Tuesday, November 25, 2008

ಅಸ್ತಿತ್ವ

ಆ ಸುಂದರ ಪುಷ್ಪ ಗಾಳಿಗೆ ತಲೆದೂಗುತ್ತಾ ತನ್ನೊಡಲ ಕಂಪನ್ನು ತನ್ನ ಸುತ್ತಲೇ ಪಸರಿಸಿಕೊಂಡು ಅನಂದಿಸುತ್ತಿತ್ತು. ಹೀಗೇ ತನ್ನ ಇರುವಿಕೆಯಲ್ಲೇ ಶ್ರೇಷ್ಠತೆಯನ್ನು ಕಂಡುಕೊಂಡ ಹೂವಿನ ಮನಸ್ಸು ತನ್ನನ್ನೆತ್ತಿ ಹಿಡಿದಿರುವ ಗಿಡದತ್ತ ಸೂಕ್ಷ್ಮ ನೋಟ ಬೀರಿತು. ಮತ್ತೆ ತಲೆಯೆತ್ತಿ ವಯ್ಯಾರದಿ೦ದ ನರ್ತಿಸಿತು. ಹೀಗೇ ತಾತ್ಸಾರದಿ೦ದ ಗಿಡವನ್ನು ಗಮನಿಸುತ್ತಾ ಅದು ಹೇಳಿತು, "ನೀನು ನನಗೆ ತುಂಬಾ ವಿಧೇಯನಾಗಿರಬೇಕು. ಏಕೆಂದರೆ ಇವತ್ತು ನೀನು ಈ ಸ್ಥಳದಲ್ಲಿ ನೆಲೆಯೂರಿರುವುದು, ಗುರುತಿಸಲ್ಪಟ್ಟಿರುವುದು ನನ್ನ ಪ್ರಮುಖ ಇರುವಿಕೆಯಿಂದ". ತನ್ನನ್ನು ತಾನೇ ಅಟ್ಟಕ್ಕೆ, ಬೆಟ್ಟಕ್ಕೆ ಏರಿಸುತ್ತಾ ಕೊಂಕು ಮಾತಾಡಿತು. ಗಿಡಕ್ಕೆ ಬಹಳ ಬೇಸರವಾಗಿ ಮಾತುಗಳು ಬಾಯಿಯ ತುದಿಗೆ ಬಂದರೂ ತಕ್ಕ ಸಮಯ ಇದಲ್ಲ ಎಂದು ತನ್ನಲ್ಲೇ ಪದಗಳನ್ನು ನು೦ಗಿಕೊ೦ಡಿತು.
ಬಹಳ ದಿನಗಳು ಹೀಗೇ ಕಳೆದವು.. ಅರಳಿ ನರ್ತಿಸುತ್ತಿದ್ದ ಹೂವಿನ ಲಯ ಎಲ್ಲೋ ತಪ್ಪಿದಂತಾಗಿ, ಒಡಲ ಶಕ್ತಿಯೆಲ್ಲಾ ಎಲ್ಲೋ ಉಡುಗಿ ಹೋದಂತೆ, ತನ್ನ ದೇಹ ತನಗೇ ಭಾರವಾದ೦ತೆ ಭಾಸವಯಿತು. ಎಷ್ಟೋ ದಿನ ತನುಮನವ ರಂಜಿಸುತ್ತಿದ್ದ ಹೂವು ಕೆಲವೇ ಗಂಟೆಗಳಲ್ಲಿ ತನ್ನ ಕಾಲುಗಳಿ೦ದ ಬೇರ್ಪಟ್ಟು ಮಣ್ಣಿನ ನೆಲದ ಮೇಲೆ ದೊಪ್ಪನೆ ಬಿದ್ದು ಬಿಟ್ಟಿತು. ಮತ್ತೆ ಮೇಲೇಳಲಾರದೇ ಅತ್ತಿತ್ತ ಹೊರಳಲಾರದೇ ಗಾಳಿಯ ಆರ್ಭಟಕ್ಕೆ ಬಲಿಯಾಗಿ ತತ್ತರಿಸಲ್ಪತ್ತಿತು. ಜೋರಾಗಿ ರೋದಿಸುತ್ತಾ, "ಅಯ್ಯೋ ನನ್ನ ಕರ್ಮ, ನನ್ನ ಸ್ಥಿತಿ ಯಾರಿಗೂ ಬರದಿರಲಿ.. ಇದೇನಾಗಿ ಹೋಯಿತು..?" ಎನ್ನಲು ಈ ಎಲ್ಲ ಘಟನೆಗಳನ್ನು ಮೌನಧಾರಿಯಾಗಿ ಗಮನಿಸುತ್ತಿದ್ದ ಗಿಡಕ್ಕೆ ಕರುಳು ಚುರ್ರೆ೦ದಿತು. ಅದು ಹೂವಿಗೆ ಹೇಳಿತು, "ನನ್ನ ಸುಂದರ ಪುಷ್ಪವೆ, ಇಲ್ಲಿ ನೋಡು. ನಿನ್ನ ಸ್ಥಾನವನ್ನು ಬೇರೆ ಯಾರೋ ಆಕ್ರಮಿಸಲು ಯತ್ನಿಸುತ್ತಿರುವುದನ್ನು... ನಾನು ನಿನ್ನನ್ನಣುಕಿಸಲು ಹೀಗೆ ಹೇಳುತ್ತಿಲ್ಲ. ಆದರಿದು ಪ್ರಕೃತಿ ನಿಯಮ. ನಮ್ಮ ಶ್ರೇಷ್ಠತೆಗೆ ನಾವೇ ತಲೆದೂಗುತ್ತಾ.., ತೂಗುತ್ತಾ ತಲೆಯೇ ಕಿತ್ತು ಬಿದ್ದರೆ...? ಅ ಸಂಕಟ ಯಾರಿಗೂ ಬೇಡ. ನೀನು ಅಂದು ಹೇಳಿದ ಮಾತು ನಿನ್ನ ಗರ್ವದಿಂದ ಉಧ್ಬವಿಸಿದ್ದು. ಅದಕ್ಕಂದು ಜಂಬದ ಲೇಪವೊ೦ದನ್ನು ಬಿಟ್ಟರೆ ಮತ್ಯಾವ ಅರ್ಥವಾಗಲಿ, ಸತ್ಯಾ೦ಶವಾಗಲೀ ಇರಲಿಲ್ಲ. ಆದರೆ ಇಂದು ಅದೇ ನಿಜವಾಗಿದೆ. ಖ೦ಡಿತ ಇದೀಗ ನೀನೇ ನನ್ನ ಅಸ್ತಿತ್ವಕ್ಕೆ ಕಾರಣಳಾಗಬಲ್ಲೆ.. ನನ್ನ ಇರುವಿಕೆಯನ್ನು ಭದ್ರಪಡಿಸಬಲ್ಲೆ.. ಮತ್ಯಾಕೆ ಈ ವೇದನೆ. ಬಾ ಈ ಕ್ಷಣದಿಂದ ನೀನೇ ನನ್ನ ಸಮರ್ಥ ಇರುವಿಕೆಗೆ ಕಾರಣಳಾಗುವ ಗೆಳತಿ..." ಎನ್ನುತ್ತಾ ತನ್ನ ಪರ್ಣಹಸ್ತವನ್ನು ಚಾಚಿ 'ಪುಷ್ಪ'ವನ್ನು ತನ್ನೆಡೆಗೆ ಸೆಳೆದುಕೊಂಡು ತನ್ನ ಬುಡಕ್ಕೆ ಒರಗಿ ಕೂರಿಸಿ ಸಮಾಧಾನ ಪಡಿಸಿತು. ಅದರ ಜೀವಕ್ಕೆ ಪರಿಪೂರ್ಣತೆ ನೀಡಿತು....
*೨೦೦೬ ರ ಕನಸು
(image courtesy- web)

11 comments:

ಯಜ್ಞೇಶ್ (yajnesh) said...

"ಅಸ್ತಿತ್ವ" ತುಂಬಾ ಸುಂದರವಾಗಿ ಮೂಡಿಬಂದಿದೆ

sunaath said...

ಸುಂದರವಾದ ಕನಸು ಎನ್ನಲೇ?

Santhosh Rao said...

ಎಷ್ಟೊಂದು ಚೆನ್ನಾಗಿದೆ ..

Anonymous said...

'ಇದೀಗ ನೀನೇ ನನ್ನ ಅಸ್ತಿತ್ವಕ್ಕೆ ಕಾರಣಳಾಗಬಲ್ಲೆ.. ನನ್ನ ಇರುವಿಕೆಯನ್ನು ಭದ್ರಪಡಿಸಬಲ್ಲೆ'entha arthavatthada matugalu. nimma kanasugaliga nannade kanasugalagive. mattashtu saravattada kanasugalannu kanalu katuralagiddene.dhanyavadagalu.

ಚಿತ್ರಾ ಸಂತೋಷ್ said...

ವಾಸ್ತವ ಕಲ್ಪನೆಯಲ್ಲಿ ಮೂಡಿಬಂದಾಗ....! ಸೂಪರ್ರು.
ನನ್ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಥ್ಯಾಂಕ್ಸ್ ಕಣ್ರೀ.
-ಪ್ರೀತಿಯಿಂದ,
ಚಿತ್ರಾ

Sushma Sindhu said...

ಹಾಯ್,
@ ಯಜ್ಞೇಶ್, ಸಂತೋಷ್ ಚಿದ೦ಬರ್ , ಸುಪ್ರಜಾ
ತುಂಬಾ ತು೦ಬಾ ಥ್ಯಾಂಕ್ಸ್ :)
@ ಸುನಾಥ್ ಕಾಕಾ, ಕನಸಿನಂತಾ ಪಕ್ಕಾ passive ಪ್ರಕ್ರಿಯೆಯನ್ನು 'ಸುಂದರ'ವೆಂದಾಗ ಅದಕ್ಕೆ ಹೇಗೆ ಪ್ರತಿಕ್ರಯಿಸಬೇಕೋ ಗೊತ್ತೇ ಆಗೋದಿಲ್ಲ! ಧನ್ಯವಾದಗಳು :)
@ ಚಿತ್ರಾರವರೆ . ಇದು ನನಗೆ 'ಕನಸಲ್ಲಿ' ಬಂದ ವಾಸ್ತವ. ಥ್ಯಾಂಕ್ಸ್ :)

Ittigecement said...

ಸುಶ್ಮಾ ಸಿಂಧು.....

ನಿಮ್ಮ ಕನಸು...
ವಾಸ್ತವ ಮನಸಿನಲ್ಲೂ
ಸೊಗಸಾಗಿದೆ....

ಅಭಿನಂದನೆಗಳು....

shivu.k said...

ಮೇಡಮ್, ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಸಂತೋಷವಾಯಿತು. ಹೀಗೆ ಬರುತ್ತಿರಿ....

ಅಸ್ತಿತ್ವ. ಒಂದು ಸುಂದರ ಅರ್ಥಗರ್ಭಿತ ಬರಹ. ಇಂಥವು ನನ್ನ ಕಣ್ಣಿಗ್ಯಾಕೆ ಬೀಳಲಿಲ್ಲವೋ ತಿಳಿಯದು. ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ. ನೀವು ನನ್ನ ಬ್ಲಾಗನ್ನು ಲಿಂಕಿಸಿಕೊಳ್ಳಿ..
ಆಹಾಂ! ನನ್ನ ಮತ್ತೊಂದು ಬ್ಲಾಗುವಿನಲ್ಲಿ ನಿಮಗರಿಯದ ಹೊಸ ಲೇಖನಗಳಿವೆ ಬಿಡುವು ಮಾಡಿಕೊಂಡು ಬನ್ನಿ.
ನನ್ನ ಮತ್ತೊಂದು ಬ್ಲಾಗ್ ವಿಳಾಸ:
http://camerahindhe.blogspot.com/

Sushma Sindhu said...

ಹಾಯ್,
@ ಪ್ರಕಾಶ್ ರವರೆ ಧನ್ಯವಾದಗಳು. ನಿಮ್ಮ ವಿಶ್ವಾಸ ಹೀಗೇ ಇರಲಿ.
@ ಶಿವುರವರೆ, ತುಂಬಾ ಥ್ಯಾಂಕ್ಸ್
ಖಂಡಿತಾ ಲಿ೦ಕಿಸಿಕೊಳ್ಳುವೆ.
ನಿಮ್ಮ ಹೊಸ ಬ್ಲಾಗಿನತ್ತ ಸದ್ಯದಲ್ಲೇ ಬರುತ್ತೇನೆ:)

shivu.k said...

ಸುಷ್ಮಾ ಸಿಂದು ಮೇಡಮ್,
ನೀವು ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದು ಖುಷಿಯಾಯಿತು. ಹೀಗೆ ಬರುತ್ತಿರಿ... ನಾನು ನಿಮ್ಮಂತೆ ಕನಸನ್ನು ಕಾಣಬೇಕಿದೆ. ಅದಕ್ಕಾಗಿ ಬಿಡುವು ಮಾಡಿಕೊಂಡು ಮತ್ತೆ ಬರುತ್ತೇನೆ. ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ.
ಶಿವು.

ಶಾಂತಲಾ ಭಂಡಿ (ಸನ್ನಿಧಿ) said...

ಸುಷ್ಮ ಸಿಂಧು ಅವರೆ...
೨೦೦೬ ರ ಕನಸು ತುಂಬ ಚೆನ್ನಾಗಿದೆ. ಚಂದದ ನೀತಿಯೂ ಇದೆ. ಇಂಥದೊಂದು ಕನಸ ನಮ್ಮ ಮುಂದಿಟ್ಟಿದ್ದಕ್ಕೆ ಧನ್ಯವಾದ.