತನ್ನಲ್ಲೇ ಮಂಥಿಸುವುದೋ ಅದು ಎಲ್ಲವನ್ನೂ ಗ್ರಹಿಸುವುದು ಮತ್ತು ಗ್ರಹಿಕೆಯನ್ನು ನಿರಂತರವಾಗಿ ಮಂಥಿಸುತ್ತಾ ಅನುಭವಿಯಾಗುವುದು. ಅದಕ್ಕೆ ಪಾಠಗಳ ಕಲಿಸುವ ಬದುಕಿನ ಮಗ್ಗಿಲುಗಳೇ ಆಗಬೇಕೆಂದಿಲ್ಲ. ಕಾರಣ, ಪಾಠಗಳಲ್ಲಿರುವುದು ಅಕ್ಷರಗಳ ಜೋಡಣೆ ಮಾತ್ರ. ಅದನ್ನು ಅರ್ಥೈಸಿಕೊಳ್ಳುವ ಶಕ್ತಿ ಓದುಗನಿಗಿರುವುದಷ್ಟೇ ಮುಖ್ಯವಾಗುವುದು.
ವಿಚಿತ್ರವೆಂದರೆ ಈ ಅನುಭವವ ಮಂಥಿಸುವ, ಗ್ರಹಿಸುವ ಹಂತ ತಲುಪಲೂ  ಮತ್ತೆ ಅನುಭವದ ಅವಶ್ಯಕತೆಯೇ ಇದೆ! ಕಾರಣ : ಅನುಭವವೆನ್ನುವುದು ಹಂತವಲ್ಲವೇ ಅಲ್ಲ ಅದೊಂದು ಪಯಣ. ಎಡಬಿಡದೆ ನಡೆಯುತ್ತಿರುವಂತಹುದು. ಹಿಂದೆ ಕಲಿತದ್ದನ್ನು ಅರಿತುಕೊಳ್ಳಲು ಇಂದಿನ ಹಾಗೂ ಇಂದಾದುದನ್ನು ಅರ್ಥೈಸಲು ಹಿಂದಿನದರ ಅಗತ್ಯ ನಿರಂತರವಾಗಿ ಬೇಕಾಗುತ್ತಲೇ ಇರುತ್ತದೆ..


 (Image- Web)
(ಕಂಡೆ ನಾನೊಂದು ಕನಸುಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- 10)

Monday, April 15, 2013

ಸುಧಾ ಯುಗಾದಿ ವಿಶೇಷಾಂಕ-ಲೇಖನ

ಆತ್ಮೀಯರೆ,
'ಸುಧಾ ಯುಗಾದಿ ವಿಶೇಷಾಂಕ'ದಲ್ಲಿ ನನ್ನ ಲೇಖನ ಪ್ರಕಟವಾಗಿದೆ.. ದಯವಿಟ್ಟು ಓದಿ. ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ :)
ವ0ದನೆಗಳು,
~ಸುಷ್ಮಸಿ0ಧು

Wednesday, January 2, 2013

‘ಕಂಡೆ ನಾನೊಂದು ಕನಸು’ ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 9

 
ಮನಸ್ಸಿಗೆ ಪ್ರತಿಮೆ’, ‘ಸಂಕೇತಗಳು ಬಹಳ ಪ್ರಿಯ. ಅದಕ್ಕೇ ಆಗಸದಷ್ಟು ವಿಶಾಲವಾದ’, ‘ಶಿಖರದದೆತ್ತರಕ್ಕೆಎಂಬಂತಹ ವಾಕ್ಯಗಳು ವಸ್ತು-ವಿಷಯಗಳ ವ್ಯಾಪ್ತಿಯನ್ನು ಅರ್ಥೈಸಿ ಆನಂದಿಸಲು ಸಹಕಾರಿಯಾಗುತ್ತವೆ. ಕನಸಿನಲ್ಲಿ ಜಾಗೃತಗೊಂಡ ಮನಸ್ಸಿನಲ್ಲಿ ಮೂಡುತ್ತಿದ್ದ ಹಕ್ಕಿಯ ರೂಪವೂ ಇದೇ ತರಹದ ಉದ್ದೇಶವನ್ನೇ ಈಡೇರಿಸುವ ಸಲುವಾಗೇ ಬಂದಂತೆ ಅನಿಸುವುದಿದೆ. ಹಕ್ಕಿ ಸ್ವತಂತ್ರ್ಯದ ಜೊತೆ ಜೊತೆಗೇ ಪ್ರಪಂಚದ ವೈಶಾಲ್ಯತೆಗೆ ತಲುಪಿಕೊಳ್ಳಬಲ್ಲ ಸಾಧ್ಯತೆಯಿರುವ ದೈಹಿಕ ಸಾಮರ್ಥ್ಯವಿರುವುದರಂತೆಯೂ, ಸಂದೇಶಗಳ ವಾಹಕದಂತೆಯೂ ಕಾಣಿಸುತ್ತದೆ: ಹೀಗೆ ಹಕ್ಕಿಯ ರೂಪಿನ ಅಸ್ಥಿತ್ವದ ಬಗೆಗೆ ಮಂಥಿಸಲು ಹೊರಟಿರುವ ಮನಸ್ಸೂ ಸಂಕೇತಗಳ ತೆರೆದಿಡುತ್ತಾ, ಅದರ ಸಾಧ್ಯಾಸಾಧ್ಯತೆಗಳನ್ನು ಒಪ್ಪಿಕೊಳ್ಳುತ್ತಾ ತನಗಿರುವ ಸಂಕೇತಗಳ ಪ್ರೀತಿಯನ್ನೇ ಹೊರಹಾಕಿ ಮನಸ್ಸಿಗೆ ಅದರ ಮೇಲಿರುವ ಒಲವನ್ನೇ ತೋರಿಸುತ್ತಲಿದೆ!

ಮತ್ತೆ ಎದುರಾದ ಕನಸುಗಳಲ್ಲಿ ಬಣ್ಣ ಬಣ್ಣದ ಆ ಹಕ್ಕಿ ಅರುಹಿತು:
ಒಳ ಮತ್ತು ಹೊರ ಮನಸ್ಸಿನ ನಡುವೆ ಒಂದು ಸೇತುವೆ ಇರಬೇಕು. ಹೊರಗಿನ ದ್ವಂದ್ವಗಳು ಸೇತುವೆಯ ಮೇಲಿನಿಂದ ಒಳಪ್ರವೇಶಿಸಿ, ಒಳಗೆ  ಸಿಕ್ಕ ಪರಿಹಾರ’, ‘ಉತ್ತರಗಳುಸೇತುವೆಯ ದಾಟಿ ಹೊರಗೆ ವ್ಯಕ್ತವಾಗಬೇಕು. ಇದೇ ಕೆಲಸವೇ ಅದಲುಬದಲಾದಾಗಲೇ ಮನಸ್ಸು ತನ್ನ ಸಮಸ್ಥಿತಿಯನ್ನು ಕಳೆದುಕೊಂಡು ತೊಳಲಾಡಿಬಿಡುತ್ತದೆ’’
ಪಕ್ಷಿ ಮತ್ತೊಮ್ಮೆ ಬಂದಾಗ ಹೀಗೆ ಹೇಳಿತ್ತು:  ನೆಲದ ಮೆಲೆಯೇ ನಿಂತು ಇತರರನ್ನು ನೋಡಿದಾಗ ಯಾರ ಮುಂದೆಯೂ ನಾವು ಕೀಳುಎಂದೋ, ಎಲ್ಲರಿಗಿಂತ ಮೇಲುಎಂದೋ ಭಾವಿಸುವುದು ಅಸಾಧ್ಯ. ನಾವು ಯಾವಾಗ ನೆಲಮಟ್ಟಕ್ಕಿಂತ ಒಂದಷ್ಟಡಿ ಕೆಳಗೆ ಗುಂಡಿಯಲ್ಲಿ ನಿಂತೋ, ನೆಲದ ಮಟ್ಟದಿಂದ ಒಂದಿಷ್ಟುದ್ದ ಮೇಲೆ ನಿಂತೋ ಬೇರೆಯವರ ನೋಡುತ್ತೇವೆಯೋ ಆಗಲೇ ಈ ಭಾವನೆಗಳು ಕಾಡುವವು.
ಹೀಗೆ ಕಾಣಸಿಗುವ ಚುಟುಕು ಸಂದೇಶಗಳುಳ್ಳ ಕನಸುಗಳು ಅಷ್ಟೇನು ಚುಟುಕಾಗಿರುತ್ತಿರಲಿಲ್ಲ. ಹಕ್ಕಿ-ನನ್ನ ನಡುವಿನ ಹಲವು ಸಂಭಾಷಣೆಗಳು ಇಂತಹ ಮಾತುಗಳಿಗೆ ಎಡೆ ಮಾಡಿ ಕೊಡುತ್ತಿದ್ದವು. ಹಕ್ಕಿ ಮೊದಮೊದಲಷ್ಟೇ ನನಗೆ ಸಂಭಂದಿಸಿದೆಎನ್ನುವಂತಿದ್ದ ಸಂದೇಶಗಳ ತಂದಿದ್ದು. ನಂತರದ ದಿನಗಳಲ್ಲಿ ನಾನು ಚಿಂತಿಸಿಯೇ ಇಲ್ಲವೆನ್ನುವಂತಹ ವಿಷಯಗಳು ವಸ್ತುವಾಗಿ ಕನಸಿನಿಂದ ಎದ್ದಮೇಲೆ ನನ್ನ ಧೃತಿಗೆಡಿಸುತ್ತಿದ್ದವು. ಕನಸುಗಳು ಪದೇ ಪದೇ ಹಕ್ಕಿಯನ್ನು ಹೊತ್ತು ತರುವುದು ಹೆಚ್ಚಾದಂತೆ ನನಗೆ ಆ ಪಕ್ಷಿಯೊಡನೆ ಸಲುಗೆ ಬೆಳೆದಂತೆ ತೋರಿತು. ಅದು ನಮ್ಮ ಕನಸಿನ ಸಂಭಾಷಣೆಗಳಲ್ಲಿಯೂ ಕಾಣಿಸುತ್ತಿತ್ತು.
 ಒಂದು ಬಾರಿ ನಾನು ಹಕ್ಕಿಯ ಕೇಳುವೆ:
ಅಲ್ಲಾ ನೀನು ಇಷ್ಟೊಂದು ವಿಷಯಗಳನ್ನು ಎಲ್ಲಿಂದ ಹುಡುಕಿ ತರುವೆ?”
ಪಕ್ಷಿ: ಹುಡುಕುವ ಅವಶ್ಯಕತೆಯಿಲ್ಲ. ಅವು ಲಭಿಸುವುವು..
ನಾನು : ಸರಿ, ಪ್ರಶ್ನೆ-ಚರ್ಚೆಗಳಿಗೆ ಉತ್ತರಗಳನ್ನಾದರೋ ಹೇಗೆ ಚಿಂತಿಸುವೆ?”
ಪಕ್ಷಿ: ಚಿಂತಿಸುವ ಅಗತ್ಯವಿಲ್ಲ. ಅವು ಇರುವವು. ಅದನ್ನು ಮುಂದಿಡುವುದಷ್ಟೇ ಕೆಲಸ
ನಾನು:  ‘’ಇದು ಅತಿ ಒಗಟಿನ ಮಾತಾಯಿತು. ಸ್ಪಷ್ಟವಾಗಿ ಹೇಳು. ನನಗೇ ದೊರೆಯದ ಉತ್ತರ ನನ್ನಲ್ಲಿರುವ ನಿನಗೆ ಹೇಗೆ ದೊರೆಯುವುದು’’
ಪಕ್ಷಿ: ನೀನು ದೊರೆಯದಉತ್ತರಯೆಂದೆಯಲ್ಲವೆ, ‘ಇರದಉತ್ತರ ಎನ್ನಲಿಲ್ಲವಲ್ಲ! ಹಾಗಾಗಿ, ‘ಇರುವಆದರೆ ದೊರೆಯದಉತ್ತರವ ನಾನು ದೊರಕಿಸುವೆ. ಸ್ಪಷ್ಟವೆ?”
ನಾನು : ಇದು ಬರೀ ಯಾಮಾರಿಸುವ ಉತ್ತರದಂತಿದೆ, ಸ್ಪಷ್ಟ ಆದರೂ ಅಸ್ಪಷ್ಟ. ನಾನು ನಂಬುವುದಿಲ್ಲ
ಪಕ್ಷಿ : ನಾನು ನಂಬಿಸುವ ಅಗತ್ಯವಿಲ್ಲ, ಇರುವುದು ಇರುತ್ತದೆ. ನಂಬಿಕೆ- ಅಪನಂಬಿಕೆ  ಮನಸ್ಸಿಗೆ ಸಂಬಂಧಿಸಿದ್ದು, ಇರುವಿಕೆಗಲ್ಲ
.........
ಈ ಕನಸು ನನಗೆ ಎರಡು ಅವಕಾಶವ ನೀಡಿತ್ತು- ಒಂದೋ, ನನ್ನಲ್ಲಿ ಏನೋ ಇದೆಎಂಬ ಇರುವಿಕೆಯ ನಂಬಬೇಕು. ಇಲ್ಲವೇ ಈಗಾಗಲೇ ಇರುವ, ‘ನಾನು ಅಯೋಗ್ಯಳುಎಂಬ ನಂಬಿಕೆಯನ್ನೇ ಇರಿಸಬೇಕು. ನಾನು ಬಹಳ ನಿಷ್ಠೆಯಿಂದ ಎರಡನೆಯದನ್ನು ಆಯ್ದುಕೊಂಡೆ! ಹಾಗೆಂದು, ಮೊದಲನೆಯ ಆಯ್ಕೆಯನ್ನು ನಾನು ಆಯ್ದುಕೊಳ್ಳಬೇಕಿತ್ತೆಂದು ನಾನು ಹೇಳುವುದೇ ಇಲ್ಲ- ನಮ್ಮಲ್ಲಿ ಏನಾದರೂ ಇದ್ದದ್ದೇ ಆದರೆ ಅದು ಇರುತ್ತದೆ, ಅದನ್ನು ನಂಬಿ ಬಲಪಡಿಸುವ ಅಗತ್ಯವಿಲ್ಲ. ಕೆಲವೊಮ್ಮೆ ನಂಬುವ ಬರದಲ್ಲಿ ಇರುವುದಕ್ಕಿಂತ ಹೆಚ್ಚೇ ಇದೆಯೆಂದು ನಂಬುವುದೂ ಆಗುವುದರಿಂದ ಅದು ಬಹಳ ಅಪಾಯಕಾರಿ ಆಯ್ಕೆಯೇ ಆಗಿದೆ. ನಂಬಿಕೆ ಇರಬೇಕು. ಅದನ್ನು ನಂಬುವ, ಇದೆ ಎಂದು ಭದ್ರ ಪಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆದರೆ ನಂಬಿಕೆ ಇದೆಯೋ-ಇಲ್ಲವೋಅಥವಾ ಅದು ಧನಾತ್ಮಕವೋ-ಋಣಾತ್ಮಕವೋಎನ್ನುವುದರ ಬಗೆಯೇ ಅಪನಂಬಿಕೆಯಾಗಿಬಿಟ್ಟರೆ ಕಷ್ಟವಷ್ಟೆ!
ಮೇಲಿನ ಎಲ್ಲಾ ಕನಸುಗಳ ತುಣುಕುಗಳ ಸಾರಾಂಶವ ಅವಲೋಕಿಸಿದರೆ, ಅಂದು ನಾನು ನನ್ನದಾಗಿಸಿಕೊಳ್ಳಬೇಕಿದ್ದ ಅಂಶವು ಇದೇನೋ ಎನಿಸುತ್ತದೆ- ಒಳಮನಸ್ಸು ಸಬಲತೆಗೆ ಹವಣಿಸುತ್ತದೆ, ಅದು ಯಾವ ದಿಕ್ಕನ್ನು ಅನುಸರಿಸಲು, ಗುರಿಯ  ಹೊಂದಲು ಹಂಬಲಿಸುವುದೋ ಅದರೆಡೆಗೆ ಸಾಗಬಲ್ಲ ಸಾಮರ್ಥ್ಯವನ್ನೂ ಆಗಾಗ್ಗೆ ಪ್ರತಿಫಲಿಸುತ್ತಿರುತ್ತದೆ, ತನ್ನ ಶಕ್ತಿಯ ಗುರುತಿಸಿಕೊಳ್ಳಲು ಅದಕ್ಕೆ ಸಾಧ್ಯತೆಗಳ ಪರಾಮರ್ಶಿಸುವ ಅವಶ್ಯಕತೆಯಿಲ್ಲ. ಆದರೆ ಈ ಗುರುತಿಸುವಿಕೆಯ ನಂತರ ಶಕ್ತಿಯ ಹೊರಹಾಕುವಿಕೆಯಾಗಲು ನಮ್ಮ ಹೊರಮನಸ್ಸು ಸಿದ್ಧವಿರಬೇಕಾಗುತ್ತದೆ. ಈ ಹೊರಮನಪರಿಸ್ಥಿತಿಗಳ ಗುಲಾಮನಂತೆಯೂ, ಅಸಹಾಯಕನಾಗಿಯೂ, ಭಯಗ್ರಸ್ಥನಾಗಿಯೂ ಯಾವಾಗ ಪೀಡಿತವಾಗಿರುತ್ತದೋ ಆಗ ಅಲ್ಲಿ ಪರಸ್ಪರ ಸಹಕಾರ ನೆರವೇರುವುದಿಲ್ಲ. ಅಲ್ಲಿ ನೆರವಿಗೆ ಬರಬೇಕಾಗಿರುವುದೇ ಒಳ-ಹೊರ ಮನಗಳ ಬೆಸೆಯುವ ಸೇತುವೆ. ಎಂದು ನಮಗೆ ಇಂತಹುದೊಂದು ಸಶಕ್ತಗೊಳ್ಳುವಿಕೆನಮ್ಮೊಳಗಿನಿಂದಲೇ ಆಗಬಲ್ಲದೆಂಬ ಅರಿವು ಮೂಡುವುದೋ, ಬಹುಷಃ ಅದು ತೆರೆಯೊಂದು ಸರಿಯಲು, ಹೊಸ ತೆರನಾದ ದೃಷ್ಠಿಕೋನವೊಂದು ತೆರೆದುಕೊಳ್ಳಲು ಪ್ರೇರಕವಾಗಬಲ್ಲದು. ನನ್ನ ವಿಷಯದಲ್ಲಿ ಹೀಗೆಯೇ ಆಯಿತು ಎಂದು ಹೇಳಲು ಬಾರದು- ಕಾರಣ, ಕಾಲ ಸರಿದ ಮೇಲೆ ಪ್ರೇರಣೆಗಳನ್ನು ಹೇಳುವುದು ಸುಲಭ. ಆದರೆ ಹಂತ ಹಂತವಾಗಿ ಮುಂದೆ ಸಾಗುವಾಗ ಮುಂದಿನದರ ಅರಿವಿಲ್ಲದೆ, ಅದಕ್ಕಾಗಿಯೇ ಬೆದರಿದ  ಮನಸ್ಸನ್ನು ಸಂಭಾಳಿಸುವುದು ಅಷ್ಟು ಸರಳವಲ್ಲ. ಹಾಗೆಂದು ಇದು ದುಃಖಕರವಾದ ವಿಚಾರವಲ್ಲ- ನಿಧಾನವಾಗಿ ಹಂತಹಂತವಾಗಿ ಸಾಧಿಸಲು ಹೆಣಗಿ, ‘ಆಗುವುದೋ?’ ಎಂದು ಹೆದರಿ-ಬೆದರಿ, ಬೆಂಡಾಗಿ ಹೆದರಿಕೆಯನ್ನೇ ಅನುಭವಿಸುತ್ತಾ, ಕಡೆಗೆ ಅದನ್ನೇ ಅತ್ತ ಸರಿಸಿ ರಾರಾಜಿಸುವ ಜ್ಞಾನವೇ ಎಂದಿಗೂ ಉಳಿದುಕೊಳ್ಳುವುದು. ಉಳಿದಂತೆ ಕಲಿತದ್ದೆಲ್ಲಾ ಸಾಂದರ್ಭಿಕ!
(¸À±ÉõÀ)

(Image Courtesy- Web)