Wednesday, August 27, 2008

ನನ್ನ 'ಕನಸು'!!

ಹಾಯ್,
ಇದು ನನ್ನ ಕನಸುಗಳ ತಾಣ. ಹಾಗೆಂದು ಇವು ನಾನು ಕಂಡುಕೊಂಡ ಕನಸುಗಳಲ್ಲ! ತಾವಾಗೇ ಬಂದು ಬಿದ್ದಕನಸುಗಳು! ಈಗ ಐದು ವರುಷಗಳಿಂದ ನಾನು ಸಾಕಷ್ಟು ಬದಲಾಗಿದ್ದೇನೆ. ಅದೆಷ್ಟರ ಮಟ್ಟಿಗೆ ಎಂದರೆ ನನ್ನ ಬದುಕಿನ ಅಷ್ಟೂ seriousness ಕನಸುಗಳೊಳಗೆ ತೂರಿ ಹೋಗಿ ನಾನು ನಿರಾಳವಾಗಿಬಿಟ್ಟಿದ್ದೇನೆ! ಮೊದ ಮೊದಲು ಸಲಹೆಯಂತೆ, ಸಮಾಧಾನದಂತೆ ಮೂಡಿ ಬಂದು ನನ್ನಲ್ಲಿ ಸಂದೇಹ ಹುಟ್ಟಿಸುತ್ತಿದ್ದ ಕನಸುಗಳು ನಂತರ 'ನನ್ನಿಂದ' ದೂರವಾಗಿ ನಾನು ಕಾಣದ, ಕೇಳದ ವಿಷಯಗಳನ್ನು ಆರಂಭ, ಅಂತ್ಯಗೊಡನೆ ಹುದುಗಿಸಿ ಕತೆಗಳಾಗಿಬಿಟ್ಟವು.
ಅಮ್ಮನಿಗೆ ಎಲ್ಲಾ ಕತೆಗಳನ್ನು ಹೇಳುತ್ತಾ record ಮಾಡಲಾರಂಭಿಸಿದವಳು ನಂತರ ಅಮ್ಮನ ಸಲಹೆಯಂತೆ ಬರೆಯಲಾರಂಭಿಸಿದೆ.. ಇಂತಹ ಬರಹಗಳು ನನ್ನನ್ನು ಸಾಕಷ್ಟು 'ಅತ೦ತ್ರ' ಸ್ಥಿತಿಯಲ್ಲೂ ತಳ್ಳಿವೆ........ 'alter ಮಾಡು, ಆರಂಭ ಸರಿಯಿಲ್ಲ, ಅಂತ್ಯ ಸ್ವಲ್ಪ ಬದಲಾಗಬೇಕಿತ್ತು, ಇನ್ನಷ್ಟು ಚೆಂದವೋ, ಬೇರೆಯದೇ ವಿಷಯ ಆಗಿದ್ದಿದ್ದರೆ...' ಎಂದರೆ ನಾನೂ ಏನೂ ಮಾಡಲು ಅಸಹಾಯಕಳು!!! ಕಥೆಯೆ೦ದೋ, ಲಹರಿಯೆ೦ದೋ ಏನೆಂದೋ ಹೆಸರಿಸಲು ಅವಕ್ಕೆ ಅವುಗಳದ್ದೇ ಅದ ಚೌಕಟ್ಟು, ಬದ್ದತೆಗಳಿರುತ್ತವೆ. ಕಡೆಗೆ 'ಎಲ್ಲಿಯೂ ಸಲ್ಲದ' ಅಥವಾ 'ಎಲ್ಲಿಗೂ ಸೇರದ' ಕನಸುಗಳನ್ನು, 'ಕನಸುಗಳು' ಎಂಬ ಶೀರ್ಷಿಕೆಯಡಿಯಲ್ಲಿಯೇ ಆರಾಮವಾಗಿರಿಸೋಣವೆ೦ದರೆ 'ಕನಸುಗಳತಾಣ'ವೆಂದು ಯಾವ ಪತ್ರಿಕೆಯಲ್ಲಿಯೂ ಸ್ಥಾನವಿಲ್ಲ..! ಹಾಗೆಯೇ 'ಕನಸೇ!?' ಎಂಬಂತಹ ಉದ್ಗಾರಗಳಿಗೆ ಸಾಕ್ಷ್ಯಧಾರಗಳ ಸಮೇತ ಉತ್ತರಿಸಲೂ ಸಾದ್ಯವಿಲ್ಲ. ಇಂತಹ ಎಷ್ಟೋ ಚಿತ್ರ-ವಿಚಿತ್ರ ಸನ್ನಿವೇಶಗಳಿಗೆ, ಹಲವಾರು ವೈಯಕ್ತಿಕ ಗೊಂದಲಗಳಿಗೆ ನನ್ನ ಕನಸುಗಳು ನನ್ನನ್ನು ತಳ್ಳಿದರೂ, 'ಆನೆ ನಡೆದದ್ದೇ ದಾರಿ..' ಎನ್ನುವಂತೆ ಅವು ಮು೦ದುವರಿದೇ ಇವೆ!
ಕನಸುಗಳ ಮೂಲ, existence ಬಗ್ಗೆ ತಲೆ ಕೆಡಿಸಿಕೊಳ್ಳುವ ಕಾಲ ಮುಗಿದು, ನನ್ನನ್ನು ಎಲ್ಲೋ ಕರೆದೊಯ್ದು ಬುದ್ದಿಹೇಳಿ, ಮೊಟಕಿ ಮತ್ತೆ ತಂದು ಬಿಡುವ ಪ್ರೀತಿಯ ಕನಸುಗಳು ಬಂದಾಗ 'ಒಹ್..' ಎಂದು ಅಚ್ಚರಿಸುತ್ತಾ, 'ಇದೇ ನನ್ನ ಕಡೆಯ ಕನಸಿರಬೇಕು. ಇನ್ನೆಷ್ಟು ವಿಷಯ ಹೀಗೆ ಬರಲು ಸಾಧ್ಯವಮ್ಮಾ..' ಎಂದು ಎಷ್ಟೋ ವರುಷಗಳಿಂದ ಅಮ್ಮನಿಗೆ ಹೇಳುತ್ತಾ, 'ಸುಮ್ಮನೆ ಬಂದದ್ದನ್ನು ಬರೆದಿಡು' ಎಂದೆನ್ನಿಸಿಕೊ೦ಡು ಗುಡ್ದೆಯಷ್ಟಿರುವ ಸರಕಿನಲ್ಲಿ ಆಗಾಗ್ಗೆ ಒಂದೊಂದನ್ನು ಆಯ್ದು ಬರೆಯುತ್ತಿದ್ದೇನೆ. ಅನಿಯ೦ತ್ರಿತ thoughts ಗಳನ್ನು 'like dreaming' ಎನ್ನಲಸಾದ್ಯವಾದ್ದರಿ೦ದ 'like minded' ಜನರೊಡನೆ share ಮಾಡಿಕೊಳ್ಳುವ ಬಯಕೆಯಿ೦ದಲೇ 'ಕ೦ಡೆ ನಾನೊಂದು ಕನಸು'ವಿನಲ್ಲಿ ನನ್ನ ಪ್ರಕಟಗೊಂಡಿರುವ ಪುಟ್ಟ ಪುಟ್ಟ 'online reading' ಗೆ ಸರಿಹೊಂದುವ ಕನಸುಗಳನ್ನು ತೆರೆದಿಡುತ್ತಿದ್ದೇನೆ.
~ಸುಷ್ಮ ಸಿ೦ಧು

(image courtesy-web)

Friday, August 8, 2008

ಶೋಧ.........

(ಇದು ನನ್ನ ಕನಸಿನ ಕಥೆ 'ಶೋಧ'ದ ತುಣುಕು.. ಕನಸುಗಳ ಕಥೆಯ ಸಂಗ್ರಹ 'ಪಯಣ ಸಾಗಿದಂತೆ.....'ಯಲ್ಲಿ ಪ್ರಕಟವಾಗಿದೆ.ಮತ್ತು ಮಯೂರದ 'ಗುಬ್ಬಚ್ಚಿಗೂಡು'ವಿನಲ್ಲಿ ಪ್ರಕಟವಾದ 'ಕರುಣಾಳು ಬಾ ಕನಸೇ' ಯಲ್ಲಿಯೂ ಸೇರಿಕೊಂಡಿದೆ. ಇದರ ಆ೦ಗ್ಲ ಭಾಷಾಂತರ 'the pot full of water' ,yahoo dreams group ನಲ್ಲಿ ಚರ್ಚೆಗೊಳಗಾಗಿದೆ.. )

ಏನನ್ನೋ ಅರಸುತ್ತಾ ದಾರಿಯ ಮಧ್ಯೆ ನಡೆದು ಬರುವ ನಾನು 'ಒಳಗೆ ಏನೋ ಇದೆ' ಎಂದು ಮನಗಂಡು ಪ್ರವೇಶಿಸಿದ ಗಾಜಿನ ಕಟ್ಟಡದ ಗೋಡೆಯ ಮೇಲೆ ಮೂರು ದೃಶ್ಯಗಳು ಮೂಡಿದವು . ಅದನ್ನು ನಾನು, ಹಾಗೂ ನನ್ನ ಸಾಲಿನಲ್ಲಿಯೇ, ನನ್ನ ಪಕ್ಕದ ಕುರ್ಚಿಯನ್ನು 'ಖಾಲಿ' ಬಿಟ್ಟು 'ಅಂತರ'ವೊಂದನ್ನು ಕಾಪಾಡಿಕೊಂಡು ಕೂರುವ ಸುಂದರ ಯುವತಿ ನೋಡಿದೆವು.. ಗೋಡೆಯ ಮೇಲಿನ ಚಿತ್ತಾರ ಕಥೆಯೊಂದನ್ನು ನಮ್ಮೆದುರಿತ್ತಿತು.

ಅಲ್ಲೊಂದು ನದಿ. ಸುಮಾರು ಮೈಲಿ ದೂರದಿಂದ ನೀರು ತೆಗೆದುಕೊಂಡು ಹೋಗಲು ಹುಡುಗಿಯೊಬ್ಬಳು ಅಲ್ಲಿಗೆ ಬರುತ್ತಿದ್ದಳು. ಎರಡು ತುಂಬಿದ ಕೊಡದೊಡನೆ ಹಿಂದಿರುಗುತ್ತಿದ್ದಳಾದರೂ ಮನೆ ಸೇರುವ ಹೊತ್ತಿಗೆ ನೀರು ಅರ್ಧಕ್ಕೇ ಇಳಿದು ಬಿಡುತ್ತಿತ್ತು.. ಹೀಗೇ ಎಷ್ಟೋ ದಿನಗಳು ಅ ಹುಡುಗಿಯ ನಿರಾಸೆ, ಅಸಹಾಯಕತೆಗಳೊಡನೆ ಕಳೆಯುತ್ತಿತ್ತು. ಅವಳು ನದಿಯೆಡೆಗೆ ಹೋದಾಗಲೆಲ್ಲ ಅದಕ್ಕೆ ಹೂವುಗಳನ್ನು ಕಿತ್ತು ಅರ್ಪಿಸಿ ಬೇಡುತ್ತಿದ್ದಳು, 'ಓ ಶಕ್ತಿಯೇ ಇಂದಾದರೂ ಕೊಡದ ತುಂಬ ನೀರುಳಿಸು...' ಆಕೆಯ ಸಮಸ್ಯೆ ದಿನಗಳುರುಳಿದರೂ ಬಗೆಹರಿಯಲಿಲ್ಲ. ಅಂದು ನಿರ್ಧರಿಸಿಕೊಂಡು ಒಂದೇ ಕೊಡ ತಂದಳು. ನೀರನ್ನು ತುಂಬಿ ತುಂಬ ಜಾಗರೂಕಳಾಗಿ ವರ್ತಿಸುತ್ತ ಮನೆಗೆ ಬಂದಳು..ಅವಳಿಗೆ ಪರಮಾನಂದವಾಗಿ ಹೋಯಿತು. ಏನಾಶ್ಚರ್ಯ ! ಅಂದು ಕೊಡ ತುಂಬಿತ್ತು.. ಅನಂದದಿಮ್ದ ಉಬ್ಬಿ ಹೋದವಳು ಮರುದಿನ ನದಿಯೆಡೆಗೆ ಬಂದು ಹೂಗಳನ್ನರ್ಪಿಸಿ ಶಕ್ತಿಗೆ ಕೃಥಜ್ೞಥೆಗಳನ್ನರ್ಪಿಸಿ ಕೂಗಿದಳು, 'ಕೊನೆಗೂ ನನ್ನ ಅಸೆ ಈಡೇರಿಸಿದೆಯಲ್ಲಾ. ನಾನು ನಿನಗೆ ಋಣಿ.. '. ಅಷ್ಟರಲ್ಲಿ ಅಶರೀರವಾಣಿಯೊಂದು ಹೇಳಿತು , "ತಂಗೀ, ಒಮ್ಮೆ ಆ ದಿನವನ್ನು ಸರಿಯಾಗಿ ನೆನೆಪಿಸಿಕೋ. ಅಂದು ನಿನ್ನ ಮನದಲ್ಲಿ ನಾನಿರಲಿಲ್ಲ.. ಇದ್ದದ್ದು ಕೊಡ, ನೀರು ಮಾತ್ರ!." ಅವಳು ಹಿಗ್ಗಿ ಹೋದಳು 'ಅರೆ! ದೇವರೇ ನನ್ನೊಡನೆ ಮಾತನಾಡಿದ..' ಸಂತಸದಿಂದ ಓಡಿ ಹೋಗಿ ಊರಿಗೆಲ್ಲ ಸುದ್ದಿ ತಿಳಿಸಿದಳು, 'ದೇವರು ಮಾತನಾಡಿದ!'
ಮಾರನೆಯ ದಿನ ವಿಷಯ ನಿರೂಪಿಸಲು ಎಲ್ಲರೊಡಗೂಡಿ ನದಿಯ ತೀರಕ್ಕೆ ಬಂದು ಅಂದಿನಂತೆಯೇ ಹೇಳಿದಳು, "ಕೊನೆಗೂ ನನ್ನಾಸೆ ಈಡೇರಿಸಿದೆಯಲ್ಲಾ...........ನಿನಗೆ ನಾನು ಋಣಿ..." ಎಷ್ಟು ಬಾರಿ ಚೀರಿದರೂ ಯಾವ ವಾಣಿಯೂ ಪ್ರತಿಕ್ರಿಯಿಸಲಿಲ್ಲ..ಎಲ್ಲರು ಚೇಡಿಸಿದರು, ಅವಮಾನಿಸಿದರು.ಎಲ್ಲ ಹೋದ ಮೇಲೆ ಕೊಡ ಹೊತ್ತು ನಿರಾಸೆಯಿಂದ ಮನೆಗೆ ತೆರಳುತ್ತಿದ್ದವಳಿಗೆ ಕೊಡದ ನೀರಿನಲ್ಲಿ ತನ್ನ ಪ್ರತಿಬಿಂಬ ಕಾಣಿಸಿತು. ಅದು ಹೇಳಿತು, "ಅಯ್ಯೋ ಹುಚ್ಚಿ, ನಿನ್ನನ್ನೇ ನೀನು ಗುರುತಿಸಲಾರಳಾದೆಯಾ? ನಿನ್ನನ್ನು ಗೆಲ್ಲುವಂತೆ ಮಾಡಿದ್ದು ನಿನ್ನ ಗಮನ ಮಾತ್ರ.. ಇಡೀ ಪ್ರಪಂಚಕ್ಕೆ ಶಕ್ತಿಯ ವಿಷಯ ತಿಳಿಸಲು ಹೊರಟು ನಿನ್ನನ್ನೇ ನೀನು ಅರಿಯಲಾರಳಾದೆ..ಮೊದಲು ನಿನ್ನೊಳಗೆ ಅನುದಿನ,ಅನುಕ್ಷಣ ನೆರೆದಿರುವ 'ನಿನ್ನತನ'ವನ್ನು ನಂಬು. ಯಾವ ಅಸ್ತಿತ್ವವನ್ನು ಅಲ್ಲ..." ನೀರಿನ ಪ್ರತಿಬಿಂಬ ಅವಳ ಮನವನ್ನು ಕಲಕಿತು. ಅಂದು ಕೊಡ ತುಂಬಿತ್ತು. ಒಳಗೆ ಅವಳೇ ತಂದ ನೀರಿತ್ತು..
~ಸುಷ್ಮ ಸಿ೦ಧು

(image courtesy-web)