Tuesday, September 8, 2009

ಸ್ಥಿತ್ಯಂತರ

ಈ ಕನಸಿಗೀಗ ಐದು ವರುಷಗಳು. ಮೊದಲಬಾರಿಗೆ ಸಂಭಾಷಣೆಗಳು ಮೂಡಿದ ಮೊದಲ ಪುಟ್ಟ ಕನಸಿದು. ನಂತರದ ಕನಸುಗಳು ಮತ್ತಷ್ಟು ವಿಸ್ತೃತವಾಗುತ್ತಾ ಹೋದವು

ಸ್ಥಿತ್ಯಂತರ

ನಿಚ್ಚಳವಾಗಿ ಹಸಿರಿರುವ, ಸಮೃದ್ಧ ವಾತಾವರಣದ ಶ್ರೀಮಂತಿಕೆಯನ್ನು ದಿಟ್ಟಿಸುತ್ತಾ ನಡುವೆ ನಾನು ನಿಂತಿದ್ದೆ. ಮನಸ್ಸು ಮಾತ್ರ ಅಸಂಬದ್ದ ಆಲೋಚನೆಗಳ ಮೇಲೆ ಸವಾರಿ ಮಾಡುತ್ತಾ ಖಿನ್ನವಾದಂತಿತ್ತು. ಯಾವ ಯೋಚನೆಗಳೂ ನಾನು ಬೊಟ್ಟುಮಾಡಿ ಪರೀಕ್ಷಿಸುವಷ್ಟು ಸ್ಪಷ್ಟವಾಗಿರಲಿಲ್ಲ. ಹೀಗಿದ್ದಾಗ, ವಸ್ತುವೊಂದು ಸರ್ರನೆ ನನ್ನಿಂದ ಸ್ವಲ್ಪ ದೂರದಲ್ಲಿ ಚಲಿಸಿತು.

ಅಲ್ಲೊಂದು ಅತ್ಯಾಕರ್ಷಕವಾದ ಕೊಡೆ ನನ್ನ ಗಮನವನ್ನು ತನ್ನತ್ತ ಸೆಳೆದುಕೊಂಡಿತು. ಅದು ಕಾಮನಬಿಲ್ಲಿನ ವರ್ಣಗಳಿ೦ದ ಲೇಪಗೊ೦ಡು ಗಾಳಿ ಬಂದತ್ತ ಓಡುತ್ತಲಿತ್ತು. ನಾನು ಅರಿವಾಗುವ ಮೊದಲೇ ಆ ಕೊಡೆಯನ್ನು ಹಿಡಿಯುವುದೇ ನನ್ನ ಪರಮ ಗುರಿಯೇನೋ ಎಂಬಂತೆ ಅದರ ಹಿಂದೆ ಓಡಲಾರ೦ಭಿಸಿದೆ. ನನ್ನ ದೃಷ್ಟಿ ಎಷ್ಟು ಸೀಮಿತವಾಗಿತ್ತೆ೦ದರೆ ನಾನೆಲ್ಲಿ ಹೋಗುತ್ತಿದ್ದೇನೆ೦ಬುದನ್ನು ಯೋಚಿಸುವ ಗೋಜಿಗೇ ನಾನು ಹೋಗಲಿಲ್ಲ. ಇದರ ಮಧ್ಯದಲ್ಲೇ ನಾನು 'ಕೊಡೆ ಗಾಳಿಗೆ ಅನುಗುಣವಾಗಿ ಚಲಿಸುತ್ತಿಲ್ಲ ಬದಲಾಗಿ ಒಂದು ನಿರ್ಧಿಷ್ಟ ವೇಗದಲ್ಲಿ ಮುನ್ನುಗ್ಗುತ್ತಿದೆ' ಎಂಬುದನ್ನೂ ಕಂಡುಕೊಂಡೆ.

ಹೀಗೇ ಸಾಗುತ್ತಿದ್ದ ಕೊಡೆ ಅಚಾನಕ್ಕಾಗಿ ತನ್ನ ವೇಗ ಹೆಚ್ಚಿಸಿಕೊ೦ಡು ನನ್ನಿಂದ ದೂರ, ದೂರವಾಗಿ ಕಣ್ಮರೆಯಾಯಿತು. ಸುಸ್ತು, ನಿರಾಸೆಗಳ ಕೂಪವಾಗಿ ಅಲ್ಲಿ ನಿಂತ ನಾನು ಸುತ್ತಲೂ ದೃಷ್ಟಿ ಹಾಯಿಸಿದವಳೇ ದಿಗ್ಬ್ರಾ೦ತಳಾದೆ!ಅರೆ! ಅದೊಂದು ಬರಡು, ಬಂಜರು ಭೂಮಿ. ಹಸಿರು, ಸೌ೦ದರ್ಯವೆಲ್ಲಾ ಕಳೆದು ಹೋಗಿದೆ! ಮಂಡಿಯೂರಿ ಅಲ್ಲಿಯೇ ಕುಸಿದೆ. ಕೊಡೆ ಕಣ್ಮರೆಯಾದ ಸ್ಥಳದಿಂದ ಸ್ವರವೊಂದು ಹೊರಟಿತು, "ನೀನು ಓಡಿದೆ, ಓಡಿದೆ..., ಅಂದು ಆ ಗಳಿಗೆಯಲ್ಲಿ ಅಗತ್ಯವೇ ಇಲ್ಲದ ವಸ್ತುವಿಗಾಗಿ! ಮಳೆಯಾಗಲಿ, ಬಿಸಿಲಾಗಲಿ ಇಲ್ಲದಿದ್ದ ಜಾಗದಲ್ಲಿ ಒಂದು ಕೊಡೆಯ ಹಿಂದೆ! ಅ ಕ್ಷಣ ನಿನಗೆ ಒದಗಿಸಲಾಗಿದ್ದ ಸಂಪತ್ತನ್ನು ನೀನು ಮನಗಾಣಲೇ ಇಲ್ಲ. ಈಗ ನೀನು ಇಲ್ಲಿದ್ದೀಯ. ತನ್ನ ಒಣ ಹುಲ್ಲಿನಷ್ಟೇ ಬರಡಾದ ಆಲೋಚನೆಗಳನ್ನು ಆಹ್ವಾನಿಸುವ ಖಾಲಿ ಖಾಲಿ ಜಾಗದಲ್ಲಿ ಕೈಚೆಲ್ಲಿ ಕುಳಿತಿದ್ದೀಯ..."

(image- web)
ಇದು 'ಡ್ರೀಂ ವೀಲ್'ಗು೦ಪಿನಲ್ಲಿ ಸುತ್ತಿ ಬ೦ದಿರುವ ಕನಸು!

Wednesday, August 19, 2009

ಹೀಗೊಂದು ತರ್ಕ!

ಇದು, ಇತ್ತೀಚಿಗೆ ಮೂಡಿ, ಕಾಡಿದ ಕನಸುಗಳಲ್ಲೊಂದು.

ಕನಸಿನಲ್ಲಿ ಕಣ್ತೆರೆದಾಗ ಒಂದು ವಿಚಿತ್ರವಾದ ಪರಿಸರದಲ್ಲಿದ್ದೆ. ಪಾಳು ಪಾಳಾದ ಜಾಗದ ನಡುವೆ ಕುರ್ಚಿ, ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ನಾನು ಹೊಸ ಅನುಭವವೊ೦ದರ ವೈಚಿತ್ರ್ಯಕ್ಕೆ ಹೊ೦ದಿಕೊಳ್ಳುವಷ್ಟರಲ್ಲಿ ಗುಂಪೊಂದರ ಶಿಸ್ತಾದ ನಡುಗೆಯ ಸದ್ದು ಕಿವಿತಾಗಿತು. ಅತ್ತ ಕತ್ತು ತಿರುಗಿಸಿ ಒಂದು ಕ್ಷಣ ಸ್ತಬ್ಧವಾಗಿ ಹೋದೆ.'ಶಿರ'ಗಳೇ ಇಲ್ಲದ ಮನುಜರ ಗುಂಪೊಂದನ್ನು ಶಿರವೆತ್ತಿ ನಡೆಯುತ್ತಿದ್ದ ಯುವತಿಯೊಬ್ಬಳು ಮುನ್ನಡೆಸಿಕೊಂಡು ಬರುತ್ತಿದ್ದಳು. ಅವರೆಲ್ಲಾ ಬೆಲೆ ಬಾಳುವ ಉಡುಗೆಗಳನ್ನು ತೊಟ್ಟಿದ್ದರು. ಗುಂಪು ನನ್ನ ಸನಿಹದಲ್ಲೇ ಹಾದು ಹೋಯಿತು. ಆಕೆ ಒಮ್ಮೆ ನನ್ನನ್ನು ದಿಟ್ಟಿಸಿ ನೋಡಿ ಮುನ್ನಡೆದಳು. ಎಲ್ಲರೂ ಅಲ್ಲಿಯೇ ಜೋಡಿಸಿದ್ದ ಕುರ್ಚಿಗಳಲ್ಲಿ ಕುಳಿತುಕೊ೦ಡರು.

ಎಲ್ಲವೂ ನನಗೆ ವಿಚಿತ್ರಕ್ಕಿ೦ತ ಹಚ್ಚೇ 'ಕಗ್ಗಂಟಾಗಿ' ಕಂಡಿತು. ಆಕೆ ಅಧಿಕಾರಯುತ ವಾಣಿಯಲ್ಲಿ ನನಗೆ ತಿಳಿಯದ ಕೆಲವು ವಿಷಯಗಳನ್ನು ಕುರಿತು ಎಲ್ಲರನ್ನುದ್ದೇಶಿಸಿ ಮಾತನಾಡಲಾರ೦ಭಿಸಿದಳು. ಹತ್ತಿರದಲ್ಲೇ ಮಂಡಿಯೂರಿ ನಾನು ನೋಡುತ್ತಾ ಕುಳಿತೆ. ಆಕೆ ಏನೇ ವಿಷಯವನ್ನು ಪ್ರಸ್ತಾಪಿಸಿದರೂ, ಮಧ್ಯ ಮಾತು ತುಂಡರಿಸಿ ನಿಲ್ಲಿಸಿದರೂ 'ತಲೆ'ಯಿಲ್ಲದ ಮನುಜರು ಚಪ್ಪಾಳೆ ತಟ್ಟುತ್ತಿದ್ದರು. ಇದು ಹೀಗೇ ಮುಂದುವರೆಯಿತು.

ಚಪ್ಪಾಳೆಗಳು ಎಲ್ಲೆಲ್ಲೂ ಪ್ರತಿಧ್ವನಿಸಿದವು. ಅಷ್ಟರಲ್ಲಿ ಆಕೆ ನನ್ನನ್ನೇ ಸುಧೀರ್ಘವಾಗಿ ನಿಟ್ಟಿಸುತ್ತಾ ತನ್ನ ಎಂದಿನ ಧಾಟಿಯನ್ನು ಕಾಯ್ದುಕೊಂಡು ಹೀಗೆ೦ದಳು.. "ಆತ್ಮಿಯರೇ, ಉನ್ನತ ಆಲೋಚನೆಗಳಿರುವುದೇ ಒಪ್ಪಿಕೊಂಡು ಅನುಸರಿಸಲು. ಅಂತಹುದನ್ನು ಪ್ರಶ್ನಿಸುವ ಧೈರ್ಯ ತೋರುವವರನ್ನು ಶಿಕ್ಷಿಸದೇ ಬಿಡಲಾಗದು." ಆಶ್ಚರ್ಯ, ತುಸು ಗಾಬರಿಗಳೆರಡೂ ನನ್ನನ್ನು ಕಾಡ ಹತ್ತಿದವು. ಆಕೆಯ ಮಾತು ಸಾಗಿತು, "ಅಮೂಲ್ಯ ವಿಚಾರಗಳು ಬೆಂಬಲಿಗರನ್ನು ಗೆಲ್ಲುತ್ತವೆ. ಚಿ೦ತಿಸಬಲ್ಲವ ಮುನ್ನಡೆಸುತ್ತಾನೆ. ಆಗದವ ಹಿಂಬಾಲಿಸುತ್ತಾನೆ. ನಾಯಕತ್ವ ವಹಿಸಲು ಬೆಂಬಲಿಗರೂ ಇಲ್ಲದ, ಹೆಜ್ಜೆ ಸೇರಿಸಲು ಜೊತೆಗಾರರನ್ನೂ ಹೊಂದಿರದ, ಗೊತ್ತು ಗುರಿಯಿಲ್ಲದ ಅಲೆಮಾರಿ ನಮ್ಮ ಸಮಾಜಕ್ಕೆ, ಸಾಮಾಜಿಕ ವ್ಯವಸ್ಥೆಗೇ ಕಳ೦ಕವಿದ್ದ೦ತೆ. ಸ್ನೇಹಿತರೇ, ಇಲ್ಲಿಯೇ ನನಗೊಂದು 'ತಲೆ'ಯಿರುವ ಜೀವಿ ಗೊಚರಿಸುತ್ತಿದೆ!! ಅದು ಕೆಲಸ, ಉದ್ದೇಶವಿಲ್ಲದೆ ಅಲ್ಲಿ ಇಲ್ಲಿ ತಿರುಗಾಡುತ್ತಾ, ಅನಾವಶ್ಯಕವಾಗಿ ಚಿಂತಿಸುತ್ತಿದೆ. ಅದಕ್ಕೆ ತನ್ನ ಅಮೋಘ ಅಭಿವ್ಯಕ್ತಿಯಿ೦ದ ಜನರನ್ನು ಮೆಚ್ಚಿಸಲಿಕ್ಕೂ ಆಗದು, ಇಲ್ಲವೇ ಸುಮ್ಮನೆ ಸಾಮಾಜಿಕವಾಗಿ 'ಶ್ರೇಷ್ಥ'ವೆಂದು ಪರಿಗಣಿತವಾಗಿರುವ ಮೌಲ್ಯಗಳನ್ನು ಅನುಸರಿಸಲೂ ಆಗದು. ನಿಮಗೆ ಕುತೂಹಲವಿದ್ದರೆ ಒಮ್ಮೆ ಅದನ್ನು ನೋಡಿ ಬರಬಹುದು.." ಮಾತು ನಿಂತಿತು. ಚಪ್ಪಾಳೆಗಳು ಆರ್ಭಟಿಸಿದವು. ಆಕೆಯ ನಿಂದನೆ ಆಪಾದನೆಗಳಿ೦ದ ಬೇಸತ್ತು , ಸಾಕೆನ್ನದ೦ಬ೦ತೆ ನನ್ನನ್ನು 'ಅದು' ಎನ್ನುವಷ್ಟರ ಮಟ್ಟಿಗೆ ಸಂಭೋಧಿಸಿದ ರೀತಿಯಿಂದ ಅವಮಾನಿತಳಾಗಿ ನಾನು ಆಕೆಯನ್ನು ವಿರೋಧಿಸ ಬಯಸಿದೆ. ಆಕೆಯ ವಿತ೦ಡವಾದ, ಒಪ್ಪಲಸಾಧ್ಯವೆನಿಸಿದ ತರ್ಕದ ವಿರುದ್ದ ಧನಿಯೆತ್ತ ಬಯಸಿದೆ. ಇಲ್ಲ... ಆಗುತ್ತಿಲ್ಲ ಒಂದು ಪದವನ್ನೂ ಬಾಯಿ ಹೊರಗೆಡುವಲಿಲ್ಲ.ಸಂಪೂರ್ಣವಾಗಿ 'ಮೂಕ'ಳಾಗಿ ಹೋಗಿರುವ೦ತೆನಿಸಿತು. ಅಷ್ಟರಲ್ಲೇ ಅನಿಯಂತ್ರಿತವಾಗಿ ಕಾಲುಗಳು ಹಿಮ್ಮುಖವಾಗಿ ಚಲಿಸಲಾರ೦ಭಿಸಿದವು.... ಹೆಜ್ಜೆಗಳು ಹಿಂದೆ ಹಿಂದೆ.. ಕಡೆಗೆ, ನಿಜವಾಗಲೂ ಕಣ್ತೆರೆದಿದ್ದೆ!

(ಚಿತ್ರ - ಅ೦ತರ್ಜಾಲ)
This dream has been spinned in the online dream group ‘Dream Wheel’

Tuesday, August 11, 2009

ಕನಸು ಕದ್ದ ತಾಣ ಮಾಯವಾಗಿದೆ!

ಹಾಯ್,
ಕನಸು ಕದ್ದ ಬಗೆಗೆ ನೀಡಿದ ಬಹಳಷ್ಟು ಎಚ್ಚರಿಕೆ, ವಿರೋಧಗಳ ನಂತರ ಮಿ.ಪ್ಯಾ೦ಕಿ ಕಡೆಗೆ ತನ್ನ ಬ್ಲಾಗನ್ನೇ ಬ್ಲಾಗ್ ಲೋಕದಿ0ದ ತೆಗೆದು ಹಾಕಿದ್ದಾನೆ. ಈ ನಿಟ್ಟಿನಲ್ಲಿ ಕೈಜೋಡಿಸಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ತು೦ಬಾ ಧನ್ಯವಾಧಗಳು. ಮು೦ದೆ ಇ೦ತಹ ಯಾವುದೇ ಅಚಾತುರ್ಯ, ಸ೦ಕಷ್ಟಗಳು ಬ್ಲಾಗ್ ಪ್ರಪ೦ಚದಲ್ಲಿ ಎದುರಾಗುವುದಿಲ್ಲವೆ೦ದು ಆಶಿಸುತ್ತಾ ಮತ್ತೆ ಬ್ಲಾಗ್ ನಲ್ಲಿ ಕನಸುಗಳು ತೆರೆದುಕೊಳ್ಳಲು ಸಕಾಲವೆ೦ದು ಭಾವಿಸುತ್ತೇನೆ.
ಸದ್ಯದಲ್ಲೇ ಮತ್ತೊ೦ದು ಕನಸಿನ ಅನುಭವವನ್ನು ಬ್ಲಾಗ್ ಸೇರಿಸುತ್ತೇನೆ..
'ಇಲ್ಲಿ ಪ್ರಕಟವಾಗುವ ಬರಹಗಳ ಮೇಲಿನ ಹಕ್ಕುಗಳು ಖ೦ಡಿತ ನನ್ನ ಬಳಿಯಿರುತ್ತವೆ.'!!
ಇತ್ತ ಬರುತ್ತಿರಿ :)

Tuesday, January 20, 2009

ಕನಸು ಕಳುವಾಗಿದೆ!!

ನಾನು ಇತ್ತೀಚೆಗಷ್ಟೇ ಬ್ಲಾಗಿನ ನಕಲು ಪುಟ ಗಳನ್ನು ಪತ್ತೆ ಮಾಡುವ ತಾಣವೊ೦ದನ್ನು ನೋಡುತ್ತಿದ್ದೆ. ಅಚ್ಚರಿಯೆ೦ದರೆ ನನ್ನ ಇಂಗ್ಲಿಶ್ ಬ್ಲಾಗಿನಲ್ಲಿ ಪ್ರಕಟಗೊಂಡಿರುವ ಕನಸಿನ ಬರಹವಾದ 'Great Aspirations!!' ಪ್ಯಾ೦ಕಿ ಎಂಬುವವನ ಬ್ಲಾಗಿನಲ್ಲಿ ಸಿಕ್ಕಿತು. ಅಲ್ಲಿ ಅದು ಅವನದೇ ಎ೦ಬ೦ತೆ ಪ್ರಕಟಗೊ೦ಡಿದೆ. ಅಲ್ಲೆಲ್ಲೂ ನನ್ನ ಬ್ಲಾಗಿನ ಲಿ೦ಕಾಗಲೀ, ನನ್ನ ಹೆಸರಾಗಲೀ ಪ್ರಕಟಗೊ೦ಡಿಲ್ಲ.

ಈ ವಿಷಯವನ್ನು ಶ್ರೀಯುತ ಸುನಾಥ್ ರವರ ಗಮನಕ್ಕೆ ತ೦ದಾಗ ಅವರು ತಕ್ಷಣವೇ ಅದನ್ನು ತಮ್ಮ ಬ್ಲಾಗಿನಲ್ಲಿ(http://sallaap.blogspot.com/) ಉಲ್ಲೇಖಿಸಿದ್ದಾರೆ,ಪ್ಯಾ೦ಕಿಯ ಬ್ಲಾಗಿಗೂ ಭೇಟಿಕೊಟ್ಟು ಎಚ್ಚರಿಸಿದ್ದಲ್ಲದೇ ಸೈಬರ್- ಅಪರಾಧ ವಿಭಾಗದ ಗಮನಕ್ಕೆ ತರಲೂ ಯತ್ನಿಸಿದ್ದಾರೆ. ನಿಮ್ಮ ಕಾಳಜಿಗೆ ಅನೇಕಾನೇಕ ಧನ್ಯವಾದಗಳು ಕಾಕಾ:)

ಈ ಕೆಳಗಿನದು ೦೧-೧೦-೦೮ ರಂದು ನಾನು ಬ್ಲಾಗಿಗೆ ಹಾಕಿರುವ ಪೋಸ್ಟ್ http://mydreamwritings.blogspot.com/2008/10/great-aspirations.html
ಹಾಗೂ ಇದನ್ನು ಹಿ೦ಬಾಲಿಸಿದರೆ ಪ್ಯಾ೦ಕಿಯ ತಾಣದಲ್ಲಿ ೧೨-೧೧-೦೮ ರ೦ದು ಪೋಸ್ಟ್ ಆಗಿರುವ ನನ್ನ ಬರಹ ಕಾಣುವಿರಿ!
http://panki-wellstream.blogspot.com/2008/11/great-aspirations.html
ಆದಾಗ ಒಮ್ಮೆ ಮೇಲಿನ ಲಿ೦ಕ ಗಳಿಗೆ ಭೇಟಿಕೊಡಿ.

ನಾವು ಎಚ್ಚರಿಸಿ ದಿನಗಳು ಕಳೆದರೂ ಆತ ಬ್ಲಾಗಿನಿಂದ ಪೋಸ್ಟ್ ಡಿಲೀಟ್ ಮಾಡಿಲ್ಲ, ಹೋಗಲಿ ಕನಿಷ್ಠ ಉತ್ತರವನ್ನಾದರೂ ಬರೆದಿಲ್ಲ.ಹಾಗಾಗಿ ಈಗ ನಮ್ಮ ಬರಹಗಳ ಮೇಲಿನ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಬೇಕಿದೆ.'ಅಸಂಖ್ಯಾತ ಬ್ಲಾಗುಗಳಲ್ಲಿ ನಮ್ಮದನ್ನು ಯಾರು ನೋಡೋರು' ಎ೦ದುಕೊಳ್ಳುವಾಗ ಹೀಗೂ ಆಗಬಲ್ಲದು ಎಂಬುದು ತಿಳಿದದ್ದು ವಿಷಾಧಕರ.

ಹಾ೦..ನಿಮ್ಮ ಬ್ಲಾಗೂ ನಿಮ್ಮ ಅರಿವಿಗೇ ಬಾರದಂತೆ ಬೇರೆ ಯಾರಿಗೂ ಹೆಸರು ತ೦ದಿಕ್ಕುತ್ತಿರಬಹುದು! ಎಚ್ಚರ!
ಏನೇ ಇರಲಿ ನಮ್ಮ ಈ ಪ್ರಯತ್ನದಲ್ಲಿ ನೀವೆಲ್ಲರೂ ಕೈಜೋಡಿಸುತ್ತೀರೆ೦ದು ಭಾವಿಸುತ್ತೇನೆ.
ಈ ವಿಚಾರವಾಗಿ ನಿಮ್ಮಲ್ಲಿ ಸಲಹೆ, ಸೂಚನೆಗಳಿದ್ದರೆ ಸದಾ ಸ್ವಾಗತ.
'ಬ್ಲಾಗನ್ನು ರಕ್ಷಿಸಿಕೊಳ್ಳುವುದು ಹೀಗೆ?' ದಯವಿಟ್ಟು ಬರೆಯಿರಿ..

Thursday, December 18, 2008

'ಕನಸು ಕಾಣುವುದೆ೦ದರೇನು!?'

ಹಾಯ್,
ನನ್ನ 'ಕನಸ'ಲೋಕವನ್ನು ಹೊಸದಾಗಿ ಕಾಣುತ್ತಿರುವಿರಾದರೆ, ಒಮ್ಮೆ ಹಿ೦ದಿನ ಪೋಸ್ಟುಗಳತ್ತ ಇಣುಕಿ ನೋಡಿ ಇದರತ್ತ ಬನ್ನಿ :)


"ಸರಿ, ಹೀಗೆ ಕನಸು ಕಾಣುವುದೆ೦ದರೇನು? ಕನಸು ಹೀಗಿರುವುದು ಹೇಗೆ ಸಾಧ್ಯ?" (ಚಿತ್ರದಲ್ಲಿರುವ೦ತಲ್ಲ!!)

ಇಲ್ಲಿ ನಾನ್ಯಾವ 'ಕನಸಿನ' ಕುರಿತಾದ ವೈಜ್ಞಾನಿಕ ಅವಲೋಕನವನ್ನೂ ತೆರೆದಿಡುತ್ತಿಲ್ಲ. ಬದಲಾಗಿ ನಾನು ಈ ಐದು ವರ್ಷಗಳಿಂದ ಪದೇ ಪದೇ ಕೇಳಲ್ಪಟ್ಟಿರುವ FAQ ಗಳ ಉಪಟಳದ ಸಣ್ಣ ಪರಿಚಯ ನೀಡುತ್ತಿದ್ದೇನೆ. ಈ 'ಕನಸು' ಎಂಬ ಪದದ ಅಕ್ಷರಶಃ ಅರ್ಥ ನಮ್ಮಲ್ಲಿ ಸಿಕ್ಕಾಪಟ್ಟೆ ಸಂಧರ್ಭಕ್ಕನುಗುಣವಾಗಿ ಮಾರ್ಪಾಡಾಗಿರಲ್ಪಟ್ಟಿರುವುದೇ ನನ್ನೆಲ್ಲ ಸಂಕಷ್ಟಗಳ ಮೂಲ! ಕನಸುಗಳು ಬರುತ್ತವೆ, ಹೋಗುತ್ತವೆ. ಕೆಲವು ಒ೦ದರಿ೦ದೊ೦ದು ದೃಶ್ಯಕ್ಕೆ ಸ೦ಭ೦ಧವಿರುವ೦ತವಾಗಿರುತ್ತವೆ, ಇನ್ನುಳಿದವು ತೀರಾ ಪೆದ್ದುಪೆದ್ದಾಗಿಯೋ, ತಮಾಷೆಯಾಗಿಯೋ, ಭಯಾನಕ ಅಥವಾ ಚಿಂದಿ ಚಿತ್ರನ್ನವಾಗಿಯೋ ಒಂದಷ್ಟು ಹೊತ್ತಿದ್ದು ಅತ್ತಸರಿಯುತ್ತವೆ. ಇಂತಹ ಅನೇಕಾನೇಕ ಕನಸುಗಳ ನಡುವೆಯೂ ನನಗೆ ಒಮೊಮ್ಮೆ ಒ೦ದರಿ೦ದೊ೦ದು ದೃಶ್ಯಕ್ಕೆ ಲಿಂಕ್ ಇರುವ೦ತಾ, ಸಂಭಾಷಣೆಯೇ ಪ್ರಧಾನವಾಗಿರುವ, ತಲೆಯೊಳಹೊಕ್ಕ ವಿಚಾರವೊ೦ದು ಕಲ್ಪನೆಯ ಲಯಕ್ಕೆ ಸಿಲುಕಿ ಹಾಗೇ ಉದ್ದುದ್ದವಾಗಿ, ಮೊದಲು-ಕೊನೆ ಎಲ್ಲವನ್ನೊಳಗೊ೦ಡಾಗ ದೊರೆಯುವ ಸಿದ್ಧ ಮಾದರಿಯ೦ತೆ ಮೂಡುವ ಕನಸುಗಳು, ಕೆಲ ಗಂಟೆ, ದಿನ or ಕೆಲವೊಮ್ಮೆ ಅಮ್ಮನ ಬಳಿ ಹೇಳಿ ರೆಕಾರ್ಡ್ ಮಾಡುವವರೆಗಷ್ಟೇ ಇದ್ದು ಆಮೇಲೆ ಕರುಹೂ ಇಲ್ಲದೇ ಮಾಸಿಹೋಗಿ ನನಗೆ ಆಶ್ಚರ್ಯ, ಗಾಬರಿ, ತೃಪ್ತಿ, ಸಂಕಟ, ತೊಂದರೆ ಎಲ್ಲವನ್ನೂ ತ೦ದಿಕ್ಕುತ್ತವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ದಾಖಲಿಸಿ ಎಲ್ಲರೊಡನೆ ಹ೦ಚಿಕೊಳ್ಳಬೇಕೆ೦ಬ ಉದ್ದೇಶವೊ೦ದು ತಲೆ ಹೊಕ್ಕಾಗಿನಿ೦ದ ಅದನ್ನು ಅಲ್ಲಿ೦ದಿಳಿಸಲು ಪ್ರತಿಷ್ಠಿತ 'ದುಷ್ಟ ಶಕ್ತಿಗಳು'(!) ವಿನಯ, ವಿಶ್ವಾಸಭರಿತ ಪ್ರತಿಕ್ರಿಯೆಗಳಿ೦ದ ಉಪಟಳ ನೀಡುತ್ತಿರುವುದರಿ೦ದ ಬೇಸತ್ತ ನಾನೂ, ನನ್ನ ಬ್ಲಾಗೂ ತೆವಳುತ್ತಲೇ ಸಾಗಿದ್ದೇವೆ !!

ನಮ್ಮವರು ಸಾಕ್ಷ್ಯಾಧಾರ, ಪುರಾವೆಗಳಿಲ್ಲದೇ ಸಾಧಾರಣವಾಗಿ ಏನನ್ನೂ ನಂಬುವುದಿಲ್ಲ ( *note- ಕ್ಷಮಿಸಿ, ಪವಾಡಗಳ ವಿಷಯದಲ್ಲಿ ಈ ಹೇಳಿಕೆ ಅನ್ವಯವಾಗುವುದಿಲ್ಲ!) ಹೀಗಾಗಿ ನಾನು ನನ್ನ ಕನಸಿನ mechanism ಅನ್ನು ಕೆಲ 'ಆಯ್ದ ವ್ಯಕ್ತಿ'ಗಳಿಗೆ(ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಹೇಳುತ್ತಾ ಹೋದರೆ ಇನ್ನೊಂದು ಬ್ಲಾಗೇ ಬೇಕಾಗಬಹುದು!) ವಿವರಿಸಲು ಹೋದರೂ "ಇದು ಹೇಗೆ ಕನಸು ಹೀಗಿರಲು ಸಾಧ್ಯ?" ಎಂಬ ಪ್ರಶ್ನೆಗಳು ತೆರೆದುಕೊಳ್ಳುತ್ತವೆ. ಹಾಗೆಂದು ಅವರ ಸಮ್ಮುಖದಲ್ಲೇ ಒಂದು ಕನಸನ್ನು ಆಹ್ವಾನಿಸಿಕೊ೦ಡು "ಒಹ್! ಬಂತು ಬಂತು ಕನಸು, ನೋಡ ಬನ್ನಿ!" ಎನ್ನಲು ಸಾಧ್ಯವೇ!? ನಿಜ, ಯಾರಿಗಾದರೂ ಈ ಕುತೂಹಲ ಸಹಜವೇ. ಆಗಾಗ ನನಗೇ ಹಾಗೆನಿಸುತ್ತಲೂ ಇರುತ್ತದೆ! ಆದರೆ ನನ್ನೆಲ್ಲ ಅರ್ಥಮಾಡಿಸಲು ನಡೆಸಿದ ಪರಿಶ್ರಮದ ನಂತರವೂ ಅದು ತಣಿಯುವುದೇ ಇಲ್ಲವಲ್ಲ! ಆಗ ಸಹಜವಾಗೇ, 'ಈ ಕನಸ ಸಹವಾಸ ಸಾಕು' ಎಂದೆನಿಸಲು ಈ ಪ್ರಕ್ರಿಯೆ ನನ್ನ ಕೈ ( or ತಲೆ?) ಮೀರಿದ್ದಾದ್ದರಿ೦ದ 'ಇವನ್ನು ದಾಖಲಿಸುವುದನ್ನು ಇಂದೇ ಬಿಟ್ಹಾಕಿಬಿಡಬೇಕು' ಎಂದೆನಿಸುವ ಮಹತ್ವಾಕಾಂಕ್ಷೆಯೇನಾದರೂ ಇವರುಗಳ 'ಜಾಣ ಪೆದ್ದುತನ'ದ ಹಿ೦ದಿರಬಹುದೇ? ಎನ್ನುವ೦ತಹ ದೂ(ದು?)ರಲೋಚನೆಯೂ ಮೂಡದೇ ಇರದು!

ನಮ್ಮ ಎಚ್ಚರ ಸ್ಥಿತಿಯಿ೦ದ ನಾವು ದೂರ ಸರಿದು ವಿರಮಿಸಿದಾಗ, 'ಕಾವಲುಗಾರನ ಕಣ್ತಪ್ಪಿಸಿ' ಜರುಗಿದ ಆಲೋಚನೆಯೊ೦ದು ದೃಶ್ಯವಾಗಿ (ಕೆಲ ಸಂಧರ್ಭಗಳಲ್ಲಿ) ಕಣ್ಣಮುಂದೆ ತೇಲಿ ಬರುವುದೆಂದರೆ? ಅದು ಎ೦ತಹ ಕನಸೇ ಆಗಿರಲಿ. ನಮ್ಮ ನಿಯಂತ್ರಣಕ್ಕೆ ಸಿಲುಕದೆ ಘಟಿಸುವ೦ತಹುದು ತಾನೇ? ಇಂತಹ ಅಚ್ಚರಿಯೆನಿಸುವ 'ಮೆದುಳ ಮಾಯೆ'ಯನ್ನು ತೀರಾ ನಿರಾಸಕ್ತಿಯಿ೦ದ ನೋಡುವ ಮನಸ್ಸುಗಳನ್ನು ನಮ್ಮ ಸುತ್ತಲೂ ಕನಸಿನ ಜೊತೆಗೆ ಹೆಣೆದುಕೊಂಡಿರುವ ಭಯ ಮತ್ತು ಮೂಢನ೦ಬಿಕೆಗಳು ಈ ವಿಚಾರದಲ್ಲಿ ನಿರ್ಲಿಪ್ತವನ್ನಾಗಿಸುತ್ತಿವೆಯೋ ತಿಳಿಯದು.

ಆದರೆ ಇವೆಲ್ಲವುಗಳ ನಡುವೆ 'ಸ್ವದೇಶೀ' ಕಾರ್ಯಚಟುವಟಿಕೆಗಳು ಅಂತರ್ಜಾಲದಲ್ಲಿ ಕಣ್ಣಿಗೆ ಬೀಳದ ಕಾರಣ (ತಿಳಿದಿದ್ದರೆ ದಯಮಾಡಿ ತಿಳಿಸಿ) 'ವಿದೇಶಿ ನೆಲ'ದ ಅಪ್ಪಟ ಕನಸುಗಾರರ ಗುಂಪೊಂದರ ಬಳಿ ಈಗ್ಗೆ ಒಂದು ವರುಷದಿಂದ ಕನಸನ್ನು ಹ೦ಚಿಕೊಳ್ಳುತ್ತಿದ್ದೇನೆ. ಅಲ್ಲಿ ಜರುಗುವ ಕನಸಿನ ಅಧ್ಬುತ ಅವಲೋಕನಗಳು, ಪಕ್ಕಾ unusual ಆಗಿ ಗೋಚರಿಸುವ ಈ ಕನಸುಗಳನ್ನು ಹೊತ್ತು ಅಲೆಯುತ್ತಿರುವ ನನ್ನ ಮತ್ತಷ್ಟು ಕಷ್ಟ ಕೋಟಲೆಗಳು, ಕನಸಿನೊಡನೆ ನೆಲೆಸಿರುವ ಬೆಚ್ಚನೆಯ ಸ೦ತಸದ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ.

(image courtesy-web)

Tuesday, November 25, 2008

ಅಸ್ತಿತ್ವ

ಆ ಸುಂದರ ಪುಷ್ಪ ಗಾಳಿಗೆ ತಲೆದೂಗುತ್ತಾ ತನ್ನೊಡಲ ಕಂಪನ್ನು ತನ್ನ ಸುತ್ತಲೇ ಪಸರಿಸಿಕೊಂಡು ಅನಂದಿಸುತ್ತಿತ್ತು. ಹೀಗೇ ತನ್ನ ಇರುವಿಕೆಯಲ್ಲೇ ಶ್ರೇಷ್ಠತೆಯನ್ನು ಕಂಡುಕೊಂಡ ಹೂವಿನ ಮನಸ್ಸು ತನ್ನನ್ನೆತ್ತಿ ಹಿಡಿದಿರುವ ಗಿಡದತ್ತ ಸೂಕ್ಷ್ಮ ನೋಟ ಬೀರಿತು. ಮತ್ತೆ ತಲೆಯೆತ್ತಿ ವಯ್ಯಾರದಿ೦ದ ನರ್ತಿಸಿತು. ಹೀಗೇ ತಾತ್ಸಾರದಿ೦ದ ಗಿಡವನ್ನು ಗಮನಿಸುತ್ತಾ ಅದು ಹೇಳಿತು, "ನೀನು ನನಗೆ ತುಂಬಾ ವಿಧೇಯನಾಗಿರಬೇಕು. ಏಕೆಂದರೆ ಇವತ್ತು ನೀನು ಈ ಸ್ಥಳದಲ್ಲಿ ನೆಲೆಯೂರಿರುವುದು, ಗುರುತಿಸಲ್ಪಟ್ಟಿರುವುದು ನನ್ನ ಪ್ರಮುಖ ಇರುವಿಕೆಯಿಂದ". ತನ್ನನ್ನು ತಾನೇ ಅಟ್ಟಕ್ಕೆ, ಬೆಟ್ಟಕ್ಕೆ ಏರಿಸುತ್ತಾ ಕೊಂಕು ಮಾತಾಡಿತು. ಗಿಡಕ್ಕೆ ಬಹಳ ಬೇಸರವಾಗಿ ಮಾತುಗಳು ಬಾಯಿಯ ತುದಿಗೆ ಬಂದರೂ ತಕ್ಕ ಸಮಯ ಇದಲ್ಲ ಎಂದು ತನ್ನಲ್ಲೇ ಪದಗಳನ್ನು ನು೦ಗಿಕೊ೦ಡಿತು.
ಬಹಳ ದಿನಗಳು ಹೀಗೇ ಕಳೆದವು.. ಅರಳಿ ನರ್ತಿಸುತ್ತಿದ್ದ ಹೂವಿನ ಲಯ ಎಲ್ಲೋ ತಪ್ಪಿದಂತಾಗಿ, ಒಡಲ ಶಕ್ತಿಯೆಲ್ಲಾ ಎಲ್ಲೋ ಉಡುಗಿ ಹೋದಂತೆ, ತನ್ನ ದೇಹ ತನಗೇ ಭಾರವಾದ೦ತೆ ಭಾಸವಯಿತು. ಎಷ್ಟೋ ದಿನ ತನುಮನವ ರಂಜಿಸುತ್ತಿದ್ದ ಹೂವು ಕೆಲವೇ ಗಂಟೆಗಳಲ್ಲಿ ತನ್ನ ಕಾಲುಗಳಿ೦ದ ಬೇರ್ಪಟ್ಟು ಮಣ್ಣಿನ ನೆಲದ ಮೇಲೆ ದೊಪ್ಪನೆ ಬಿದ್ದು ಬಿಟ್ಟಿತು. ಮತ್ತೆ ಮೇಲೇಳಲಾರದೇ ಅತ್ತಿತ್ತ ಹೊರಳಲಾರದೇ ಗಾಳಿಯ ಆರ್ಭಟಕ್ಕೆ ಬಲಿಯಾಗಿ ತತ್ತರಿಸಲ್ಪತ್ತಿತು. ಜೋರಾಗಿ ರೋದಿಸುತ್ತಾ, "ಅಯ್ಯೋ ನನ್ನ ಕರ್ಮ, ನನ್ನ ಸ್ಥಿತಿ ಯಾರಿಗೂ ಬರದಿರಲಿ.. ಇದೇನಾಗಿ ಹೋಯಿತು..?" ಎನ್ನಲು ಈ ಎಲ್ಲ ಘಟನೆಗಳನ್ನು ಮೌನಧಾರಿಯಾಗಿ ಗಮನಿಸುತ್ತಿದ್ದ ಗಿಡಕ್ಕೆ ಕರುಳು ಚುರ್ರೆ೦ದಿತು. ಅದು ಹೂವಿಗೆ ಹೇಳಿತು, "ನನ್ನ ಸುಂದರ ಪುಷ್ಪವೆ, ಇಲ್ಲಿ ನೋಡು. ನಿನ್ನ ಸ್ಥಾನವನ್ನು ಬೇರೆ ಯಾರೋ ಆಕ್ರಮಿಸಲು ಯತ್ನಿಸುತ್ತಿರುವುದನ್ನು... ನಾನು ನಿನ್ನನ್ನಣುಕಿಸಲು ಹೀಗೆ ಹೇಳುತ್ತಿಲ್ಲ. ಆದರಿದು ಪ್ರಕೃತಿ ನಿಯಮ. ನಮ್ಮ ಶ್ರೇಷ್ಠತೆಗೆ ನಾವೇ ತಲೆದೂಗುತ್ತಾ.., ತೂಗುತ್ತಾ ತಲೆಯೇ ಕಿತ್ತು ಬಿದ್ದರೆ...? ಅ ಸಂಕಟ ಯಾರಿಗೂ ಬೇಡ. ನೀನು ಅಂದು ಹೇಳಿದ ಮಾತು ನಿನ್ನ ಗರ್ವದಿಂದ ಉಧ್ಬವಿಸಿದ್ದು. ಅದಕ್ಕಂದು ಜಂಬದ ಲೇಪವೊ೦ದನ್ನು ಬಿಟ್ಟರೆ ಮತ್ಯಾವ ಅರ್ಥವಾಗಲಿ, ಸತ್ಯಾ೦ಶವಾಗಲೀ ಇರಲಿಲ್ಲ. ಆದರೆ ಇಂದು ಅದೇ ನಿಜವಾಗಿದೆ. ಖ೦ಡಿತ ಇದೀಗ ನೀನೇ ನನ್ನ ಅಸ್ತಿತ್ವಕ್ಕೆ ಕಾರಣಳಾಗಬಲ್ಲೆ.. ನನ್ನ ಇರುವಿಕೆಯನ್ನು ಭದ್ರಪಡಿಸಬಲ್ಲೆ.. ಮತ್ಯಾಕೆ ಈ ವೇದನೆ. ಬಾ ಈ ಕ್ಷಣದಿಂದ ನೀನೇ ನನ್ನ ಸಮರ್ಥ ಇರುವಿಕೆಗೆ ಕಾರಣಳಾಗುವ ಗೆಳತಿ..." ಎನ್ನುತ್ತಾ ತನ್ನ ಪರ್ಣಹಸ್ತವನ್ನು ಚಾಚಿ 'ಪುಷ್ಪ'ವನ್ನು ತನ್ನೆಡೆಗೆ ಸೆಳೆದುಕೊಂಡು ತನ್ನ ಬುಡಕ್ಕೆ ಒರಗಿ ಕೂರಿಸಿ ಸಮಾಧಾನ ಪಡಿಸಿತು. ಅದರ ಜೀವಕ್ಕೆ ಪರಿಪೂರ್ಣತೆ ನೀಡಿತು....
*೨೦೦೬ ರ ಕನಸು
(image courtesy- web)

Monday, October 6, 2008

ಇರುವ ದು೦ಬಿಯ ಬಿಟ್ಟು.....

ಆ ದಿನ ಅಮ್ಮ ಬಾಂದಳವ ಬೊಟ್ಟು ಮಾಡಿ ತೋರಿಸುತ್ತಾ ತುತ್ತಿಕ್ಕುತ್ತಿದ್ದಾಗ ಅಮ್ಮನ ತೆಕ್ಕೆಯ ’ಮಗು’ವಾಗಿದ್ದ ಆಕೆಯ ಕಣ್ಣುಗಳನ್ನು ಚಂದ್ರನಿಗಿಂತ ಎಷ್ಟೋ ದೂರದಲ್ಲಿ ಮಿನುಗಿ ಮರೆಯಾಗುತ್ತಿದ್ದ ನಕ್ಷತ್ರಗಳು ಸೆಳೆದು ಹಿಡಿದಿದ್ದವು. ಅಂದೇ ಅವನ್ನು ತನ್ನ ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಬೇಕೆಂದು ಆಕೆ ನಿಶ್ಚಯಿಸಿದ್ದಳು. ಪ್ರಪಂಚವನ್ನು, ವಾಸ್ತವವನ್ನು ಅರ್ಥೈಸಿಕೊಳ್ಳುವ ಮೊದಲೇ ಮಿನುಗು `ತಾರೆ’ಗಳನ್ನು ಮುಡಿಗೇರಿಸಿಕೊಳ್ಳುವ ಕನಸು ಕಂಡಿದ್ದಳು. ತನ್ನ ಪುಟ್ಟ ಕಾಲುಗಳಿಂದ ಹೆಜ್ಜೆ ಹಾಕುತ್ತಾ ಭೂಮಿ,ಬಾಂದಳ ಸಂಧಿಸುವ `ದಿಗಂತ’ದೆಡೆಗೆ ಚುಕ್ಕಿಗಳ ಹಿಡಿಯಲು ಓಡಲಾರಂಭಿಸಿದ್ದಳು. ಆಗಸವ ನೋಡುತ್ತಾ ಸಾಗುತ್ತಿದ್ದ ಕಾಲುಗಳು ಕಲ್ಲುಗಳಿಂದ ಜರ್ಝರಿತವಾಗುತ್ತಿದ್ದವು. ತನ್ನ ಕೋಮಲತೆಯನ್ನೇ ಮರೆತಂತೆ ಗಟ್ಟಿಯಾಗುತ್ತಿದ್ದವು. ಮಧ್ಯೆ ತನ್ನ ಓಟವನ್ನು ನಿಲ್ಲಿಸಿ ತೂತಾಗಿದ್ದ ತನ್ನ ಕಾಲುಗಳನ್ನು ನೋಡುತ್ತಿದ್ದಳು. ಆಗಸದ ಚುಕ್ಕಿಗೂ, ಕಾಲ ಕೆಳಗಿನ ಕಲ್ಲುಗಳಿಗೂ ಇರುವ `ಅಂತರ’ವನ್ನು ಕಂಡು ದುಃಖಿಸುತ್ತಿದ್ದಳು. ಮತ್ತೆಲ್ಲೋ ಆ ಬಾಂದಳ ಧರೆಗಿಳಿದಂತೆ ಕಂಡ ಸ್ಥಳದೆಡೆಗೆ ಕುಂಟುತ್ತಾ ನಡೆಯುತ್ತಿದ್ದಳು...
ಕಾಲುಗಳೀಗ ಬಹಳ ಬೇಗ ಹೆಜ್ಜೆಹಾಕುವಷ್ಟು ಬಲಿಷ್ಠವಾಗಿದ್ದವು. ಆಕೆಯ ಕಣ್ಣುಗಳು ಆಗಸದ ನಕ್ಷತ್ರ, ಭೂಮಿಯ ಕಲ್ಲುಗಳ ಮಧ್ಯೆ ಇರುವ ಪ್ರಪಂಚವನ್ನು ನೋಡುತ್ತಿದ್ದವು. ತನ್ನ ಒಂಟಿ ಪಯಣದಲ್ಲಿ ಜೊತೆಗಾರರು ಯಾರಾದರೂ ಸಿಗಬಹುದೇ ಎಂದು ಹುಡುಕುತ್ತಿದ್ದವು... ಬದುಕು, ಜೀವನ, ಸಮಾಜ, ಕಟ್ಟುಪಾಡು ಎಂದು ಮನಸ್ಸು ಯೋಚಿಸುವಂತಾಗಿತ್ತು. ಯಾವುದೋ ನಿಲ್ದಾಣದಲ್ಲೊಮ್ಮೆ ಕುಳಿತಳು. ತನ್ನ ಮಾಸಲು ಬಟ್ಟೆಯನ್ನೊಮ್ಮೆ ನೋಡಿಕೊಂಡಳು..ಅದು ಮುಳ್ಳುಗಳಿಗೆ ಸಿಲುಕಿ ಹರಿದಿತ್ತು, ಕೈ ಕಾಲುಗಳ ಮೇಲೆ ಗಾಯದ ಗುರುತುಗಳಾಗಿದ್ದವು... ಎಲ್ಲಾ ಗಮನಿಸಿದ ಮೇಲೆ ತನ್ನ ಕಣ್ನನ್ನೊಮ್ಮೆ ಮುಚ್ಚಿ ತೆರೆದು ಅದರೊಳಗೆ ತನ್ನ ಸಾವಿರಾರು ಯೋಚನೆಗಳನ್ನು ಮುಚ್ಚಿಟ್ಟು ಮತ್ತೆ ಗುರಿಯೆಡೆಗೆ ಓಡಿದಳು.. ಅವಳ ಬೆನ್ನತ್ತಿದ್ದ ’ಕಾಲ’ ಆಕೆಯ ಹಿಂದೆ, ಮುಂದೆ, ಜೊತೆ ಜೊತೆಯಾಗಿ ಓಡಿ ಬರುತ್ತಿತ್ತು.
ಅವಳ ಕಾಲುಗಳೀಗ ಕೊಂಚ ನಿಧಾನವಾಗುತ್ತಿದ್ದವು....ತಾನು ಅಂದುಕೊಂಡ ನಕ್ಷತ್ರವನ್ನು ಹಿಡಿಯಲಾಗುವುದಿಲ್ಲವೇನೋ ಎಂದು ಮನಸ್ಸು ಚಡಪಡಿಸುತ್ತಿತ್ತು. ದೇಹ ವಿಶ್ರಾಂತಿ ಬಯಸುತ್ತಿತ್ತು, ನಕ್ಷತ್ರ ಹಿಡಿಯುವುದರಲ್ಲಿ ಮೊದಲಿದ್ದ ಉತ್ಸಾಹ ಕಡಿಮೆಯಾದಂತಿತ್ತು. ತನ್ನ ಮನಸ್ಸಿನ ಭಾವನೆಗಳಿಗೆ ಮನ್ನಣೆ ಕೊಟ್ಟು ಆಕೆ ಬಹಳ ದಿನಗಳ ನಂತರ ಬಿಡುವು ಮಾಡಿಕೊಂಡು ಪ್ರಪಂಚವನ್ನು ಕಂಡಳು... ಪ್ರಪಂಚವಿಡೀ ತನ್ನನ್ನೇ ನೋಡುತ್ತಿರುವಂತೆ ಅವಳಿಗೆ ಭಾಸವಾಗತೊಡಗಿತು.. ಅವಳ ಕಣ್ಣಿಗೆ ಅಮ್ಮಂದಿರು, ಎಷ್ಟೋ ಭಾವನೆಗಳನ್ನು ತುಂಬಿಕೊಂಡ ಜನರು, ಕನಸುಗಳಿಗಾಗಿಯೇ ಹುಟ್ಟಿದಂತಿರುವ ಮಕ್ಕಳು ಕಂಡರು.. ಆಕೆ ತಲೆಯೆತ್ತಿ ಮೇಲೆ ನೋಡಿದಳು. ಅನಂತವಾದ ದಾರಿಯ ಹೊರತು ಮತ್ತೇನೂ ಕಾಣಲಿಲ್ಲ. ಅವಳ ಕಣ್ಣುಗಳು ಮತ್ತೆ ಮತ್ತೆ ಹೊಳೆದವು.. ಕನಸುಗಳು ತುಂಬಿ ಬಂದಂತಾದವು..ಯಾವ ನಕ್ಷತ್ರ ಹಿಡಿಯಲು ಹೊರಟಿದ್ದಳೋ ಆ `ನಕ್ಷತ್ರ’ವೇ ಅವಳಾಗಿ ಬಿಟ್ಟಿದ್ದಳು....

~ಸುಷ್ಮ ಸಿ೦ಧು
೨೦೦೫ ರಲ್ಲಿ ಬ೦ದು, ದಾಖಲಿಸಿರುವ 'ಕನಸು'.
Many thanx for all comments & votes @kendasamige.
(image courtesy-web)