Tuesday, March 27, 2018

ಕಥೆ : ಗಡಿಯಾರ


                                                        ಕಥೆ :  ಗಡಿಯಾರ...

                                       (ತುಷಾರದಲ್ಲಿ ಪ್ರಕಟಿತ)

         ಗಂಟೆ ಬೆಳಗಿನ ಜಾವ ೫ ಆಗುತ್ತಿತ್ತು. ಗಡಿಯಾರದ ದೊಡ್ಡ ಮುಳ್ಳು ೧೧ ರಿಂದ ೧೨ರ ಮಧ್ಯೆ ಸಿಕ್ಕಿಕೊಂಡು ಪಜೀತಿ ಪಡುತ್ತಿತ್ತು. ನಾನು ಮತ್ತೆ ಒಂಟಿಯಾಗಿಬಿಡುವೆನೇ?’ ಹಿರಿಯಣ್ಣನ ಮನದಲ್ಲೆಲ್ಲಾ ಅದೇ ತಳಮಳ!

    ಉಯ್ಯಾಲೆಯ ಜುಯ್ ಜುಯ್.. ಶಬ್ದ ಬೆಳಗಿನ ನೀರವತೆಯಲ್ಲಿ ದೊಡ್ಡದಾಗಿ ಕೇಳುತ್ತಿತ್ತು. ಬ್ರಹ್ಮಾಂಡವನ್ನೆಲ್ಲಾ ಆವರಿಸಿದಂತೆ. ಉಯ್ಯಾಲೆಯ ಕೀರಲು ದನಿಯನ್ನು ಕೇಳಲೆಂದೇ ಬೆಳಗೆದ್ದು ಕುಳಿತವನಂತೆ ಮೇಲೆ ಆಸೀನನನಾಗಿದ್ದ ಹಿರಿಯ ಜೀವ ಹಿರಿಯಣ್ಣ ತದೇಕಚಿತ್ತದಿಂದ ಗಡಿಯಾರವನ್ನೇ ನಿರುಕಿಸುತ್ತಿದ್ದ. ಸುಮಾರು ೨೫ ವರ್ಷಗಳಷ್ಟು ಹಳೆಯ ಗಡಿಯಾರ. ಅವನ ಬದುಕಿನ ಒಳ್ಳೆಯ ಸಮಯ, ಕೆಟ್ಟ ಸಮಯಗಳನ್ನು ಹತ್ತಿರದಿಂದ ಕಂಡ ಗಡಿಯಾರ. ಏನೇ ಆದರೂ ತನ್ನ ಕರ್ತವ್ಯವನ್ನು ಮರೆಯದೇ ಸಮಯದ ಪರಿಪಾಲನೆ ಮಾಡುತ್ತಿದ್ದ ಗಡಿಯಾರ. ಒಂದು ಕ್ಷಣ ಅನಿಸಿತವನಿಗೆ: ಈ ಗಡಿಯಾರದಂತಿರಬೇಕು. ಒಳ್ಳೆಯ ಸಮಯಕ್ಕೆ ಕಾಯದೇ ಕೆಟ್ಟ ಸಮಯವೆಂದು ದೂರದೇ, ಸುಮ್ಮನೇ ಕರ್ತವ್ಯ ಪರಿಪಾಲನೆ ಮಾಡಿಕೊಂಡು.. ಕೆಟ್ಟ ಎಂಬ ಪದ ಪ್ರಯೋಗದಿಂದಲೇ ಅವನ ಹೃದಯ ಜೋರಾಗಿ ಡುಬುಡುಬು ಹೊಡೆದುಕೊಳ್ಳಲಾರಂಭಿಸಿತು. ನೇವರಿಸಿ ಸಮಾಧಾನ ಪಡಿಸಿದ ಅಂಥದ್ದೇನೂ ಆಗುತ್ತಿಲ್ಲ..ಆದರೂ ಏನೋ ತಳಮಳ. ಎಷ್ಟಾದರೂ ೮  ವರ್ಷದ ನಂಟು. ಅಷ್ಟು ಸುಲಭಕ್ಕೆ ಸುಮ್ಮನಿರಲಾಗದು! ಇಂದು ಶ್ಯಾಮಿ ಹೊರಟುಬಿಡುವನು! ಹೋಗಲೇ ಬೇಕಲ್ಲವೇ? ಶ್ಯಾಮಿ ಪುಟ್ಟ ಮಗು. ತಂದೆತಾಯಿ ಹೊರಟಲ್ಲಿಗೆ ಹೋಗಲೇ ಬೇಕು. ಆದರೂ.. ಶ್ಯಾಮಿ ಹೊರಟೇ ಬಿಡುವನಲ್ಲವೇ?!

 ಮತ್ತೆ ಹೃದಯದ ಹೊಡೆತ ಜೋರಾಯಿತು: ಅಂಥದ್ದೇನೂ ಆಗಿಲ್ಲ.. ಹಿರಿಯಣ್ಣನ ಸಮಾಧಾನ! ಎಷ್ಟಾದರೂ ಮುಂದಿನ ದಿನಗಳು ಹಿಂದಿನ ದಿನಗಳಂತಿರುವುದಿಲ್ಲವಲ್ಲವೇ! ತನಗೋಸ್ಕರ ಓಡೋಡಿ ಬರುವವರ್‍ಯಾರು? ತನ್ನ ಕಟ್ಟುಕಥೆಗಳನ್ನು ಕಿವಿ ನಿಮಿರಿಸಿ ಕೇಳುವ ಕಿವಿಗಳು ಮತ್ತೆ ಸಿಗುವವೇ..? ಮತ್ತೆ ತಾನು ಒಂಟಿ ಎನಿಸಿಬಿಟ್ಟರೆ? ಛೇ ಛೇ ಇದೇನು ನಾನೇನು ಜೀವನವನ್ನೇ ನೋಡಿಲ್ಲವೇ? ಅದಾಗಲೇ ೮೦ ದಾಟುತ್ತಿದೆ. ಕಳೆದು ಹೋದರೆ ಎಂದು ಹೆದರಿದ್ದೆಲ್ಲಾ ಕಳೆದು ಹೋಗಾಗಿದೆ. ಮತ್ತೆ ಕಳೆದುಕೊಳ್ಳುವ ಭಯವೇ! ಎಷ್ಟು ರೋದಿಸಿ, ಆತಂಕಿಸಿದ್ದರೂ ಅದರ ಅಭ್ಯಾಸವೇ ಆಗದೇ ಈ ಮನಸ್ಸಿಗೆ? ಮತ್ತೆಮತ್ತೆ ಭೀತಿ, ಮತ್ತೆಮತ್ತೆ ರೋದನೆ.. ಹಾಳು ಮನಸ್ಸು.. ಗಟ್ಟಿಯಾಗಬೇಕು ಇನ್ನಾದರೂ.. ಮಣ್ಣು.. ಇನ್ನೆಂತಹ ಗಟ್ಟಿ! ದೇಹ ಗಟ್ಟಿಯಿದ್ದಾಗಲೇ ಟೊಳ್ಳುಟೊಳ್ಳಾಗಿ ಕಾಡಿದ ಮನಸ್ಸು ಈಗ ಗಟ್ಟಿಯಾಗಿಬಿಟ್ಟೀತೇ..?! ಛೇ ಈ ಶ್ಯಾಮಿಯನ್ನು ಇಷ್ಟು ಹಚ್ಚಿಕೊಂಡಿದ್ದಾದರೂ ಯಾಕೋ. ಅವನೇನು ನನ್ನ ಮೊಮ್ಮಗನೇ. ಪಕ್ಕದ ಮನೆಯ ಹುಡುಗನದು. ನಂದೇ ತಪ್ಪು.. ಹ್ಞೂಂ.. ಆದರೂ.. ಶ್ಯಾಮಿ ನಾನಿಲ್ಲದೇ ಆರಾಮವಾಗಿದ್ದುಬಿಡುವನೇ? ನನ್ನ ನೆನಪು ಅವನಿಗಿರುವುದೇ? ಅವನು ಹೋದ ಮೇಲೆ ನಾನು ಆರಾಮವಾಗಿರುವೆನೇ? ಯಾಕೋ ಉಯ್ಯಾಲೆಯ ಮೇಲೆ ಝೋಂಪು ಬಂದಂತಾಗಿ ಪಕ್ಕದ ಸೋಫಾದ  ಮೇಲೆ  ಹೋಗಿ ಕುಳಿತು ನಿಡುಸುಯ್ದ ಹಿರಯಣ್ಣ...

   ಹಿರಿಯಣ್ಣ ಹಿರಿಯಣ್ಣನ ಅಸಲಿ ಹೆಸರಲ್ಲ.. ಹಿರಣ್ಣಯ್ಯ ಎಂಬ ಮೂಲ ನಾಮ ಅಸ್ತವ್ಯಸ್ತವಾಗಿ ಹಿರಿಯಣ್ಣನಾಗಿತ್ತು. ಮನೆಯಲ್ಲಿ ಹಿರಿಯನಾದುದರ ಬಳವಳಿ. ಸದ್ಯಕ್ಕೆ ಹಿರಿಯಣ್ಣನ ಹಿರಿತನವನ್ನು ಗೌರವಿಸುತ್ತಾ ಪ್ರೀತ್ಯಾದರಗಳಿಂದ ಹಿರಿಯಣ್ಣನೆಂದು ಸಂಭೋದಿಸುವ ತನ್ನ ತಲೆಮಾರಿನವರ ಸಂಖ್ಯೆ ಕ್ಷೀಣಿಸುತ್ತಾ ಬಂದಿದ್ದರೂ ಹೊಸಬರ ಪಾಲಿಗೆ ಆತ ಮಾತ್ರ ಹಿರಿಯಣ್ಣನಾಗೇ ಉಳಿದಿದ್ದ. ಜೀವನದ ಬಹಳಷ್ಟು ದಿನಗಳನ್ನು ಒಂಟಿಯಾಗೇ ಕಳೆದಿದ್ದ ಹಿರಿಯಣ್ಣ ಕಡೆಗೊಂದು ದಿನ ಮದುವೆಯಾದ. ಹೆಂಡತಿ ಇರುವಷ್ಟೂ ದಿನ ಮಕ್ಕಳಿಲ್ಲವೆಂದು ಕೊರಗಿದ್ದೇ ಆಯಿತು. ಕಡೆಗೊಂದು ದಿನ ಹೆಂಡತಿಯೂ ಇಲ್ಲವಾಗಿ ಜೀವನ ಅದೆಷ್ಟು ವಿಚಿತ್ರವೆನಿಸಿಬಿಟ್ಟಿತ್ತು. ಹಿರಣ್ಣಯ್ಯನ ಒಂಟಿತನ ಹೆಚ್ಚು ದಿನ ಕಾಡದಂತೆ ಅವನಿಗಾಗೇ ಭೂಮಿಯ ಮೇಲೆ ಅವತರಿಸಿದ್ದು ಶ್ಯಾಮ! ತನ್ನ ಮನೆಗೆ ಅಂಟಿಕೊಂಡಂತೆ ಬೆಳೆದುನಿಂತಿದ್ದ ನೆರೆಮನೆಯ ಮಗು. ಶ್ಯಾಮನಿಗೆ ಹುಟ್ಟಿನೊಂದಿಗೇ ಬಂದದ್ದು ಯಾವುದೋ ಉಚ್ಚರಿಸಲಾಗದ ಅನಾರೋಗ್ಯ ಸಮಸ್ಯೆ! ಅದರಿಂದ ಕಾಲುಗಳು ಶಕ್ತಿಹೀನವಾಗಿ ಹೆಜ್ಜೆಯೂರಲೂ ಮಗು ಬಹಳ ಕಷ್ಟ ಪಟ್ಟಿತು. ಸಾಕಷ್ಟು ಶುಶ್ರೂಷೆಯ ನಂತರ ತನ್ನ ಕಾಲ ಮೇಲೆ ತಾನು ನಿಲ್ಲುವ ಶಕ್ತಿ ತೆಗೆದುಕೊಂಡಿತ್ತು. ಎಷ್ಟೆಂದರೂ ಆಗಷ್ಟೇ ಶಕ್ತಿ ಪಡೆದುಕೊಳ್ಳುತ್ತಿದ್ದ ಕಾಲುಗಳು, ನೇರವಾಗಿ ಧೃಢವಾಗಿ ನಿಲ್ಲದೆ ಆಚೀಚೆ ಹೊಯ್ದಾಡುತ್ತಾ ದೇಹವನ್ನು ಬ್ಯಾಲೆನ್ಸ್ ಮಾಡುತ್ತಿದ್ದವು. ಇದೇ ಸ್ಥಿತಿ ಮುಂದುವರೆದಿದ್ದರಿಂದ ಆಗ ಎದುರು ಮನೆಯಲ್ಲಿದ್ದ ಕೊಂಕು ಬುದ್ಧಿಯ ನಂಜಯ್ಯ ಶ್ಯಾಮಿಗೆ ಸೊಟ್ಟ ಶ್ಯಾಮಿ ಎಂದು ಅಡ್ಡ ಹೆಸರು ಇಟ್ಟು ಬಿಟ್ಟಿದ್ದ! ಶ್ಯಾಮ ಕೂತರೂ, ಕದಲಿದರೂ ಅವನ ಹೆತ್ತಮ್ಮನ ಬಿಟ್ಟರೆ ಅತಿ ಹೆಚ್ಚು ಸಂತೋಷ ಪಡುತ್ತಿದ್ದವನು ಹಿರಿಯಣ್ಣನೇ ಇರಬೇಕು. ಶ್ಯಾಮ ಹಿರಿಯಣ್ಣನ ಪಾಲಿಗೆ ಶ್ಯಾಮಿಯಾಗಿದ್ದ. ನಂತರ ಅವನಮ್ಮನೂ ಮಗನನ್ನು ಶ್ಯಾಮಿಯೆಂದೇ ಕರೆದು ಆನಂದಿಸಿದ್ದರಿಂದ ಊರಿಗೆಲ್ಲಾ ಶ್ಯಾಮ ಶ್ಯಾಮಿಯೇ ಆಗಿಹೋದ.

   ಹಿರಿಯಣ್ಣನಿಗೆ ಶ್ಯಾಮಿ ಬಟ್ಟಲುಗಣ್ಣು ಬಿಡುತ್ತಾ ಬೊಚ್ಚು ಬಾಯಿಯಲ್ಲಿ ನಗುತ್ತಿದ್ದರೆ ಊರಿನ ಆನಂದವೆಲ್ಲಾ ಆ ಮಗುವಿನ ಮುಖದಲ್ಲೇ ಇದೆಯೇನೋ ಎನಿಸುತ್ತಿತ್ತು. ಸಾಕಷ್ಟು ದಿನ ಕಾಲೂರಲೂ ಬಾರದೇ ತೆವಳುತ್ತಲೇ ಅಲೆಯುವ ಸ್ಥಿತಿ ಮಗುವಿಗಿದ್ದರೂ ಅದರ ಉತ್ಸಾಹಕ್ಕೆ ಯಾವ ಚ್ಯುತಿಯೂ ಬಂದಿರಲಿಲ್ಲ. ಅದರಮ್ಮ ಮಗುವಿನ ಬೆಳವಣಿಗೆ ಕಂಡು, ಭವಿಷ್ಯ ನೆನೆದು ಕಣ್ಣೀರು ಹಾಕಿ ಕೂತಿದ್ದರೆ ಶ್ಯಾಮಿ ಮಾತ್ರ ಫಳಫಳ ಕಣ್ಣು ಹೊಳೆಸುತ್ತಾ ಜ್ಞಾನಿಯಂತೆ ಗಹಗಹಿಸಿ ನಗುತ್ತಿತ್ತು! ಹಿರಿಯಣ್ಣನ ಪಾಲಿಗೆ ಶ್ಯಾಮಿ ಪ್ರಪಂಚದಲ್ಲಿ ಹತ್ತಿರದಿಂದ ನೋಡಿದ್ದ, ಸಾಕಿದ್ದ ಮೊದಲ ಮಗುವಾಗಿತ್ತು. ಅದೆಷ್ಟೋ ಬಾರಿ ಶ್ಯಾಮಿಯ ಒಡನಾಟದಲ್ಲಿ ತಾನನುಭವಿಸಿದ ಖುಷಿಯನ್ನು ಪತ್ನಿಯೂ ಅನುಭವಿಸಿ ಹೋಗಿದ್ದರೆ ಅದೆಷ್ಟು ಚಂದವಿತ್ತು ಎನಿಸುತ್ತಿತ್ತು. ಶ್ಯಾಮಿಯ ಒಡನಾಟ ಹಿರಿಯಣ್ಣನನ್ನು ಆ ಕೊರಗಿನಲ್ಲೇ ಕಳೆದುಹೋಗಲು ಬಿಟ್ಟಿರಲಿಲ್ಲ.

ಶ್ಯಾಮಿ ಸುಮಾರು ೫ ವರ್ಷದವನಿದ್ದಾಗ ತಕ್ಕ ಮಟ್ಟಿಗೆ ನಡೆಯಲಾರಂಭಿಸಿತ್ತು. ಅಂದಿನಿಂದ ಹಿರಿಯಣ್ಣನಿಗೆ ವಾಕಿಂಗ್‌ಗೆ ಹೊಸ ಜೊತೆಗಾರ ಸಿಕ್ಕಂತಾಗಿತ್ತು. ಶ್ಯಾಮಿಯ ಕಾಲುಗಳು ನಿಯಂತ್ರಣ ಕಂಡುಕೊಳ್ಳುವ ಪ್ರಯತ್ನದಲ್ಲಿ ಜೋರಾಗೇ ನೆಲವನ್ನು ಬಡಿಯುತ್ತಿದ್ದವು. ಇನ್ನು ಹೊರ ಹೋಗುವಾಗ ಹಾಕಿದ ಶೂ ನೆಲಕ್ಕೆ ಬಡಿದು ಟಪ್‌ಟಪ್ ಎಂದಂದು ನಾದ ಹೊರಡಿಸುತ್ತಿತ್ತು. ಅದರ ನಾದಕ್ಕೆ ಜೊತೆಯಲ್ಲೇ ನಡೆಯುತ್ತಿದ್ದ ಹಿರಿಯಣ್ಣನ ಹಳೆಯ ಊರುಗೋಲೂ ಟಕ್‌ಟಕ್ ಎನ್ನುತ್ತಾ ಸಾಥ್ ನೀಡುತ್ತಿದ್ದರೆ ಅವರಿಬ್ಬರ ವಾಕಿಂಗ್‌ಗೆ ಹಿಮ್ಮೇಳದಂತೆ ಭಾಸವಾಗುತ್ತಿತ್ತು!. ಶ್ಯಾಮಿ ಹಿರಿಯಣ್ಣರು ಟಪ್-ಟಕ್ ನಾದಗಳನ್ನು ಹೊಮ್ಮಿಸುತ್ತಾ ನಡೆಯುತ್ತಿದ್ದರೆ ಎದುರಿನ ಅಂಗಡಿ ಮನೆಯ ನಂಜಯ್ಯನ ವ್ಯಂಗ್ಯ ತಾರಕಕ್ಕೇರಿ ವಿಚಿತ್ರಾಕೃತಿಯಲ್ಲಿ ಬಾಯಿ ಮಾಡಿ ನಗುತ್ತಿದ್ದ. ಹಿರಿಯಣ್ಣನ ಕೋಪಕ್ಕೆ ಹೆದರಿ ಅವನ ನಗುವಿನ ಸದ್ದು ಕಡಿಮೆಯಾಗಿತ್ತಾದರೂ ಅದರೊಳಗಿನ ವಿಕಾರ, ವ್ಯಂಗ್ಯಕ್ಕೆ ಯಾವ ಚ್ಯುತಿಯೂ ಬಂದಿರಲಿಲ್ಲ. ಮುಂದೆ ಆತ ಮನೆ ಖಾಲಿ ಮಾಡಿದಾಗ ಅತ್ಯಂತ ಹರ್ಷಿಸಿದ್ದು ಹಿರಿಯಣ್ಣ.

ಆದರೆ ಯಾರೇನೇ ಅನ್ನಲಿ ಹಿರಿಯಣ್ಣ-ಶ್ಯಾಮಿ ಮಾತ್ರ ಮುನ್ನಡೆಯುವುದನ್ನು ನಿಲ್ಲಿಸಿರಲಿಲ್ಲ. ಎಡಬಿಡದೇ ನಡೆದಿದ್ದರಿಂದಲೋ ಏನೋ ವರ್ಷ ಉರುಳುವಷ್ಟರಲ್ಲಿ ಶ್ಯಾಮಿಯ ಕಾಲುಗಳು ಟಪ್ಪಟಪ್ಪನೆ ನಡೆಯುವುದರಲ್ಲೇ ಲಯ ಕಂಡುಕೊಳ್ಳಲಾರಂಭಿಸಿದ್ದವು. ಸೊಟ್ಟ ಶ್ಯಾಮಿಯೆಂಬ ಅಡ್ಡನಾಮದಿಂದ ಮುಕ್ತಿಗೊಳ್ಳುವ ಸಾಧ್ಯತೆ ಅವಕ್ಕಿರಲಿಲ್ಲವಾದರೂ ತಮ್ಮ ವಿಶಿಷ್ಟಾಕೃತಿಯಲ್ಲೇ ತಕ್ಕ ಮಟ್ಟಿಗೆ ಶಕ್ತಿ ತುಂಬಿಕೊಂಡವು! ಮಗುವಿನಮ್ಮನ ಮುಖದಲ್ಲಿ ಸಮಾಧಾನದ ನಗು ಮೂಡಿತ್ತು.

ಸೋಫಾ ಮೇಲೆ ತಲೆಯಾನಿಸಿದ್ದ ಹಿರಿಯಣ್ಣ ಮತ್ತೆ ಗಡಿಯಾರ ನಿರುಕಿಸಿದ. ಆಗಲೇ ೬.೩೦ ದಾಟುತ್ತಿತ್ತು. ದೊಡ್ಡ ಮುಳ್ಳು ೬-೭ರ ನಡುವೆ ಸಿಕ್ಕಿಕೊಂಡಿತ್ತು! ನಾನು ಮತ್ತೆ ಒಂಟಿಯಾಗಿಬಿಡುತ್ತೇನೆಯೇ? ಮನಸ್ಸು ಒದ್ದಾಡಿತು.
ಶ್ಯಾಮಿಯ ತಂದೆಗೆ ವರ್ಗಾವಣೆಯಾಗಿತ್ತು. ಅವರು ಅಂದು ಊರು ತೊರೆಯುವರಿದ್ದರು. ಇನ್ನೂ ದೊಡ್ಡ, ಹೆಚ್ಚು ಸೌಕರ್ಯವಿರುವ ಊರು. ಶ್ಯಾಮಿಯಮ್ಮನ ಪ್ರಕಾರ ಶ್ಯಾಮಿಯೊಳಗೇನಾದರೂ ಪ್ರತಿಭೆ ಅಡಗಿ ಕೂತಿದ್ದರೆ ಅದನ್ನು ಹೊರಗೆಳೆದು ಪೋಷಿಸುವ ಊರು. ಹೊಸ ಊರಿಗೆ ಹೊಸ ಹುರುಪಿನಲ್ಲಿ ಹೊರಟ ತಾಯಿ, ಮಗುವನ್ನೂ ಮಾನಸಿಕವಾಗಿ ಸಿದ್ಧಪಡಿಸುತ್ತಿದ್ದಳು. ಅವಳ ಉತ್ಸಾಹದ ನಡುವೆಯೂ ಹಿರಿಯಣ್ಣನನ್ನು ತೊರೆಯುವ ನೋವಿನ ಭಾವವೂ, ಅಸಹಾಯಕತೆಯೂ ಇಣುಕುತ್ತಿತ್ತಾದರೂ ಹೋಗಬೇಕೆನ್ನುವ ಅದಮ್ಯ ಆಕಾಂಕ್ಷೆಯ ಮುಂದೆ ಮಂಕಾಗಿದಂತೆನಿಸುತ್ತಿತ್ತು. ನನ್ನನ್ನು ತೊರೆಯಲು ಆ ಹುಡುಗಿ ದುಃಖ ಪಡಬೇಕು ಎಂದು ನಾನೇಕೆ ಬಯಸಬೇಕು. ಅವಳೇನು ನನ್ನ ಮಗಳೇ? ಸಮಾಧಾನ ಪಟ್ಟುಕೊಳ್ಳಲು ಹಿರಿಯಣ್ಣ ಹೇಳಿಕೊಂಡ ಮಾತುಗಳು ಮತ್ಯಾವುದೋ ನೆನಪನ್ನು ಹೊಡೆದೆಬ್ಬಿಸಿ ಮತ್ತಷ್ಟು ಅಸಮಾಧಾನಗೊಳಿಸಿದವು!

ಇತ್ತೀಚೆಗೆ ಶ್ಯಾಮಿ ಸಾಮಾಜಿಕ ವಿಷಯಗಳನ್ನು ಕೇಳಿ-ಹೇಳುವಷ್ಟು ಮಾತು ಕಲಿತು ಬಿಟ್ಟಿದ್ದ. ಒಮ್ಮೆ ಹಾಗೇ ವಾಕಿಂಗು ಮಾಡುವಾಗ ಶ್ಯಾಮಿಯಿಂದ ಬಂದ ಧಿಡೀರ್ ಪ್ರಶ್ನೆ, “ತಾತ ನೀನೇಕೆ ಒಬ್ಬನೇ ಇದ್ದೀಯ.”
ಹಿರಿಯಣ್ಣನೆಂದ, “ನಾನೆಲ್ಲಿ ಒಬ್ಬನೇ ನೀನಿದ್ದೀಯಲ್ಲಾ”
ಶ್ಯಾಮಿಯ ಉತ್ತರ, “ನಾನು ನಿನ್ನ ಪಕ್ಕದ ಮನೆಯಲ್ಲಿರುವುದು ತಾನೇ?
“ಆದರೇನು. ನನ್ನನ್ನು ಚೆನ್ನಾಗಿ ನೊಡಿಕೊಳ್ಳುವೆ, ಜೊತೆಯಿರುವೆ”
“ಅಯ್ಯೋ ಹಾಗಲ್ಲ ತಾತ. ನಾನು ಹೊಸ ಮನೆಗೆ ಹೋದಮೇಲೆ ನಿನ್ನೊಡನೆ ಯಾರಿರುತ್ತಾರೆ?
“ಹ್ಞ್ಂ..ಒಂದು ಕೆಲಸ ಮಾಡೋಣ ನನ್ನನ್ನೂ ನಿನ್ನ ಜೊತೆಗೇ ಕರೆದುಕೊಂಡು ಹೋಗು... ನಿನ್ನ ಹೊಸ ಮನೆಗೆ.”

  ಅಲ್ಲಿಗೆ ಶ್ಯಾಮಿಯ ಗಮನ ಮತ್ತೆಲ್ಲೋ ಹೊರಳಿ ಸಂಭಾಷಣೆ ಮುಗಿದಿತ್ತು. ಹಿರಿಯಣ್ಣನ ಮನಸ್ಸಿನ ತಲ್ಲಣ ಶುರುವಾಗಿತ್ತು. ಶ್ಯಾಮಿ ಹೊರಟು ಹೋಗುತ್ತಾನೆ ಎಂಬ ಸತ್ಯ ಮೊದಲ ಬಾರಿಗೆ ತೀವ್ರವಾಗಿ ಕಾಡಿದ್ದು ಆಗಲೇ. ಶ್ಯಾಮಿಯೊಡನೆ ತನ್ನ ಬದುಕು ಅಷ್ಟೊಂದು ಬೆಸೆದುಕೊಂಡಿದೆ ಎನಿಸಿದ್ದೂ ಆಗಲೇ. ಪ್ರತನಿತ್ಯ ಶಾಲೆಗೆ ಹೋಗುವ ಮೊದಲೊಮ್ಮೆ ಹಿರಿಯಣ್ಣನ ಮನೆಯೊಳಗೆ ಅಡ್ಡಾಡಿ, ಇಷ್ಟುಟ್ಟದ್ದ ಕಷ್ಟಸುಖಗಳನ್ನು ಪಟ್ಟಿ ಮಾಡಿಟ್ಟು ಹೋಗುತ್ತಿದ್ದ ಹುಡುಗ ಮತ್ತೆ ೪ಕ್ಕೆ ಪ್ರತ್ಯಕ್ಷವಾಗಿಬಿಡುತ್ತಿತ್ತು. ಒಮ್ಮೊಮ್ಮೆ ಅವನಮ್ಮ ಏನೆಂದುಕೊಂಡಾಳು ಎಂದು ತಾನೇ ಬಲವಂತ ಮಾಡಿ ಕಳಿಸುವ ಪರಿಸ್ಥಿತಿ! ಕ್ಕೆ ಬಂದ ಶ್ಯಾಮಿಗೆ ಒಂದಷ್ಟು ಪಾಠ, ನಂತರ ಆಟ-ಕಥೆಗಳು. ಓರಿಗೆಯ ಮಕ್ಕಳೊಂದಿಗೆ ಆಡಲು ಶ್ಯಾಮಿ ಅಷ್ಟೇನು ಮನಸ್ಸು ಮಾಡುತ್ತಿಲ್ಲವೆಂಬುದು ಅವನಮ್ಮನ ಕಳವಳಕ್ಕೆ ಕಾರಣವಾಗಿತ್ತಾದರೂ ಮಗನನ್ನು ಹಿರಿಯಣ್ಣನಿಗೆ ಒಪ್ಪಿಸಿ ಅವಳೂ ನಿರಾಳವಾಗೇ ಇದ್ದಳು...

      ಮನೆಯ ಕಾಲಿಂಗ್ ಬೆಲ್ ಸದ್ದಿಗೆ ಓಗೊಟ್ಟು ಹಿರಿಯಣ್ಣ ಮೇಲೆದ್ದ. ಬಾಗಿಲಲ್ಲಿ ಸಾವಿತ್ರಿ. ಮನೆಯ-ಹಿರಯಣ್ಣನ ಜವಾಬ್ದಾರಿ ನೋಡಿಕೊಳ್ಳುವ ತಾಯಿ. ಎಂದಿನಂತೆ ಅಣ್ಣಾ..ಎನ್ನುತ್ತಾ ಸರಸರನೆ ಒಳಬಂದವಳೇ ಗಡಿಯಾರವನ್ನು ನೋಡುತ್ತಾ ಅಯ್ಯೋ ಎಂಟೂ ಕಾಲೇ. ಕೆಲಸ ನಿಧಾನವಾಯ್ತು ಇವತ್ತುಎಂದು ಹಿರಿಯಣ್ಣನ ಯಾವ ಪ್ರತಿಕ್ರಿಯೆಗೂ ಕಾಯದೇ ಒಳ ನಡೆದಳು. ಅವಳೊಡನೆ ಹಿರಿಯಣ್ಣನೂ ಗಡಿಯಾರ ನಿರುಕಿಸಿದ. ದೊಡ್ಡ ಮುಳ್ಳು ೨-೩ ರ ನಡುವೆ ಒದ್ದಾಡುತ್ತಿತ್ತು! ಒಬ್ಬನೇ ಮುಂದೇನು ಮಾಡಲಿ? ಮತ್ತೆ ಪ್ರಶ್ನೆಗಳು..

     ಸಾವಿತ್ರಿ ಸಾಕಷ್ಟು ವರ್ಷದಿಂದ ಮನೆಗೆ ಬರುತ್ತಿದ್ದಳು. ಅವಳೆಂದರೆ ಹಿರಿಯಣ್ಣನಿಗೆ ಏನೋ ಅಕ್ಕರೆ. ಅವಳ ಮಕ್ಕಳ ಓದು-ಬರಹಕ್ಕೆ ಸಹಾಯ ಮಾಡುತ್ತಾ ಅವರ ಪ್ರಗತಿ ಕೇಳಿ ತಿಳಿದು ಖುಷಿ ಪಡುವುದರಲ್ಲಿ ಆನಂದ. ಒಮ್ಮೊಮ್ಮೆ ಅವಳ ಗಂಡನೂ ಮನೆಗೆ ಬರುವನು. ಕೆಟ್ಟು ಕೂತ ನಲ್ಲಿ, ಓಡದ ಫ್ಯಾನುಗಳ ಜವಾಬ್ದಾರಿ ಅವನದ್ದು. ಊರಿನ ಮಾತನ್ನೆಲ್ಲಾ ಸಾವಿತ್ರಿಯೇ ಆಡುತ್ತಿದ್ದರೆ ಊರಿನ ನಗೆಯೆಲ್ಲಾ ಅವಳ ಗಂಡನ ಮುಖದ ಮೇಲೆಯೇ ಇರುತ್ತಿತ್ತು. ಅವನ ಬಾಯಿ ಹೆಚ್ಚೇ ಅಗಲವಿದ್ದುದರಿಂದಲೋ ಏನೋ ಅವನು ಸುಮ್ಮನಿದ್ದರೂ ನಗುವಿನ ಛಾಯೆ ಮುಖದ ಮೇಲೆ ಕಾಣುತ್ತಿದ್ದಿರಬಹುದು ಎಂಬುದು ಹಿರಿಯಣ್ಣನ ಊಹೆ. ಸಾವಿತ್ರಿಯ ಮಾತುಗಳಿಂದ ತಪ್ಪಿಸಿಕೊಳ್ಳಲು ಮನುಷ್ಯ ಮಾತ್ರದವರಿಂದ ಸಾಧ್ಯವಿರಲಿಲ್ಲ. ಎಷ್ಟೇ ಸ್ಥಿತಿವಂತರಿರಲಿ, ಜ್ಞಾನವಂತರಿರಲಿ ಅವರಿಗೆ ಸಂಬಂಧಿಸಿದ್ದು ಏನಾದರೊಂದಿದ್ದರೆ ಸಾಕು ಸಾವಿತ್ರಿಯ ಮಾತೇ ಮಾತು, ನ್ಯಾಯವೇ ನ್ಯಾಯ.. ಅನಿಸಿದ್ದನ್ನೆಲ್ಲಾ ಒಳಗಿಡದೇ ಹೇಳಿಬಿಡುವುದರಿಂದಲೋ ಏನೋ ಅವಳೊಳಗೆ ಕಪಟ ಉಳಿದಿಲ್ಲ ಎಂಬುದು ಹಿರಿಯಣ್ಣನ ಅಭಿಪ್ರಾಯವಾಗಿತ್ತು. ಇನ್ನು ಸಾವಿತ್ರಿಗೂ ಶ್ಯಾಮಿಯ ಮೇಲೆ ಏನೋ ಕಾಳಜಿ. ಶ್ಯಾಮನ ಮುಗ್ಧತೆ ಅವಳ ಮನಕಲಕ್ಕಿದ್ದಕ್ಕಿಂತ ಅವನ ಅಶಕ್ತ ಕಾಲುಗಳು ಅವಳ ಕರುಣೆಯನ್ನು ಜಾಗೃತಗೊಳಿಸಿದ್ದು ಹೆಚ್ಚು. ಶ್ಯಾಮಿಯ ಮನೆಯವರು ಮನೆ ಖಾಲಿ ಮಾಡುವ ಸುದ್ಧಿಯನ್ನು ಅವರಿಗಿಂತಲೂ ಮೊದಲೇ ತಿಳಿದಿದ್ದ ಸಾವಿತ್ರಿ ಶ್ಯಾಮನ ಕುರಿತಂತೆ ಅಣ್ಣಾರೇ ನಿಮ್ಮ ಕೈಗೆ ಸಿಕ್ಕಿದ್ದಕ್ಕೆ ಅದಕ್ಕೊಂದು ವ್ಯವಸ್ಥೆಯಾಯ್ತು ನೋಡಿ. ..ಎಂದು ಆಗಾಗ ಹೇಳುತ್ತಾ ಹಿರಿಯಣ್ಣನೊಳಗೆ ಸಾರ್ಥಕ ಭಾವ ತುಂಬುತ್ತಿದ್ದಳು.

ಹಿಂದಕ್ಕೆ-ಮುಂದಕ್ಕೆ, ಅಕ್ಕಪಕ್ಕಕ್ಕೆ ಓಡುತ್ತಿದ್ದ ಮನಸ್ಸನ್ನು ಹಿಡಿಯಲಿತ್ನಿಸುತ್ತಾ ಮತ್ತೆ ಹಿರಿಯಣ್ಣ ಸೋಫಾದ ಮೇಲೆ ಆಸೀನನಾದ. ಒಂದರ್ಧಗಂಟೆ ಸರಿದಿರಬಹದು. ತೆರೆದ ಬಾಗಿಲಿನಿಂದ ಶ್ಯಾಮಿ ದಡದಡನೆ ಬಂದು ಎಂದಿನಂತೆ ಉಯ್ಯಾಲೆಯ ಮೇಲೆ ಜಿಗಿದು ಕುಳಿತು ಕೂಗಿದ: ತಾತಾ ನಮ್ಮ ಹೊಸ ಮನೆಯಲ್ಲಿ ಪ್ಯಾರೆಟ್ಸ್, ರಾಬಿಟ್ಸ್ ಎಲ್ಲಾ ಇರುವುದಂತೆ ಗೊತ್ತಾ.. ನಾನು ಅಲ್ಲಿಂದ ನಿನಗೆ ಫೋಟೋ ಕಳಿಸುತ್ತೇನೆ. ಫೋನೂ ಮಾಡುತ್ತೇನೆ ಆಯ್ತಾ

ಒಂದು ಮಾತೂ ಆಡದೇ ಹಿರಿಯಣ್ಣ ಶ್ಯಾಮಿಯನ್ನೇ ನೋಡಿದ. ಇಷ್ಟುದ್ದದ ಕಂದ ಎಷ್ಟುದ್ದ ಬೆಳೆದು ಬಿಟ್ಟಿದೆ! ಅವನು ತಲೆಯೊಳಗೇ ಕಳೆದು ಹೋಗುವ ಮೊದಲೇ ಶ್ಯಾಮಿ ಉಯ್ಯಾಲೆಯಿಂದೆದ್ದು ಬಂದು ಹಿರಿಯಣ್ಣನಿಗೆ ಆತುಕೊಂಡು ಕೂತು ಕೈಹಿಡಿದೆಳೆಯಲಾರಂಭಿಸಿದ.. ಕಥೆ ಹೇಳು ತಾತ ಪ್ಲೀಸ್..ಈ ಹೊತ್ತಿನಲ್ಲಿ ಶ್ಯಾಮಿ ಎಂದೂ ಕಥೆ ಕೇಳಿದವನಲ್ಲ. ಕಥೆಯೇನಿದ್ದರೂ ಸಂಜೆಯ ಮೇಲೆಯೇ. ಅದೇಕೆ ಅಂದು ಕೇಳಬೇಕೆನಿಸಿತೋ ತಿಳಿಯದು. ಹಿರಿಯಣ್ಣ ಮನದಲ್ಲಿ ಇದ್ದ ಗೊಂದಲ ತಹಬದಿಗೆ ತಂದುಕೊಳ್ಳುವ ಯತ್ನದಲ್ಲಿ.. ಶ್ಯಾಮಿ....ಕಥೆ....ಯಾವುದು?”
ಶ್ಯಾಮಿಯೆಂದ, “ಅದೇ ಇಬ್ಬರು ಫ್ರೆಂಡ್ಸ್ ಸಾಹಸ ಮಾಡ್ತಾರೆ. ಅದರಲ್ಲಿ ಒಬ್ಬ ಪುಕ್ಕುಲು...
ಶ್ಯಾಮಿ ಅದೆಷ್ಟು ಬಾರಿ ಆ ಕಥೆ ಹೇಳಿಸಿಕೊಂಡಿದ್ದಾನೋ ಲೆಕ್ಕಕ್ಕೇ ಇಲ್ಲ. ಒಬ್ಬ ಸ್ನೇಹಿತನ ಧೈರ್ಯವನ್ನು ಮೆಚ್ಚಿ ತಲೆದೂಗುತ್ತಾ ಮತ್ತೊಬ್ಬನ ಪುಕ್ಕಲು ಸ್ವಭಾವದ ಪಜೀತಿ ಬಗ್ಗೆ ಆಲಿಸಿ ನಗುವುದೆಂದರೆ ಇನ್ನಿಲ್ಲದ ಇಷ್ಟ ಅವನಿಗೆ.
ಕಥೆ ಸಾಗಿತು. ಎಂದಿನ ಉಲ್ಲಾಸ, ರೋಚಕತೆ ಎಲ್ಲವನ್ನೂ ಕಳೆದುಕೊಂಡು. ತುಂಬಾ ಧೈರ್ಯವಿದ್ದ ಸ್ನೇಹಿತನಿಗೆ ಹೆಲ್ಪ್ ಮಾಡುವ ಗುಣವೂ ಇರುವುದು...ಅದೇ ಅವನು...
ನಡುನಡುವೆ ಮನದ ದ್ವಂದ್ವದ ದಾಳಿ: ಶ್ಯಾಮಿ ಹೊಸ ಜಾಗಕ್ಕೆ ಹೊಗಲು ಎಷ್ಟು ಉತ್ಸುಕನಾಗಿದೆ. ಅವನಮ್ಮ ಪೂರ್ಣ ತಯಾರಿ ಮಾಡಿಬಿಟ್ಟಿದ್ದಾಳೆ.. ಪಾಪ ಇನ್ನೇನು ಮಾಡುತ್ತಾಳೆ ಒಳ್ಳೆಯದೇ ಆಯಿತು
ಮತ್ತೆ ಕಥೆ- ಫುಕ್ಕಲು ಸ್ವಭಾವ ಇದ್ದವನು ಕೆಟ್ಟವನಲ್ಲ... ಆದರೆ ಅವನಿಗೆ.....ಒಳ್ಳೆಯದನ್ನು ಮಾಡುವ ಧೈರ್ಯ ಇರಲಿಲ್ಲ..
ಮಧ್ಯೆಮಧ್ಯೆ ಅಯ್ಯೋ ತಾತ ಅದಲ್ಲ..ಎನ್ನುತ್ತಾ ಶ್ಯಾಮಿಯ ಸಹಕಾರ, ತಿದ್ದುಪಡಿಯೊಂದಿಕೆ ಅಂತೂ ಕಥೆ ಮುಗಿಯಿತು.
ಸ್ವಲ್ಪ ಹೊತ್ತಿದ್ದು ಶ್ಯಾಮಿ ಮನೆಗೆ ಮರಳಿದ್ದಾಯಿತು.

ಒಂದಷ್ಟು ಹೊತ್ತು ಹಾಗೇ ಕಳೆದು ಹೋಯಿತು. ಎಂದಿನ ಸ್ನಾನ-ತಿಂಡಿಗಳ ನಡುವೆ ದಿನವೂ ಕಳೆಯುವ ಎಂದಿನ ಸಮಯ. ಸಾವಿತ್ರಿಯೂ ಹೊರಟಳು. ಅವತ್ತೇನೋ ಅವಳೂ ಆತುರದಲ್ಲಿದ್ದಳು. ಹೆಚ್ಚು ಮಾತಿಲ್ಲ. ಹೊರಡುವ ಮುಂಚೆ ಶ್ಯಾಮಿ ಹೊರಟರೆ ನಿಮಗೆ ಬೇಜಾರು ಅಲ್ವಾ ಅಣ್ಣಾಎಂದು ಸಹಾನುಭೂತಿಯಿಂದ ಒಂದು ಮಾತನ್ನಾಡಿ ಬೇಜಾರನ್ನು ನೆನಪಿಸಿ ಹೊರಟಳು.

ಸುಮಾರು ೧೧ಕ್ಕೆ ಮತ್ತೆ ಹಿರಿಯಣ್ಣ ಗಡಿಯಾರ ನೋಡಿದ. ದೊಡ್ಡಮುಳ್ಳು ೧೨ರ ಮೇಲೆ ಗಟ್ಟಿಯಾಗಿ ನಿಂತಿತ್ತು. ಏಕೋ ಹಿರಿಯಣ್ಣನಿಗೆ ಏನೂ ಅನಿಸಲಿಲ್ಲ. ಎಷ್ಟೇ ಒದ್ದಾಡಿ, ಗುದ್ದಾಡಿದರೂ ಹೆದರಿಕೆ ಹುಟ್ಟಿಸುವ ಕ್ಷಣದಿಂದ ತಪ್ಪಿಸಿಕೊಳ್ಳಲಾಗದು. ಜೀವನವನ್ನು ಬಂದಂತೆ ಎದುರಿಸಲೇ ಬೇಕು!

ಶ್ಯಾಮಿ ತಂದೆ ತಾಯಿಯೊಡನೆ ಬಂದ. ಮುಖವೇಕೋ ಮಂಕಾಗಿತ್ತು. ಅಮ್ಮನ ಕೈಬಿಟ್ಟು ಬಂದು ಉಯ್ಯಾಲೆಯ ಮೇಲೆ ಹಿರಿಯಣ್ಣನಿಗೆ ಒರಗಿ ಕುಳಿತ. ಗಂಡಹೆಂಡತಿ ಒಂದಷ್ಟು ಹೊತ್ತು ಮಾತನಾಡಿದರು. ಕಾರ್ಯಕ್ರಮ ಮುಗಿದು ವಂದನಾರ್ಪಣೆ ಮಾಡಿದಂತೆ. ಹಳೆಯದನ್ನು ನೆನೆದರು, ಕೃತಜ್ಞತೆ ಅರ್ಪಿಸಿದರು, ಭಾವುಕರಾದರು, ಅತ್ತರು. ಮುಂದೆಯೂ ಸಂಬಂಧ ಉಳಿಸಿಕೊಳ್ಳುವೆವೆಂದು ಆಶ್ವಾಸನೆಗಳನ್ನಿತ್ತರು. ಹಿರಿಯಣ್ಣ ನಡುನಡುವಿನ ಹ್ಞಾಂ-ಹೂಂಗಳೊಡನೆ ಒಂದೆರಡು ಮಾತನ್ನಾಡಿರಬೇಕು. ಏಕೋ ಯಾವ ಮಾತುಗಳಿಂದಲೂ ಅವನಿಗೇನೂ ಅನಿಸಲಿಲ್ಲ. ಅನಿಸಿದ್ದು ಒಂದೇ: - ಶ್ಯಾಮಿಯನ್ನು ಗಟ್ಟಿಯಾಗಿ ಹಿಡದುಕೊಳ್ಳಬೇಕು. ಗಟ್ಟಿಯಾಗಿ ಹಿಡಿದು ಕೂತುಬಿಟ್ಟಿದ್ದ!

ಎಲ್ಲರೂ ಎದ್ದು ಹೊರಟರು. ಶ್ಯಾಮಿ ಒಂದು ಮಾತೂ ಆಡಲಿಲ್ಲ. ಹಿರಿಯಣ್ಣನ ಮುಖವನ್ನೂ ನೋಡಲಿಲ್ಲ. ಅಪ್ಪ ಅಮ್ಮ ಇಬ್ಬರ ಕೈ ಹಿಡಿದು ಹೊರಟು ಬಿಟ್ಟ. ಹಿರಿಯಣ್ಣನೂ ಶ್ಯಾಮಿಗೆ ನಾಲ್ಕು ಬುದ್ಧಿ ಮಾತು ಹೇಳ ಬಹುದಿತ್ತೇನೋ. ಆದರವನು ಹೇಳಲಿಲ್ಲ. ಅವನ ಪಾಲಿಗೆ ಈ ಬಂಧ ಮಾತನಾಡಿ ಮುಗಿಸುವಂತದ್ದಲ್ಲ. ಅವನ ನಾಲ್ಕು ಮಾತು ನೆನಪಿಟುಕೊಳ್ಳುವ ವಯಸ್ಸು ಶ್ಯಾಮಿಯದ್ದೂ ಅಲ್ಲ. ಜೊತೆಗೆ ಹೇಳುವ ಮನಸ್ಸು ಅವನಿಗೂ ಇರಲಿಲ್ಲ. ಸುಮ್ಮನೆ ಶ್ಯಾಮಿಯನ್ನೇ ದೃಷ್ಟಿಸುತ್ತಾ ಹಿರಿಯಣ್ಣ ಹೊರಗಿನ ಬಾಗಿಲ ಬಳಿ ಒರಗಿ ನಿಂತ. ಕಾರು ಕಾಯುತ್ತಿತ್ತು. ತೆರೆದ ಬಾಗಿಲ ಒಳಗೆ ಪ್ರಯಾಸದಿಂದ ಹತ್ತಿ ಕುಳಿತ ಶ್ಯಾಮಿ. ತಲೆ ಬಗ್ಗಿಸಿ ಕುಳಿತವನು ಅದೇಕೋ ಫಟ್ಟನೆ ಹಿರಿಯಣ್ಣನೆಡೆಗೆ ನೋಡಿದ. ಅದೇನೆನಿಸಿತೋ ಕಾರಿನ ಬಾಗಿಲು ತೆರೆದು ಟಪಟಪನೆ ಕಾಲನ್ನು ಎತ್ತಿಹಾಕುತ್ತಾ ಹಿರಿಯಣ್ಣನೆಗೆ ಓಡಿಬಂದ. ಬಿಗಿದಪ್ಪಿ ಹಿಡಿದು ಜೋರಾಗಿ ಅಳಲಾರಂಭಿಸಿಬಿಟ್ಟ.

ಹಿರಿತನವನ್ನು ಕಾಪಾಡಲೆಂದು ಹಿಡಿದಿಟ್ಟುಕೊಂಡಿದ್ದ ಕಂಬನಿ ಹಿರಿಯಣ್ಣನ ಕಣ್ಣುಗಳಿಂದ ಥಟಥಟನೆ ಉರುಳಿತು. ಅಲ್ಲಿಯವರೆಗೂ ಅನವಶ್ಯಕವೆಂದು ಕೈಬಿಟಿದ್ದ ಮಾತುಗಳೆಲ್ಲಾ ಹಿರಿಯಣ್ಣನಿಗೆ ಬಹಳ ಅವಶ್ಯವೆನಿಸಿಬಿಟ್ಟವು. ಯಾವ ಮಾತೂ ಶ್ಯಾಮಿಯನ್ನು ಸಮಾಧಾನಪಡಿಸದು, ಹಿರಿಯಣ್ಣನ ಮನವನ್ನು ತಿಳಿಗೊಳಿಸದು. ಸುತ್ತಲಿದ್ದವರೆಲ್ಲಾ ದುಃಖಪಟ್ಟರು ಸಮಾಧಾನ ಹೇಳಿದರು. ಏನಾದರೂ  ನಿಯಂತ್ರಣಕ್ಕೆ ಬಾರದ ವೇದನೆ! ಕೆಲಕಾಲದ ನಂತರದ ಒಂದು ಗಳಿಗೆಯಲ್ಲಿ ಮಾತು-ಕಂಬನಿಯ ನಡುವೆ ಕ್ಷಣಕಾಲ ಮೌನ ಪ್ರವೇಶ ಮಾಡಿ ಅಂತೂ ದುಃಖವನ್ನು ತಹಬದಿಗೆ ತಂದಿತು. ಫೋನು, ಮಾತು, ಭೇಟಿಗಳ ಆಶ್ವಾಸನೆಗಳು ಶ್ಯಾಮಿಗಷ್ಟೇ ಅಲ್ಲ ಅದೇಕೋ ಹಿರಿಯಣ್ಣನಿಗೂ ಭರವಸೆ ಮೂಡಿಸಿದವು! ಮತ್ತೆ ಕಾರು ಕರೆಯಿತು. ಶ್ಯಾಮಿ ಹತ್ತಿಕುಳಿತ. ಒಂದಕ್ಕೊಂದು ಅದುಮಿ ಹಿಡಿದ ತುಟಿಗಳು, ಅತ್ತು ಉಬ್ಬಿದ ಗೋಲಿ ಕಣ್ಣುಗಳ ನೋವಿನ ಮುಖಭಾವದಲ್ಲಿ ಕೈಬೀಸಿ ಶ್ಯಾಮಿ ಹೊರಟು ಹೋದ.

ಹಿರಿಯಣ್ಣನನ್ನು ಉಯ್ಯಾಲೆ ಬರಮಾಡಿಕೊಂಡಿತು. ಅದರ  ಜುಯ್ ಜುಯ್.. ಶಬ್ದ ಬೆಳಗಿನ ಗದ್ದಲದ ನಡುವೆಯೂ ಎದ್ದು ಕೇಳುತ್ತಿತ್ತು. ಮನದಲ್ಲಿ ಒಂತರಹ ಶಾಂತಿ. ದುಃಖ ಮುಗಿದ ಮೇಲೆ ಮೂಡುವ ಶಾಂತಿಯಲ್ಲದ ಶಾಂತಿ. ಆಲೋಚನೆಗಳು ಬೇರೆಯದೇ ದಾಟಿಯಲ್ಲಿ ಹೊರಟವು: ನಾನು ಎಷ್ಟಾದರೂ ೮೦ ಮೀರಿದವನು. ಶ್ಯಾಮಿ ನನ್ನೊಡನೆಯೇ ಇದ್ದಿದ್ದರೂ ನಾನೇ ಶ್ಯಾಮಿಯನ್ನು ಬಿಡುವ ಪ್ರಸಂಗ ಹೆಚ್ಚಿತ್ತಲ್ಲವೇ! ದುಃಖವೂ ಅಲ್ಲದ ಸಮಾಧಾನವೂ ಅಲ್ಲದ ಸ್ಥಿತಿಯೊಂದು ಅವನಲ್ಲಿ ಮೂಡಿತು. ಅದೆಷ್ಟೋ ನೆನಪುಗಳ ನಡುವೆ ಶ್ಯಾಮಿಯೂ ಒಂದು ನೆನಪು ಎನಿಸಿದ. ಅದ್ಯಾಕೋ ಒಮ್ಮೆ ಮುಗುಳ್ನಕ್ಕ.. ವಿಷಣ್ಣತೆಯೋ, ನಿರಾಳವೋ ತಿಳಿಯದ ನಗೆ!

ಕಣ್ಣು ಗಡಿಯಾರವನ್ನು ನೋಡಿತು. ಒಂದು ಕ್ಷಣ ಅನಿಸಿತವನಿಗೆ: ಈ ಗಡಿಯಾರದಂತಿರಬೇಕು. ಒಳ್ಳೆಯ ಸಮಯಕ್ಕೆ ಕಾಯದೇ ಕೆಟ್ಟ ಸಮಯವೆಂದು ದೂರದೇ, ಸುಮ್ಮನೇ ಕರ್ತವ್ಯ ಪರಿಪಾಲನೆ ಮಾಡಿಕೊಂಡು.. ಗಡಿಯಾರ ೧೨ ಬಿಟ್ಟು ಒಂದಕ್ಕೋಡುತ್ತಿತ್ತು. ಅವನು ದೊಡ್ಡ ಮುಳ್ಳನ್ನು ಅಷ್ಟಾಗಿ ಗಮನಿಸಲಿಲ್ಲ.
                                         ***
ಸುಷ್ಮ ಸಿಂಧು
 (ಏಪ್ರಿಲ್ ೨೦೧೮ : ತುಷಾರದಲ್ಲಿ ಪ್ರಕಟಿತ)
No comments: