Tuesday, January 31, 2012

‘ಕಂಡೆ ನಾನೊ೦ದು ಕನಸು’- ಅ೦ಕಣ ಬರಹ

ಆತ್ಮೀಯರೇ,
‘ಸಿಹಿಗಾಳಿ’ ಮಾಸಿಕದಲ್ಲಿ ಪ್ರಕಟವಾಗುತ್ತಿರುವ ಅಂಕಣ ‘ಕಂಡೆ ನಾನೊ೦ದು ಕನಸು’ ವಿನ ಬರಹಗಳನ್ನು ಕ೦ತಿನಲ್ಲಿ ಇಲ್ಲಿ ಪ್ರಕಟಿಸಲಿದ್ದೇನೆ.. ನಿಮ್ಮ ಪ್ರೋತ್ಸಾಹ ಹೀಗೇ ಮು೦ದುವರೆಯುವುದೆ೦ದು ಆಶಿಸುವೆ :)

೧. ಅಂತರ್ಗಮನ


ದಿನಗಳು ಬರುತ್ತವೆ- ಹೋಗುತ್ತವೆ. ಕೆಲವಂತೂ ಹೆಸರೂ ನೆನಪಿಡದಷ್ಟು ಸಾಮಾನ್ಯ ದಿನಗಳು. ಈ ದಿನಗಳ ಓಟದ ನಡುವೆ ಒಂದೊಂದು ಎಂತಹುದೋ ಒಂದು ವಿಶೇಷತೆಯನ್ನೋ, ವಿಕಾರವನ್ನೋ, ವಿಭಿನ್ನತೆಯನ್ನೋ, ಹೊತ್ತು ಬರುತ್ತವೆ. ಅದಕ್ಕೆಂದೇ ಅವು ಅಚ್ಚಾಗಿ ಉಳಿದು ಬಿಡುತ್ತವೆ. ಅದು ಅಂತಹುದೇ ದಿನ! ನಾನೀಗ ಅದನ್ನು ‘ವಿಭಿನ್ನ’, ‘ವಿಶಿಷ್ಟ’ ಎಂಬ ಹಣೆ ಬರಹದಡಿ ದಾಖಲು ಮಾಡಿರುವ, ಅಂದಿನ ಪಾಲಿನ ‘ವಿಚಿತ್ರ’ ದಿನ! ಅಂದಾದುದನ್ನು ನಾನು ‘ಅನುಭವ’ ಎನ್ನಲಾರೆ, ‘ಅನುಭೂತಿ’ ಎಂದು ಹೆಸರಿಸಲಾರೆ. ಏಕೆಂದರೆ ಕೆಲವು ‘ಘಳಿಗೆ’ಗಳಿಗೆ ಹೆಸರಿರುವುದಿಲ್ಲ, ಅವು ಬದುಕಿನ ‘ವಿಲಕ್ಷಣ’ತೆ ಗೆ ಸಾಕ್ಷಿಗಳಷ್ಟೇ!

ನಾನು ನನ್ನನ್ನು ಹೊತ್ತ ಬಸ್ಸಿನಲ್ಲಿ ಪ್ರಶ್ನೆಗಳ ಹೊತ್ತು ಪಯಣಿಸುತ್ತಿದ್ದೆ. ಹೋಗುತ್ತಿದ್ದದ್ದು ಉತ್ತರವನ್ನರಿಸಿ ಮಾನಸಿಕ ತಜ್ಞರ ಬಳಿ. ‘ಹೋಗುವಂತಹುದೇನಿತ್ತು?’ ಎನಿಸಬಹುದೇನೋ. ನಾನೀಗ ಹೇಳುವೆ, “ಎಲ್ಲಿಯೂ ಹೋಗಲು ತೋಚದೇ ಅಲ್ಲಿ ಹೋದೆ,’”ನೆಂದು. ಕಾರಣ- ಆಂತರಿಕ ಪಯಣದಿಂದ ಸಿಗಬಹುದಾದ ಉತ್ತರವ ಬಾಹ್ಯ ಪ್ರಯಾಣಗಳಿಂದ ಪಡೆಯಲು ಅಸಾಧ್ಯ! ಆದರೆ ಪ್ರತೀತಿಯಂತೆ ವಿವರಿಸುವುದಾದರೆ, ಆ ‘ಹೊರಗಿನ’ ಪ್ರಯಾಣ ಮಾತ್ರ ಒಳಗಿನ ‘ಪ್ರಯಾಣ’ಕ್ಕೆ ಹಸಿರು ನಿಶಾನೆ ತೋರಿಸಲು ಹೊರಟಂತಿತ್ತು ಎನ್ನಬಹುದೇನೋ. ವಿಷಯಕ್ಕೆ ಬರುವುದಾದರೆ, ನಾನು ೧೬ನೇ ವಯಸ್ಸಿನಲ್ಲಿ ಬದುಕು ಏಕೆ ಆಸಕ್ತಿಕರವಾಗಿರಬೇಕೆಂಬುದರ ಬಗೆಗೇ ಆಸಕ್ತಿ ಕಳೆದುಕೊಂಡು ಕಳವಳಿಸುತ್ತಿದ್ದೆ. ಆ ಸ್ಥಿತಿಯ ಕಾರಣವ ಹೊರ ಜಗತ್ತಿನ ವಿಷಯಗಳಲ್ಲಿ ಹುಡುಕ ಹೊರಟರೆ ಉತ್ತರ ಕಷ್ಟ ಸಾಧ್ಯ. ಏನೆಂದರೆ- ‘ನಾವೆಲ್ಲರೂ ಮಕ್ಕಳಿಗೆ ಪ್ರಪಂಚದ ವಿಚಾರಗಳ ಬಗೆಗೆ, ವಿಕಾರಗಳ ಬಗೆಗೆ, ಪರಿಕಲ್ಪನೆಗಳ ಬಗೆಗೆ ತಿಳಿಸಿಕೊಡುತ್ತೇವೆ. ಅದನ್ನು ಹೀಗೆ ಹೀಗೇ ಮಾಡಬೇಕು ಎಂದು ಹೇಳಿ ಕೊಡುತ್ತೇವೆ. ಆದರೆ ಅದೇಕೆ ಹೀಗೇ ಇರಬೇಕು ಎಂಬ ಗೊಂದಲ ಅವರಲ್ಲಿ ಮೂಡಿದರೆ ಅದಕ್ಕೆ ಸ್ಪಷ್ಟನೆಗಳಿಲ್ಲ! ಅದರರ್ಥ ನಮ್ಮಲ್ಲಿ ಉತ್ತರವಿಲ್ಲ ಎಂದಲ್ಲ. ಅದು ಉತ್ತರವ ಬಯಸಿದ ವ್ಯಕ್ತಿಯ ಪಾಲಿಗೆ ಎಷ್ಟು ಸಮರ್ಪಕ ಎಂಬುದು ಮುಖ್ಯವಾಗುತ್ತದೆ. ಕಾರಣ, “ಸಮರ್ಪಕ ಉತ್ತರವಿರುವುದು ಪ್ರಶ್ನೆ ಕೇಳಿಸಿಕೊಂಡವನಲ್ಲಲ್ಲ, ಪ್ರಶ್ನೆ ಕೇಳಿದವನಲ್ಲಿ!” ಇಂತಹ ಉತ್ತರವೊಂದು ನನ್ನಲ್ಲೇ ಅಡಗಿದೆ ಎಂಬ ಕುರುಹೂ ಇಲ್ಲದ ನಾನು ಒಳಗಿನ ಕತ್ತಲೆಯ ಹೊರಗಿಗೂ ವಿಸ್ತರಿಸಿಕೊಂಡಿದ್ದೆ!

ನಾನಿಷ್ಟೆಲ್ಲಾ ಹೇಳಿ ನನಗಾದ ಕ್ಷಣ ಮಾತ್ರದ ‘ವಿಲಕ್ಷಣತೆ’ಯ ವಿವರಿಸಿದರೆ ‘ಅದೇನು ಅಂತಹುದೇ?’ ಎಂದೆನಿಸಿದರೆ ಅದು ಸಹಜವೇ – “ಕೆಲವು ಘಳಿಗೆಗಳೇ ಹಾಗೆ, ಅನುಭವಿಸ ಹೊರಟರೆ ಬೃಹತ್ತಾಗಿಯೂ ವಿವರಿಸ ಹೊರಟರೆ ಯಕಃಚಿತ್ ಆಗಿಯೂ ಕಾಣಿಸಿ ಬಿಡುತ್ತವೆ.” ಹಣೆಪಟ್ಟಿ ಅಂಟಿಸುವುದೇ ಆದರೆ ಅದನ್ನು ಜೀವನದ ಹಲವು illusionಗಳಲ್ಲೊಂದೆಂದು ಪರಿಗಣಿಸಬಹುದು. ಪ್ರಯಾಣ ಮುಂದುವರಿದಂತೆ ನಿದ್ದೆ ಆವರಿಸಿದಂತಾಗಿ ಅಮ್ಮನ ಹೆಗಲ ಮೇಲೆ ಒರಗಿದ್ದೆ. ಸಹಜವಾಗೇ ಹೇಗೋ, ಎಲ್ಲಿಯೋ ಹೋದಂತೆ ಕವಿದಿದ್ದ ಮಂಪರನ್ನು ಅಸಹಜತೆಯೊಂದು ಥಟ್ಟನೆಬ್ಬಿಸಿತು. ಒಂದು ಅತಿ ತೀಕ್ಷ್ಣವಾದ ಕಿರಣವ ನನ್ನತ್ತಲೇ ಗುರಿಮಾಡಿ ಎಸೆದಂತೆ ಬೆಳಕು ಮುಚ್ಚಿದ ಕಣ್ಣ ಮುಂದೆ ಅದರ ವೇಗದಲ್ಲಿಯೇ ಹಾದು ಹೋಯಿತು. ದೇಹದ ಅಂಗಾಂಗಗಳ ಕಸುವನ್ನೆಲ್ಲಾ ಉಪಯೋಗಿಸಿ ಕಣ್ಣು ಬಿಟ್ಟವಳಂತೆ ನಾನು ಪಟ್ಟನೆದ್ದು ಕುಳಿತು ಆಗಿದ್ದನ್ನು ಅರುಹಿ ಅಮ್ಮನನ್ನು ದಿಗ್ಬ್ರಾಂತಳನ್ನಾಗಿಸಿದೆ. ‘ಆಗಿಸಿದೆ’ ಎನ್ನುವುದಕ್ಕಿಂತ ನನ್ನ ಸ್ಥಿತಿಯನ್ನೇ ‘ವರ್ಗಾಯಿಸಿದೆ’ ಎಂಬುದು ಹೆಚ್ಚು ಸೂಕ್ತ! ನನಗೆ ವಿಭಿನ್ನವೆನಿಸುವುದು ಈ ಅನುಭವ ಖಂಡಿತಾ ಅಲ್ಲ. ಅದು ಅದರ ಬೆನ್ನಿನಲ್ಲೇ ನನ್ನ ಮನಸ್ಸು ಆಘ್ರಾಣಿಸಿದ ಪ್ರಶಾಂತತೆ. ಅದು ಹೆಚ್ಚು ಕಾಲ ಆಗ ಉಳಿಯಲಿಲ್ಲವಾದರೂ ಅಂತಹ ಒಂದು ಲಯವನ್ನು ಹೊಂದಲು ಆಗಾಗ ನನ್ನ ಮನಸ್ಸು ಹವಣಿಸುತ್ತಿದ್ದುದಂತೂ ನಿಜ.

ಹಾಗೆಂದ ಮಾತ್ರಕ್ಕೆ ನಾನ್ಯಾವುದೋ ವರ್ಣಿಸಲಸಾಧ್ಯವಾದ ಕಷ್ಟಕ್ಕೆ ಸಿಲುಕಿಕೊಂಡೆನೆಂದೂ ಎದುರಿಗೆ ಕಂಡ ಬೆಳಕೇ ಉತ್ತರವಾಗಿ ಹೋಯಿತೆಂದೂ ಬಣ್ಣಿಸುತ್ತಾ ಕುಳಿತರದು ಅತಿಶಯೋಕ್ತಿಯಲ್ಲದೆ ಮತ್ತೇನಲ್ಲ. – “ದಂಡಿಗಟ್ಟಲೆ ಪ್ರಶ್ನೆ ಕೇಳಿ ರಚ್ಚೆ ಹಿಡಿದು ತಲೆ ಕೊರೆಯುತ್ತಿರುವ ಮಗುವಿನ ಕಣ್ಣಿಗೆ ಟಾರ್ಚ್ ಬಿಟ್ಟು ಪ್ರಶ್ನೆಗಳ ಹಾದಿ ತಪ್ಪಿಸಬಹುದಷ್ಟೇ. ಆ ಬೆಳಕದಕ್ಕೆ ಉತ್ತರವೇ? ಹೀಗೆ ನನ್ನ ಮುಂದಿನ ಬೆಳಕು ತಂದ ಸಮಾಧಾನ ನನ್ನ ಪ್ರಶ್ನೆಗಳ ಆಗರವಾಗಿದ್ದ ರಚ್ಚೆ ಹಿಡಿದ ಮನವ ಒಂದು ಕ್ಷಣ ಹಿಡಿದಿಡುವ, ‘ಇಲ್ಲಿ ನೋಡು..’ ಎಂಬಂತಹ ಬೆರಗನ್ನು ಸೃಷ್ಟಿಸುವ ಮಾನಸಿಕ ಮ್ಯಾಜಿಕ್‌ನ ಭಾಗವಷ್ಟೇ! ಮನಸ್ಸು ಪದೆಪದೇ ಹೊಂದಲು ಬಯಸುತ್ತಿದ್ದ ಈ ಪ್ರಶಾಂತತೆ ಮತ್ತೆ ಮತ್ತೆ ಬಂದೊದಗಲು ಬೇಕಿರುವುದು ಬೆಳಕಲ್ಲ, ತರ್ಕ-ಉತ್ತರ! ಎಂಬುದು ನನ್ನ ಅಂತರಂಗಕ್ಕೆ ಬಹುಬೇಗ ತಿಳಿದು ಬಿಟ್ಟಿತು. “ಅದಕ್ಕೆಂದೇ ಅದು ತನ್ನಾಗಮನದ ಮುನ್ಸೂಚನೆಯನ್ನು ನೀಡಿತು, ಪೂರ್ವ ನಿಗಧಿತವಾದ ಹಂದರವೊಂದರ ಸುಳಿವು ನೀಡಿತೆಂದು ನಾನು ಹೇಳುವುದಿಲ್ಲ.’ – ‘ನನಗನಿಸುವುವಂತೆ ಸಮಯ, ‘ಸಮಯ’ದ ಹೊರತಾಗಿ ಏನನ್ನೂ ಸೂಚಿಸುವುದಿಲ್ಲ. ಸೂಚಿಸಿಕೊಳ್ಳುವವು ಸೂಚನೆಯ ನಿರೀಕ್ಷೆಯಲ್ಲಿರುವ ಮನಗಳು. ಕಾಲ ಮುಂದೆ ಸರಿದಂತೆ ಹಿಂದೆ ನಡೆದವುಗಳೆಲ್ಲಾ ಸೂಚನೆಗಳಾಗಿಯೂ, ಪ್ರೇರಣೆಗಳಾಗಿಯೂ ಕಾಣುತ್ತಾ ಹೋಗುತ್ತವೆ’. ನಾನೂ ಈಗ ಆ ‘ಬೆಳಕ’ ಪ್ರೇರಣೆ ಎಂದು ಬಿಟ್ಟರೆ ನಾನು ಆ ಕಾಲಕ್ಕೂ, ಅಂದಿನ ಮನಃಸ್ಥಿತಿಗೂ ಮಾಡಿದ ಅವಮಾನವೆಂದೇ ಕಂಡುಬಿಡುತ್ತದೆ..
(ಸಶೇಷ)

(image - Web)