Thursday, September 20, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 6


ನಾನು ಹಿಂದಿನ ಬರಹದಲ್ಲಿ ಹೇಳಿದಂತೆ ನನ್ನ ‘ಖಿನ್ನ’ ಮನಃಸ್ಥಿತಿಗೆ ಔಷದೋಪಚಾರ ನಡೆದೇ ಇತ್ತು. ನಾನು ಎಷ್ಟರ ಮಟ್ಟಿಗೆ ಒಂದು ಕಾಳಿನ ಗಾತ್ರದ ಗುಳಿಗೆಗೆ ನನ್ನ ಮನಸ್ಸನ್ನು ಒಗಿಸ್ಗಿ ಕೊಂಡಿದ್ದೆನೆಂದರೆ ‘ಅದುವೇ ಜೀವನ. ಅದಿಲ್ಲದಿದ್ದರೆ ನಾನಿಲ್ಲ’ ಎಂಬ ಆತಂಕ ಬಂದೊದಗಿತ್ತು. ಅದರ ಛಾಪು ಮನೆಯವರ ಮುಖದಲ್ಲೂ ಎದ್ದು ಕಾಣುತ್ತಿತ್ತು. ‘ಯಾವ ದೈಹಿಕ ಸಮಸ್ಯೆಯೂ ಇಲ್ಲ’ ಎಂಬ ಬಲವಾದ ಆಧಾರವಿದ್ದರೂ. ಮಾನಸಿಕವಾಗಿ ‘ಮಾತ್ರಯೇ ಆಧಾರ’ ಎಂದು ನಾನು ಪರಿಗಣಿಸಿಯಾಗಿತ್ತು. ಅದು ನನಗೇನು ಉಪಕಾರ ಮಾಡುತ್ತಿದೆ? ಎಂಬುದು ಎಲ್ಲರಿಗೂ ಯಕ್ಷ ಪ್ರಶ್ನೆಯೇ ಆಗಿದ್ದಂತೆ ನನ್ನ ಸ್ವಬಾವವಿದ್ದರೂ, ಅದನ್ನು ‘ತೆಗೆದುಕೊಳ್ಳದಿದ್ದರೆ ನಡೆಯದು’ ಎಂದು ನನ್ನನ್ನೂ ಸೇರಿದಂತೆ ಎಲ್ಲರೂ ನಂಬುತ್ತಿದ್ದರು - ಬಹುಷಃ ಈ ಚಟಗಳು ಒದಗಿಸುವಷ್ಟು ಮಾನಸಿಕ ‘ಆಧಾರ’ವನ್ನು ಮತ್ತೇನೂ ಒದಗಿಸಲಾರದು. ಏಕೆಂದರೆ ನಾವು ಚಟಗಳಿಗೆ ಅಂಟುಕೊಂಡೆವೆಂದರೆ ನಮ್ಮ ದೇಹ- ಮನಸ್ಸನ್ನು ಅದಕ್ಕೆ ಸಂಪೂರ್ಣ ಅರ್ಪಿಸಿಬಿಟ್ಟಂತೆ. ಮನಸ್ಸು ಇನ್ಯಾವ ಧನಾತ್ಮಕವಾದ ಸಾಧ್ಯತೆಗಳ ಕಡೆಗೂ ವಿಚಲಿತವಾಗದಂತೆ ‘ಚಟ’ವನ್ನು ಆದರಿಸಿ, ಆರಾದಿಸುತ್ತಾ ಒಂದು ರೀತಿಯ ಧ್ಯಾನಸ್ಥ ಸ್ಥಿತಿಯಲ್ಲಿದ್ದುಬಿಡುತ್ತದೆ! ಯಾವ ಸಕಾರಾತ್ಮಕ ಬದಲಾವಣೆಗಳಿಗೂ ಗಮನವೀಯದ ಮಹಾನ್ ‘ಧ್ಯಾನಸ್ಥ’ ಸ್ಥಿತಿಯದು!
ಮಾತ್ರೆಗೂ ಆತಂಕಕ್ಕೂ ಬಹಳ ಗಟ್ಟಿ ಸಂಬಂಧವಿದೆ. ಕಾಯಿಲೆಯಿದ್ದಾಗ ‘ಓ ನನಗೆ ಅದಿದೆ’ ಎಂಬ ಆತಂಕವಾಗುವುದೆಂದಿಟ್ಟುಕೊಳ್ಳೋಣ. ಆಗ, ಕಾಯಿಲೆ ಹಾಗೂ ‘ಆತಂಕ’ಕ್ಕೆಂದು ಮಾತ್ರೆ ತೆಗೆದುಕೊಳ್ಳುತ್ತಿದ್ದರೂ, ಅಪ್ಪಿ ತಪ್ಪಿ ಮಾತ್ರೆ ತಪ್ಪಿಸಿದಾಗ ಅದಕ್ಕಿಂತ ದುಪ್ಪಟು ಆತಂಕವಾಗುತ್ತದೆ. ಅದನ್ನು ಮತ್ತೆ ತಪ್ಪಿಸಲು ಮಾತ್ರೆಯೇ ಬೇಕಾಗಿ ಬಿಡುತ್ತದೆ. ಒಟ್ಟಾರೆ, ಕಾಯಿಲೆಗೆ ಮಾತ್ರೆಯಾದರೆ ಅದು ಬೇರೆಯ ವಿಚಾರ. ಆದರೆ ಈ ಆತಂಕ-ಮಾತ್ರೆಗಳು ಒಟ್ಟಾದವೆಂದರೆ ಅದನ್ನು  ಬೇರ್ಪಡಿಸುವುದು ಸುಲಭದ ಮಾತಲ್ಲ. ‘ರೋಗ ತಂದುಕೊಳ್ಳುವ ಸಂಪೂರ್ಣ ಶಕ್ತಿ ಮಾತ್ರ ನಮ್ಮಲ್ಲಿದೆ. ಆದರೆ ಅದನ್ನು ಗುಣ ಪಡಿಸುವ ಶಕ್ತಿ ಕೇವಲ ಮಾತ್ರೆಗಳಲ್ಲಿದೆ’ ಎಂದು ನಮ್ಮಲ್ಲಿರುವ ಬಲವಾದ ನಂಬಿಕೆಯ ಶಕ್ತಿಯನ್ನೂ ಮತ್ತು ಅದು ರೋಗಗ್ರಸ್ತ  ದೇಹದ ಸ್ಥಿತಿಯನ್ನು ಮತ್ತೂ ಹದಗೆಡಿಸುವಷ್ಟರ ಮಟ್ಟಿಗೆ ಮೂಡಿಸುವ ಅಸಹಾಯಕತೆಯನ್ನು ಅನುಭವಿಸಿಯೇ ನೋಡಬೇಕು!

ಹ್ಞಂ, ನನ್ನ ಹಾಗೂ ಗುಳಿಗೆಗಳ ನಂಟು ಈ ಪಾಟೀ ಬಲವಾಗಿದ್ದ ಸಂದರ್ಭದಲ್ಲಿ ‘ನಾ ಕಂಡ ಕನಸು’ ಉಲ್ಲೇಖಿಸಲು ಬಹು ಯೋಗ್ಯವಾದುದು ಎಂದೆನಿಸುವುದು. ಅದರ ಸಾರಾಂಶ ಹೀಗಿತ್ತು- ನಾನು ತೆಗೆದು ಕೊಳ್ಳುವ ಗುಳಿಗೆಗಳೆಲ್ಲಾ ನನ್ನ ಮುಂದೆ ನರ್ತಿಸುವುವು! ಇಷ್ಟೇ ಇಷ್ಟುದ್ದವಿರುವ ಗುಳಿಗೆಗಳು ನನ್ನನ್ನು ಅವುಗಳ ಆಕಾರವನ್ನಾಗಿಸಿ, ಅವು ಕ್ಷಣದಿಂದ ಕ್ಷಣಕ್ಕೆ ಬೃಹತ್ತಾಗಿ ಬೆಳೆದು ನನ್ನನ್ನು ಅಣಕಿಸುವವು. ನಂತರ ಸನ್ನಿವೇಶ ಬದಲಾದಂತಾಗಿ ಅವು ನನ್ನ ವ್ಯಂಗ್ಯವಾಡುವುದನ್ನು ಬಿಟ್ಟು ತಮ್ಮ ಆಕಾರ ಕ್ಷೀಣಿಸಿ ಕೊಳ್ಳುತ್ತಾ ಸಾಗುವವು. ಅವು ಕೃಶವಾಗುತ್ತಿದ್ದಂತೆ ನನ್ನ ಕುರಿತ ಆಶಯ ಹೀಗೆ ಮೂಡುವುದು- “ಬಿಟ್ಟು ಬಿಡು ನಮ್ಮನ್ನು, ತೊರೆದು ಬಿಡು.. ನಮ್ಮೊಳಗಿನ ಶಕ್ತಿಯೆಲ್ಲಾ ನಿನ್ನಲ್ಲೇ ಇದೆ. ಮನಗಾಣು.. ಸಾಕೀ ಅವಲಂಬನೆ.”

ಅದು ಸಾಕಷ್ಟು ಉದ್ದವಾಗಿದ್ದ ಕನಸು. ನನಗೆ ಅಲ್ಲಿಯವರೆಗೆ ‘ಚುಟುಕು ಕನಸು’ ಗಳ ದರ್ಶನವಾಗಿತ್ತೇ ವಿನಃ ಹೀಗೆ ಉದ್ದುದ್ದದ ಕನಸು, ಅದೂ ‘ನನ್ನದೇ ಸಮಸ್ಯೆ’ ಯನ್ನು ನೇರವಾಗಿ ವಿಶ್ಲೇಷಿಸಿದ ರೂಪಕ ಬಂದೊದಗಿದ್ದು ಇದೇ ಮೊದಲು. ನಾನು ಆ ಕನಸಿನಿಂದ ಪ್ರಭಾವಿತಳಾಗಿದ್ದು ನಿಜವೇ ಆದರೂ ಅದನ್ನು ತತ್ತಕ್ಷಣವೇ ಕಾರ್ಯ ರೂಪಕ್ಕೆ ತರಲು ಹಿಂದೇಟು ಹಾಕಿದೆ. ‘ನನ್ನೊಲುಮೆಯ ಗುಳಿಗೆ’ಯನ್ನು ಅಷ್ಟು ಬೇಗ ಹಾಗೆ ಧೈರ್ಯವಾಗಿ ತೊರೆಯಲು ಮನಸ್ಸಾಗಲಿಲ್ಲವೇನೋ. ಆದರೂ ಒಂದಂತೂ ಹೇಳಲೇಬೇಕು, ಮನಸ್ಸಿನ ಮಾತನ್ನು ನಾವೇ ಹುಟ್ಟಿಸಿಕೊಂಡಿರುವ ವಿವರಣೆಗಳಿಂದ ದಿಕ್ಕರಿಸಿ ಬಿಡಬಹುದು. ಆದರೆ ವಿವರಣೆಗಳು ಅಸಮರ್ಪಕವಾದಾಗ ಮನಸ್ಸಿನ ಸಲಹೆಯಿಂದ ಹೆಚ್ಚು ದಿನ ತಪ್ಪಿಸಿ ಕೊಳ್ಳಲಾಗದು. ನನ್ನ ಸ್ಥಿತಿ ‘ಕತ್ತಲಿನಲ್ಲಿರುವಾಗ ದೀಪವ ಧಿಕ್ಕರಿಸಿದಂತೆ’ ಆಗಿತ್ತಷ್ಟೆ! ಕ್ರಮೇಣ ನಾನು ದೀಪಕ್ಕೆ ನನ್ನ ಕೋಣೆಯೊಳಕ್ಕೆ ಅನುವು ಮಾಡಿ ಕೊಟ್ಟೆ!

“ಅಮ್ಮಾ, ನಾನು ನಾಳೆಯಿಂದ ಮಾತ್ರೆ ತಗೋಳೋದಿಲ್ಲ", ಧೈರ್ಯವ ಒಗ್ಗೂಡಿಸಿಕೊಂಡು ಹೇಳಿದೆ. ಅಂದೇ ನನಗನಿಸಿದ್ದು- ಧೈರ್ಯವು ಭಯದ ನೆರಳಲ್ಲೇ ಬೆಳೆಯುತ್ತಿರುವ ಮಗುವೂ ಆಗಿರಲು ಸಾಧ್ಯವೆಂದು. ಮುಂದಿನ ಕತ್ತಲಿಂದ ಹೊರ ಬರುವ ನನ್ನೆಲ್ಲಾ ದಿಟ್ಟ ಹೆಜ್ಜೆಗಳನ್ನು ನಾನು ಪೋಷಿಸಿದ್ದು ನನ್ನನ್ನು ಪ್ರೀತಿಯಿಂದ ಆವರಿಸಿದ್ದ ಭಯದ ಛಾಯೆಯಲ್ಲಿಯೇ!
ಅವತ್ತು, ಒಂದಿಡೀ ದಿನ ಮಾತ್ರೆಯಿಲ್ಲದೆ ಕಳೆದ ನನ್ನ ಸ್ಥಿತಿ ‘ತಾನು ಎಂದೆಂದಿಗೂ ತನ್ನದೇ ದೇಹದ ಭಾಗದಂತೆ ಇರಿಸಿಕೊಂಡಿದ್ದ ಊರುಗೋಲನ್ನು ತೊರೆದು ಊರು ಸುತ್ತಿದ ವೃದ್ಧೆ’ಯ ರೀತಿಯಂತಾಗಿತ್ತು. ಹಾಗೇ ಮಾತ್ರೆ ತೊರೆದ ದಿನಗಳು ಕಳೆದಂತೆ ನಾನು ಕಂಡು ಕೊಂಡಿದ್ದು- ಆಕೆ ನಿಜವಾದ ‘ವೃದ್ಧೆ’ಯಲ್ಲ. ‘ಊರುಗೋಲು’ ಆಕೆಯನ್ನು ವೃದ್ಧೆಯನ್ನಾಗಿಸಿತ್ತು... ! 

(¸À±ÉõÀ)


(Image Courtesy- Web)

Thursday, August 2, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 5


ಅಂದಿನ ನನ್ನ ‘ಹತಾಶ’ ಸ್ಥಿತಿ, ಸಂದರ್ಭವನ್ನು ಗಣನೆಗೇ ತೆಗೆದುಕೊಳ್ಳದಂತೆ ಕನಸು ಬರುತ್ತದೆ ಎಂಬ ನನ್ನದೇ ಭಾವನೆಯನ್ನು ಪಕ್ಕಕ್ಕೆ ನೂಕಲು ಆ ‘ಸಂಭಾಷಣೆ’ ಕಾರಣವಾಯಿತು. ನನ್ನ ಕನಸುಗಳ ಅನುಭವವ ಯಾರ ಮುಂದೆ ಬಿಚ್ಚಿಡಲೂ ನನಗೆ ಧೈರ್ಯವೇ ಬರುತ್ತಿರಲಿಲ್ಲ. ಕಾರಣ, ನಾನು ಜಗಜ್ಜನಿತವೆಂದು ಕಂಡು ಕೊಂಡಿದ್ದ ಜನಪ್ರಿಯ ನಂಬಿಕೆ! “ಅನುಭವ ಎಲ್ಲವನ್ನೂ ಕಲಿಸುತ್ತದೆ ಹಾಗೂ ಅನುಭವವಿರುವ ವ್ಯಕ್ತಿಯೇ ಎಲ್ಲವನ್ನೂ ಹೇಳಿಕೊಳ್ಳಲು ಯೋಗ್ಯ!” ಈ ನಂಬಿಕೆಯನ್ನು ಹಲವು ಸನ್ನಿವೇಶಗಳಲ್ಲಿ ಹಲವರು ತೆರೆದಿಟ್ಟಿಂದರಿದ್ದಲೋ ಏನೋ ನಾನು ಅದರ ಅಬ್ಬರಕ್ಕೆ ಹೆದರಿ ಬೆದರಿಕೊಂಡು ತಣ್ಣಗಿದ್ದೆ.

ಹಾಗಾಗಿ, ಅಂದಿನ ಕನಸಿನ ಸಂಭಾಷಣೆ ನನಗೆಂದೇ ಆಡಿದಂತೆ ಅಂದೇ ನನಗೆ ತೋರಿತು!

ಕನಸ ದನಿ ಕೇಳುವುದು- “ಅನುಭವ ಎಂದರೇನು?”
ನಾನೆನ್ನುವೆ- “ಕಲಿಯುತ್ತಾ ಕಲಿಯುತ್ತಾ ವಯಸ್ಸಾದಾಗ ಆದ ಸಂಗ್ರಹ”
ದನಿಯ ಪ್ರತಿಕ್ರಿಯೆ – “ ಹ್ಞಾಂ! ಹೌದೇ? ನೀನು ಏನೋ ಕೆಟ್ಟದ್ದು ಮಾಡಲು ಕಲಿಯಲು ಹೊರಟು ಅದನ್ನು ಮಾಡುವುದ ಕಲಿಯುತ್ತಾ ಕಲಿಯುತ್ತಾ ವಯಸ್ಸಾದರೆ ಅದನ್ನು ‘ಅನುಭವ’ ಎಂಬ ಗಂಟಿನೊಳಗೆ ಸೇರಿಸಿಬಿಡುವೆಯಾ?”
ನಾನು ಇಲ್ಲವೆನ್ನುವೆ,
ಮತ್ತೆ ಪ್ರಶ್ನೆ – “ಹಾಗೆಯೇ. ವಯಸ್ಸಾದಾಗ ಎಂದರೆ ಎಷ್ಟು ವಯಸ್ಸದು? ೭೦-೮೦? ಸರಿ, ಎಂಭತ್ತೆಂದುಕೊಂಡರೆ ಎಂಭತ್ತೊಂದರ ಅನುಭವಕ್ಕೆ ಆ ವ್ಯಕ್ತಿ ಹೊಸಬನೇ ಆದ್ದರಿಂದ ‘ಅನುಭವಿ’ ಎನ್ನಲು ಹೇಗೆ ಸಾಧ್ಯ?”
ತೆಪ್ಪಗಾದ ನನಗೆ ತರ್ಕವೇ ಉತ್ತರವನ್ನೂ ಒದಗಿಸಿತು.
“ಕೇಳು.. ಅನುಭವ ಎಂಬುದು ಎಂದೋ ತಲುಪಿಕೊಳ್ಳುವ ಸ್ಥಿತಿಯಲ್ಲ. ಅದು ಪ್ರತಿ ಗಳಿಗೆಯಲ್ಲಿ ಮಿಳಿತವಾಗಿದೆ. ಕಣ್ಣು ರೆಪ್ಪೆಯ ಮುಚ್ಚಿ ತೆರೆಯುವ ನಡುವಿರುವ ಅಂತರವಿದೆಯಲ್ಲ, ಅದುವೇ ಅನುಭವ! ಮುಚ್ಚಿದ ರೆಪ್ಪೆಯೊಳಗೆ ಹಳೆಯದು ಹುದುಗಿಕೊಳ್ಳುತ್ತಾ, ತೆರೆದ ಕಣ್ಣುಗಳೊಳಗೆ ಹೊಸದು ದಾಖಲಾಗುತ್ತಾ ನಮ್ಮನ್ನು ‘ಅನುಭವಿ’ಗಳನ್ನಾಗಿಸುತ್ತಲೇ ಇದೆ!”

ನನಗೆ ಆ ಕನಸು ಮಾತ್ರ ‘ನನಗಾಗಿ’ ಎನ್ನಿಸಿತು. ಆದರೂ ಕನಸು ನನ್ನದೇ ಅಂಶ ಎಂಬ ಮನಃ ಸ್ಥಿತಿಗೆ ತಲುಪಲು ಅವಕಾಶವೇ ನೀಡದಂತೆ ಪರಿಸ್ಥಿತಿಗಳು ಜರ್ಝರಿತವಾಗಿಸುವವು. ಏನೀ ಪರಿಸ್ಥಿತಿ? ಬೆಳಗಾಗೆದ್ದರೆ- ಮಧ್ಯಾಹ್ನವಾದರೆ- ರಾತ್ರಿ ಬಂದರೆ ಎಂದಿಗೂ ಎಂದೆಂದಿಗೂ  ‘ಏನು ಮಾಡಲಿ?’ ಎಂಬ ಪ್ರಶ್ನೆ . ವಿದ್ಯಾರ್ಥಿಯಾಗಿ ಮಾಡಲು ದಂಡಿಗಟ್ಟಲೆ ಕೆಲಸಗಳು ಕಾದು ಕುಳಿತಿರುವಾಗ ‘ವಿದ್ಯಾರ್ಥಿ’ ಎಂಬ ಪಾತ್ರವೇ ಮನದಟ್ಟಾಗದಂತೆ ಮಬ್ಬು ಹಿಡಿದಿರುವ ಮನಸ್ಸು! ಬೆಳಕು ಕಂಡರೆ ಮುಚ್ಚುವ ಕಣ್ಣುಗಳು. ಒಬ್ಬಳೇ ಇದ್ದರೆ ಹಿಂದೆ ಯಾರದೋ ನೆರಳಿದೆಯೆಂಬ ಭಯ. ಎದ್ದರೂ ಬಿದ್ದರೂ ಬೆನ್ನು ಬಿಡದಂತೆ ಕಾಡುವ, ಅಂದು ನಾನು ‘ಏನೋ’ ಎಂದು ಭಾವಿಸಿದ್ದ ನನಗರಿಯದ ನನ್ನದೇ ಸೃಷ್ಟಿಗಳು!

ಇವುಗಳ ಮಧ್ಯೆ ಹೀಗೆ ಯಾರಿಗೂ ‘ಬರಬಾರದಾದ’ ಕನಸುಗಳೂ ಬಂದು ಕುಂತರೆ ನನ್ನ ಬಗ್ಗೆ ನಾನು ಏನೆಂಬ ಭಾವನೆ ಇಟ್ಟುಕೊಳ್ಳಲು ಸಾಧ್ಯ?

ಪರಿಸ್ಥಿತಿ- ಮನಃಸ್ಥಿತಿಗಳು ಹೀಗಿರುವಾಗ ಮತ್ತೊಂದು ಕನಸು ಎದುರಾಯಿತು.

ನಾನು ಕತ್ತಲಿನಲ್ಲಿ ಮನೆಯ ಟೆರೇಸಿನ ಮೇಲೆ ನಿಂತಿರುವೆ. ದನಿ ಕತ್ತಲಿಂದ ಬರುವುದು, ಕೇಳುವುದು- 
“ಹೇ! ಉತ್ತರಿಸು. ನಾನು ನಿನ್ನನ್ನು ಎಷ್ಟೆಷ್ಟೋ ಬಾರಿ ಸಂಧಿಸಿರುವೆ, ಅಲ್ಲವೆ? ಉತ್ತರಿಸಿರುವೆ ಅಲ್ಲವೆ? ಹಾಗಾದರೆ ನಾನ್ಯಾರು?”
“ಯಾರು?” ನನ್ನ ಪ್ರತಿ ಪ್ರಶ್ನೆ
“ಯಾರಿರಬಹುದು?” ಸ್ವಲ್ಪ ದನಿಯು ಗಡುಸಾಗಿಯೂ, ಹೆಚ್ಚೆಚ್ಚು ಗಂಭೀರವಾಗಿಯೂ ಆಗುತ್ತಾ ಮುಂದುವರೆಯುವುದು.
“ಹೇಳು? ನಾನು ಹೊರಗಿನಿಂದ ನಿನ್ನ ನಿಯಂತ್ರಿಸ ಹೊರಟಿರುವ ಶಕ್ತಿಯಾ, ನಿನ್ನ ಅಸ್ತಿತ್ವವ ಕೀಳಲು ಬಯಸಿರುವ ಪಿಶಾಚಿಯಾ? ಯಾರು ನಾನು?”
ಶಕ್ತಿ- ಪಿಶಾಚಿಯೆಂಬ ಪದಗಳು ಪದೇ ಪದೇ ಪನರಾವರ್ತನೆಯಾಗುತ್ತಾ ನನ್ನನ್ನು ನಡುಗಿಸುತ್ತಾ, ತಲೆಯನ್ನು ಚಿಟ್ಟು ಹಿಡಿಸುತ್ತಾ ಪ್ರತಿಕ್ರಿಯಿಸಲೇಬೇಕೆಂದು ಪಟ್ಟು ಹಿಡಿಯುವವು.
ನಜ್ಜುಗುಜ್ಜಾಗಿ ಹೋದ ನಾನು ಆ ಸ್ಥಿತಿಯಿಂದ ಚೆಂಗನೆದ್ದು ಬಂದಂತೆ ಉಸುರುವೆ “ನೀನು ಅದ್ಯಾವುದೂ ಅಲ್ಲ. ನಾನು! ನೀನು, ನಾನೇ! ಮತ್ತೇನೂ ಅಲ್ಲ”
ದನಿ ಮೆದುವಾಗುವುದು “ಶಕ್ತಿಯೆಂದರೆ ಆ ರೂಪದಲ್ಲಿ ಮಾರ್ಗದರ್ಶಿಸುತ್ತಾ, ಪಿಶಾಚಿಯೆಂದರೆ ಆ ರೂಪದಲ್ಲಿ ದರ್ಶಿಸುತ್ತಾ ಬರುವ ಅಂತಃಶಕ್ತಿಯ ನೀನು ನೀನೇ ಎಂದಿರುವೆ. ಹಾಗಾಗಿ ನಿನಗೆ ನಾನು ನೀನೇ!”

ನನ್ನ ಮನಸ್ಸು ‘ಏನು’ ಎಂಬುದರಿಂದ ‘ನಾನು’ ಎಂಬುದರೆಡೆಗೆ ಸಾಗಿತು. ಎಲ್ಲವೂ ನಾನೇ ಆಗಿದ್ದರೂ, ನನಗೆ ಮಾತ್ರ ಕನಸಿನ ಅನುಭವಗಳನ್ನು ‘ಅದು- ನಾನು’ ಎಂದು ವಿಂಗಡಿಸುವುದರಲ್ಲೇ, ನನಗಿಂತ ಶಕ್ತಿಯುತವಾದ ನನ್ನಂಶ ಎಂದು ಪರಿಗಣಿಸುವುದರಲ್ಲೇ ಅಪರಿಮಿತ ಆನಂದ ಕಂಡಿತು. - ನಮಗಿಂತ ಶಕ್ತಿಯುತವಾದುದು ನಮ್ಮನ್ನು ಕಾಪಾಡುತ್ತಿದೆ, ಅಂತೆಯೇ ಅದರ ಪರ್ಯಾಯವಾಗಿ ಮತ್ತೊಂದು ಶಕ್ತಿ ನಮ್ಮನ್ನು ಕಾಡುತ್ತಿದೆ ಎಂಬುದು ಎಲ್ಲರೂ ಒಪ್ಪುವ ಮತ್ತು ಇತರರೆಲ್ಲರೂ ಒಪ್ಪಲೇ ಬೇಕೆಂದು ಬಯಸುವ ನಂಬಿಕೆಯಾಗಿದೆ. ಆ ಶಕ್ತಿಗಳೆರಡೂ ನಮ್ಮಲ್ಲೇ ಅಡಗಿದೆ ಎಂಬ ತಿಳಿವೂ ಇದೆಯಾದರೂ ಅದರ ಅಸ್ಥಿತ್ವಕ್ಕೆ ಅಷ್ಟು ಮಾನ್ಯತೆ ದೊರೆತಿಲ್ಲ! ನನ್ನ ಮನಸ್ಸೂ ಅಂದು ಹಾಗೆಯೇ ಮಾನ್ಯತೆ ಇರುವ ನಂಬಿಕೆಯನ್ನು ಕೊಂಚ ಬೇರೆಯದೇ ರೂಪದಲ್ಲಿ (ಅದು- ನಾನು!) ಸ್ವೀಕರಿಸಲು ಬಯಸಿತ್ತು ಎನಿಸುತ್ತದೆ...

(¸À±ÉõÀ)
(Image- Web)

Friday, July 20, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 4


ಕನಸಿನ ಲಹರಿಯ ಮತ್ತೆ ಸೇರಿದಂತೆ..
                 ‘ದಿನಕ್ಕೊಂದು ಮಕ್ಕಳ ಕಥೆ’ಯಂತೆ ದಿನಕ್ಕೆ ಒಂದೋ, ಎರಡು.. ಹೀಗೇ ಹಲವು ಪ್ರಸಂಗಗಳು ಕೆಲ ಸಲ ಸರಣಿಯಲ್ಲಿ ಬಿಚ್ಚಿಕೊಳ್ಳುತ್ತಾ ಮನಸ್ಸಿಗೆ ಅದರ ಮೂಲದ ಕುರಿತಾದ ‘ಆಘಾತ’ವನ್ನೂ, ನೀತಿಯ ಕುರಿತಾದ ‘ಆಹ್ಲಾದ’ವನ್ನೂ ನೀಡುತ್ತಾ ನಡೆದವು.
ಮತ್ತೊಂದು ಕನಸಿನ ಸಂಭಾಷಣೆ ಈ ರೀತಿಯಿತ್ತು...
ಧನಿ ಪ್ರಶ್ನಿಸುವುದು-
“ಮೌನವಿದ್ದಾಗಲೂ ಮನಸ್ಸು ಸುಮ್ಮನಿರುತ್ತದೆ. ಅದರ ಹಾಗೆಯೇ ಸಾವೂ ಸುಮ್ಮನಿರುವುದೇ ತಾನೇ? ಮೌನಕ್ಕೂ, ಸಾವಿಗೂ ಏನು ವ್ಯತ್ಯಾಸ?”
ಅವಲೋಕನ- “ಹೊರಗೆ ಸುಮ್ಮನಿದ್ದು ಒಳಗೆ ಜಾಗೃತವಾಗಿರುವುದು ಮೌನ. ಹೊರಗೂ ಸುಮ್ಮನಿದ್ದು ಒಳಗೂ ಸುಮ್ಮನಿರುವುದು ಸಾವು!”
                ...ಆ ಹೇಳಿಕೆಯಲ್ಲಿ ವ್ಯಕ್ತವಾದ ಅಭಿಪ್ರಾಯ ‘ಮೌನ’, ಸಾವುಗಳನ್ನು ಯಾವ ಬಂಧಗಳಿಗೂ, ಬಾಂಧವ್ಯಗಳಿಗೂ ಅನ್ವಯಿಸದೇ ‘ಸ್ಥಿತಿಗೆ’ ಮಾತ್ರ ಅನ್ವಯಿಸಿದ್ದರಿಂದಲೋ ಏನೋ ನನಗದು ಬಹಳ ಕಿರಿಕಿರಿಯಾಗೇ ತೋರಿತ್ತು. ಒಮ್ಮೊಮ್ಮೆ ಎನಿಸುತ್ತಿತ್ತು ಬದುಕು- ಸಾವುಗಳ ಕುರಿತ ‘ಸಮ’ವೆಂದು ಕರೆಯಲ್ಪಡುವ, ‘ವಿಮುಖ’ವೆಂದು ತೋರುವ ಭಾವ ತೋರುವುದು ಸರಿಯೆ? ಒಂದು ಸಾರಿ ಮನಸ್ಸು ಪಿಸುಗುಟ್ಟಿತು. “ಸಾವು- ನೋವುಗಳು ಪ್ರಕೃತಿದತ್ತವಾದವು. ಹಾಗೇ ದುಃಖ-ದುಮ್ಮಾನಗಳೂ ಸಹ. ಅದರಂತೆಯೇ ಈ ‘ವಿಮುಖ- ಸಮ’ ಭಾವವೂ ಪ್ರಕೃತಿಯಂಶವೇ. ಯಾರಲ್ಲಿ ಯಾವ ಅಂಶ ವ್ಯಕ್ತಗೊಂಡರೆ ಅವರ ಜೀವ ಸಮಾಧಾನಗೊಳ್ಳುವುದೋ ಅದು ವ್ಯಕ್ತಗೊಳ್ಳುವುದಷ್ಟೇ”
                 ಈ ತೆರನಾದ ಸಂಭಾಷಣೆಗಳು ನನಗೆ ಉತ್ತರದಂತೆ ಕೆಲವು ಸಾರಿ ಕಂಡರೆ, ಮತ್ತೊಮ್ಮೆ ಒಳಗೆ ಅಪ್ರಯತ್ನ ಪೂರ್ವಕವಾಗಿ ನಡೆಯುತ್ತಿರುವ ಯುದ್ಧವೊಂದರ ಪ್ರತೀಕವಾಗಿ ತೋರುತ್ತವೆ.  ಆಗಿನ ಸಂದರ್ಭದಲ್ಲಿ ಅದಕ್ಕೆ ‘ಉತ್ತರ’, ‘ಯುದ್ಧ’ ಎಂಬ ಶೀರ್ಷಿಕೆಗಳ ನೀಡದೇ, ಸರಿಯೆನಿಸಿದರೆ ಕ್ಷಣಿಕವೆಂದಷ್ಟೇ ತೋರುವ ಸಮಾಧಾನವನ್ನು, ಇಲ್ಲವೆನಿಸಿದರೆ ಬಿಡದಂತೆ ಕಾಡುವ ದ್ವಂದ್ವವನ್ನು ಅನುಭವಿಸಿ ಸುಮ್ಮನಾಗುತ್ತಿದ್ದೆ.
                 ಬರೀ ಒತ್ತಡಗಳ ಅನುಭವಿಸಿ ಸುಮ್ಮನಾಗುವುದಾಗಿದ್ದರೆ ಅಂತಹ ಸಮಸ್ಯೆ ಇರುತ್ತಿರಲಿಲ್ಲನೋ. ನಿಜವಾದ ಒತ್ತಡದ ಅನುಭವವಾಗುವುದು ಒತ್ತಡದ ಮೂಲವನ್ನು ಒತ್ತಿ ವಿಸ್ತರಿಸುತ್ತಾ ಪರರೊಡನೆ ಚರ್ಚಿಸಿದಾಗಲೇ. ನಮಗೆ ಕಷ್ಟ ಎನಿಸಿದ್ದು, ಅವರಿಗೂ ಅಷ್ಟೇ ಪ್ರಮಾಣದ ಕಷ್ಟವಾಗಿ ಕಂಡರೆ ಒತ್ತಡ ನಿವಾರಣೆ ಸ್ವಲ್ಪ ಮಟ್ಟಿಗೆ ಸಾಧ್ಯವೇನೋ. ಅದನ್ನು ಬಿಟ್ಟು,ನಮ್ಮ ಕಷ್ಟಗಳು ‘ಅದೇನು ಮಹಾ!ಅಷ್ಟೇನು ಕಷ್ಟವಲ್ಲ’ ಎಂದೋ, ‘ಅಬ್ಬ! ಅತ್ಯಂತ ಕ್ಲಿಷ್ಟಕರ’ ವೆಂದೋ ಏನಾದರೂ ಎನಿಸಿದರೆ ನಮ್ಮ ಕೋಟಲೆಗಳಿಗೆ ಮತ್ತಷ್ಟು ಕೊಂಕು ಸೇರಿಸಿದಂತೆಯೇ! ಕನಸು ಶುರುವಾದಾಗಿನ ಕಾಲದ ನನ್ನ ಸಮಸ್ಯೆ ಏನಾಗಿತ್ತೆಂದರೆ ನನಗೆ ಪ್ರಯಾಸಕರವಾಗಿ ಕಾಣುತ್ತಿದ್ದ ನನ್ನ ಸ್ಥಿತಿ ನೋಡುಗರಿಗೆ ಅಷ್ಟೇನು ಕಷ್ಟಕರವಾಗಿ ಕಾಣದೇ, ನನಗೆ ತಮ್ಮ ಉತ್ತರಗಳಿಂದ ದಾರಿಯೊಂದಕ್ಕೆ ಹರಿಬಿಡಲು ಬರುವಂತಿದ್ದ ಕನಸುಗಳು ಕ್ಲಿಷ್ಟಕರವಾಗಿ ಗೋಚರಿಸುತ್ತಿದ್ದವು! ಅದು ‘ಬರುತ್ತದೆ’ ಎನ್ನುವುದು ನನಗೂ ಆಗ ಆಘಾತ ತರುತ್ತಿತ್ತೇ ವಿನಃ ಅಲ್ಲಿ ಬಂದದ್ದಲ್ಲ.
                   ಈಗಲೂ ಕನಸಿನ ಮೂಲದ ಕುರಿತಂತೆ ವಿಸ್ಮಯ, ಅಚ್ಚರಿಗಳು ಎಲ್ಲರಂತೆ ನನಗೂ ಉಳಿದಿರುವುದು ನಿಜವಾದರೂ ಬದುಕಿನ ಎಲ್ಲಾ ‘ಇರುವಿಕೆ- ಆಗುವಿಕೆ’ಗಳ ಮೂಲವೇ ಆಶ್ಚರ್ಯ, ಪ್ರಶ್ನೆ, ಗೊಂದಲಗಳ ಗೂಡಾಗಿರುವಾಗ ಕನಸನ್ನೂ ಆ ಗೂಡಿನೊಳಗೇ ಹಾಕಿ ‘ಕಾಣದ, ತೋರದ’ ವಿಚಾರಗಳಲ್ಲಿ ಕಾಣುವ ಸೊಬಗನ್ನು ಕಾಣುವ ಕನಸುಗಳ ಕುರಿತಂತೆಯೂ ವಿಸ್ತರಿಸಿದ್ದೇನೆ!
                   ಹೀಗೇ ಪುಟ್ಟಪುಟ್ಟ ಪ್ರಶ್ನೋತ್ತರಗಳ ಸಾಲು ಸಾಲು ಮೂಡಿ ಮರೆಯಾಗುತ್ತಿರುವಾಗ ನನಗೆ ಪದೇ ಪದೇ ಎನಿಸುತ್ತಿದ್ದುದು ‘ಪ್ರಜ್ಞಾಪೂರ್ವಕವಾಗಿ ಈ ಪ್ರಶ್ನೆಯೂ ನನ್ನಲ್ಲಿರಲಿಲ್ಲ, ಉತ್ತರವನ್ನೂ ನಾ ಬಯಸಿರಲಿಲ್ಲ‘ ಎಂಬುದು. ಏಕೆಂದರೆ ನನ್ನ ಅಂದಿನ ಖಿನ್ನ ಮನಃಸ್ಥಿತಿ ‘ನಿರಾಸಕ್ತಿ’ಯ ಹೊಂದಿದೆ ಎಂಬುದೊಂದನ್ನು ಬಿಟ್ಟು ಇನ್ನೇನೂ ನನಗೇ ಹೊಳೆದಿರಲಿಲ್ಲ. ಅವ್ಯಾವುವೂ ನಾನು ಆ ಸಮಯದ ಆಜುಬಾಜಿನಲ್ಲಿ  ಯೋಚಿಸಿದ ವಿಚಾರಗಳೂ ಅಲ್ಲ!
                   ಬಹಳಷ್ಟು ದಿನ ‘ನನ್ನ ಕನಸುಗಳು ನಾನು ಯೋಚಿಸದ ವಿಚಾರಗಳ ಹೊಂದಿರುತ್ತವೆ’ ಎಂದೇ ಭಾವಿಸಿದ್ದವಳಿಗೆ ಒಮ್ಮೆ  ಹೀಗನ್ನಿಸಿತು- “ನಾನೆಂದರೇನು? ಪ್ರಮುಖ, ಪ್ರಾಥಮಿಕವಾಗಿ ‘ಮನುಜ’ಳು ತಾನೆ? ಮನಷ್ಯ ಹೊತ್ತು ತಂದ ಪ್ರಶ್ನೆಗಳೇ ಅಲ್ಲವೇ ನನ್ನಲ್ಲಿ ಉದ್ಭವಿಸುತ್ತಿಹುದು? ‘ಅದು ಹೇಗೆ  ಬೇರೆಯವರಲ್ಲಿ ಮೂಡದ್ದು ನನಗೆ ಮೂಡಿತು?’ ಎಂಬುದು ಪ್ರಶ್ನೆಯಲ್ಲ. ಕಾರಣ, ಎಲ್ಲರಲ್ಲೂ ಮೂಡುವ ‘ಎಲ್ಲವೂ’ ಮತ್ತು ?ಅವೇ ನಮ್ಮಲ್ಲೂ ಉದಯಿಸಬೇಕು ಎನ್ನುವುದಾಗಿದ್ದರೆ ಒಂದೇ ಮಾದರಿಯ ವ್ಯಕ್ತಿಗಳು ಒಂದೇ ತೆರನಾದ ಕೆಲಸಗಳನ್ನು ಒಂದೇ ಸಮಯದಲ್ಲಿ ಮಾಡುತ್ತಿರಬೇಕಿತ್ತು! ಒಬ್ಬಬ್ಬರ ಆಸಕ್ತಿ ಒಂದೊಂದು ತೆರನಾದುದು. ತನ್ನ ಮೂಲಕ ಇತರರಲ್ಲಿ, ‘ಇತರೆ’ಗಳಲ್ಲಿ ಆಸಕ್ತಿ ಹೊಂದುವಂತೆ ತನ್ಮೂಲಕ ತನ್ನಲ್ಲೇ ಆಸಕ್ತಿ ಹೊಂದುವುದೂ ಒಂದು ಬಗೆಯೇ! ಈ ತರಹದ ‘ಆಸಕ್ತಿ’ಕರ ಪಯಣವೇ ಈ ಕನಸಾಗಿದೆ!?
                  ಮತ್ತೆ ಚಟುಕು ಪ್ರಶ್ನೋತ್ತರಗಳ ಸಾಲಿಗೆ ಮರಳುವುದಾದರೆ ಅವುಗಳಲ್ಲಿ ಅಂದು ಮರೆಯಾಗಿದ್ದ ಅರ್ಥಗಳು ತೆರೆದುಕೊಳ್ಳುವುವು.. 
(¸À±ÉõÀ)

(Image- Web)
 

Thursday, March 15, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ ೩


ಕಗ್ಗಂಟಿನಂತೆ ಕಂಡ ಆ ‘ ಬಣ್ಣದ ಕೊಡೆಯ ಹಿಂದೋಡಿದ’ ಕನಸು ಹೆಚ್ಚು ದಿನ ಕಾಡಲಿಲ್ಲ. ಸ್ವಲ್ಪ ಹೊತ್ತಷ್ಟೇ ಬೆಚ್ಚು ಬಿದ್ದಂತಿದ್ದು, ಅದು ರಚ್ಚೆಗೆ ತಿರುಗಿದಂತಾಗಿ, ನಂತರದಲ್ಲೇ ಯಥಾಸ್ಥಿತಿಗೆ ಮರಳಿಕೊಂಡುಬಿಡುವ ಮಗುವಿನಂತೆ! ಅದರ ಮನದ ಪ್ರಶಾಂತತೆ ನನ್ನಲ್ಲಿ ನೆಲೆಸಿರಲಿಲ್ಲವಾದರೂ ಆ ಕನಸು ಮಾತ್ರ ಒಂದು ‘ದಿಗಿಲಿನೊಡನೆ’ ತಣ್ಣಗಾಗಿ ಹೋಯಿತು- ತನ್ನಲ್ಲಿ ತಾನೇ ಸಿಕ್ಕಿಕೊಂಡು ಒದ್ದಾಡುತ್ತಿರುವ ಮನಕ್ಕೆ ಎಲ್ಲವೂ ಘಟನೆಗಳಷ್ಟೇ! ಕನಸು ಘಟನೆಯಂತೆಯೂ ಘಟನೆಗಳೆಲ್ಲಾ ಕನಸುಗಳಂತೆಯೂ ಕಂಡರೆ ಯಾವ ಸ್ಥಿತಿಯನ್ನೂ ಪರಿಶೀಲಿಸುವುದು ಅಸಾಧ್ಯ. ಈ ‘ಅಸಾಧ್ಯ’ದ ನಡುನಡುವೆಯೇ ಇರುವುದಾಗಿತ್ತು.
ಆದರೆ ನನಗೇ ತಿಳಿಯದಂತೆ ಹಲವು ಪ್ರಶ್ನೆಗಳು ನನ್ನನ್ನು ಕೊರೆಯುತ್ತಿದ್ದವೆಂದೂ, ಅವುಗಳು ಸಾಕಷ್ಟು ‘ಮೂಲಭೂತ’ವೂ ಮೂಲವ ಕೆದಕಿದಷ್ಟೂ ‘ಭೂತ’ದಂತೆ ಬೃಹತ್ ಭಯಾನಕವೂ ಆಗಿವೆಯೆಂದೂ ನನಗೆ ತಿಳಿಸಲು ಮತ್ತೆ 'ಕನಸೇ' ಬರಬೇಕಾಯಿತು! ಹ್ಞಾಂ, ಕನಸು ಬೇರೆಯೇ ರೂಪದಲ್ಲಿ ಮತ್ತೆ ಬೆನ್ನು ಹತ್ತಿತು, ನಿದ್ದೆಯ ಹತ್ತಿಕ್ಕಿತು.
ಕಾಣಲು ಮಬ್ಬು ಮಬ್ಬಾಗಿದ್ದ ಆ ಕನಸುಗಳು ಬರೀ ಸಂಭಾಷಣೆಗಳಾಗಿ, ಪ್ರಶ್ನೋತ್ತರಗಳಾಗಿ ಅತ್ಯಂತ ವ್ಯವಸ್ಥಿತವಾದ ನಿರೂಪಣೆಯ ಹೊಂದಿ ತೆರೆದುಕೊಳ್ಳಲಾರಂಭಿಸಿದವು. ಅಲ್ಲಿ ಎರಡು ಧ್ವನಿಗಳು ಮಾತಿಗಿಳಿಯುವವು. ಒಂದು- ಬಹುಪಾಲು ನನ್ನ ಸ್ವರವನ್ನೇ ಹೋಲುವಂತಿದ್ದ, ಮನಃಸ್ಥಿತಿಯ ದ್ಯೋತಕದಂತಿದ್ದ ಮೆದುವಾದ, ಅಸಹಾಯಕವೂ, ಅಮಾಯಕವೂ ಆದ ಧ್ವನಿ. ಮತ್ತೊಂದು- ಆತ್ಮವಿಶ್ವಾಸ, ಧೃಡತೆಯೊಡನೆ ಸನ್ಮಾರ್ಗವ ಸೂಚಿಸುವ, ಪೋಷಿಸುವ ಮಾರ್ಗದರ್ಶಿಯ ಪ್ರತಿರೂಪ. ‘ಮೆದು’ಧ್ವನಿ ಕೇಳುವುದು! ‘ಧೃಡತೆ’ ಪ್ರಶ್ನೆಯನ್ನವಲೋಕಿಸುತ್ತಾ ಅದನ್ನು ಅಭಿಪ್ರಾಯವೊಂದರತ್ತ ನಿರ್ದೇಶಿಸುವುದು. ಒಮ್ಮೆ ಆ ರೀತಿಯ ಕನಸುಗಳಲ್ಲಿ ಮನದಲ್ಲಿ ನಡೆದ ಮಾತುಕತೆ ಹೀಗಿತ್ತು.....
“ಧನಿ ೧ -ಪ್ರೀತಿಯೆಂದರೇನು?
ಧನಿ ೨ - ಭದ್ರತೆ
ಧನಿ ೧ - ದ್ವೇಷ?
ಧನಿ ೨- ಅಭದ್ರತೆ
ಧನಿ ೧- ಅವೆರಡರ ನಡುವಿನ ವ್ಯತ್ಯಾಸ?
ಧನಿ ೨- ಭದ್ರತೆ-ಅಭದ್ರತೆಗಳ ನಡುವಿನ ವ್ಯತ್ಯಾಸವೇ ಪ್ರೀತಿ-ದ್ವೇಷಕ್ಕೂ ಅನ್ವಯ. ಯಾವ ಮನಸ್ಸು ಭದ್ರತೆಯ ಬುನಾದಿಯನ್ನಾಗಿಸಿಕೊಂಡು ಬೆಳೆಯುವುದೋ ಅದು ಪ್ರೀತಿಸಲು ಸಾಧ್ಯವಾದುದ ಪ್ರೀತಿಸುತ್ತದೆ. ಇಲ್ಲವೋ ಯಾವ ಭಾವವನ್ನೂ ಅಂಕುರಿಸದೇ ಸಮಸ್ಥಿತಿಯ ಕಾಯ್ದುಕೊಳ್ಳುತ್ತದೆ. ಅದೇ ಅಭದ್ರತೆಯ ಮೇಲೆ ರೂಪಿತಗೊಂಡ ಮನಸ್ಸು ಕುದಿಯುತ್ತದೆ, ಕುಪಿತವಾಗುತ್ತದೆ! ತನಗೆ ಪ್ರೀತಿಪಾತ್ರರೆಂದೆನಿಸಿಕೊಂಡವರ ಪ್ರೀತಿಯ ಹೆಸರಲ್ಲಿ ‘ಸೆರೆ’ಯಲ್ಲಿ ಸಿಕ್ಕಿಸುತ್ತಾ ಇಲ್ಲದವರ ದ್ವೇಷದ ಹೆಸರಲ್ಲಿ ‘ಸೆರೆ’ಯಲ್ಲಿಡುತ್ತದೆ!”
..... ಈ ಪ್ರೀತಿ-ದ್ವೇಷಗಳೆರಡೂ ಬಹಳ ಪ್ರಾಥಮಿಕವಾಗಿ ಸರ್ವರಿಗೂ ಅನ್ವಯವಾಗುವ ಭಾವಗಳು. ಆದರೆ ಪ್ರೀತಿಯನ್ನು ‘ಆಕರ್ಷಣೆ’ಗೆ ಬದಲಿಯಂತೆಯೂ ದ್ವೇಷವನ್ನು ‘ಅಸಹಾಯಕತೆ’ಯ ಬದಲಿಗೂ ಪ್ರಯೋಗಿಸುತ್ತಾ ನಡೆದಿರುವುದು ವಿಪರ್ಯಾಸವೆನ್ನಬಹುದೇನೋ! ‘ಪ್ರೀತಿ-ದ್ವೇಷ’ವ ಕುರಿತ ಈ ಸಂಭಾಷಣೆ ಬಿಂಬಿಸುವುದಾದರೂ ಏನನ್ನು? ಪ್ರೀತಿಯ ಕೊರತೆಯನ್ನೋ? ದ್ವೇಷದ ಮನಃಸ್ಥಿತಿಯನ್ನೋ?
ನನಗೆನಿಸುವುದು- ಅದು ಸ್ಪಷ್ಟತೆಯ ದರ್ಶನ!
ಈ ‘ದರ್ಶನ’ ವೆನ್ನುವುದು ಒಬ್ಬೊಬ್ಬರಿಗೆ ಒಂದೊಂದು ಥರಹ ಆಗಬಹುದು. ಒಬ್ಬನಿಗೆ ಪ್ರೀತಿ ಎಂಬುದು ‘ಬಯಸುವುದು- ಪಡೆದುಕೊಳ್ಳುವುದು’ ಎಂತಲೂ, ‘ದ್ವೇಷ’ ಎಂಬುದು ‘ನಿರಾಕರಿಸುವುದು- ಕಳಚಿಕೊಳ್ಳುವುದು’ ಎಂತಲೂ ಅನ್ನಿಸಬಹುದು. ಹಾಗೆಯೇ ‘ದರ್ಶನ’ವೆನ್ನವುದು ಯಾವ ವಿಶೇಷ ಅರ್ಥವನ್ನೂ ಒಳಗೊಂಡಿರದೇ ಬರೀ ‘ಪದಪ್ರಯೋಗ’ದಂತೆಯೂ ಗೋಚರಿಸಬಹುದು! ಯಾವುದು ಹೇಗೇ ಎನಿಸಿದರೂ ಅದನ್ನು ‘ಸ್ವೀಕಾರ’ ಮಾಡುವುದು ವೈಯಕ್ತಿಕ ವಿಚಾರವಾಗಿ, ವ್ಯಕ್ತಿ ವೈಶಿಷ್ಟ್ಯಕ್ಕೆ ಸಾಕ್ಷಿಯಾಗುವುದರಿಂದ ಅದುವೂ ಅಧ್ಬುತ ವಿಚಾರವೇ!
ಹೀಗೆ ಕನಸಿನಲ್ಲಿ ಬಂದುದನ್ನು 'ವಿಚಾರ'ವೆಂದು ಪರಿಗಣಿಸುತ್ತಿರುವುದು ತಕ್ಕುದೇ? ಎನ್ನುವುದಾದರೆ- ಕನಸೂ ನನ್ನ ಪಾಲಿಗೆ ಜೀವನದ ಒಂದು ಮಗ್ಗುಲೇ ಆಗಿದೆ! ಒಂದು ಮಗ್ಗುಲಿನಲ್ಲಿ ನೈಜತೆಯೂ ಮತ್ತೊಂದರಲ್ಲಿ ಕನಸೂ ನೆಲೆಸಿರುವುದರಿಂದ, ಎರಡೂ ಕೇವಲ ‘ಜರುಗು’ವುದರಿಂದ. ನನಗೆ ಹೇಗೆ ದೊರೆಯಿತು? ಎನ್ನುವುದಕ್ಕಿಂತ, ಏನು ದೊರೆಯಿತು? ಎಂಬ ಪ್ರಶ್ನೆ ಆಶಾಭಾವವನ್ನು ಮೂಡಿಸಿ ಹೀಗೆ ಅವಲೋಕಿಸಲು ಪ್ರೇರೇಪಿಸಿದೆ.
(ಸಶೇಷ )
(image- web)