Thursday, December 13, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 8



ಒಮ್ಮೊಮ್ಮೆ ಸಂದರ್ಭಕ್ಕೆ ಹೊಂದಿಕೊಂಡಂತೆ, ಇಲ್ಲವಾದಲ್ಲಿ ಹಲವು ಕಾಲ್ಪನಿಕ ಸನ್ನಿವೇಶಗಳ ತಾನೇ ಅಪ್ರಯತ್ನಪೂರ್ವಕವಾಗಿ ರೂಪಿಸಿಕೊಂಡು ಅದರ ಭಾಗವಾಗಿ ಕಾಡುವ ‘ಭಯ’ವನ್ನು ತೊರೆಯಲು ಸಾಕಷ್ಟು ಪ್ರಯತ್ನವೂ ಸಮಯವೂ ಬೇಕಾಗುವುದು. ಈ ಭಯವೆನ್ನುವುದು ಒಂದೇ ರೂಪ,ಲಕ್ಷಣಗಳ ಹೊಂದಿರುವಂತದಲ್ಲ. ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತಾ ಅತ್ಯಂತ ಆಪ್ತಮಿತ್ರನಂತೆ, ಹಿತ ಚಿಂತಕನಂತೆ ಆಗಮಿಸಿ ಆಕ್ರಮಿಸಿಕೊಳ್ಳುವ ವಿಶೇಷತೆ ಅದಕ್ಕಿದೆ. ಅದ್ಯಾವ ಪರಿ ಹೊಸ ರೂಪಗಳ ಪಡೆಯುವುದೆಂದರೆ ಮೊದಮೊದಲು “ನನಗದನ್ನು ಮಾಡುವುದೆಂದರೆ ಭಯ” ಎನ್ನುವಂತಿರುವ ನಮ್ಮ ಹೇಳಿಕೆಗಳು ಕಡೆಗೆ, “ ಅಲ್ಲಾ.. ಅದನ್ನು ಮಾಡಲಾಗೋದಿಲ್ಲ ಎಂದೇನಿಲ್ಲ. ನನಗೇ ಮಾಡೋದು ಇಷ್ಟವಾಗದು” ಎಂಬ ಅಚ್ಚರಿಯ ತಿರುವನ್ನು ಪಡೆದು ಬಿಡುತ್ತವೆ.. ಈ ಹಂತಕ್ಕೆ ತಲುಪಿಬಿಟ್ಟೆವೆಂದರೆ ಕೈ ಮೀರಿತೆಂದೇ ಅರ್ಥ! ಅಲ್ಲಿಗೆ, ಭಯಗಳಿಗೂ ಆಯ್ಕೆಗಳಿಗೂ ಇರುವ ವ್ಯತ್ಯಾಸವೇ ಕಾಣದ ಶೋಚನೀಯ ಸ್ಥಿತಿ ಬಂದೊದಗಿ ಬಿಡುತ್ತದೆ. ‘ಆಯ್ಕೆ’ಯೆಂದಾದದ ಮೇಲೆ ಇನ್ಯಾವ ಬದಲಾವಣೆ? ಯಾವುದರಿಂದ ಹೊರ ಬಂದು ಏನು ಸಾಧಿಸಲಿಕ್ಕಾಗಿ? ಈ ಹಂತ ಪ್ರಗತಿಯ ಪಾಲಿಗೆ ಪೂರ್ಣ ವಿರಾಮ...  ಇನ್ನು, ಮತ್ತೆ ನನ್ನ ಭಯಗ್ರಸ್ಥ ಬದುಕಿನತ್ತ ಇಣುಕುವುದಾದರೆ, ಹಿಂದೆ ಮುಂದೆ ಬೆಂಬಿಡದೇ ಕಾಡಿದ್ದ ಭಯ ಮೇಲಿನ ನಿಯಮಕ್ಕೇನು ಹೊರತಾಗಿರಲಿಲ್ಲ. ಅದುವೂ ನಾನು ಒಂದರಿಂದ ಹೊರಬಂತೆಂದರೆ ಮತ್ತೊಂದು ಮಗದೊಂದು ರೂಪದಲ್ಲಿ ತನ್ನ ವೇಷಗಳ ಬದಲಿಸುತ್ತಾ ಕಾಲಕ್ಕೆ ತಕ್ಕಂತೆ ಎದುರಾಗುತ್ತಲೇ ಸಾಗಿತು.ಆಗಿನ ‘ನನಗೆ’ ಭಯದ ಬೇರೆಯ ಅವತಾರಗಳು ಅತ್ಯಂತ ಸಹಜವಾಗಿ ‘ಆಯ್ಕೆ’ಗಳಂತೆಯೇ ಕಂಡುಬಿಟ್ಟವು.
ಹೀಗೇ ಭಯದ ನೆರಳಲ್ಲಿ ಬೆಳೆಯುತ್ತಾ , ಈ ನೆರಳಿಗೆ ಕಾರಣವಾಗಿರುವ ಮೂಲ ವೃಕ್ಷದ ಹುಡುಕಾಟದಲ್ಲಿರುವಾಗಲೇ ಮತ್ತೊಂದು ಅಚ್ಚರಿಯ ಕನಸಿನನುಭವ ಕಾದಿತ್ತು..  ಬಣ್ಣ ಬದಲಿಸುತ್ತಿದ್ದ ಭಯದೊಡನೆ ಗುದ್ದಾಡುತ್ತಿರುವಾಗ, ಬಣ್ಣಗಳೇ ತಾನಾಗಿರುವ ಕನಸೊಂದು ರೆಕ್ಕೆಬಿಚ್ಚಿ ಹಾರಿಬಂತು. ಹಾಗೆ ‘ಹಾರಿ’ ಬಂತೆನ್ನಲೂ ಕಾರಣವಿಲ್ಲದಿಲ್ಲ. ಕಾರಣ, ಹಾಗೆ ಕನಸಿನಲ್ಲಿ ಹಾರಿ ಬಂದದ್ದು ‘ಹಕ್ಕಿ’ಯೇ ಆಗಿತ್ತು! ಹೀಗೆ ಕನಸಿನಲ್ಲಿ ಅಂದು ಮೂಡಿದ ಹಕ್ಕಿಯ ?ಅಂತರಂU?ದಿಂದ ಎಂಬಂತೆ ಈ ವಾಕ್ಯಗಳು ಕೇಳಿದವು-
“ಹಾಡು ಹಕ್ಕಿಯ ಕೊರಳ ಧನಿಯು ನಾನಾದರೆ
ಕೊರಳು ನೀನಾಗುವೆಯ ಗೆಳತಿ...?
ನಾನು ಥಟ್ಟನೆ ಕಣ್ಣು ಬಿಟ್ಟೆ! ಸಾಲುಗಳು ಅರ್ಥವಾಗಲಿಲ್ಲ. ಇಷ್ಟವಂತೂ ಆದವು!!! ಆದರೆ ಗಾಬರಿ ಸ್ವಲ್ಪ ಹೆಚ್ಚೇ ಆವರಿಸಿದ್ದರಿಂದ ಹಕ್ಕಿಯ ‘ಆಗಮನ’ ಮನಕ್ಕೆ ಆಹ್ಲಾದಕರವಾಗಿರಲಿಲ್ಲ
ಈ ಹಕ್ಕಿಯೇ ಮುಂದಿನ ದಿನಗಳಲ್ಲಿ ನನ್ನ ‘ಸ್ವಪ್ನಗಳಲ್ಲಿನ ಆಪ್ತ ಸಖಿ’ಯಾಯಿತು. ಪದೇ ಪದೇ ಹಾರಿ ಬರುತ್ತಾ ತನ್ನೊಡನೆ ಹಲವು ವಿಚಾರಗಳನ್ನೂ, ಸಮಸ್ಯೆ-ಸಮಾಧಾನಗಳನ್ನು ಹೊತ್ತು ತಂದು ಕನಸಿನ ‘ನನ್ನೊಡನೆ’ ದ್ವಂದ್ವಗಳ ಅವಲೋಕಿಸಿ ಚರ್ಚೆಗಿಳಿಯುತ್ತಾ,  ನನ್ನೊಳಗೆ ಸ್ಪಷ್ಟತೆಯನ್ನು ನೆಲೆಯೂರಿಸಿ ಹಾರಿ ಹೋಗುತ್ತಿತ್ತು. ಈಗೆನಿಸುವುದು- ಆ ಹಕ್ಕಿ ಹೊತ್ತು ತಂದ ಬಣ್ಣಗಳು ಅಂದಿನ ‘ನಾನು’ ಬದುಕಿನಲ್ಲಿ ಗುರುತಿಸಲಾಗದ್ದೇ ಆಗಿವೆ. “ಹಕ್ಕಿಯೇ ಏಕೆ?’ ಎಂದು ನನಗೆ ಸಾಕಷ್ಟು ಅನಿಸಿದ್ದಿದೆ- ‘ಹಕ್ಕಿಯಂತೆ ಪುರ್ರನೆ ಹಾರುತ್ತಾ...’ ಎಂದು ನನಗೆ ನಾನೇ ಮನದಲ್ಲಿ ಆರಂಭಿಸಿಕೊಂಡು ‘ಈ ಸ್ಕೂಲಿನ ಗೋಡೆಯೊಡೆದು ಹಾರಬೇಕು.’ ಎಂದು ಸರಿ ಸುಮಾರು ಹತ್ತು - ಹನ್ನೆರಡು ವರ್ಷ ಎಡಬಿಡದೇ ಶಾಲಾದಿನಗಳಲ್ಲಿ ಕಂಡ ಹಗಲುಗನಸು ಒಂದು ಕಡೆ ನೆನಪಾದರೆ ಮತ್ತೊಮ್ಮೆ ಎನಿಸುವುದು- ಮನುಷ್ಯ ಕಲ್ಪಿಸಿಕೊಂಡ ಅತಿ ರಂಜಕ, ಆನಂದ ದಾಯಕ ಪ್ರಯಾಣ ಎಂದರೆ ಹಾರುತ್ತಾ ಸಾಗುವುದು. ಹಾರುವುದು ‘ಸ್ವಾತಂತ್ರ್ಯಾಭಿಲಾಷೆ’ಯ ಸಂಕೇತ. ‘ಹಕ್ಕಿ’ ಒಮ್ಮೆ ಈ ಸ್ವಾತಂತ್ರ್ಯದ ಸಂಕೇತವಾಗಿ ತೆರೆದುಕೊಂಡರೆ ಇನ್ನೊಮ್ಮೆ ಅದು ಹೊತ್ತು ತರುವ ವಿಚಾರಗಳ ವೈವಿಧ್ಯತೆಯನ್ನವಲೋಕಿಸಿದಾಗ, “ಹಕ್ಕಿ ಎಲ್ಲೆಲ್ಲೂ ಸುತ್ತಾಡಿ  ವಿಷಯಗಳ ಹೆಕ್ಕಿ ತರುತ್ತದೆ” ಎಂದು ಎನಿಸುವುದೇ ಅದರ ಆ ರೂಪಕ್ಕೆ ಸಿಗಬಹುದಾದ ವಿವರಣೆ ಎನಿಸಿ ಬಿಡುವುದು
ಪಕ್ಷಿ ಅರುಹಿದ ಅವತ್ತಿನ ಎರಡು ಸಾಲುಗಳನ್ನು ಈಗ ‘ಪೀಠಿಕೆ’ ಎಂದು ಬೇಕಾದರೆ ಹೆಸರಿಸಬಹುದು, ಆದರೆ ಹಾಗೆ ಮಾಡುವುದೇನು ಬೇಡ! ಆದರೆ ಪಕ್ಷಿಯೊಡನೆ ಮುಂದೆಯೂ ಅನುಭವವಾಗಿರದಿದ್ದ ಹಂತದಲ್ಲಿ ನಾನು ಅದಕ್ಕೆ ಬಹಳ ಹೆದರಿಬಿಟ್ಟಿದ್ದಿದ್ದಂತೂ ನಿಜ!
ನಂತರದ ಕನಸುಗಳ ಮಧ್ಯೆ ಪಕ್ಷಿ ಮತ್ತೆ ತೂರಿ-ಹಾರಿ ಬಂತು. ಕನಸು ಹೀಗಿತ್ತು...
...ಬಹಳ ಆರಾಮವಾಗಿ, ಸುಲಲಿತವಾಗಿ, ಸರಾಗವಾಗಿ ಹಾರುತ್ತಾ ಅಂದು ಕನಸಿನಲ್ಲಿ ನನ್ನ ಭುಜದ ಮೇಲೆ ಕುಳಿತ ಹಕ್ಕಿ ನನ್ನನ್ನು ಕುರಿತು ಹೇಳಿದಂತೆಯೇ ಹೇಳಿತು, “ನೋಡು.. ಪರಿಸ್ಥಿತಿಯ ಕಗ್ಗಂಟಿನಿಂದ  ಬಿಡಿಸಿಕೊಂಡು ಅದಕ್ಕಿಂತ ಮೇಲೇರಬೇಕೆಂದು ಕನಸುವವರು ‘ಎತ್ತರ’ಕ್ಕೆ ಹೆದರಿದರೆ ಆಗುತ್ತದೆಯೇ? ಎತ್ತರಕ್ಕೆ ಅಂಜುವುದು ‘ಪರಿಹಾರಕ್ಕೆ’, ಉಪಾಯಗಳಿಗೆ, ಸಾಧ್ಯತೆಗಳಿಗೆ, ಇನ್ನೂ ವಿಸ್ತಾರಗೊಳಿಸುವುದಾದರೆ, ಬದುಕುವುದಕ್ಕೇ ಅಂಜಿದಂತೆ! “
ಪಕ್ಷಿಯ ಗುರುತು ಹಿಡಿದು ನಾನೆನ್ನುವೆ-, “ಓ ನೀನು! ಬಾ... ಅದು ನಿಜ..., ಆ ವಿಷಯ ಹಾಗಿರಲಿ. ನಾನೂ ಹಾರಬೇಕು.. ನಿನ್ನಂತೆ!”
ಪಕ್ಷಿ- “ಕಾಲ್ನಡಿಗೆ ಹೇಗೆ ಒಂದು ‘ಸ್ಥಿತಿ’ಯೋ ಹಾಗೇ ಹಾರುವಿಕೆಯೂ ಒಂದು ಸ್ಥಿತಿ! ನಾನು ಹಾರಲು ಮಾಡಲ್ಪಟ್ಟಿರುವೆ. ನೀನು ನಡಿಯಲಿಕ್ಕೆ. ನಮ್ಮ ಸ್ಥಿತಿಗಳನ್ನು ದೈಹಿಕವಾಗಿ ಬದಲಾಯಿಸಿಕೊಂಡರೆ ನಾವಿಬ್ಬರೂ- ‘ನಡೆಯಲಾರೆ’ನೆಂದು ನಾನು, ‘ಹಾರಲಾರೆ’ಎಂದು ನೀನು ಕೊರಗಿಯೇ ಸಾಯಬೇಕಾಗುತ್ತದೆ. ನಾನು ಆಗಲೇ ಪ್ರಸ್ತಾಪಿಸಿದ್ದು ಮಾನಸಿಕ, ಭೌತಿಕ ಹಂತವನ್ನ. ಮನಸ್ಸಿಗೆ ಪಕ್ಷಿಯ ದೇಹದ ಆಶ್ರಯದ ಹಂಗಿಲ್ಲದೇ ‘ಅನಂತತೆ’ಯೆಂಬ ಶಬ್ದಕ್ಕೂ ನಿಲುಕದೆತ್ತರಕ್ಕೆ ಏರುವ ಅಪರಿಮಿತ ತಾಕತ್ತಿದೆ. ಆ ಮನಸ್ಸು ಹೀಗೆ ಕಗ್ಗಂಟಿನಲ್ಲಿ ಒದ್ದಾಡುತ್ತಾ ,ಮೇಲೇರಲು ಹೆದರುತ್ತಾ ಪರಿಹಾರಕ್ಕೇ ವಿಮುಖವಾಗಿದೆ.  ‘ಏರಬೇಕು, ಹಾರಬೇಕು’ ಎಂಬ ವಾಂಛೆ ಮೊರಟಿ ಹೋದ ನಿನ್ನಂತಹವರ ಮನಸ್ಸಿಗೆ ಎಂದು ಬರುವುದೋ ಅಂದು ಎತ್ತರದ ಮಿತಿಯನ್ನೂ ದಾಟಿ ಅದು ಸಾಗುವುದು ಮತ್ತು ಸಾಗುತ್ತಲೇ ಇರುವುದು. ಯೋಚಿಸು..”
ಪಕ್ಷಿ ತನ್ನದೇ ವಿಶೇಷ ಲಯದಲ್ಲಿ ಹಾರಿ ಮರೆಯಾಗುವುದು.....
ಒಂದೊಂದು ಕನಸು ಮುಗಿದಾಗಲೂ ದಿಗಿಲಾಗಿ ಏಳುವುದು ನನಗೆ ಅಭ್ಯಾಸವಾಗಿಹೋಗಿತ್ತು! ಹಾಗಾಗಿ ಈ ಕನಸಿನ ನಂತರದ ನನ್ನ ಪ್ರತಿಕ್ರಿಯೆ ಹೇಳುವುದೇನು ಬೇಡ.. ಆದರೂ ಹೇಳಲೇಬೇಕೆಂದರೆ ಹಿಗೆ ಹೇಳಬಹುದು- ಎಲ್ಲವೂ ಬಹಳ ವಿಚಿತ್ರ. ಹೆದರಿದ ಮಗುವಿಗೆ ‘ಹೆದರಬೇಡ’ವೆಂದು ಹೇಳಲು ಶಿಕ್ಷಕರು ಕರೆಸಿದ್ದರೂ, ಕರೆಸಿದ ಕ್ಷಣದಿಂದಲೇ ಮತ್ತೆ ಹೆದರಿಕೆಯೇ ಆಗುವುದು! ನನ್ನನುಭವವೂ ಹಾಗೆಯೇ ಇತ್ತೆನ್ನಬಹುದೇನೋ.
ಆ ಕನಸಿನತ್ತ ಬರುವುದಾದರೆ, ಪಕ್ಷಿಯ ಸಂವಾದದ ಕುರಿತು ನಾನೇನು ಹೇಳುವುದಿಲ್ಲ. “ಉದ್ದೇಶವೇ ಸಂವಹನ ಮಾಡುವುದಾಗಿರುವಾಗ, ಸಂಹವನದಲ್ಲೇ ಉದ್ದೇಶವೂ ಇರುವಾಗ ಸಂವಹನದ ಬಗೆಗೆ ಹೇಳಲೇನೂ ಉಳಿದಿರುವುದಿಲ್ಲ”
ಇನ್ನು ನನ್ನ ಪ್ರತಿಕ್ರಿಯೆಯ ಬಗ್ಗೆ- ನನ್ನದೇ ಪರಿಸ್ಥಿತಿಯ ಉದ್ದೇಶಿಸಿದಂತೇ ಪಕ್ಷಿ ಮಾತನಾಡಿದರೂ ನಾನು ಅಸಂಬದ್ಧವಾಗಿ ಪ್ರತಿಕ್ರಿಯಿಸುವೆ. ಅದು ನನಗೆ ವಾಸ್ತವವ ಒಪ್ಪಿಕೊಳ್ಳದೇ ಭ್ರಮಾಲೋಕವ ಅಪ್ಪಿಕೊಂಡು ಬದಲಾವಣೆ ಬಯಸುವ, ಸಂತಸವನ್ನು ಅನುಭವಿಸುವ ಹೊರಡುವ ಮನದ ಒಂದು ‘ಹಂತ’ ದಂತೆ ಕಾಣುವುದು. ಅದು ನನ್ನ ಮನದ ಹಂತವೇ ಆಗಿತ್ತು! ಎಷ್ಟು ಅಸಾಧ್ಯಕರವಾದ ಹಂತವದು ಎಂದರೆ ಈ ಕನಸಿನ ಅಂತ್ಯದಲ್ಲಿ ಪಕ್ಷಿ ‘ಯೋಚಿಸು’ ಎಂದಿತ್ತಲ್ಲಾ, ನಾನೂ ಅಂತೂ ಯೋಚಿಸಿದೆ. “ನನಗೇ ಗೊತ್ತಾಗದ್ದನ್ನು ಇದು ನನಗೇ ಬಂದು ಹೇಳುತ್ತದಲ್ಲಾ. ಹೇಗೆ?- ಎಂದಿಗೂ ಪ್ರಶ್ನೆಗಳು “ಚಿಂತೆಯ ಮೊದಲಿಗೂ ಚಿಂತನೆಯ ಕಡೆಗೂ ಇದ್ದಾಗ ಮಾತ್ರ ಉತ್ತರ ಲಭಿಸುತ್ತದೆ”. ನನ್ನದು ಚಿಂತೆಯಾಗಿತ್ತು ಮತ್ತು ಪ್ರಶ್ನೆ ಕಡೆಯಲ್ಲಿತ್ತು! 

(¸À±ÉõÀ)

(Image Courtesy- Web)