ಆ ದಿನ ಅಮ್ಮ ಬಾಂದಳವ ಬೊಟ್ಟು ಮಾಡಿ ತೋರಿಸುತ್ತಾ ತುತ್ತಿಕ್ಕುತ್ತಿದ್ದಾಗ ಅಮ್ಮನ ತೆಕ್ಕೆಯ ’ಮಗು’ವಾಗಿದ್ದ ಆಕೆಯ ಕಣ್ಣುಗಳನ್ನು ಚಂದ್ರನಿಗಿಂತ ಎಷ್ಟೋ ದೂರದಲ್ಲಿ ಮಿನುಗಿ ಮರೆಯಾಗುತ್ತಿದ್ದ ನಕ್ಷತ್ರಗಳು ಸೆಳೆದು ಹಿಡಿದಿದ್ದವು. ಅಂದೇ ಅವನ್ನು ತನ್ನ ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಬೇಕೆಂದು ಆಕೆ ನಿಶ್ಚಯಿಸಿದ್ದಳು. ಪ್ರಪಂಚವನ್ನು, ವಾಸ್ತವವನ್ನು ಅರ್ಥೈಸಿಕೊಳ್ಳುವ ಮೊದಲೇ ಮಿನುಗು `ತಾರೆ’ಗಳನ್ನು ಮುಡಿಗೇರಿಸಿಕೊಳ್ಳುವ ಕನಸು ಕಂಡಿದ್ದಳು. ತನ್ನ ಪುಟ್ಟ ಕಾಲುಗಳಿಂದ ಹೆಜ್ಜೆ ಹಾಕುತ್ತಾ ಭೂಮಿ,ಬಾಂದಳ ಸಂಧಿಸುವ `ದಿಗಂತ’ದೆಡೆಗೆ ಚುಕ್ಕಿಗಳ ಹಿಡಿಯಲು ಓಡಲಾರಂಭಿಸಿದ್ದಳು. ಆಗಸವ ನೋಡುತ್ತಾ ಸಾಗುತ್ತಿದ್ದ ಕಾಲುಗಳು ಕಲ್ಲುಗಳಿಂದ ಜರ್ಝರಿತವಾಗುತ್ತಿದ್ದವು. ತನ್ನ ಕೋಮಲತೆಯನ್ನೇ ಮರೆತಂತೆ ಗಟ್ಟಿಯಾಗುತ್ತಿದ್ದವು. ಮಧ್ಯೆ ತನ್ನ ಓಟವನ್ನು ನಿಲ್ಲಿಸಿ ತೂತಾಗಿದ್ದ ತನ್ನ ಕಾಲುಗಳನ್ನು ನೋಡುತ್ತಿದ್ದಳು. ಆಗಸದ ಚುಕ್ಕಿಗೂ, ಕಾಲ ಕೆಳಗಿನ ಕಲ್ಲುಗಳಿಗೂ ಇರುವ `ಅಂತರ’ವನ್ನು ಕಂಡು ದುಃಖಿಸುತ್ತಿದ್ದಳು. ಮತ್ತೆಲ್ಲೋ ಆ ಬಾಂದಳ ಧರೆಗಿಳಿದಂತೆ ಕಂಡ ಸ್ಥಳದೆಡೆಗೆ ಕುಂಟುತ್ತಾ ನಡೆಯುತ್ತಿದ್ದಳು...
ಕಾಲುಗಳೀಗ ಬಹಳ ಬೇಗ ಹೆಜ್ಜೆಹಾಕುವಷ್ಟು ಬಲಿಷ್ಠವಾಗಿದ್ದವು. ಆಕೆಯ ಕಣ್ಣುಗಳು ಆಗಸದ ನಕ್ಷತ್ರ, ಭೂಮಿಯ ಕಲ್ಲುಗಳ ಮಧ್ಯೆ ಇರುವ ಪ್ರಪಂಚವನ್ನು ನೋಡುತ್ತಿದ್ದವು. ತನ್ನ ಒಂಟಿ ಪಯಣದಲ್ಲಿ ಜೊತೆಗಾರರು ಯಾರಾದರೂ ಸಿಗಬಹುದೇ ಎಂದು ಹುಡುಕುತ್ತಿದ್ದವು... ಬದುಕು, ಜೀವನ, ಸಮಾಜ, ಕಟ್ಟುಪಾಡು ಎಂದು ಮನಸ್ಸು ಯೋಚಿಸುವಂತಾಗಿತ್ತು. ಯಾವುದೋ ನಿಲ್ದಾಣದಲ್ಲೊಮ್ಮೆ ಕುಳಿತಳು. ತನ್ನ ಮಾಸಲು ಬಟ್ಟೆಯನ್ನೊಮ್ಮೆ ನೋಡಿಕೊಂಡಳು..ಅದು ಮುಳ್ಳುಗಳಿಗೆ ಸಿಲುಕಿ ಹರಿದಿತ್ತು, ಕೈ ಕಾಲುಗಳ ಮೇಲೆ ಗಾಯದ ಗುರುತುಗಳಾಗಿದ್ದವು... ಎಲ್ಲಾ ಗಮನಿಸಿದ ಮೇಲೆ ತನ್ನ ಕಣ್ನನ್ನೊಮ್ಮೆ ಮುಚ್ಚಿ ತೆರೆದು ಅದರೊಳಗೆ ತನ್ನ ಸಾವಿರಾರು ಯೋಚನೆಗಳನ್ನು ಮುಚ್ಚಿಟ್ಟು ಮತ್ತೆ ಗುರಿಯೆಡೆಗೆ ಓಡಿದಳು.. ಅವಳ ಬೆನ್ನತ್ತಿದ್ದ ’ಕಾಲ’ ಆಕೆಯ ಹಿಂದೆ, ಮುಂದೆ, ಜೊತೆ ಜೊತೆಯಾಗಿ ಓಡಿ ಬರುತ್ತಿತ್ತು.
ಅವಳ ಕಾಲುಗಳೀಗ ಕೊಂಚ ನಿಧಾನವಾಗುತ್ತಿದ್ದವು....ತಾನು ಅಂದುಕೊಂಡ ನಕ್ಷತ್ರವನ್ನು ಹಿಡಿಯಲಾಗುವುದಿಲ್ಲವೇನೋ ಎಂದು ಮನಸ್ಸು ಚಡಪಡಿಸುತ್ತಿತ್ತು. ದೇಹ ವಿಶ್ರಾಂತಿ ಬಯಸುತ್ತಿತ್ತು, ನಕ್ಷತ್ರ ಹಿಡಿಯುವುದರಲ್ಲಿ ಮೊದಲಿದ್ದ ಉತ್ಸಾಹ ಕಡಿಮೆಯಾದಂತಿತ್ತು. ತನ್ನ ಮನಸ್ಸಿನ ಭಾವನೆಗಳಿಗೆ ಮನ್ನಣೆ ಕೊಟ್ಟು ಆಕೆ ಬಹಳ ದಿನಗಳ ನಂತರ ಬಿಡುವು ಮಾಡಿಕೊಂಡು ಪ್ರಪಂಚವನ್ನು ಕಂಡಳು... ಪ್ರಪಂಚವಿಡೀ ತನ್ನನ್ನೇ ನೋಡುತ್ತಿರುವಂತೆ ಅವಳಿಗೆ ಭಾಸವಾಗತೊಡಗಿತು.. ಅವಳ ಕಣ್ಣಿಗೆ ಅಮ್ಮಂದಿರು, ಎಷ್ಟೋ ಭಾವನೆಗಳನ್ನು ತುಂಬಿಕೊಂಡ ಜನರು, ಕನಸುಗಳಿಗಾಗಿಯೇ ಹುಟ್ಟಿದಂತಿರುವ ಮಕ್ಕಳು ಕಂಡರು.. ಆಕೆ ತಲೆಯೆತ್ತಿ ಮೇಲೆ ನೋಡಿದಳು. ಅನಂತವಾದ ದಾರಿಯ ಹೊರತು ಮತ್ತೇನೂ ಕಾಣಲಿಲ್ಲ. ಅವಳ ಕಣ್ಣುಗಳು ಮತ್ತೆ ಮತ್ತೆ ಹೊಳೆದವು.. ಕನಸುಗಳು ತುಂಬಿ ಬಂದಂತಾದವು..ಯಾವ ನಕ್ಷತ್ರ ಹಿಡಿಯಲು ಹೊರಟಿದ್ದಳೋ ಆ `ನಕ್ಷತ್ರ’ವೇ ಅವಳಾಗಿ ಬಿಟ್ಟಿದ್ದಳು....
~ಸುಷ್ಮ ಸಿ೦ಧು
೨೦೦೫ ರಲ್ಲಿ ಬ೦ದು, ದಾಖಲಿಸಿರುವ 'ಕನಸು'.
very recently published - http://www.kendasampige.com/article.php?id=1221
Many thanx for all comments & votes @kendasamige.
(image courtesy-web)
7 comments:
ಕನಸು ಸ್ವಾರಸ್ಯಕರವಾಗಿದೆ.
ಚಿತ್ರ ಕೂಡ ಅಷ್ಟೇ significant ಆಗಿದೆ.
ಕನಸಿಗೆ ಹಿಡಿದ ಕನ್ನಡಿಯಂತಹ ಚಿತ್ರ.
ಸುಷ್ಮ ಸಿಂಧು ಅವರೆ,
ನಿಮ್ಮ ಕನಸು ತುಂಬಾ ಚೆನ್ನಾಗಿದೆ.
ನನಗೆ ಬಿದ್ದ ಕನಸುಗಳನ್ನು ನಾನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಎಲ್ಲಾ ಕನಸುಗಳು ಜ್ಞಾಪಕದಲ್ಲಿರೋದಿಲ್ಲ.
ಹಾಯ್,
ಧನ್ಯವಾದಗಳು ಸುನಾಥ್ ಕಾಕಾ
@ಅ೦ತರ್ವಾಣಿ
Thank you. ಎಲ್ಲಾ ಕನಸುಗಳು ನನಗೂ ನೆನಪಿರೋಲ್ಲ. ಆದರೆ ಈ ರೀತಿಯ ಕನಸುಗಳು ಮಾತ್ರ ಸ್ಪಷ್ಟವಾಗಿ ನೆನಪಿನಲ್ಲುಳಿದಿರುತ್ತವೆ. ಅವೂ ಸ್ವಲ್ಪ ಸಮಯದ ನ೦ತರ or ನ೦ತರದ ಕನಸುಗಳ ಅಬ್ಬರದಲ್ಲಿ ಮರೆತು ಹೋಗುತ್ತವೆ.
abba kanasannu istu chengavagi varnane maadiddira. Nange nidde bittu edda takshana kanasu nenape irodilla :(
..ಯಾವ ನಕ್ಷತ್ರ ಹಿಡಿಯಲು ಹೊರಟಿದ್ದಳೋ ಆ `ನಕ್ಷತ್ರ’ವೇ ಅವಳಾಗಿ ಬಿಟ್ಟಿದ್ದಳು....
entha sundara kanasu! nanu kanuvante madiddakke dhanyavadagalu.
@ LG ಬಹುತೇಕ ಕನಸುಗಳ ವಿಚಾರದಲ್ಲಿ ನ೦ದೂ ಅದೇ ಕೇಸು! ಥ್ಯಾಂಕ್ಸ್:)
@ ಸುಪ್ರಜಾ,
ನನ್ನ ಬಹುತೇಕ ಕನಸುಗಳ ಶೋತೃವಾಗಿರುವುದಕ್ಕೆ, ಸಾಲದೆ೦ಬ೦ತೆ ಅದನ್ನು ನನ್ನ ಅರಿವಿಗೆ ಬರದಂತೆ ಓದಿಯೂ ಪ್ರತಿಕ್ರಿಯಿಸುತ್ತಿರುವುದಕ್ಕೆ ಧನ್ಯವಾದಕ್ಕಿಂತ ಹೆಚ್ಚಿನದೇನಾದರೂ ನನಗೆ ಸಿಕ್ಕರೆ, ಮೊದಲು ಹಾಗು ಎ೦ದಿಗೂ ಅದು ನಿಮಗೇ ಸಲ್ಲುತ್ತದೆ :)
ಸುಷ್ಮ ಸಿಂಧು ಮೇಡಮ್,
ನಿಮ್ಮ ಕನಸು ಸ್ವಾರಸ್ಯವಾಗಿದೆ. ಕಲ್ಪನೆ ಸುಂದರವಾಗಿದೆ.
ಯಾವ ನಕ್ಷತ್ರವನ್ನು ಹಿಡಿಯಲು ಹೊರಟಿದ್ದಳೋ ನಕ್ಷತ್ರವೇ ಅವಳಾಗಿಬಿಟ್ಟಿದ್ದಳು ಪದ ಜೋಡಣೆ ಸುಂದರವಾಗಿದೆ..
Post a Comment