Friday, September 12, 2008

ಮತ್ತೊಂದು ಕನಸು..

ಅಲ್ಲೊಂದು ಉದ್ಯಾನವನದ ನೂರಾರು ಗಿಡ, ಮರಗಳ ನಡುವೆ 'ಆ' ಗಿಡ ತನ್ನ ಅಂದಕ್ಕೆ ತಾನೆ ಮಾರು ಹೋದಂತಿತ್ತು. ತನ್ನಲ್ಲರಳಿದ ಹವಳದ ಬಣ್ಣದ ಹೂವನ್ನು ಕಂಡು ಹಿರಿಹಿರಿ ಹಿಗ್ಗುತ್ತಿತು...ತನ್ನ ಸುತ್ತ ಮುತ್ತಲಿದ್ದ ಗಿಡ-ಮರಗಳಿಗೆ ತನ್ನ ಅಂದವನ್ನು ವಿವರಿಸುತ್ತಾ ಹೆಮ್ಮೆ ಪಡುತ್ತಿತ್ತು. ಅಲ್ಲಿದ್ದ ಎಲ್ಲರಿಗೂ 'ಅವಳ ಸಮಾನವಿಲ್ಲ' ಎಂಬ ಭಾವನೆ ಅಚ್ಚೊತ್ತಿ ಬಿಟ್ಟಿತ್ತು.
ಈ ರೀತಿ ಆ ಗಿಡ ಹಾಡಿ, ಹೊಗಳಿಕೊಳ್ಳುತ್ತಿದ್ದುದನ್ನು ಅದರ ಪಕ್ಕದಲ್ಲೇ ಭೂಮಿಯ ಬೆಚ್ಚಗಿನ ಗರ್ಭ ಸೀಳಿ ಆಗತಾನೇ ಹೊರಬಂದು, ತಲೆಯೆತ್ತಿ ತನ್ನ ಬಂಧುಗಳನ್ನು ನೋಡುತ್ತಿದ್ದ 'ಮೊಳಕೆ'ಯೊಂದು ನೋಡಿತು. ಒಮ್ಮೆ ನಕ್ಕು ಅದು ಸುಮ್ಮನಾಯಿತು. ಹೀಗೇ ಒಂದು ದಿನ ಅದು ಸು೦ದರಿ ಗಿಡದ ಬಳಿ ಅದು ಕೇಳಿತು, "ಗೆಳತೀ, ನೀನು ಸುಂದರಿ ಎನ್ನುವುದು ಸತ್ಯವಾದ ವಿಷಯವೇ. ಆದರೆ ನೀನೇ ಬಿಡುವ ಆ ಹೂವಿನ ಭಾರ ತಾಳಲಾರದೇ ನೀನೇಕೆ ನೆಲವನ್ನೇ ನೋಡುತ್ತಿರುತ್ತೀಯಾ? ಕತ್ತೆತ್ತಿ ಒಮ್ಮೆ ನಿನ್ನ ಅಣ್ಣ೦ದಿರನ್ನು ನೋಡು... ಒಮ್ಮೆ ಮಾತ್ರ..." ಆ 'ಸುಂದರಿ' ಗಿಡ ಪೆಚ್ಚಾಗಿ ಹೋಯಿತು. ಏನೇ ಮಾಡಿದರೂ ಬಗ್ಗಿದ ಹೂವಿನ ತಲೆ ಮೇಲೆತ್ತಲಾಗಲಿಲ್ಲ! ತನ್ನ ದುರ್ಬಲತೆ ಕಂಡು ಕುಗ್ಗಿ ಹೋಯಿತು...

ಹೀಗಿರುವಾಗ ಆ ಮೊಳಕೆಯ ಪುಟ್ಟ ದೊಡ್ಡವನಾಗಿ ಬೆಳೆದ. ಸುಂದರಿಯ ಪಕ್ಕದಲ್ಲೇ ಧೃಢವಾಗಿ ನಿಂತ. ಅಲ್ಲೇ ಅಡ್ಡಾಡುತ್ತಿದ್ದ ಮಾಲಿ ಅ 'ಸುಂದರಿ' ಗಿಡದ ತಲೆಯೆತ್ತಿ 'ಪುಟ್ಟು' ಗಿಡಕ್ಕೆ ಬಿಗಿದ..ಈಗ ಸುಂದರಿ ತಲೆಯೆತ್ತಿ ನೋಡಿದಳು...ತನ್ನ ಅಣ್ಣ೦ದಿರನ್ನು, ಹಾಗೆಯೇ ಆ 'ಪುಟ್ಟ'ನನ್ನು. ಆಗ ಪುಟ್ಟ ಹೇಳಿದ, "ನೀನೀಗ ನಿಜವಾದ 'ಸುಂದರಿ'.ನಿನ್ನ ಈ ಅಂದವಾದ 'ಮೌನ' ನಿನ್ನನ್ನು ಸುಂದರಗೊಳಿಸಿದೆ." ಸುಂದರಿ ಒಮ್ಮೆ ನಕ್ಕಳು. ಸಂತಸದಿಂದ ಇಡೀ ಉದ್ಯಾನವನವೇ ಮುಗುಳ್ನಕ್ಕಿತು...

('ಶೋಧ'ದ ಮತ್ತೊಂದು ತುಣುಕು. ೨೦೦೪ರಲ್ಲಿ ಮೂಡಿದ ಕನಸು. ನನ್ನ ಪುಸ್ತಕದಲ್ಲಿ ದಾಖಲಾಗಿದೆ..)
~ಸುಷ್ಮ ಸಿ೦ಧು.

(image courtesy-web)