ಕಗ್ಗಂಟಿನಂತೆ ಕಂಡ ಆ ‘ ಬಣ್ಣದ ಕೊಡೆಯ ಹಿಂದೋಡಿದ’ ಕನಸು ಹೆಚ್ಚು ದಿನ ಕಾಡಲಿಲ್ಲ. ಸ್ವಲ್ಪ ಹೊತ್ತಷ್ಟೇ ಬೆಚ್ಚು ಬಿದ್ದಂತಿದ್ದು, ಅದು ರಚ್ಚೆಗೆ ತಿರುಗಿದಂತಾಗಿ, ನಂತರದಲ್ಲೇ ಯಥಾಸ್ಥಿತಿಗೆ ಮರಳಿಕೊಂಡುಬಿಡುವ ಮಗುವಿನಂತೆ! ಅದರ ಮನದ ಪ್ರಶಾಂತತೆ ನನ್ನಲ್ಲಿ ನೆಲೆಸಿರಲಿಲ್ಲವಾದರೂ ಆ ಕನಸು ಮಾತ್ರ ಒಂದು ‘ದಿಗಿಲಿನೊಡನೆ’ ತಣ್ಣಗಾಗಿ ಹೋಯಿತು- ತನ್ನಲ್ಲಿ ತಾನೇ ಸಿಕ್ಕಿಕೊಂಡು ಒದ್ದಾಡುತ್ತಿರುವ ಮನಕ್ಕೆ ಎಲ್ಲವೂ ಘಟನೆಗಳಷ್ಟೇ! ಕನಸು ಘಟನೆಯಂತೆಯೂ ಘಟನೆಗಳೆಲ್ಲಾ ಕನಸುಗಳಂತೆಯೂ ಕಂಡರೆ ಯಾವ ಸ್ಥಿತಿಯನ್ನೂ ಪರಿಶೀಲಿಸುವುದು ಅಸಾಧ್ಯ. ಈ ‘ಅಸಾಧ್ಯ’ದ ನಡುನಡುವೆಯೇ ಇರುವುದಾಗಿತ್ತು.
ಆದರೆ ನನಗೇ ತಿಳಿಯದಂತೆ ಹಲವು ಪ್ರಶ್ನೆಗಳು ನನ್ನನ್ನು ಕೊರೆಯುತ್ತಿದ್ದವೆಂದೂ, ಅವುಗಳು ಸಾಕಷ್ಟು ‘ಮೂಲಭೂತ’ವೂ ಮೂಲವ ಕೆದಕಿದಷ್ಟೂ ‘ಭೂತ’ದಂತೆ ಬೃಹತ್ ಭಯಾನಕವೂ ಆಗಿವೆಯೆಂದೂ ನನಗೆ ತಿಳಿಸಲು ಮತ್ತೆ 'ಕನಸೇ' ಬರಬೇಕಾಯಿತು! ಹ್ಞಾಂ, ಕನಸು ಬೇರೆಯೇ ರೂಪದಲ್ಲಿ ಮತ್ತೆ ಬೆನ್ನು ಹತ್ತಿತು, ನಿದ್ದೆಯ ಹತ್ತಿಕ್ಕಿತು.
ಕಾಣಲು ಮಬ್ಬು ಮಬ್ಬಾಗಿದ್ದ ಆ ಕನಸುಗಳು ಬರೀ ಸಂಭಾಷಣೆಗಳಾಗಿ, ಪ್ರಶ್ನೋತ್ತರಗಳಾಗಿ ಅತ್ಯಂತ ವ್ಯವಸ್ಥಿತವಾದ ನಿರೂಪಣೆಯ ಹೊಂದಿ ತೆರೆದುಕೊಳ್ಳಲಾರಂಭಿಸಿದವು. ಅಲ್ಲಿ ಎರಡು ಧ್ವನಿಗಳು ಮಾತಿಗಿಳಿಯುವವು. ಒಂದು- ಬಹುಪಾಲು ನನ್ನ ಸ್ವರವನ್ನೇ ಹೋಲುವಂತಿದ್ದ, ಮನಃಸ್ಥಿತಿಯ ದ್ಯೋತಕದಂತಿದ್ದ ಮೆದುವಾದ, ಅಸಹಾಯಕವೂ, ಅಮಾಯಕವೂ ಆದ ಧ್ವನಿ. ಮತ್ತೊಂದು- ಆತ್ಮವಿಶ್ವಾಸ, ಧೃಡತೆಯೊಡನೆ ಸನ್ಮಾರ್ಗವ ಸೂಚಿಸುವ, ಪೋಷಿಸುವ ಮಾರ್ಗದರ್ಶಿಯ ಪ್ರತಿರೂಪ. ‘ಮೆದು’ಧ್ವನಿ ಕೇಳುವುದು! ‘ಧೃಡತೆ’ ಪ್ರಶ್ನೆಯನ್ನವಲೋಕಿಸುತ್ತಾ ಅದನ್ನು ಅಭಿಪ್ರಾಯವೊಂದರತ್ತ ನಿರ್ದೇಶಿಸುವುದು. ಒಮ್ಮೆ ಆ ರೀತಿಯ ಕನಸುಗಳಲ್ಲಿ ಮನದಲ್ಲಿ ನಡೆದ ಮಾತುಕತೆ ಹೀಗಿತ್ತು.....
“ಧನಿ ೧ -ಪ್ರೀತಿಯೆಂದರೇನು?
ಧನಿ ೨ - ಭದ್ರತೆ
ಧನಿ ೧ - ದ್ವೇಷ?
ಧನಿ ೨- ಅಭದ್ರತೆ
ಧನಿ ೧- ಅವೆರಡರ ನಡುವಿನ ವ್ಯತ್ಯಾಸ?
ಧನಿ ೨- ಭದ್ರತೆ-ಅಭದ್ರತೆಗಳ ನಡುವಿನ ವ್ಯತ್ಯಾಸವೇ ಪ್ರೀತಿ-ದ್ವೇಷಕ್ಕೂ ಅನ್ವಯ. ಯಾವ ಮನಸ್ಸು ಭದ್ರತೆಯ ಬುನಾದಿಯನ್ನಾಗಿಸಿಕೊಂಡು ಬೆಳೆಯುವುದೋ ಅದು ಪ್ರೀತಿಸಲು ಸಾಧ್ಯವಾದುದ ಪ್ರೀತಿಸುತ್ತದೆ. ಇಲ್ಲವೋ ಯಾವ ಭಾವವನ್ನೂ ಅಂಕುರಿಸದೇ ಸಮಸ್ಥಿತಿಯ ಕಾಯ್ದುಕೊಳ್ಳುತ್ತದೆ. ಅದೇ ಅಭದ್ರತೆಯ ಮೇಲೆ ರೂಪಿತಗೊಂಡ ಮನಸ್ಸು ಕುದಿಯುತ್ತದೆ, ಕುಪಿತವಾಗುತ್ತದೆ! ತನಗೆ ಪ್ರೀತಿಪಾತ್ರರೆಂದೆನಿಸಿಕೊಂಡವರ ಪ್ರೀತಿಯ ಹೆಸರಲ್ಲಿ ‘ಸೆರೆ’ಯಲ್ಲಿ ಸಿಕ್ಕಿಸುತ್ತಾ ಇಲ್ಲದವರ ದ್ವೇಷದ ಹೆಸರಲ್ಲಿ ‘ಸೆರೆ’ಯಲ್ಲಿಡುತ್ತದೆ!”
..... ಈ ಪ್ರೀತಿ-ದ್ವೇಷಗಳೆರಡೂ ಬಹಳ ಪ್ರಾಥಮಿಕವಾಗಿ ಸರ್ವರಿಗೂ ಅನ್ವಯವಾಗುವ ಭಾವಗಳು. ಆದರೆ ಪ್ರೀತಿಯನ್ನು ‘ಆಕರ್ಷಣೆ’ಗೆ ಬದಲಿಯಂತೆಯೂ ದ್ವೇಷವನ್ನು ‘ಅಸಹಾಯಕತೆ’ಯ ಬದಲಿಗೂ ಪ್ರಯೋಗಿಸುತ್ತಾ ನಡೆದಿರುವುದು ವಿಪರ್ಯಾಸವೆನ್ನಬಹುದೇನೋ! ‘ಪ್ರೀತಿ-ದ್ವೇಷ’ವ ಕುರಿತ ಈ ಸಂಭಾಷಣೆ ಬಿಂಬಿಸುವುದಾದರೂ ಏನನ್ನು? ಪ್ರೀತಿಯ ಕೊರತೆಯನ್ನೋ? ದ್ವೇಷದ ಮನಃಸ್ಥಿತಿಯನ್ನೋ?
ನನಗೆನಿಸುವುದು- ಅದು ಸ್ಪಷ್ಟತೆಯ ದರ್ಶನ!
ಈ ‘ದರ್ಶನ’ ವೆನ್ನುವುದು ಒಬ್ಬೊಬ್ಬರಿಗೆ ಒಂದೊಂದು ಥರಹ ಆಗಬಹುದು. ಒಬ್ಬನಿಗೆ ಪ್ರೀತಿ ಎಂಬುದು ‘ಬಯಸುವುದು- ಪಡೆದುಕೊಳ್ಳುವುದು’ ಎಂತಲೂ, ‘ದ್ವೇಷ’ ಎಂಬುದು ‘ನಿರಾಕರಿಸುವುದು- ಕಳಚಿಕೊಳ್ಳುವುದು’ ಎಂತಲೂ ಅನ್ನಿಸಬಹುದು. ಹಾಗೆಯೇ ‘ದರ್ಶನ’ವೆನ್ನವುದು ಯಾವ ವಿಶೇಷ ಅರ್ಥವನ್ನೂ ಒಳಗೊಂಡಿರದೇ ಬರೀ ‘ಪದಪ್ರಯೋಗ’ದಂತೆಯೂ ಗೋಚರಿಸಬಹುದು! ಯಾವುದು ಹೇಗೇ ಎನಿಸಿದರೂ ಅದನ್ನು ‘ಸ್ವೀಕಾರ’ ಮಾಡುವುದು ವೈಯಕ್ತಿಕ ವಿಚಾರವಾಗಿ, ವ್ಯಕ್ತಿ ವೈಶಿಷ್ಟ್ಯಕ್ಕೆ ಸಾಕ್ಷಿಯಾಗುವುದರಿಂದ ಅದುವೂ ಅಧ್ಬುತ ವಿಚಾರವೇ!
ಹೀಗೆ ಕನಸಿನಲ್ಲಿ ಬಂದುದನ್ನು 'ವಿಚಾರ'ವೆಂದು ಪರಿಗಣಿಸುತ್ತಿರುವುದು ತಕ್ಕುದೇ? ಎನ್ನುವುದಾದರೆ- ಕನಸೂ ನನ್ನ ಪಾಲಿಗೆ ಜೀವನದ ಒಂದು ಮಗ್ಗುಲೇ ಆಗಿದೆ! ಒಂದು ಮಗ್ಗುಲಿನಲ್ಲಿ ನೈಜತೆಯೂ ಮತ್ತೊಂದರಲ್ಲಿ ಕನಸೂ ನೆಲೆಸಿರುವುದರಿಂದ, ಎರಡೂ ಕೇವಲ ‘ಜರುಗು’ವುದರಿಂದ. ನನಗೆ ಹೇಗೆ ದೊರೆಯಿತು? ಎನ್ನುವುದಕ್ಕಿಂತ, ಏನು ದೊರೆಯಿತು? ಎಂಬ ಪ್ರಶ್ನೆ ಆಶಾಭಾವವನ್ನು ಮೂಡಿಸಿ ಹೀಗೆ ಅವಲೋಕಿಸಲು ಪ್ರೇರೇಪಿಸಿದೆ.
(ಸಶೇಷ )
(image- web)
3 comments:
ಸುಶ್ಮಾ, ತರ್ಕ ಸ್ವಲ್ಪ ಗೊಂದಲ ಅನ್ನಿಸ್ತು ಮೊದಲಿಗೆ ಆದರೆ ಅದರ ವಿಶ್ಲೇಷಣೆ ಮತ್ತೆ ಪರ್ಯಾಯ ಪದ ಬಳಕೆಯ ಬಗ್ಗೆ ನಿಮ್ಮ ತರ್ಕ...ಎಲ್ಲಾ ಮತ್ತೊಮ್ಮೆ ಓದುವಂತೆ ಮಾಡಿದ್ದು ನಿಜ...ಹೌದು ಯಾವುದೇ ಪದ ಅದನ್ನು ಗ್ರಹಿಸುವವರ ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ... ಚನ್ನಾಗಿದೆ..ತರ್ಕ, ಜಿಜ್ಞಾಸೆ, ತತ್ವ, ವಾದ ಎಲ್ಲದರ ಸಮ್ಮಿಲನ ನಿಮ್ಮ ಲೇಖನ.
ನಿಮ್ಮ "ಕನಸ ಕಥನ" ಮೂರೂ ಅಂಕಣ ಬರಹಗಳನು ಸವಿಯುವ ಅವಕಾಶ ಸಿಕ್ಕಿದೆ.
ಮೂರೂ ಕಥನಗಳನ್ನು ಓದಿದೆ. ಜಿಜ್ಞಾಸು ವಿಚಾರಗಳ ಮಂಥನ, ತರ್ಕಬದ್ಧ ನಿಲುವು ಅಲ್ಲಿದೆ.
ಹೀಗೆ ಬರಲಿ. ಶುಭವಾಗಲಿ
@ ಆಜಾದ್ ಸರ್ & ಪುಷ್ಪರಾಜ್ ಸರ್ ಅಭಿಪ್ರಾಯ, ಪ್ರೋತ್ಸಾಹಕ್ಕೆ ಧನ್ಯವಾದ. ಬರುತ್ತಲಿರಿ..
Post a Comment