Monday, October 6, 2008

ಇರುವ ದು೦ಬಿಯ ಬಿಟ್ಟು.....

ಆ ದಿನ ಅಮ್ಮ ಬಾಂದಳವ ಬೊಟ್ಟು ಮಾಡಿ ತೋರಿಸುತ್ತಾ ತುತ್ತಿಕ್ಕುತ್ತಿದ್ದಾಗ ಅಮ್ಮನ ತೆಕ್ಕೆಯ ’ಮಗು’ವಾಗಿದ್ದ ಆಕೆಯ ಕಣ್ಣುಗಳನ್ನು ಚಂದ್ರನಿಗಿಂತ ಎಷ್ಟೋ ದೂರದಲ್ಲಿ ಮಿನುಗಿ ಮರೆಯಾಗುತ್ತಿದ್ದ ನಕ್ಷತ್ರಗಳು ಸೆಳೆದು ಹಿಡಿದಿದ್ದವು. ಅಂದೇ ಅವನ್ನು ತನ್ನ ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಬೇಕೆಂದು ಆಕೆ ನಿಶ್ಚಯಿಸಿದ್ದಳು. ಪ್ರಪಂಚವನ್ನು, ವಾಸ್ತವವನ್ನು ಅರ್ಥೈಸಿಕೊಳ್ಳುವ ಮೊದಲೇ ಮಿನುಗು `ತಾರೆ’ಗಳನ್ನು ಮುಡಿಗೇರಿಸಿಕೊಳ್ಳುವ ಕನಸು ಕಂಡಿದ್ದಳು. ತನ್ನ ಪುಟ್ಟ ಕಾಲುಗಳಿಂದ ಹೆಜ್ಜೆ ಹಾಕುತ್ತಾ ಭೂಮಿ,ಬಾಂದಳ ಸಂಧಿಸುವ `ದಿಗಂತ’ದೆಡೆಗೆ ಚುಕ್ಕಿಗಳ ಹಿಡಿಯಲು ಓಡಲಾರಂಭಿಸಿದ್ದಳು. ಆಗಸವ ನೋಡುತ್ತಾ ಸಾಗುತ್ತಿದ್ದ ಕಾಲುಗಳು ಕಲ್ಲುಗಳಿಂದ ಜರ್ಝರಿತವಾಗುತ್ತಿದ್ದವು. ತನ್ನ ಕೋಮಲತೆಯನ್ನೇ ಮರೆತಂತೆ ಗಟ್ಟಿಯಾಗುತ್ತಿದ್ದವು. ಮಧ್ಯೆ ತನ್ನ ಓಟವನ್ನು ನಿಲ್ಲಿಸಿ ತೂತಾಗಿದ್ದ ತನ್ನ ಕಾಲುಗಳನ್ನು ನೋಡುತ್ತಿದ್ದಳು. ಆಗಸದ ಚುಕ್ಕಿಗೂ, ಕಾಲ ಕೆಳಗಿನ ಕಲ್ಲುಗಳಿಗೂ ಇರುವ `ಅಂತರ’ವನ್ನು ಕಂಡು ದುಃಖಿಸುತ್ತಿದ್ದಳು. ಮತ್ತೆಲ್ಲೋ ಆ ಬಾಂದಳ ಧರೆಗಿಳಿದಂತೆ ಕಂಡ ಸ್ಥಳದೆಡೆಗೆ ಕುಂಟುತ್ತಾ ನಡೆಯುತ್ತಿದ್ದಳು...
ಕಾಲುಗಳೀಗ ಬಹಳ ಬೇಗ ಹೆಜ್ಜೆಹಾಕುವಷ್ಟು ಬಲಿಷ್ಠವಾಗಿದ್ದವು. ಆಕೆಯ ಕಣ್ಣುಗಳು ಆಗಸದ ನಕ್ಷತ್ರ, ಭೂಮಿಯ ಕಲ್ಲುಗಳ ಮಧ್ಯೆ ಇರುವ ಪ್ರಪಂಚವನ್ನು ನೋಡುತ್ತಿದ್ದವು. ತನ್ನ ಒಂಟಿ ಪಯಣದಲ್ಲಿ ಜೊತೆಗಾರರು ಯಾರಾದರೂ ಸಿಗಬಹುದೇ ಎಂದು ಹುಡುಕುತ್ತಿದ್ದವು... ಬದುಕು, ಜೀವನ, ಸಮಾಜ, ಕಟ್ಟುಪಾಡು ಎಂದು ಮನಸ್ಸು ಯೋಚಿಸುವಂತಾಗಿತ್ತು. ಯಾವುದೋ ನಿಲ್ದಾಣದಲ್ಲೊಮ್ಮೆ ಕುಳಿತಳು. ತನ್ನ ಮಾಸಲು ಬಟ್ಟೆಯನ್ನೊಮ್ಮೆ ನೋಡಿಕೊಂಡಳು..ಅದು ಮುಳ್ಳುಗಳಿಗೆ ಸಿಲುಕಿ ಹರಿದಿತ್ತು, ಕೈ ಕಾಲುಗಳ ಮೇಲೆ ಗಾಯದ ಗುರುತುಗಳಾಗಿದ್ದವು... ಎಲ್ಲಾ ಗಮನಿಸಿದ ಮೇಲೆ ತನ್ನ ಕಣ್ನನ್ನೊಮ್ಮೆ ಮುಚ್ಚಿ ತೆರೆದು ಅದರೊಳಗೆ ತನ್ನ ಸಾವಿರಾರು ಯೋಚನೆಗಳನ್ನು ಮುಚ್ಚಿಟ್ಟು ಮತ್ತೆ ಗುರಿಯೆಡೆಗೆ ಓಡಿದಳು.. ಅವಳ ಬೆನ್ನತ್ತಿದ್ದ ’ಕಾಲ’ ಆಕೆಯ ಹಿಂದೆ, ಮುಂದೆ, ಜೊತೆ ಜೊತೆಯಾಗಿ ಓಡಿ ಬರುತ್ತಿತ್ತು.
ಅವಳ ಕಾಲುಗಳೀಗ ಕೊಂಚ ನಿಧಾನವಾಗುತ್ತಿದ್ದವು....ತಾನು ಅಂದುಕೊಂಡ ನಕ್ಷತ್ರವನ್ನು ಹಿಡಿಯಲಾಗುವುದಿಲ್ಲವೇನೋ ಎಂದು ಮನಸ್ಸು ಚಡಪಡಿಸುತ್ತಿತ್ತು. ದೇಹ ವಿಶ್ರಾಂತಿ ಬಯಸುತ್ತಿತ್ತು, ನಕ್ಷತ್ರ ಹಿಡಿಯುವುದರಲ್ಲಿ ಮೊದಲಿದ್ದ ಉತ್ಸಾಹ ಕಡಿಮೆಯಾದಂತಿತ್ತು. ತನ್ನ ಮನಸ್ಸಿನ ಭಾವನೆಗಳಿಗೆ ಮನ್ನಣೆ ಕೊಟ್ಟು ಆಕೆ ಬಹಳ ದಿನಗಳ ನಂತರ ಬಿಡುವು ಮಾಡಿಕೊಂಡು ಪ್ರಪಂಚವನ್ನು ಕಂಡಳು... ಪ್ರಪಂಚವಿಡೀ ತನ್ನನ್ನೇ ನೋಡುತ್ತಿರುವಂತೆ ಅವಳಿಗೆ ಭಾಸವಾಗತೊಡಗಿತು.. ಅವಳ ಕಣ್ಣಿಗೆ ಅಮ್ಮಂದಿರು, ಎಷ್ಟೋ ಭಾವನೆಗಳನ್ನು ತುಂಬಿಕೊಂಡ ಜನರು, ಕನಸುಗಳಿಗಾಗಿಯೇ ಹುಟ್ಟಿದಂತಿರುವ ಮಕ್ಕಳು ಕಂಡರು.. ಆಕೆ ತಲೆಯೆತ್ತಿ ಮೇಲೆ ನೋಡಿದಳು. ಅನಂತವಾದ ದಾರಿಯ ಹೊರತು ಮತ್ತೇನೂ ಕಾಣಲಿಲ್ಲ. ಅವಳ ಕಣ್ಣುಗಳು ಮತ್ತೆ ಮತ್ತೆ ಹೊಳೆದವು.. ಕನಸುಗಳು ತುಂಬಿ ಬಂದಂತಾದವು..ಯಾವ ನಕ್ಷತ್ರ ಹಿಡಿಯಲು ಹೊರಟಿದ್ದಳೋ ಆ `ನಕ್ಷತ್ರ’ವೇ ಅವಳಾಗಿ ಬಿಟ್ಟಿದ್ದಳು....

~ಸುಷ್ಮ ಸಿ೦ಧು
೨೦೦೫ ರಲ್ಲಿ ಬ೦ದು, ದಾಖಲಿಸಿರುವ 'ಕನಸು'.
Many thanx for all comments & votes @kendasamige.
(image courtesy-web)

Friday, September 12, 2008

ಮತ್ತೊಂದು ಕನಸು..

ಅಲ್ಲೊಂದು ಉದ್ಯಾನವನದ ನೂರಾರು ಗಿಡ, ಮರಗಳ ನಡುವೆ 'ಆ' ಗಿಡ ತನ್ನ ಅಂದಕ್ಕೆ ತಾನೆ ಮಾರು ಹೋದಂತಿತ್ತು. ತನ್ನಲ್ಲರಳಿದ ಹವಳದ ಬಣ್ಣದ ಹೂವನ್ನು ಕಂಡು ಹಿರಿಹಿರಿ ಹಿಗ್ಗುತ್ತಿತು...ತನ್ನ ಸುತ್ತ ಮುತ್ತಲಿದ್ದ ಗಿಡ-ಮರಗಳಿಗೆ ತನ್ನ ಅಂದವನ್ನು ವಿವರಿಸುತ್ತಾ ಹೆಮ್ಮೆ ಪಡುತ್ತಿತ್ತು. ಅಲ್ಲಿದ್ದ ಎಲ್ಲರಿಗೂ 'ಅವಳ ಸಮಾನವಿಲ್ಲ' ಎಂಬ ಭಾವನೆ ಅಚ್ಚೊತ್ತಿ ಬಿಟ್ಟಿತ್ತು.
ಈ ರೀತಿ ಆ ಗಿಡ ಹಾಡಿ, ಹೊಗಳಿಕೊಳ್ಳುತ್ತಿದ್ದುದನ್ನು ಅದರ ಪಕ್ಕದಲ್ಲೇ ಭೂಮಿಯ ಬೆಚ್ಚಗಿನ ಗರ್ಭ ಸೀಳಿ ಆಗತಾನೇ ಹೊರಬಂದು, ತಲೆಯೆತ್ತಿ ತನ್ನ ಬಂಧುಗಳನ್ನು ನೋಡುತ್ತಿದ್ದ 'ಮೊಳಕೆ'ಯೊಂದು ನೋಡಿತು. ಒಮ್ಮೆ ನಕ್ಕು ಅದು ಸುಮ್ಮನಾಯಿತು. ಹೀಗೇ ಒಂದು ದಿನ ಅದು ಸು೦ದರಿ ಗಿಡದ ಬಳಿ ಅದು ಕೇಳಿತು, "ಗೆಳತೀ, ನೀನು ಸುಂದರಿ ಎನ್ನುವುದು ಸತ್ಯವಾದ ವಿಷಯವೇ. ಆದರೆ ನೀನೇ ಬಿಡುವ ಆ ಹೂವಿನ ಭಾರ ತಾಳಲಾರದೇ ನೀನೇಕೆ ನೆಲವನ್ನೇ ನೋಡುತ್ತಿರುತ್ತೀಯಾ? ಕತ್ತೆತ್ತಿ ಒಮ್ಮೆ ನಿನ್ನ ಅಣ್ಣ೦ದಿರನ್ನು ನೋಡು... ಒಮ್ಮೆ ಮಾತ್ರ..." ಆ 'ಸುಂದರಿ' ಗಿಡ ಪೆಚ್ಚಾಗಿ ಹೋಯಿತು. ಏನೇ ಮಾಡಿದರೂ ಬಗ್ಗಿದ ಹೂವಿನ ತಲೆ ಮೇಲೆತ್ತಲಾಗಲಿಲ್ಲ! ತನ್ನ ದುರ್ಬಲತೆ ಕಂಡು ಕುಗ್ಗಿ ಹೋಯಿತು...

ಹೀಗಿರುವಾಗ ಆ ಮೊಳಕೆಯ ಪುಟ್ಟ ದೊಡ್ಡವನಾಗಿ ಬೆಳೆದ. ಸುಂದರಿಯ ಪಕ್ಕದಲ್ಲೇ ಧೃಢವಾಗಿ ನಿಂತ. ಅಲ್ಲೇ ಅಡ್ಡಾಡುತ್ತಿದ್ದ ಮಾಲಿ ಅ 'ಸುಂದರಿ' ಗಿಡದ ತಲೆಯೆತ್ತಿ 'ಪುಟ್ಟು' ಗಿಡಕ್ಕೆ ಬಿಗಿದ..ಈಗ ಸುಂದರಿ ತಲೆಯೆತ್ತಿ ನೋಡಿದಳು...ತನ್ನ ಅಣ್ಣ೦ದಿರನ್ನು, ಹಾಗೆಯೇ ಆ 'ಪುಟ್ಟ'ನನ್ನು. ಆಗ ಪುಟ್ಟ ಹೇಳಿದ, "ನೀನೀಗ ನಿಜವಾದ 'ಸುಂದರಿ'.ನಿನ್ನ ಈ ಅಂದವಾದ 'ಮೌನ' ನಿನ್ನನ್ನು ಸುಂದರಗೊಳಿಸಿದೆ." ಸುಂದರಿ ಒಮ್ಮೆ ನಕ್ಕಳು. ಸಂತಸದಿಂದ ಇಡೀ ಉದ್ಯಾನವನವೇ ಮುಗುಳ್ನಕ್ಕಿತು...

('ಶೋಧ'ದ ಮತ್ತೊಂದು ತುಣುಕು. ೨೦೦೪ರಲ್ಲಿ ಮೂಡಿದ ಕನಸು. ನನ್ನ ಪುಸ್ತಕದಲ್ಲಿ ದಾಖಲಾಗಿದೆ..)
~ಸುಷ್ಮ ಸಿ೦ಧು.

(image courtesy-web)

Wednesday, August 27, 2008

ನನ್ನ 'ಕನಸು'!!

ಹಾಯ್,
ಇದು ನನ್ನ ಕನಸುಗಳ ತಾಣ. ಹಾಗೆಂದು ಇವು ನಾನು ಕಂಡುಕೊಂಡ ಕನಸುಗಳಲ್ಲ! ತಾವಾಗೇ ಬಂದು ಬಿದ್ದಕನಸುಗಳು! ಈಗ ಐದು ವರುಷಗಳಿಂದ ನಾನು ಸಾಕಷ್ಟು ಬದಲಾಗಿದ್ದೇನೆ. ಅದೆಷ್ಟರ ಮಟ್ಟಿಗೆ ಎಂದರೆ ನನ್ನ ಬದುಕಿನ ಅಷ್ಟೂ seriousness ಕನಸುಗಳೊಳಗೆ ತೂರಿ ಹೋಗಿ ನಾನು ನಿರಾಳವಾಗಿಬಿಟ್ಟಿದ್ದೇನೆ! ಮೊದ ಮೊದಲು ಸಲಹೆಯಂತೆ, ಸಮಾಧಾನದಂತೆ ಮೂಡಿ ಬಂದು ನನ್ನಲ್ಲಿ ಸಂದೇಹ ಹುಟ್ಟಿಸುತ್ತಿದ್ದ ಕನಸುಗಳು ನಂತರ 'ನನ್ನಿಂದ' ದೂರವಾಗಿ ನಾನು ಕಾಣದ, ಕೇಳದ ವಿಷಯಗಳನ್ನು ಆರಂಭ, ಅಂತ್ಯಗೊಡನೆ ಹುದುಗಿಸಿ ಕತೆಗಳಾಗಿಬಿಟ್ಟವು.
ಅಮ್ಮನಿಗೆ ಈ ಎಲ್ಲಾ ಕತೆಗಳನ್ನು ಹೇಳುತ್ತಾ record ಮಾಡಲಾರಂಭಿಸಿದವಳು ನಂತರ ಅಮ್ಮನ ಸಲಹೆಯಂತೆ ಬರೆಯಲಾರಂಭಿಸಿದೆ.. ಇಂತಹ ಬರಹಗಳು ನನ್ನನ್ನು ಸಾಕಷ್ಟು 'ಅತ೦ತ್ರ' ಸ್ಥಿತಿಯಲ್ಲೂ ತಳ್ಳಿವೆ........ 'alter ಮಾಡು, ಆರಂಭ ಸರಿಯಿಲ್ಲ, ಅಂತ್ಯ ಸ್ವಲ್ಪ ಬದಲಾಗಬೇಕಿತ್ತು, ಇನ್ನಷ್ಟು ಚೆಂದವೋ, ಬೇರೆಯದೇ ವಿಷಯ ಆಗಿದ್ದಿದ್ದರೆ...' ಎಂದರೆ ನಾನೂ ಏನೂ ಮಾಡಲು ಅಸಹಾಯಕಳು!!! ಕಥೆಯೆ೦ದೋ, ಲಹರಿಯೆ೦ದೋ ಏನೆಂದೋ ಹೆಸರಿಸಲು ಅವಕ್ಕೆ ಅವುಗಳದ್ದೇ ಅದ ಚೌಕಟ್ಟು, ಬದ್ದತೆಗಳಿರುತ್ತವೆ. ಕಡೆಗೆ 'ಎಲ್ಲಿಯೂ ಸಲ್ಲದ' ಅಥವಾ 'ಎಲ್ಲಿಗೂ ಸೇರದ' ಕನಸುಗಳನ್ನು, 'ಕನಸುಗಳು' ಎಂಬ ಶೀರ್ಷಿಕೆಯಡಿಯಲ್ಲಿಯೇ ಆರಾಮವಾಗಿರಿಸೋಣವೆ೦ದರೆ 'ಕನಸುಗಳತಾಣ'ವೆಂದು ಯಾವ ಪತ್ರಿಕೆಯಲ್ಲಿಯೂ ಸ್ಥಾನವಿಲ್ಲ..! ಹಾಗೆಯೇ 'ಕನಸೇ!?' ಎಂಬಂತಹ ಉದ್ಗಾರಗಳಿಗೆ ಸಾಕ್ಷ್ಯಧಾರಗಳ ಸಮೇತ ಉತ್ತರಿಸಲೂ ಸಾದ್ಯವಿಲ್ಲ. ಇಂತಹ ಎಷ್ಟೋ ಚಿತ್ರ-ವಿಚಿತ್ರ ಸನ್ನಿವೇಶಗಳಿಗೆ, ಹಲವಾರು ವೈಯಕ್ತಿಕ ಗೊಂದಲಗಳಿಗೆ ಈ ನನ್ನ ಕನಸುಗಳು ನನ್ನನ್ನು ತಳ್ಳಿದರೂ, 'ಆನೆ ನಡೆದದ್ದೇ ದಾರಿ..' ಎನ್ನುವಂತೆ ಅವು ಮು೦ದುವರಿದೇ ಇವೆ!
ಕನಸುಗಳ ಮೂಲ, existenceನ ಬಗ್ಗೆ ತಲೆ ಕೆಡಿಸಿಕೊಳ್ಳುವ ಕಾಲ ಮುಗಿದು, ನನ್ನನ್ನು ಎಲ್ಲೋ ಕರೆದೊಯ್ದು ಬುದ್ದಿಹೇಳಿ, ಮೊಟಕಿ ಮತ್ತೆ ತಂದು ಬಿಡುವ ಪ್ರೀತಿಯ ಕನಸುಗಳು ಬಂದಾಗ 'ಒಹ್..' ಎಂದು ಅಚ್ಚರಿಸುತ್ತಾ, 'ಇದೇ ನನ್ನ ಕಡೆಯ ಕನಸಿರಬೇಕು. ಇನ್ನೆಷ್ಟು ವಿಷಯ ಹೀಗೆ ಬರಲು ಸಾಧ್ಯವಮ್ಮಾ..' ಎಂದು ಎಷ್ಟೋ ವರುಷಗಳಿಂದ ಅಮ್ಮನಿಗೆ ಹೇಳುತ್ತಾ, 'ಸುಮ್ಮನೆ ಬಂದದ್ದನ್ನು ಬರೆದಿಡು' ಎಂದೆನ್ನಿಸಿಕೊ೦ಡು ಗುಡ್ದೆಯಷ್ಟಿರುವ ಸರಕಿನಲ್ಲಿ ಆಗಾಗ್ಗೆ ಒಂದೊಂದನ್ನು ಆಯ್ದು ಬರೆಯುತ್ತಿದ್ದೇನೆ. ಈ ಅನಿಯ೦ತ್ರಿತ thoughts ಗಳನ್ನು 'like dreaming' ಎನ್ನಲಸಾದ್ಯವಾದ್ದರಿ೦ದ 'like minded' ಜನರೊಡನೆ share ಮಾಡಿಕೊಳ್ಳುವ ಬಯಕೆಯಿ೦ದಲೇ 'ಕ೦ಡೆ ನಾನೊಂದು ಕನಸು'ವಿನಲ್ಲಿ ನನ್ನ ಪ್ರಕಟಗೊಂಡಿರುವ ಪುಟ್ಟ ಪುಟ್ಟ 'online reading' ಗೆ ಸರಿಹೊಂದುವ ಕನಸುಗಳನ್ನು ತೆರೆದಿಡುತ್ತಿದ್ದೇನೆ.
~ಸುಷ್ಮ ಸಿ೦ಧು

(image courtesy-web)

Friday, August 8, 2008

ಶೋಧ.........

(ಇದು ನನ್ನ ಕನಸಿನ ಕಥೆ 'ಶೋಧ'ದ ತುಣುಕು.. ಕನಸುಗಳ ಕಥೆಯ ಸಂಗ್ರಹ 'ಪಯಣ ಸಾಗಿದಂತೆ.....'ಯಲ್ಲಿ ಪ್ರಕಟವಾಗಿದೆ.ಮತ್ತು ಮಯೂರದ 'ಗುಬ್ಬಚ್ಚಿಗೂಡು'ವಿನಲ್ಲಿ ಪ್ರಕಟವಾದ 'ಕರುಣಾಳು ಬಾ ಕನಸೇ' ಯಲ್ಲಿಯೂ ಸೇರಿಕೊಂಡಿದೆ. ಇದರ ಆ೦ಗ್ಲ ಭಾಷಾಂತರ 'the pot full of water' ,yahoo dreams group ನಲ್ಲಿ ಚರ್ಚೆಗೊಳಗಾಗಿದೆ.. )

ಏನನ್ನೋ ಅರಸುತ್ತಾ ದಾರಿಯ ಮಧ್ಯೆ ನಡೆದು ಬರುವ ನಾನು 'ಒಳಗೆ ಏನೋ ಇದೆ' ಎಂದು ಮನಗಂಡು ಪ್ರವೇಶಿಸಿದ ಗಾಜಿನ ಕಟ್ಟಡದ ಗೋಡೆಯ ಮೇಲೆ ಮೂರು ದೃಶ್ಯಗಳು ಮೂಡಿದವು . ಅದನ್ನು ನಾನು, ಹಾಗೂ ನನ್ನ ಸಾಲಿನಲ್ಲಿಯೇ, ನನ್ನ ಪಕ್ಕದ ಕುರ್ಚಿಯನ್ನು 'ಖಾಲಿ' ಬಿಟ್ಟು 'ಅಂತರ'ವೊಂದನ್ನು ಕಾಪಾಡಿಕೊಂಡು ಕೂರುವ ಸುಂದರ ಯುವತಿ ನೋಡಿದೆವು.. ಗೋಡೆಯ ಮೇಲಿನ ಚಿತ್ತಾರ ಕಥೆಯೊಂದನ್ನು ನಮ್ಮೆದುರಿತ್ತಿತು.

ಅಲ್ಲೊಂದು ನದಿ. ಸುಮಾರು ಮೈಲಿ ದೂರದಿಂದ ನೀರು ತೆಗೆದುಕೊಂಡು ಹೋಗಲು ಹುಡುಗಿಯೊಬ್ಬಳು ಅಲ್ಲಿಗೆ ಬರುತ್ತಿದ್ದಳು. ಎರಡು ತುಂಬಿದ ಕೊಡದೊಡನೆ ಹಿಂದಿರುಗುತ್ತಿದ್ದಳಾದರೂ ಮನೆ ಸೇರುವ ಹೊತ್ತಿಗೆ ನೀರು ಅರ್ಧಕ್ಕೇ ಇಳಿದು ಬಿಡುತ್ತಿತ್ತು.. ಹೀಗೇ ಎಷ್ಟೋ ದಿನಗಳು ಅ ಹುಡುಗಿಯ ನಿರಾಸೆ, ಅಸಹಾಯಕತೆಗಳೊಡನೆ ಕಳೆಯುತ್ತಿತ್ತು. ಅವಳು ನದಿಯೆಡೆಗೆ ಹೋದಾಗಲೆಲ್ಲ ಅದಕ್ಕೆ ಹೂವುಗಳನ್ನು ಕಿತ್ತು ಅರ್ಪಿಸಿ ಬೇಡುತ್ತಿದ್ದಳು, 'ಓ ಶಕ್ತಿಯೇ ಇಂದಾದರೂ ಕೊಡದ ತುಂಬ ನೀರುಳಿಸು...' ಆಕೆಯ ಸಮಸ್ಯೆ ದಿನಗಳುರುಳಿದರೂ ಬಗೆಹರಿಯಲಿಲ್ಲ. ಅಂದು ನಿರ್ಧರಿಸಿಕೊಂಡು ಒಂದೇ ಕೊಡ ತಂದಳು. ನೀರನ್ನು ತುಂಬಿ ತುಂಬ ಜಾಗರೂಕಳಾಗಿ ವರ್ತಿಸುತ್ತ ಮನೆಗೆ ಬಂದಳು..ಅವಳಿಗೆ ಪರಮಾನಂದವಾಗಿ ಹೋಯಿತು. ಏನಾಶ್ಚರ್ಯ ! ಅಂದು ಕೊಡ ತುಂಬಿತ್ತು.. ಅನಂದದಿಮ್ದ ಉಬ್ಬಿ ಹೋದವಳು ಮರುದಿನ ನದಿಯೆಡೆಗೆ ಬಂದು ಹೂಗಳನ್ನರ್ಪಿಸಿ ಶಕ್ತಿಗೆ ಕೃಥಜ್ೞಥೆಗಳನ್ನರ್ಪಿಸಿ ಕೂಗಿದಳು, 'ಕೊನೆಗೂ ನನ್ನ ಅಸೆ ಈಡೇರಿಸಿದೆಯಲ್ಲಾ. ನಾನು ನಿನಗೆ ಋಣಿ.. '. ಅಷ್ಟರಲ್ಲಿ ಅಶರೀರವಾಣಿಯೊಂದು ಹೇಳಿತು , "ತಂಗೀ, ಒಮ್ಮೆ ಆ ದಿನವನ್ನು ಸರಿಯಾಗಿ ನೆನೆಪಿಸಿಕೋ. ಅಂದು ನಿನ್ನ ಮನದಲ್ಲಿ ನಾನಿರಲಿಲ್ಲ.. ಇದ್ದದ್ದು ಕೊಡ, ನೀರು ಮಾತ್ರ!." ಅವಳು ಹಿಗ್ಗಿ ಹೋದಳು 'ಅರೆ! ದೇವರೇ ನನ್ನೊಡನೆ ಮಾತನಾಡಿದ..' ಸಂತಸದಿಂದ ಓಡಿ ಹೋಗಿ ಊರಿಗೆಲ್ಲ ಸುದ್ದಿ ತಿಳಿಸಿದಳು, 'ದೇವರು ಮಾತನಾಡಿದ!'
ಮಾರನೆಯ ದಿನ ವಿಷಯ ನಿರೂಪಿಸಲು ಎಲ್ಲರೊಡಗೂಡಿ ನದಿಯ ತೀರಕ್ಕೆ ಬಂದು ಅಂದಿನಂತೆಯೇ ಹೇಳಿದಳು, "ಕೊನೆಗೂ ನನ್ನಾಸೆ ಈಡೇರಿಸಿದೆಯಲ್ಲಾ...........ನಿನಗೆ ನಾನು ಋಣಿ..." ಎಷ್ಟು ಬಾರಿ ಚೀರಿದರೂ ಯಾವ ವಾಣಿಯೂ ಪ್ರತಿಕ್ರಿಯಿಸಲಿಲ್ಲ..ಎಲ್ಲರು ಚೇಡಿಸಿದರು, ಅವಮಾನಿಸಿದರು.ಎಲ್ಲ ಹೋದ ಮೇಲೆ ಕೊಡ ಹೊತ್ತು ನಿರಾಸೆಯಿಂದ ಮನೆಗೆ ತೆರಳುತ್ತಿದ್ದವಳಿಗೆ ಕೊಡದ ನೀರಿನಲ್ಲಿ ತನ್ನ ಪ್ರತಿಬಿಂಬ ಕಾಣಿಸಿತು. ಅದು ಹೇಳಿತು, "ಅಯ್ಯೋ ಹುಚ್ಚಿ, ನಿನ್ನನ್ನೇ ನೀನು ಗುರುತಿಸಲಾರಳಾದೆಯಾ? ನಿನ್ನನ್ನು ಗೆಲ್ಲುವಂತೆ ಮಾಡಿದ್ದು ನಿನ್ನ ಗಮನ ಮಾತ್ರ.. ಇಡೀ ಪ್ರಪಂಚಕ್ಕೆ ಶಕ್ತಿಯ ವಿಷಯ ತಿಳಿಸಲು ಹೊರಟು ನಿನ್ನನ್ನೇ ನೀನು ಅರಿಯಲಾರಳಾದೆ..ಮೊದಲು ನಿನ್ನೊಳಗೆ ಅನುದಿನ,ಅನುಕ್ಷಣ ನೆರೆದಿರುವ 'ನಿನ್ನತನ'ವನ್ನು ನಂಬು. ಯಾವ ಅಸ್ತಿತ್ವವನ್ನು ಅಲ್ಲ..." ನೀರಿನ ಪ್ರತಿಬಿಂಬ ಅವಳ ಮನವನ್ನು ಕಲಕಿತು. ಅಂದು ಕೊಡ ತುಂಬಿತ್ತು. ಒಳಗೆ ಅವಳೇ ತಂದ ನೀರಿತ್ತು..
~ಸುಷ್ಮ ಸಿ೦ಧು

(image courtesy-web)