Friday, July 20, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 4


ಕನಸಿನ ಲಹರಿಯ ಮತ್ತೆ ಸೇರಿದಂತೆ..
                 ‘ದಿನಕ್ಕೊಂದು ಮಕ್ಕಳ ಕಥೆ’ಯಂತೆ ದಿನಕ್ಕೆ ಒಂದೋ, ಎರಡು.. ಹೀಗೇ ಹಲವು ಪ್ರಸಂಗಗಳು ಕೆಲ ಸಲ ಸರಣಿಯಲ್ಲಿ ಬಿಚ್ಚಿಕೊಳ್ಳುತ್ತಾ ಮನಸ್ಸಿಗೆ ಅದರ ಮೂಲದ ಕುರಿತಾದ ‘ಆಘಾತ’ವನ್ನೂ, ನೀತಿಯ ಕುರಿತಾದ ‘ಆಹ್ಲಾದ’ವನ್ನೂ ನೀಡುತ್ತಾ ನಡೆದವು.
ಮತ್ತೊಂದು ಕನಸಿನ ಸಂಭಾಷಣೆ ಈ ರೀತಿಯಿತ್ತು...
ಧನಿ ಪ್ರಶ್ನಿಸುವುದು-
“ಮೌನವಿದ್ದಾಗಲೂ ಮನಸ್ಸು ಸುಮ್ಮನಿರುತ್ತದೆ. ಅದರ ಹಾಗೆಯೇ ಸಾವೂ ಸುಮ್ಮನಿರುವುದೇ ತಾನೇ? ಮೌನಕ್ಕೂ, ಸಾವಿಗೂ ಏನು ವ್ಯತ್ಯಾಸ?”
ಅವಲೋಕನ- “ಹೊರಗೆ ಸುಮ್ಮನಿದ್ದು ಒಳಗೆ ಜಾಗೃತವಾಗಿರುವುದು ಮೌನ. ಹೊರಗೂ ಸುಮ್ಮನಿದ್ದು ಒಳಗೂ ಸುಮ್ಮನಿರುವುದು ಸಾವು!”
                ...ಆ ಹೇಳಿಕೆಯಲ್ಲಿ ವ್ಯಕ್ತವಾದ ಅಭಿಪ್ರಾಯ ‘ಮೌನ’, ಸಾವುಗಳನ್ನು ಯಾವ ಬಂಧಗಳಿಗೂ, ಬಾಂಧವ್ಯಗಳಿಗೂ ಅನ್ವಯಿಸದೇ ‘ಸ್ಥಿತಿಗೆ’ ಮಾತ್ರ ಅನ್ವಯಿಸಿದ್ದರಿಂದಲೋ ಏನೋ ನನಗದು ಬಹಳ ಕಿರಿಕಿರಿಯಾಗೇ ತೋರಿತ್ತು. ಒಮ್ಮೊಮ್ಮೆ ಎನಿಸುತ್ತಿತ್ತು ಬದುಕು- ಸಾವುಗಳ ಕುರಿತ ‘ಸಮ’ವೆಂದು ಕರೆಯಲ್ಪಡುವ, ‘ವಿಮುಖ’ವೆಂದು ತೋರುವ ಭಾವ ತೋರುವುದು ಸರಿಯೆ? ಒಂದು ಸಾರಿ ಮನಸ್ಸು ಪಿಸುಗುಟ್ಟಿತು. “ಸಾವು- ನೋವುಗಳು ಪ್ರಕೃತಿದತ್ತವಾದವು. ಹಾಗೇ ದುಃಖ-ದುಮ್ಮಾನಗಳೂ ಸಹ. ಅದರಂತೆಯೇ ಈ ‘ವಿಮುಖ- ಸಮ’ ಭಾವವೂ ಪ್ರಕೃತಿಯಂಶವೇ. ಯಾರಲ್ಲಿ ಯಾವ ಅಂಶ ವ್ಯಕ್ತಗೊಂಡರೆ ಅವರ ಜೀವ ಸಮಾಧಾನಗೊಳ್ಳುವುದೋ ಅದು ವ್ಯಕ್ತಗೊಳ್ಳುವುದಷ್ಟೇ”
                 ಈ ತೆರನಾದ ಸಂಭಾಷಣೆಗಳು ನನಗೆ ಉತ್ತರದಂತೆ ಕೆಲವು ಸಾರಿ ಕಂಡರೆ, ಮತ್ತೊಮ್ಮೆ ಒಳಗೆ ಅಪ್ರಯತ್ನ ಪೂರ್ವಕವಾಗಿ ನಡೆಯುತ್ತಿರುವ ಯುದ್ಧವೊಂದರ ಪ್ರತೀಕವಾಗಿ ತೋರುತ್ತವೆ.  ಆಗಿನ ಸಂದರ್ಭದಲ್ಲಿ ಅದಕ್ಕೆ ‘ಉತ್ತರ’, ‘ಯುದ್ಧ’ ಎಂಬ ಶೀರ್ಷಿಕೆಗಳ ನೀಡದೇ, ಸರಿಯೆನಿಸಿದರೆ ಕ್ಷಣಿಕವೆಂದಷ್ಟೇ ತೋರುವ ಸಮಾಧಾನವನ್ನು, ಇಲ್ಲವೆನಿಸಿದರೆ ಬಿಡದಂತೆ ಕಾಡುವ ದ್ವಂದ್ವವನ್ನು ಅನುಭವಿಸಿ ಸುಮ್ಮನಾಗುತ್ತಿದ್ದೆ.
                 ಬರೀ ಒತ್ತಡಗಳ ಅನುಭವಿಸಿ ಸುಮ್ಮನಾಗುವುದಾಗಿದ್ದರೆ ಅಂತಹ ಸಮಸ್ಯೆ ಇರುತ್ತಿರಲಿಲ್ಲನೋ. ನಿಜವಾದ ಒತ್ತಡದ ಅನುಭವವಾಗುವುದು ಒತ್ತಡದ ಮೂಲವನ್ನು ಒತ್ತಿ ವಿಸ್ತರಿಸುತ್ತಾ ಪರರೊಡನೆ ಚರ್ಚಿಸಿದಾಗಲೇ. ನಮಗೆ ಕಷ್ಟ ಎನಿಸಿದ್ದು, ಅವರಿಗೂ ಅಷ್ಟೇ ಪ್ರಮಾಣದ ಕಷ್ಟವಾಗಿ ಕಂಡರೆ ಒತ್ತಡ ನಿವಾರಣೆ ಸ್ವಲ್ಪ ಮಟ್ಟಿಗೆ ಸಾಧ್ಯವೇನೋ. ಅದನ್ನು ಬಿಟ್ಟು,ನಮ್ಮ ಕಷ್ಟಗಳು ‘ಅದೇನು ಮಹಾ!ಅಷ್ಟೇನು ಕಷ್ಟವಲ್ಲ’ ಎಂದೋ, ‘ಅಬ್ಬ! ಅತ್ಯಂತ ಕ್ಲಿಷ್ಟಕರ’ ವೆಂದೋ ಏನಾದರೂ ಎನಿಸಿದರೆ ನಮ್ಮ ಕೋಟಲೆಗಳಿಗೆ ಮತ್ತಷ್ಟು ಕೊಂಕು ಸೇರಿಸಿದಂತೆಯೇ! ಕನಸು ಶುರುವಾದಾಗಿನ ಕಾಲದ ನನ್ನ ಸಮಸ್ಯೆ ಏನಾಗಿತ್ತೆಂದರೆ ನನಗೆ ಪ್ರಯಾಸಕರವಾಗಿ ಕಾಣುತ್ತಿದ್ದ ನನ್ನ ಸ್ಥಿತಿ ನೋಡುಗರಿಗೆ ಅಷ್ಟೇನು ಕಷ್ಟಕರವಾಗಿ ಕಾಣದೇ, ನನಗೆ ತಮ್ಮ ಉತ್ತರಗಳಿಂದ ದಾರಿಯೊಂದಕ್ಕೆ ಹರಿಬಿಡಲು ಬರುವಂತಿದ್ದ ಕನಸುಗಳು ಕ್ಲಿಷ್ಟಕರವಾಗಿ ಗೋಚರಿಸುತ್ತಿದ್ದವು! ಅದು ‘ಬರುತ್ತದೆ’ ಎನ್ನುವುದು ನನಗೂ ಆಗ ಆಘಾತ ತರುತ್ತಿತ್ತೇ ವಿನಃ ಅಲ್ಲಿ ಬಂದದ್ದಲ್ಲ.
                   ಈಗಲೂ ಕನಸಿನ ಮೂಲದ ಕುರಿತಂತೆ ವಿಸ್ಮಯ, ಅಚ್ಚರಿಗಳು ಎಲ್ಲರಂತೆ ನನಗೂ ಉಳಿದಿರುವುದು ನಿಜವಾದರೂ ಬದುಕಿನ ಎಲ್ಲಾ ‘ಇರುವಿಕೆ- ಆಗುವಿಕೆ’ಗಳ ಮೂಲವೇ ಆಶ್ಚರ್ಯ, ಪ್ರಶ್ನೆ, ಗೊಂದಲಗಳ ಗೂಡಾಗಿರುವಾಗ ಕನಸನ್ನೂ ಆ ಗೂಡಿನೊಳಗೇ ಹಾಕಿ ‘ಕಾಣದ, ತೋರದ’ ವಿಚಾರಗಳಲ್ಲಿ ಕಾಣುವ ಸೊಬಗನ್ನು ಕಾಣುವ ಕನಸುಗಳ ಕುರಿತಂತೆಯೂ ವಿಸ್ತರಿಸಿದ್ದೇನೆ!
                   ಹೀಗೇ ಪುಟ್ಟಪುಟ್ಟ ಪ್ರಶ್ನೋತ್ತರಗಳ ಸಾಲು ಸಾಲು ಮೂಡಿ ಮರೆಯಾಗುತ್ತಿರುವಾಗ ನನಗೆ ಪದೇ ಪದೇ ಎನಿಸುತ್ತಿದ್ದುದು ‘ಪ್ರಜ್ಞಾಪೂರ್ವಕವಾಗಿ ಈ ಪ್ರಶ್ನೆಯೂ ನನ್ನಲ್ಲಿರಲಿಲ್ಲ, ಉತ್ತರವನ್ನೂ ನಾ ಬಯಸಿರಲಿಲ್ಲ‘ ಎಂಬುದು. ಏಕೆಂದರೆ ನನ್ನ ಅಂದಿನ ಖಿನ್ನ ಮನಃಸ್ಥಿತಿ ‘ನಿರಾಸಕ್ತಿ’ಯ ಹೊಂದಿದೆ ಎಂಬುದೊಂದನ್ನು ಬಿಟ್ಟು ಇನ್ನೇನೂ ನನಗೇ ಹೊಳೆದಿರಲಿಲ್ಲ. ಅವ್ಯಾವುವೂ ನಾನು ಆ ಸಮಯದ ಆಜುಬಾಜಿನಲ್ಲಿ  ಯೋಚಿಸಿದ ವಿಚಾರಗಳೂ ಅಲ್ಲ!
                   ಬಹಳಷ್ಟು ದಿನ ‘ನನ್ನ ಕನಸುಗಳು ನಾನು ಯೋಚಿಸದ ವಿಚಾರಗಳ ಹೊಂದಿರುತ್ತವೆ’ ಎಂದೇ ಭಾವಿಸಿದ್ದವಳಿಗೆ ಒಮ್ಮೆ  ಹೀಗನ್ನಿಸಿತು- “ನಾನೆಂದರೇನು? ಪ್ರಮುಖ, ಪ್ರಾಥಮಿಕವಾಗಿ ‘ಮನುಜ’ಳು ತಾನೆ? ಮನಷ್ಯ ಹೊತ್ತು ತಂದ ಪ್ರಶ್ನೆಗಳೇ ಅಲ್ಲವೇ ನನ್ನಲ್ಲಿ ಉದ್ಭವಿಸುತ್ತಿಹುದು? ‘ಅದು ಹೇಗೆ  ಬೇರೆಯವರಲ್ಲಿ ಮೂಡದ್ದು ನನಗೆ ಮೂಡಿತು?’ ಎಂಬುದು ಪ್ರಶ್ನೆಯಲ್ಲ. ಕಾರಣ, ಎಲ್ಲರಲ್ಲೂ ಮೂಡುವ ‘ಎಲ್ಲವೂ’ ಮತ್ತು ?ಅವೇ ನಮ್ಮಲ್ಲೂ ಉದಯಿಸಬೇಕು ಎನ್ನುವುದಾಗಿದ್ದರೆ ಒಂದೇ ಮಾದರಿಯ ವ್ಯಕ್ತಿಗಳು ಒಂದೇ ತೆರನಾದ ಕೆಲಸಗಳನ್ನು ಒಂದೇ ಸಮಯದಲ್ಲಿ ಮಾಡುತ್ತಿರಬೇಕಿತ್ತು! ಒಬ್ಬಬ್ಬರ ಆಸಕ್ತಿ ಒಂದೊಂದು ತೆರನಾದುದು. ತನ್ನ ಮೂಲಕ ಇತರರಲ್ಲಿ, ‘ಇತರೆ’ಗಳಲ್ಲಿ ಆಸಕ್ತಿ ಹೊಂದುವಂತೆ ತನ್ಮೂಲಕ ತನ್ನಲ್ಲೇ ಆಸಕ್ತಿ ಹೊಂದುವುದೂ ಒಂದು ಬಗೆಯೇ! ಈ ತರಹದ ‘ಆಸಕ್ತಿ’ಕರ ಪಯಣವೇ ಈ ಕನಸಾಗಿದೆ!?
                  ಮತ್ತೆ ಚಟುಕು ಪ್ರಶ್ನೋತ್ತರಗಳ ಸಾಲಿಗೆ ಮರಳುವುದಾದರೆ ಅವುಗಳಲ್ಲಿ ಅಂದು ಮರೆಯಾಗಿದ್ದ ಅರ್ಥಗಳು ತೆರೆದುಕೊಳ್ಳುವುವು.. 
(¸À±ÉõÀ)

(Image- Web)
 

Thursday, March 15, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ ೩


ಕಗ್ಗಂಟಿನಂತೆ ಕಂಡ ಆ ‘ ಬಣ್ಣದ ಕೊಡೆಯ ಹಿಂದೋಡಿದ’ ಕನಸು ಹೆಚ್ಚು ದಿನ ಕಾಡಲಿಲ್ಲ. ಸ್ವಲ್ಪ ಹೊತ್ತಷ್ಟೇ ಬೆಚ್ಚು ಬಿದ್ದಂತಿದ್ದು, ಅದು ರಚ್ಚೆಗೆ ತಿರುಗಿದಂತಾಗಿ, ನಂತರದಲ್ಲೇ ಯಥಾಸ್ಥಿತಿಗೆ ಮರಳಿಕೊಂಡುಬಿಡುವ ಮಗುವಿನಂತೆ! ಅದರ ಮನದ ಪ್ರಶಾಂತತೆ ನನ್ನಲ್ಲಿ ನೆಲೆಸಿರಲಿಲ್ಲವಾದರೂ ಆ ಕನಸು ಮಾತ್ರ ಒಂದು ‘ದಿಗಿಲಿನೊಡನೆ’ ತಣ್ಣಗಾಗಿ ಹೋಯಿತು- ತನ್ನಲ್ಲಿ ತಾನೇ ಸಿಕ್ಕಿಕೊಂಡು ಒದ್ದಾಡುತ್ತಿರುವ ಮನಕ್ಕೆ ಎಲ್ಲವೂ ಘಟನೆಗಳಷ್ಟೇ! ಕನಸು ಘಟನೆಯಂತೆಯೂ ಘಟನೆಗಳೆಲ್ಲಾ ಕನಸುಗಳಂತೆಯೂ ಕಂಡರೆ ಯಾವ ಸ್ಥಿತಿಯನ್ನೂ ಪರಿಶೀಲಿಸುವುದು ಅಸಾಧ್ಯ. ಈ ‘ಅಸಾಧ್ಯ’ದ ನಡುನಡುವೆಯೇ ಇರುವುದಾಗಿತ್ತು.
ಆದರೆ ನನಗೇ ತಿಳಿಯದಂತೆ ಹಲವು ಪ್ರಶ್ನೆಗಳು ನನ್ನನ್ನು ಕೊರೆಯುತ್ತಿದ್ದವೆಂದೂ, ಅವುಗಳು ಸಾಕಷ್ಟು ‘ಮೂಲಭೂತ’ವೂ ಮೂಲವ ಕೆದಕಿದಷ್ಟೂ ‘ಭೂತ’ದಂತೆ ಬೃಹತ್ ಭಯಾನಕವೂ ಆಗಿವೆಯೆಂದೂ ನನಗೆ ತಿಳಿಸಲು ಮತ್ತೆ 'ಕನಸೇ' ಬರಬೇಕಾಯಿತು! ಹ್ಞಾಂ, ಕನಸು ಬೇರೆಯೇ ರೂಪದಲ್ಲಿ ಮತ್ತೆ ಬೆನ್ನು ಹತ್ತಿತು, ನಿದ್ದೆಯ ಹತ್ತಿಕ್ಕಿತು.
ಕಾಣಲು ಮಬ್ಬು ಮಬ್ಬಾಗಿದ್ದ ಆ ಕನಸುಗಳು ಬರೀ ಸಂಭಾಷಣೆಗಳಾಗಿ, ಪ್ರಶ್ನೋತ್ತರಗಳಾಗಿ ಅತ್ಯಂತ ವ್ಯವಸ್ಥಿತವಾದ ನಿರೂಪಣೆಯ ಹೊಂದಿ ತೆರೆದುಕೊಳ್ಳಲಾರಂಭಿಸಿದವು. ಅಲ್ಲಿ ಎರಡು ಧ್ವನಿಗಳು ಮಾತಿಗಿಳಿಯುವವು. ಒಂದು- ಬಹುಪಾಲು ನನ್ನ ಸ್ವರವನ್ನೇ ಹೋಲುವಂತಿದ್ದ, ಮನಃಸ್ಥಿತಿಯ ದ್ಯೋತಕದಂತಿದ್ದ ಮೆದುವಾದ, ಅಸಹಾಯಕವೂ, ಅಮಾಯಕವೂ ಆದ ಧ್ವನಿ. ಮತ್ತೊಂದು- ಆತ್ಮವಿಶ್ವಾಸ, ಧೃಡತೆಯೊಡನೆ ಸನ್ಮಾರ್ಗವ ಸೂಚಿಸುವ, ಪೋಷಿಸುವ ಮಾರ್ಗದರ್ಶಿಯ ಪ್ರತಿರೂಪ. ‘ಮೆದು’ಧ್ವನಿ ಕೇಳುವುದು! ‘ಧೃಡತೆ’ ಪ್ರಶ್ನೆಯನ್ನವಲೋಕಿಸುತ್ತಾ ಅದನ್ನು ಅಭಿಪ್ರಾಯವೊಂದರತ್ತ ನಿರ್ದೇಶಿಸುವುದು. ಒಮ್ಮೆ ಆ ರೀತಿಯ ಕನಸುಗಳಲ್ಲಿ ಮನದಲ್ಲಿ ನಡೆದ ಮಾತುಕತೆ ಹೀಗಿತ್ತು.....
“ಧನಿ ೧ -ಪ್ರೀತಿಯೆಂದರೇನು?
ಧನಿ ೨ - ಭದ್ರತೆ
ಧನಿ ೧ - ದ್ವೇಷ?
ಧನಿ ೨- ಅಭದ್ರತೆ
ಧನಿ ೧- ಅವೆರಡರ ನಡುವಿನ ವ್ಯತ್ಯಾಸ?
ಧನಿ ೨- ಭದ್ರತೆ-ಅಭದ್ರತೆಗಳ ನಡುವಿನ ವ್ಯತ್ಯಾಸವೇ ಪ್ರೀತಿ-ದ್ವೇಷಕ್ಕೂ ಅನ್ವಯ. ಯಾವ ಮನಸ್ಸು ಭದ್ರತೆಯ ಬುನಾದಿಯನ್ನಾಗಿಸಿಕೊಂಡು ಬೆಳೆಯುವುದೋ ಅದು ಪ್ರೀತಿಸಲು ಸಾಧ್ಯವಾದುದ ಪ್ರೀತಿಸುತ್ತದೆ. ಇಲ್ಲವೋ ಯಾವ ಭಾವವನ್ನೂ ಅಂಕುರಿಸದೇ ಸಮಸ್ಥಿತಿಯ ಕಾಯ್ದುಕೊಳ್ಳುತ್ತದೆ. ಅದೇ ಅಭದ್ರತೆಯ ಮೇಲೆ ರೂಪಿತಗೊಂಡ ಮನಸ್ಸು ಕುದಿಯುತ್ತದೆ, ಕುಪಿತವಾಗುತ್ತದೆ! ತನಗೆ ಪ್ರೀತಿಪಾತ್ರರೆಂದೆನಿಸಿಕೊಂಡವರ ಪ್ರೀತಿಯ ಹೆಸರಲ್ಲಿ ‘ಸೆರೆ’ಯಲ್ಲಿ ಸಿಕ್ಕಿಸುತ್ತಾ ಇಲ್ಲದವರ ದ್ವೇಷದ ಹೆಸರಲ್ಲಿ ‘ಸೆರೆ’ಯಲ್ಲಿಡುತ್ತದೆ!”
..... ಈ ಪ್ರೀತಿ-ದ್ವೇಷಗಳೆರಡೂ ಬಹಳ ಪ್ರಾಥಮಿಕವಾಗಿ ಸರ್ವರಿಗೂ ಅನ್ವಯವಾಗುವ ಭಾವಗಳು. ಆದರೆ ಪ್ರೀತಿಯನ್ನು ‘ಆಕರ್ಷಣೆ’ಗೆ ಬದಲಿಯಂತೆಯೂ ದ್ವೇಷವನ್ನು ‘ಅಸಹಾಯಕತೆ’ಯ ಬದಲಿಗೂ ಪ್ರಯೋಗಿಸುತ್ತಾ ನಡೆದಿರುವುದು ವಿಪರ್ಯಾಸವೆನ್ನಬಹುದೇನೋ! ‘ಪ್ರೀತಿ-ದ್ವೇಷ’ವ ಕುರಿತ ಈ ಸಂಭಾಷಣೆ ಬಿಂಬಿಸುವುದಾದರೂ ಏನನ್ನು? ಪ್ರೀತಿಯ ಕೊರತೆಯನ್ನೋ? ದ್ವೇಷದ ಮನಃಸ್ಥಿತಿಯನ್ನೋ?
ನನಗೆನಿಸುವುದು- ಅದು ಸ್ಪಷ್ಟತೆಯ ದರ್ಶನ!
ಈ ‘ದರ್ಶನ’ ವೆನ್ನುವುದು ಒಬ್ಬೊಬ್ಬರಿಗೆ ಒಂದೊಂದು ಥರಹ ಆಗಬಹುದು. ಒಬ್ಬನಿಗೆ ಪ್ರೀತಿ ಎಂಬುದು ‘ಬಯಸುವುದು- ಪಡೆದುಕೊಳ್ಳುವುದು’ ಎಂತಲೂ, ‘ದ್ವೇಷ’ ಎಂಬುದು ‘ನಿರಾಕರಿಸುವುದು- ಕಳಚಿಕೊಳ್ಳುವುದು’ ಎಂತಲೂ ಅನ್ನಿಸಬಹುದು. ಹಾಗೆಯೇ ‘ದರ್ಶನ’ವೆನ್ನವುದು ಯಾವ ವಿಶೇಷ ಅರ್ಥವನ್ನೂ ಒಳಗೊಂಡಿರದೇ ಬರೀ ‘ಪದಪ್ರಯೋಗ’ದಂತೆಯೂ ಗೋಚರಿಸಬಹುದು! ಯಾವುದು ಹೇಗೇ ಎನಿಸಿದರೂ ಅದನ್ನು ‘ಸ್ವೀಕಾರ’ ಮಾಡುವುದು ವೈಯಕ್ತಿಕ ವಿಚಾರವಾಗಿ, ವ್ಯಕ್ತಿ ವೈಶಿಷ್ಟ್ಯಕ್ಕೆ ಸಾಕ್ಷಿಯಾಗುವುದರಿಂದ ಅದುವೂ ಅಧ್ಬುತ ವಿಚಾರವೇ!
ಹೀಗೆ ಕನಸಿನಲ್ಲಿ ಬಂದುದನ್ನು 'ವಿಚಾರ'ವೆಂದು ಪರಿಗಣಿಸುತ್ತಿರುವುದು ತಕ್ಕುದೇ? ಎನ್ನುವುದಾದರೆ- ಕನಸೂ ನನ್ನ ಪಾಲಿಗೆ ಜೀವನದ ಒಂದು ಮಗ್ಗುಲೇ ಆಗಿದೆ! ಒಂದು ಮಗ್ಗುಲಿನಲ್ಲಿ ನೈಜತೆಯೂ ಮತ್ತೊಂದರಲ್ಲಿ ಕನಸೂ ನೆಲೆಸಿರುವುದರಿಂದ, ಎರಡೂ ಕೇವಲ ‘ಜರುಗು’ವುದರಿಂದ. ನನಗೆ ಹೇಗೆ ದೊರೆಯಿತು? ಎನ್ನುವುದಕ್ಕಿಂತ, ಏನು ದೊರೆಯಿತು? ಎಂಬ ಪ್ರಶ್ನೆ ಆಶಾಭಾವವನ್ನು ಮೂಡಿಸಿ ಹೀಗೆ ಅವಲೋಕಿಸಲು ಪ್ರೇರೇಪಿಸಿದೆ.
(ಸಶೇಷ )
(image- web)

Tuesday, February 14, 2012

ಅಂಕಣ- ಕಂಡೆ ನಾನೊಂದು ಕನಸು-೨ (ಅಂತರ್ಗಮನ )

‘ಸಿಹಿಗಾಳಿ’ ಮಾಸ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಅ೦ಕಣ ಬರಹ - ‘ಕಂಡೆ ನಾನೊಂದು ಕನಸು’ವಿನ ಎರಡನೇ ಭಾಗವನ್ನು ಪ್ರಕಟಿಸುತ್ತಿದ್ದೇನೆ. ಓದಿ ಪ್ರೊತ್ಸಾಹಿಸುವೆರೆ೦ದು ನಂಬುವೆ...... :)



ಹಿ೦ದಿನ ಬರಹದಲ್ಲಿ ಬರೆದ೦ತೆ, ಬೆಳಕಿನ ತೀಕ್ಷ್ಣ ಕಿರಣ ಕಣ್ಣ ಮು೦ದೆ ಸರಿದು ಪ್ರಶಾ೦ತತೆಗೆ ಎಡೆ ಮಾಡಿಕೊಟ್ಟ ಘಟನೆ ಸರಿದು ತಿಂಗಳುಗಳೇ ಉರುಳಿದ್ದವು. ನನಗೇಕೋ ನನ್ನ ‘ನಿರಾಸಕ್ತಿ’ ಅನುಪಯುಕ್ತವೂ, ಜಡವೂ ಎನಿಸಲಾರಂಭಿಸಿ ಅದುವೂ ಬೇಸರ ಬಂದು ಹೋಗಿತ್ತು. “ಖಾಯಿಲೆಗೆ ಮಾತ್ರ ಔಷಧವಲ್ಲ ಸ್ಥಿತಿಗಳಿಗೂ ಔಷಧವಿದೆ’ ಎಂಬುದನ್ನು ಬಲವಾಗಿ ನಂಬಿದ ಜಗತ್ತು ನೀಡಿದ ಔಷಧಗಳ ಚಾಚೂ ತಪ್ಪದೆ ತೆಗೆದುಕೊಳ್ಳುವುದಾಗಿತ್ತು. ಪ್ರತಿ ಬಾರಿಯೂ ಆಲೋಚನೆಯೊಂದು ಪುಟಿದು ನೀರಿನೊಳಗೆ ಕರಗುತ್ತಿತ್ತು - “ಮನಸ್ಸು ಚಿಂತೆ ಮಾಡುತ್ತದೆ. ಖಿನ್ನವಾಗುತ್ತದೆ. ದೇಹವ ಪ್ರಚೋಧಿಸುತ್ತದೆ. ದೇಹ ಜಡವಾಗುತ್ತದೆ, ಬಲಹೀನ ವಾಗುತ್ತದೆ, ರೋದಿಸುತ್ತದೆ. ಔಷಧ ಜಡತೆಯ, ಆಲಸ್ಯವ ದೂರ ಮಾಡಿ ಮನಸ್ಸಿಗೆ ಎದುರೇಟು ನೀಡಬಹುದು ‘ಆಹಾ! ನೀ ಹೇಳಿದಂತೆ ಇನ್ನು ನಡೆಯೆನು’ ಎನಿಸಬಹುದು. ನಂತರದಲ್ಲೇ ಮನ ಚಿಗುರಿ ಜೀವನದ ಬಗೆಗೆ 'ಏಕೆ'ಗಳ ಶುರುವಿಟ್ಟರೆ ನನ್ನ ಮಾತ್ರೆಯ ಗೋಲಿ ಅದನ್ನುತ್ತರಿಸುವುದೇ?”

ನನ್ನ ಪಾಲಿಗೆ ಔಷಧವೂ ಟಾರ್ಚ್ ಉಪಮೆಯಂತೆಯೇ ಗೋಚರಿಸಲಾರಂಭಿಸಿತ್ತು. ಆದರೆ ಅದರ ತೊರೆಯುವ ಕುರಿತು ನಾನೇನು ಯೋಚಿಸಲಿಲ್ಲ. – “ಬದುಕಿನ ಜವಾಬ್ದಾರಿಗಳ ಜವಾಬ್ದಾರರೆಂದು ಕರೆಸಿಕೊಳ್ಳುವವರ ಕೈ ಗಿಟ್ಟು ಅವರ ಸಮ್ಮತಿಯ ಕಾಯುವುದು ನಮ್ಮ ಜಾಯಮಾನವಲ್ಲವೇ?” ನನ್ನಲ್ಲಿ ಒಂದು ಪ್ರಶ್ನೆಯಿದೆ ಎಂದೂ ತಿಳಿಯಲಸಾಧ್ಯವಾದ ವೃತ್ತಿಪರರ ಕೈಗೆ ಬದುಕು ಕೊಟ್ಟು ‘ನೀ ಹೇಳಿದಂತೆ ನಡೆಯುವೆ’ ಎನ್ನುವುದರಲ್ಲೇ ನನಗೂ ಸಮಾಧಾನವಿದ್ದಂತಿತ್ತು - ಚಿಕ್ಕವರು ದೊಡ್ಡದರ ಬಗೆಗೆ ತಲೆ ಕೆಡಿಸಿಕೊಳ್ಳಬಾರದೆಂದು ತಿಳಿ ಹೇಳುತ್ತಾ, ಹಾಗೆಯೇ ಜವಾಬ್ದಾರಿಯೆಂಬುದು ಬಹು ದೊಡ್ಡ ಕರ್ತವ್ಯವೆಂದು ಬಿಂಬಿಸುತ್ತಾ, ಆದರೆ ಅದನ್ನು ಮಾತ್ರ ನಾವು ಹೊತ್ತುಕೊಳ್ಳಲೆಬೇಕೆಂದು ಆಜ್ಞಾಪಿಸಿ ಬಹಳ ಸಾರಿ ವಿರೋಧಾಭಾಸವ ಮೆರೆಯುವ ಸಮಾಜದ ಕಟ್ಟುನಿಟ್ಟು ಪರಿಪಾಲಕಳಲ್ಲದಿದ್ದರೂ ಅಪ್ರಜ್ಞಾಪೂರ್ವಕವಾಗಿ ಹೊತ್ತ ‘ಸಾಮಾಜಿಕ ಜವಾಬ್ದಾರಿಯ’ ಕಾರಣದಿಂದಲೋ ಏನೋ ನನಗೆ ಹಾಗೆ ಸಮ್ಮತಿಗೆ ಕಾಯುವುದರಲ್ಲೇ ಯಾತನಾದಾಯಕವಾದ ಮುದವಿತ್ತೆನಿಸುತ್ತದೆ!

ಬೇಸರದಲ್ಲೂ ಒಂದು ಅನುಭೂತಿಯಿರಬೇಕು! ಏಕೆಂದರೆ ಅದುವೂ ಅತಿಯಾದಾಗ ಬೇಸರವೇ ಆಗುತ್ತದೆ! ಹೀಗೆ ಬೇಸರವಾಗಿ ಒಮ್ಮೆ ಸುಮ್ಮನೆ ಕುಳಿತು ನನ್ನ ಆಲೋಚನೆಯನ್ನೆಲ್ಲಾ ಪರಿಶೀಲಿಸಲು ಶುರುವಿಕ್ಕಿದೆ – “ಯಾವುದು ಹೇಗೋ ತಿಳಿಯದು. ಈ ಬೆಸರ ಮಾತ್ರ ಖಂಡಿತ ಅನಂತವೇ. ಅದಕ್ಕೆ ಆರಂಭ ಎಲ್ಲೋ ಆಗುತ್ತದೆ ಆದರೆ ಕಡೆ ಎಂಬುದು ಶತಾಯಗತಾಯ ಲಭಿಸಲೇ ಒಲ್ಲದು. ನಾವು ಬೇಸರದಿಂದ ಹೊರ ಬರುವುದರಿಂದ ಅದು ಅನಂತವೆನ್ನಲು ಸಾಧ್ಯವಾಗದು. ಕಾರಣ, ನಾವು ಅಲ್ಲಿ ಬೆಸರವ ಮುಕ್ತಾಯ ಮಾಡುತ್ತಿಲ್ಲ ಬದಲಿಗೆ ಮುಂದೂಡುತ್ತಿದ್ದೇವೆ. ಮತ್ತೆ ಮತ್ತೆ ಸವಿಯಲು,ಅನುಭವಿಸಲು.. ದಿಟವಲ್ಲವೇ?” ಈ ಎಲ್ಲಾ ಲಹರಿ ನನಗೆ ಆಗ ಹೊಳೆದದ್ದಲ್ಲವೆಂದು ಈಗಾಗಲೇ ತಿಳಿದಿರಬೇಕಲ್ಲವೆ? ಹ್ಞಾಂ, ನಾನು ಆಲೋಚನೆಯ ಪರಿಶೀಲಿಸುತ್ತಾ ಕಂಡುಕೊಂಡಿದ್ದು ಒಂದೇ “ಅವೆಲ್ಲವೂ ನನ್ನ ವಿರುದ್ಧವೇ ಇವೆ. ಇರಲೇಬೇಕಿದೆ. ಏಕೆಂದರೆ ನಾನು ಅದರಂತೆಯೇ ಇದ್ದೇನೆ” ಎಷ್ಟೇ ಬಾರಿ ನಾ ಅವನ್ನು ತಿರುಚಲು ಹೊರಟರು ಅವು ನನ್ನನ್ನೇ ತಿರುಚುವವು ಮತ್ತು ಮತ್ತೆ ಮತ್ತೆ ಆರ್ಭಟಿಸುತ್ತಾ ಸವಾರಿ ಮಾಡುವವು. ಕಡೆಗೆ ನಾನು ಹತಾಶಳಾಗಿ, ಶರಣಾಗಿ ಹೊದ್ದು ಮಲಗಿ ಬಿಡುತ್ತಿದ್ದೆ. ತಿಳಿಯದೇ ನೀಡಿದ ಆಮಂತ್ರಣದಿಂದಲೋ, ಸ್ವಪ್ರೇರಣೆಯಿಂದಲೋ ಅವು ಕನಸಿನಲ್ಲೂ ದಾಂಗುಡಿಯಿಡುವವು.!

ಈ ಪೈಶಾಚಿಕ ಕನಸುಗಳು ಬರುಬರುತ್ತಾ ನನ್ನ ಮೇಲಿನ ಕರುಣೆಯಿಂದಲೋ ಏನೋ ಎಂಬಂತೆ ತಮ್ಮ ರೌದ್ರತೆಯ ಪ್ರದರ್ಶನವ ತೊರೆದು ತಣ್ಣಗಾದವು. ಕ್ರಮೇಣ ಮಾಯವೇ ಆಗಿ ಹೋದವು. ಹಲವು ದಿನಗಳ ಕಪ್ಪು ಕತ್ತಲೆಯ ಗಾಢ ನಿದ್ರೆಯನ್ನು ಸೀಳಿ ಹಿಂದಿನ ಪೈಶಾಚಿಕ ಕನಸಿನ ದಿಗಿಲಿಗೆ ಪರ್ಯಾಯವ, ಸಮಾಧಾನವ ಒದಗಿಸಲು ಬಂದಂತೆ ಆಗಮಿಸಿದ್ದು ಆ ‘ಕನಸು’. ಅದರ ಕಿರು ನೋಟ ಇಂತಿಷ್ಟು- ನಾನು ನನ್ನ ಹಿಂದೆ ಸರಿದ ಬಣ್ಣ ಬಣ್ಣದ ಕೊಡೆಯಿಂದ ಆಕರ್ಷಕಳಾಗಿ ಅದನ್ನು ಹಿಂಬಾಲಿಸುತ್ತೇನೆ. ಹಚ್ಚಹಸುರಿನ ವಾತಾವರಣದಲ್ಲಿದ್ದ ನನ್ನನ್ನು ಅಲ್ಲಿಂದ ಮುಂದೊಯ್ದ ಕೊಡೆ ಬಂಜರು ಬರ ಭೂಮಿಯಲ್ಲಿ ಮಾಯವಾಗಿ ನನ್ನನ್ನು ಹತಾಶೆಗೆ ಕೆಡವುತ್ತದೆ. ಅದು ಸರಿದ ಜಾಗದಿಂದ ಬರುವುದು ಈ ವಾಕ್ಯಗಳು “ನೀನು ಓಡಿದೆ,ಓಡಿದೆ... ಅಂದು ಆ ಗಳಿಗೆಯಲ್ಲಿ ಅಗತ್ಯವೇ ಇಲ್ಲದ ವಸ್ತುವಿಗಾಗಿ! ಮಳೆಯಾಗಲೀ ಬಿಸಿಲಾಗಲೀ ಇಲ್ಲದಿದ್ದ ಜಾಗದಲ್ಲಿ ಒಂದು ಕೊಡೆಯ ಹಿಂದೆ! ಆ ಕ್ಷಣ ನಿನಗೆ ಒದಗಿಸಲಾಗಿದ್ದ ಸಂಪತ್ತನ್ನು ನೀನು ಮನಗಾಣಲೇ ಇಲ್ಲ, ಈಗ ನೀನು ಇಲ್ಲಿದ್ದೀಯ. ತನ್ನ ಒಣ ಹುಲ್ಲಿನಷ್ಟೇ ಬರಡಾದ ಆಲೋಚನೆಗಳನ್ನು ಆಹ್ವಾನಿಸುವ ಖಾಲಿಖಾಲಿ ಜಾಗದಲ್ಲಿ ಕೈ ಚೆಲ್ಲಿ ಕುಳಿತಿದ್ದೀಯ”

ಇದರರ್ಥ ಅಂದಿಗೆನಿರಬಹುದೆಂದು ಇಂಧು ಚಿಂತಿಸಿದರೆ ಅದರ ಮಗ್ಗುಲುಗಳೂ ನನ್ನೆದುರು ತೆರೆದುಕೊಳ್ಳುವವು.. ಕನಸು ನನ್ನ ವರ್ತಮಾನವಲ್ಲ. ನನ್ನ ವರ್ತಮಾನ ಹೇಳ ಹೊರಟ ಭವಿಷ್ಯ. ಋಣಾತ್ಮಕತೆಯನ್ನೇ ತನ್ನ ಸ್ವಾಭಾವಿಕ ಲಯವೆಂದು ಭಾವಿಸುವ ಮನ ಸುಲಭದಾದುರೆಡೆಗೆ ಆಕರ್ಷಿತವಾಗಿ ಓಡುತ್ತಿರುತ್ತದೆ. ಸುಲಭವಾದುದೇನು? ನಾನು ‘ಕೆಲಸಕ್ಕೆ ಬಾರದವಳು’ ಎಂಬುದೇ ಅಲ್ಲವೆ? ಕೆಲಸಕ್ಕೆ ಬಾರದವಳೆಂದಮೇಲೆ ಯಾವ ಕೆಲಸಕ್ಕೂ ಕೈ ಹಾಕುವ ಗೋಜಿಗೇ ಹೋಗುವುದಿಲ್ಲ ನೋಡಿ. ಸ್ವ ಬದಲಾವಣೆಯ ಅವಕಾಶಗಳ ತೊರೆದು ಈ ಸರಳ ರೀತಿಯ ಹಿಂದೋಡಿದಾಗ ಅದು ನಿಜಕ್ಕೂ ಕೆಲಸಕ್ಕೆ ಬಾರದ ಜಾಗಕ್ಕೆ ತಾನೇ ಕರೆದೊಯ್ಯುವುದು? ಬಹುಷಃ ಆ ದಿನದ ಮಟ್ಟಿಗೆ ಅದರರ್ಥವದೇ ಇತ್ತೇನು. ಈ ಭವಿಷ್ಯದ ತಿಳಿವು ನನಗಾಗಿದ್ದು ಮಾತ್ರ ಆ ಕನಸು ಭೂತಾದಿ ಭೂತಕಾಲದ ನೆನಪಾಗಿ ತೆರೆದುಕೊಂಡಾಗಲೇ. ಅಂದೇ ತಿಳಿದಿದ್ದರೆ ನಾನು ಭವಿಷ್ಯವ ಮನಗಂಡು ಏನೋ ಆಗುತ್ತಿದ್ದೆ ಎಂದಲ್ಲ. - ಆಗುಹೋಗುಗಳ, ಆಶಾದಾಯಕವಲ್ಲದ ಸಂದರ್ಭಗಳ ಎದುರಿಸುವ ಮನೋಬಲವಿಲ್ಲದ ಮನಸ್ಸಿಗೆ ಅಂತಹ ಭವಿಷ್ಯ ತೋರುವುದು ಅಪಾಯಕಾರಿಯೇ ಆಗಿದೆ. ಬದುಕಿನ ಸತ್ಯಗಳನ್ನು ಕ್ರೂರಾತಿ ಕ್ರೂರವಾಗಿ ಕಾಣುವ ಮನಸ್ಸು ಯಾವುದನ್ನೂ ಸ್ವೀಕರಿಸಲಾರದು. ಅಷ್ಟಕ್ಕೂ ಭವಿಷ್ಯವೆಂಬುದೇನು ಮಾಯಾ ಕನ್ನಡಿಯಲ್ಲಿ ತೋರುವ ಮುಂದಿನ ಸನ್ನವೇಶಗಳ ದರ್ಶನವೇ? ಅದು ಇಂದಿನ ನಾಳೆ. ಇಂದನ್ನು ಹೀಗೆಯೇ ಕಳೆದರೆ ನಾಳೆ ಏನಾಗುತ್ತದೆಂಬುದರ ಅರಿವು. ಈಗಾಗಲೇ ರೂಪಿಸಲ್ಪಟ್ಟಿರುವ ಸಾರಾಂಶವ ಎಲ್ಲ ಜೀವಿಗಳಿಗೂ ಭೂತ, ವರ್ತಮಾನ, ಭವಿಷ್ಯ ಗಳೆಂದು ವಿಂಗಡಿಸಿ ಹಂತ ಹಂತವಾಗಿ ವಿತರಿಸುವ ಪ್ರಕೃತಿಯ ಯೋಜನೆಯಲ್ಲೊಂದಂಶ

ಏರು ಧನಿಯೂ ನಡುಕ ಹುಟ್ಟಿಸುವಷ್ಟರ ಮಟ್ಟಿಗೆ ಸುಕ್ಷ್ಮಾತಿ ಸೂಕ್ಷ್ಮಳಾದವಳಿಗೆ ಬಂದ ಆ ಕನಸೂ, ಕೇಳಿಸಿದ ಧನಿಯಲ್ಲಿದ್ದ ವಿಶ್ವಾಸ, ಗಾಂಭೀರ್ಯಗಳು ಅವಕ್ಕಾಗಿಸಿ ಮತ್ತಷ್ಟು ಪರಿಸ್ಥಿತಿಯ ಕಗ್ಗಂಟೇ ಆಗಿಸಿದವು,,,,

(ಸಶೇಷ)

(Image- Web)