(¸À±ÉõÀ)
Friday, July 20, 2012
ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 4
(¸À±ÉõÀ)
Thursday, March 15, 2012
ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ ೩

Tuesday, February 14, 2012
ಅಂಕಣ- ಕಂಡೆ ನಾನೊಂದು ಕನಸು-೨ (ಅಂತರ್ಗಮನ )

ಹಿ೦ದಿನ ಬರಹದಲ್ಲಿ ಬರೆದ೦ತೆ, ಬೆಳಕಿನ ತೀಕ್ಷ್ಣ ಕಿರಣ ಕಣ್ಣ ಮು೦ದೆ ಸರಿದು ಪ್ರಶಾ೦ತತೆಗೆ ಎಡೆ ಮಾಡಿಕೊಟ್ಟ ಘಟನೆ ಸರಿದು ತಿಂಗಳುಗಳೇ ಉರುಳಿದ್ದವು. ನನಗೇಕೋ ನನ್ನ ‘ನಿರಾಸಕ್ತಿ’ ಅನುಪಯುಕ್ತವೂ, ಜಡವೂ ಎನಿಸಲಾರಂಭಿಸಿ ಅದುವೂ ಬೇಸರ ಬಂದು ಹೋಗಿತ್ತು. “ಖಾಯಿಲೆಗೆ ಮಾತ್ರ ಔಷಧವಲ್ಲ ಸ್ಥಿತಿಗಳಿಗೂ ಔಷಧವಿದೆ’ ಎಂಬುದನ್ನು ಬಲವಾಗಿ ನಂಬಿದ ಜಗತ್ತು ನೀಡಿದ ಔಷಧಗಳ ಚಾಚೂ ತಪ್ಪದೆ ತೆಗೆದುಕೊಳ್ಳುವುದಾಗಿತ್ತು. ಪ್ರತಿ ಬಾರಿಯೂ ಆಲೋಚನೆಯೊಂದು ಪುಟಿದು ನೀರಿನೊಳಗೆ ಕರಗುತ್ತಿತ್ತು - “ಮನಸ್ಸು ಚಿಂತೆ ಮಾಡುತ್ತದೆ. ಖಿನ್ನವಾಗುತ್ತದೆ. ದೇಹವ ಪ್ರಚೋಧಿಸುತ್ತದೆ. ದೇಹ ಜಡವಾಗುತ್ತದೆ, ಬಲಹೀನ ವಾಗುತ್ತದೆ, ರೋದಿಸುತ್ತದೆ. ಔಷಧ ಜಡತೆಯ, ಆಲಸ್ಯವ ದೂರ ಮಾಡಿ ಮನಸ್ಸಿಗೆ ಎದುರೇಟು ನೀಡಬಹುದು ‘ಆಹಾ! ನೀ ಹೇಳಿದಂತೆ ಇನ್ನು ನಡೆಯೆನು’ ಎನಿಸಬಹುದು. ನಂತರದಲ್ಲೇ ಮನ ಚಿಗುರಿ ಜೀವನದ ಬಗೆಗೆ 'ಏಕೆ'ಗಳ ಶುರುವಿಟ್ಟರೆ ನನ್ನ ಮಾತ್ರೆಯ ಗೋಲಿ ಅದನ್ನುತ್ತರಿಸುವುದೇ?”
ನನ್ನ ಪಾಲಿಗೆ ಔಷಧವೂ ಟಾರ್ಚ್ ಉಪಮೆಯಂತೆಯೇ ಗೋಚರಿಸಲಾರಂಭಿಸಿತ್ತು. ಆದರೆ ಅದರ ತೊರೆಯುವ ಕುರಿತು ನಾನೇನು ಯೋಚಿಸಲಿಲ್ಲ. – “ಬದುಕಿನ ಜವಾಬ್ದಾರಿಗಳ ಜವಾಬ್ದಾರರೆಂದು ಕರೆಸಿಕೊಳ್ಳುವವರ ಕೈ ಗಿಟ್ಟು ಅವರ ಸಮ್ಮತಿಯ ಕಾಯುವುದು ನಮ್ಮ ಜಾಯಮಾನವಲ್ಲವೇ?” ನನ್ನಲ್ಲಿ ಒಂದು ಪ್ರಶ್ನೆಯಿದೆ ಎಂದೂ ತಿಳಿಯಲಸಾಧ್ಯವಾದ ವೃತ್ತಿಪರರ ಕೈಗೆ ಬದುಕು ಕೊಟ್ಟು ‘ನೀ ಹೇಳಿದಂತೆ ನಡೆಯುವೆ’ ಎನ್ನುವುದರಲ್ಲೇ ನನಗೂ ಸಮಾಧಾನವಿದ್ದಂತಿತ್ತು - ಚಿಕ್ಕವರು ದೊಡ್ಡದರ ಬಗೆಗೆ ತಲೆ ಕೆಡಿಸಿಕೊಳ್ಳಬಾರದೆಂದು ತಿಳಿ ಹೇಳುತ್ತಾ, ಹಾಗೆಯೇ ಜವಾಬ್ದಾರಿಯೆಂಬುದು ಬಹು ದೊಡ್ಡ ಕರ್ತವ್ಯವೆಂದು ಬಿಂಬಿಸುತ್ತಾ, ಆದರೆ ಅದನ್ನು ಮಾತ್ರ ನಾವು ಹೊತ್ತುಕೊಳ್ಳಲೆಬೇಕೆಂದು ಆಜ್ಞಾಪಿಸಿ ಬಹಳ ಸಾರಿ ವಿರೋಧಾಭಾಸವ ಮೆರೆಯುವ ಸಮಾಜದ ಕಟ್ಟುನಿಟ್ಟು ಪರಿಪಾಲಕಳಲ್ಲದಿದ್ದರೂ ಅಪ್ರಜ್ಞಾಪೂರ್ವಕವಾಗಿ ಹೊತ್ತ ‘ಸಾಮಾಜಿಕ ಜವಾಬ್ದಾರಿಯ’ ಕಾರಣದಿಂದಲೋ ಏನೋ ನನಗೆ ಹಾಗೆ ಸಮ್ಮತಿಗೆ ಕಾಯುವುದರಲ್ಲೇ ಯಾತನಾದಾಯಕವಾದ ಮುದವಿತ್ತೆನಿಸುತ್ತದೆ!
ಬೇಸರದಲ್ಲೂ ಒಂದು ಅನುಭೂತಿಯಿರಬೇಕು! ಏಕೆಂದರೆ ಅದುವೂ ಅತಿಯಾದಾಗ ಬೇಸರವೇ ಆಗುತ್ತದೆ! ಹೀಗೆ ಬೇಸರವಾಗಿ ಒಮ್ಮೆ ಸುಮ್ಮನೆ ಕುಳಿತು ನನ್ನ ಆಲೋಚನೆಯನ್ನೆಲ್ಲಾ ಪರಿಶೀಲಿಸಲು ಶುರುವಿಕ್ಕಿದೆ – “ಯಾವುದು ಹೇಗೋ ತಿಳಿಯದು. ಈ ಬೆಸರ ಮಾತ್ರ ಖಂಡಿತ ಅನಂತವೇ. ಅದಕ್ಕೆ ಆರಂಭ ಎಲ್ಲೋ ಆಗುತ್ತದೆ ಆದರೆ ಕಡೆ ಎಂಬುದು ಶತಾಯಗತಾಯ ಲಭಿಸಲೇ ಒಲ್ಲದು. ನಾವು ಬೇಸರದಿಂದ ಹೊರ ಬರುವುದರಿಂದ ಅದು ಅನಂತವೆನ್ನಲು ಸಾಧ್ಯವಾಗದು. ಕಾರಣ, ನಾವು ಅಲ್ಲಿ ಬೆಸರವ ಮುಕ್ತಾಯ ಮಾಡುತ್ತಿಲ್ಲ ಬದಲಿಗೆ ಮುಂದೂಡುತ್ತಿದ್ದೇವೆ. ಮತ್ತೆ ಮತ್ತೆ ಸವಿಯಲು,ಅನುಭವಿಸಲು.. ದಿಟವಲ್ಲವೇ?” ಈ ಎಲ್ಲಾ ಲಹರಿ ನನಗೆ ಆಗ ಹೊಳೆದದ್ದಲ್ಲವೆಂದು ಈಗಾಗಲೇ ತಿಳಿದಿರಬೇಕಲ್ಲವೆ? ಹ್ಞಾಂ, ನಾನು ಆಲೋಚನೆಯ ಪರಿಶೀಲಿಸುತ್ತಾ ಕಂಡುಕೊಂಡಿದ್ದು ಒಂದೇ “ಅವೆಲ್ಲವೂ ನನ್ನ ವಿರುದ್ಧವೇ ಇವೆ. ಇರಲೇಬೇಕಿದೆ. ಏಕೆಂದರೆ ನಾನು ಅದರಂತೆಯೇ ಇದ್ದೇನೆ” ಎಷ್ಟೇ ಬಾರಿ ನಾ ಅವನ್ನು ತಿರುಚಲು ಹೊರಟರು ಅವು ನನ್ನನ್ನೇ ತಿರುಚುವವು ಮತ್ತು ಮತ್ತೆ ಮತ್ತೆ ಆರ್ಭಟಿಸುತ್ತಾ ಸವಾರಿ ಮಾಡುವವು. ಕಡೆಗೆ ನಾನು ಹತಾಶಳಾಗಿ, ಶರಣಾಗಿ ಹೊದ್ದು ಮಲಗಿ ಬಿಡುತ್ತಿದ್ದೆ. ತಿಳಿಯದೇ ನೀಡಿದ ಆಮಂತ್ರಣದಿಂದಲೋ, ಸ್ವಪ್ರೇರಣೆಯಿಂದಲೋ ಅವು ಕನಸಿನಲ್ಲೂ ದಾಂಗುಡಿಯಿಡುವವು.!
ಈ ಪೈಶಾಚಿಕ ಕನಸುಗಳು ಬರುಬರುತ್ತಾ ನನ್ನ ಮೇಲಿನ ಕರುಣೆಯಿಂದಲೋ ಏನೋ ಎಂಬಂತೆ ತಮ್ಮ ರೌದ್ರತೆಯ ಪ್ರದರ್ಶನವ ತೊರೆದು ತಣ್ಣಗಾದವು. ಕ್ರಮೇಣ ಮಾಯವೇ ಆಗಿ ಹೋದವು. ಹಲವು ದಿನಗಳ ಕಪ್ಪು ಕತ್ತಲೆಯ ಗಾಢ ನಿದ್ರೆಯನ್ನು ಸೀಳಿ ಹಿಂದಿನ ಪೈಶಾಚಿಕ ಕನಸಿನ ದಿಗಿಲಿಗೆ ಪರ್ಯಾಯವ, ಸಮಾಧಾನವ ಒದಗಿಸಲು ಬಂದಂತೆ ಆಗಮಿಸಿದ್ದು ಆ ‘ಕನಸು’. ಅದರ ಕಿರು ನೋಟ ಇಂತಿಷ್ಟು- ನಾನು ನನ್ನ ಹಿಂದೆ ಸರಿದ ಬಣ್ಣ ಬಣ್ಣದ ಕೊಡೆಯಿಂದ ಆಕರ್ಷಕಳಾಗಿ ಅದನ್ನು ಹಿಂಬಾಲಿಸುತ್ತೇನೆ. ಹಚ್ಚಹಸುರಿನ ವಾತಾವರಣದಲ್ಲಿದ್ದ ನನ್ನನ್ನು ಅಲ್ಲಿಂದ ಮುಂದೊಯ್ದ ಕೊಡೆ ಬಂಜರು ಬರ ಭೂಮಿಯಲ್ಲಿ ಮಾಯವಾಗಿ ನನ್ನನ್ನು ಹತಾಶೆಗೆ ಕೆಡವುತ್ತದೆ. ಅದು ಸರಿದ ಜಾಗದಿಂದ ಬರುವುದು ಈ ವಾಕ್ಯಗಳು “ನೀನು ಓಡಿದೆ,ಓಡಿದೆ... ಅಂದು ಆ ಗಳಿಗೆಯಲ್ಲಿ ಅಗತ್ಯವೇ ಇಲ್ಲದ ವಸ್ತುವಿಗಾಗಿ! ಮಳೆಯಾಗಲೀ ಬಿಸಿಲಾಗಲೀ ಇಲ್ಲದಿದ್ದ ಜಾಗದಲ್ಲಿ ಒಂದು ಕೊಡೆಯ ಹಿಂದೆ! ಆ ಕ್ಷಣ ನಿನಗೆ ಒದಗಿಸಲಾಗಿದ್ದ ಸಂಪತ್ತನ್ನು ನೀನು ಮನಗಾಣಲೇ ಇಲ್ಲ, ಈಗ ನೀನು ಇಲ್ಲಿದ್ದೀಯ. ತನ್ನ ಒಣ ಹುಲ್ಲಿನಷ್ಟೇ ಬರಡಾದ ಆಲೋಚನೆಗಳನ್ನು ಆಹ್ವಾನಿಸುವ ಖಾಲಿಖಾಲಿ ಜಾಗದಲ್ಲಿ ಕೈ ಚೆಲ್ಲಿ ಕುಳಿತಿದ್ದೀಯ”
ಇದರರ್ಥ ಅಂದಿಗೆನಿರಬಹುದೆಂದು ಇಂಧು ಚಿಂತಿಸಿದರೆ ಅದರ ಮಗ್ಗುಲುಗಳೂ ನನ್ನೆದುರು ತೆರೆದುಕೊಳ್ಳುವವು.. ಕನಸು ನನ್ನ ವರ್ತಮಾನವಲ್ಲ. ನನ್ನ ವರ್ತಮಾನ ಹೇಳ ಹೊರಟ ಭವಿಷ್ಯ. ಋಣಾತ್ಮಕತೆಯನ್ನೇ ತನ್ನ ಸ್ವಾಭಾವಿಕ ಲಯವೆಂದು ಭಾವಿಸುವ ಮನ ಸುಲಭದಾದುರೆಡೆಗೆ ಆಕರ್ಷಿತವಾಗಿ ಓಡುತ್ತಿರುತ್ತದೆ. ಸುಲಭವಾದುದೇನು? ನಾನು ‘ಕೆಲಸಕ್ಕೆ ಬಾರದವಳು’ ಎಂಬುದೇ ಅಲ್ಲವೆ? ಕೆಲಸಕ್ಕೆ ಬಾರದವಳೆಂದಮೇಲೆ ಯಾವ ಕೆಲಸಕ್ಕೂ ಕೈ ಹಾಕುವ ಗೋಜಿಗೇ ಹೋಗುವುದಿಲ್ಲ ನೋಡಿ. ಸ್ವ ಬದಲಾವಣೆಯ ಅವಕಾಶಗಳ ತೊರೆದು ಈ ಸರಳ ರೀತಿಯ ಹಿಂದೋಡಿದಾಗ ಅದು ನಿಜಕ್ಕೂ ಕೆಲಸಕ್ಕೆ ಬಾರದ ಜಾಗಕ್ಕೆ ತಾನೇ ಕರೆದೊಯ್ಯುವುದು? ಬಹುಷಃ ಆ ದಿನದ ಮಟ್ಟಿಗೆ ಅದರರ್ಥವದೇ ಇತ್ತೇನು. ಈ ಭವಿಷ್ಯದ ತಿಳಿವು ನನಗಾಗಿದ್ದು ಮಾತ್ರ ಆ ಕನಸು ಭೂತಾದಿ ಭೂತಕಾಲದ ನೆನಪಾಗಿ ತೆರೆದುಕೊಂಡಾಗಲೇ. ಅಂದೇ ತಿಳಿದಿದ್ದರೆ ನಾನು ಭವಿಷ್ಯವ ಮನಗಂಡು ಏನೋ ಆಗುತ್ತಿದ್ದೆ ಎಂದಲ್ಲ. - ಆಗುಹೋಗುಗಳ, ಆಶಾದಾಯಕವಲ್ಲದ ಸಂದರ್ಭಗಳ ಎದುರಿಸುವ ಮನೋಬಲವಿಲ್ಲದ ಮನಸ್ಸಿಗೆ ಅಂತಹ ಭವಿಷ್ಯ ತೋರುವುದು ಅಪಾಯಕಾರಿಯೇ ಆಗಿದೆ. ಬದುಕಿನ ಸತ್ಯಗಳನ್ನು ಕ್ರೂರಾತಿ ಕ್ರೂರವಾಗಿ ಕಾಣುವ ಮನಸ್ಸು ಯಾವುದನ್ನೂ ಸ್ವೀಕರಿಸಲಾರದು. ಅಷ್ಟಕ್ಕೂ ಭವಿಷ್ಯವೆಂಬುದೇನು ಮಾಯಾ ಕನ್ನಡಿಯಲ್ಲಿ ತೋರುವ ಮುಂದಿನ ಸನ್ನವೇಶಗಳ ದರ್ಶನವೇ? ಅದು ಇಂದಿನ ನಾಳೆ. ಇಂದನ್ನು ಹೀಗೆಯೇ ಕಳೆದರೆ ನಾಳೆ ಏನಾಗುತ್ತದೆಂಬುದರ ಅರಿವು. ಈಗಾಗಲೇ ರೂಪಿಸಲ್ಪಟ್ಟಿರುವ ಸಾರಾಂಶವ ಎಲ್ಲ ಜೀವಿಗಳಿಗೂ ಭೂತ, ವರ್ತಮಾನ, ಭವಿಷ್ಯ ಗಳೆಂದು ವಿಂಗಡಿಸಿ ಹಂತ ಹಂತವಾಗಿ ವಿತರಿಸುವ ಪ್ರಕೃತಿಯ ಯೋಜನೆಯಲ್ಲೊಂದಂಶ
ಏರು ಧನಿಯೂ ನಡುಕ ಹುಟ್ಟಿಸುವಷ್ಟರ ಮಟ್ಟಿಗೆ ಸುಕ್ಷ್ಮಾತಿ ಸೂಕ್ಷ್ಮಳಾದವಳಿಗೆ ಬಂದ ಆ ಕನಸೂ, ಕೇಳಿಸಿದ ಧನಿಯಲ್ಲಿದ್ದ ವಿಶ್ವಾಸ, ಗಾಂಭೀರ್ಯಗಳು ಅವಕ್ಕಾಗಿಸಿ ಮತ್ತಷ್ಟು ಪರಿಸ್ಥಿತಿಯ ಕಗ್ಗಂಟೇ ಆಗಿಸಿದವು,,,,
(ಸಶೇಷ)
(Image- Web)
Tuesday, January 31, 2012
‘ಕಂಡೆ ನಾನೊ೦ದು ಕನಸು’- ಅ೦ಕಣ ಬರಹ
‘ಸಿಹಿಗಾಳಿ’ ಮಾಸಿಕದಲ್ಲಿ ಪ್ರಕಟವಾಗುತ್ತಿರುವ ಅಂಕಣ ‘ಕಂಡೆ ನಾನೊ೦ದು ಕನಸು’ ವಿನ ಬರಹಗಳನ್ನು ಕ೦ತಿನಲ್ಲಿ ಇಲ್ಲಿ ಪ್ರಕಟಿಸಲಿದ್ದೇನೆ.. ನಿಮ್ಮ ಪ್ರೋತ್ಸಾಹ ಹೀಗೇ ಮು೦ದುವರೆಯುವುದೆ೦ದು ಆಶಿಸುವೆ :)
೧. ಅಂತರ್ಗಮನ

ದಿನಗಳು ಬರುತ್ತವೆ- ಹೋಗುತ್ತವೆ. ಕೆಲವಂತೂ ಹೆಸರೂ ನೆನಪಿಡದಷ್ಟು ಸಾಮಾನ್ಯ ದಿನಗಳು. ಈ ದಿನಗಳ ಓಟದ ನಡುವೆ ಒಂದೊಂದು ಎಂತಹುದೋ ಒಂದು ವಿಶೇಷತೆಯನ್ನೋ, ವಿಕಾರವನ್ನೋ, ವಿಭಿನ್ನತೆಯನ್ನೋ, ಹೊತ್ತು ಬರುತ್ತವೆ. ಅದಕ್ಕೆಂದೇ ಅವು ಅಚ್ಚಾಗಿ ಉಳಿದು ಬಿಡುತ್ತವೆ. ಅದು ಅಂತಹುದೇ ದಿನ! ನಾನೀಗ ಅದನ್ನು ‘ವಿಭಿನ್ನ’, ‘ವಿಶಿಷ್ಟ’ ಎಂಬ ಹಣೆ ಬರಹದಡಿ ದಾಖಲು ಮಾಡಿರುವ, ಅಂದಿನ ಪಾಲಿನ ‘ವಿಚಿತ್ರ’ ದಿನ! ಅಂದಾದುದನ್ನು ನಾನು ‘ಅನುಭವ’ ಎನ್ನಲಾರೆ, ‘ಅನುಭೂತಿ’ ಎಂದು ಹೆಸರಿಸಲಾರೆ. ಏಕೆಂದರೆ ಕೆಲವು ‘ಘಳಿಗೆ’ಗಳಿಗೆ ಹೆಸರಿರುವುದಿಲ್ಲ, ಅವು ಬದುಕಿನ ‘ವಿಲಕ್ಷಣ’ತೆ ಗೆ ಸಾಕ್ಷಿಗಳಷ್ಟೇ!
ನಾನು ನನ್ನನ್ನು ಹೊತ್ತ ಬಸ್ಸಿನಲ್ಲಿ ಪ್ರಶ್ನೆಗಳ ಹೊತ್ತು ಪಯಣಿಸುತ್ತಿದ್ದೆ. ಹೋಗುತ್ತಿದ್ದದ್ದು ಉತ್ತರವನ್ನರಿಸಿ ಮಾನಸಿಕ ತಜ್ಞರ ಬಳಿ. ‘ಹೋಗುವಂತಹುದೇನಿತ್ತು?’ ಎನಿಸಬಹುದೇನೋ. ನಾನೀಗ ಹೇಳುವೆ, “ಎಲ್ಲಿಯೂ ಹೋಗಲು ತೋಚದೇ ಅಲ್ಲಿ ಹೋದೆ,’”ನೆಂದು. ಕಾರಣ- ಆಂತರಿಕ ಪಯಣದಿಂದ ಸಿಗಬಹುದಾದ ಉತ್ತರವ ಬಾಹ್ಯ ಪ್ರಯಾಣಗಳಿಂದ ಪಡೆಯಲು ಅಸಾಧ್ಯ! ಆದರೆ ಪ್ರತೀತಿಯಂತೆ ವಿವರಿಸುವುದಾದರೆ, ಆ ‘ಹೊರಗಿನ’ ಪ್ರಯಾಣ ಮಾತ್ರ ಒಳಗಿನ ‘ಪ್ರಯಾಣ’ಕ್ಕೆ ಹಸಿರು ನಿಶಾನೆ ತೋರಿಸಲು ಹೊರಟಂತಿತ್ತು ಎನ್ನಬಹುದೇನೋ. ವಿಷಯಕ್ಕೆ ಬರುವುದಾದರೆ, ನಾನು ೧೬ನೇ ವಯಸ್ಸಿನಲ್ಲಿ ಬದುಕು ಏಕೆ ಆಸಕ್ತಿಕರವಾಗಿರಬೇಕೆಂಬುದರ ಬಗೆಗೇ ಆಸಕ್ತಿ ಕಳೆದುಕೊಂಡು ಕಳವಳಿಸುತ್ತಿದ್ದೆ. ಆ ಸ್ಥಿತಿಯ ಕಾರಣವ ಹೊರ ಜಗತ್ತಿನ ವಿಷಯಗಳಲ್ಲಿ ಹುಡುಕ ಹೊರಟರೆ ಉತ್ತರ ಕಷ್ಟ ಸಾಧ್ಯ. ಏನೆಂದರೆ- ‘ನಾವೆಲ್ಲರೂ ಮಕ್ಕಳಿಗೆ ಪ್ರಪಂಚದ ವಿಚಾರಗಳ ಬಗೆಗೆ, ವಿಕಾರಗಳ ಬಗೆಗೆ, ಪರಿಕಲ್ಪನೆಗಳ ಬಗೆಗೆ ತಿಳಿಸಿಕೊಡುತ್ತೇವೆ. ಅದನ್ನು ಹೀಗೆ ಹೀಗೇ ಮಾಡಬೇಕು ಎಂದು ಹೇಳಿ ಕೊಡುತ್ತೇವೆ. ಆದರೆ ಅದೇಕೆ ಹೀಗೇ ಇರಬೇಕು ಎಂಬ ಗೊಂದಲ ಅವರಲ್ಲಿ ಮೂಡಿದರೆ ಅದಕ್ಕೆ ಸ್ಪಷ್ಟನೆಗಳಿಲ್ಲ! ಅದರರ್ಥ ನಮ್ಮಲ್ಲಿ ಉತ್ತರವಿಲ್ಲ ಎಂದಲ್ಲ. ಅದು ಉತ್ತರವ ಬಯಸಿದ ವ್ಯಕ್ತಿಯ ಪಾಲಿಗೆ ಎಷ್ಟು ಸಮರ್ಪಕ ಎಂಬುದು ಮುಖ್ಯವಾಗುತ್ತದೆ. ಕಾರಣ, “ಸಮರ್ಪಕ ಉತ್ತರವಿರುವುದು ಪ್ರಶ್ನೆ ಕೇಳಿಸಿಕೊಂಡವನಲ್ಲಲ್ಲ, ಪ್ರಶ್ನೆ ಕೇಳಿದವನಲ್ಲಿ!” ಇಂತಹ ಉತ್ತರವೊಂದು ನನ್ನಲ್ಲೇ ಅಡಗಿದೆ ಎಂಬ ಕುರುಹೂ ಇಲ್ಲದ ನಾನು ಒಳಗಿನ ಕತ್ತಲೆಯ ಹೊರಗಿಗೂ ವಿಸ್ತರಿಸಿಕೊಂಡಿದ್ದೆ!
ನಾನಿಷ್ಟೆಲ್ಲಾ ಹೇಳಿ ನನಗಾದ ಕ್ಷಣ ಮಾತ್ರದ ‘ವಿಲಕ್ಷಣತೆ’ಯ ವಿವರಿಸಿದರೆ ‘ಅದೇನು ಅಂತಹುದೇ?’ ಎಂದೆನಿಸಿದರೆ ಅದು ಸಹಜವೇ – “ಕೆಲವು ಘಳಿಗೆಗಳೇ ಹಾಗೆ, ಅನುಭವಿಸ ಹೊರಟರೆ ಬೃಹತ್ತಾಗಿಯೂ ವಿವರಿಸ ಹೊರಟರೆ ಯಕಃಚಿತ್ ಆಗಿಯೂ ಕಾಣಿಸಿ ಬಿಡುತ್ತವೆ.” ಹಣೆಪಟ್ಟಿ ಅಂಟಿಸುವುದೇ ಆದರೆ ಅದನ್ನು ಜೀವನದ ಹಲವು illusionಗಳಲ್ಲೊಂದೆಂದು ಪರಿಗಣಿಸಬಹುದು. ಪ್ರಯಾಣ ಮುಂದುವರಿದಂತೆ ನಿದ್ದೆ ಆವರಿಸಿದಂತಾಗಿ ಅಮ್ಮನ ಹೆಗಲ ಮೇಲೆ ಒರಗಿದ್ದೆ. ಸಹಜವಾಗೇ ಹೇಗೋ, ಎಲ್ಲಿಯೋ ಹೋದಂತೆ ಕವಿದಿದ್ದ ಮಂಪರನ್ನು ಅಸಹಜತೆಯೊಂದು ಥಟ್ಟನೆಬ್ಬಿಸಿತು. ಒಂದು ಅತಿ ತೀಕ್ಷ್ಣವಾದ ಕಿರಣವ ನನ್ನತ್ತಲೇ ಗುರಿಮಾಡಿ ಎಸೆದಂತೆ ಬೆಳಕು ಮುಚ್ಚಿದ ಕಣ್ಣ ಮುಂದೆ ಅದರ ವೇಗದಲ್ಲಿಯೇ ಹಾದು ಹೋಯಿತು. ದೇಹದ ಅಂಗಾಂಗಗಳ ಕಸುವನ್ನೆಲ್ಲಾ ಉಪಯೋಗಿಸಿ ಕಣ್ಣು ಬಿಟ್ಟವಳಂತೆ ನಾನು ಪಟ್ಟನೆದ್ದು ಕುಳಿತು ಆಗಿದ್ದನ್ನು ಅರುಹಿ ಅಮ್ಮನನ್ನು ದಿಗ್ಬ್ರಾಂತಳನ್ನಾಗಿಸಿದೆ. ‘ಆಗಿಸಿದೆ’ ಎನ್ನುವುದಕ್ಕಿಂತ ನನ್ನ ಸ್ಥಿತಿಯನ್ನೇ ‘ವರ್ಗಾಯಿಸಿದೆ’ ಎಂಬುದು ಹೆಚ್ಚು ಸೂಕ್ತ! ನನಗೆ ವಿಭಿನ್ನವೆನಿಸುವುದು ಈ ಅನುಭವ ಖಂಡಿತಾ ಅಲ್ಲ. ಅದು ಅದರ ಬೆನ್ನಿನಲ್ಲೇ ನನ್ನ ಮನಸ್ಸು ಆಘ್ರಾಣಿಸಿದ ಪ್ರಶಾಂತತೆ. ಅದು ಹೆಚ್ಚು ಕಾಲ ಆಗ ಉಳಿಯಲಿಲ್ಲವಾದರೂ ಅಂತಹ ಒಂದು ಲಯವನ್ನು ಹೊಂದಲು ಆಗಾಗ ನನ್ನ ಮನಸ್ಸು ಹವಣಿಸುತ್ತಿದ್ದುದಂತೂ ನಿಜ.
ಹಾಗೆಂದ ಮಾತ್ರಕ್ಕೆ ನಾನ್ಯಾವುದೋ ವರ್ಣಿಸಲಸಾಧ್ಯವಾದ ಕಷ್ಟಕ್ಕೆ ಸಿಲುಕಿಕೊಂಡೆನೆಂದೂ ಎದುರಿಗೆ ಕಂಡ ಬೆಳಕೇ ಉತ್ತರವಾಗಿ ಹೋಯಿತೆಂದೂ ಬಣ್ಣಿಸುತ್ತಾ ಕುಳಿತರದು ಅತಿಶಯೋಕ್ತಿಯಲ್ಲದೆ ಮತ್ತೇನಲ್ಲ. – “ದಂಡಿಗಟ್ಟಲೆ ಪ್ರಶ್ನೆ ಕೇಳಿ ರಚ್ಚೆ ಹಿಡಿದು ತಲೆ ಕೊರೆಯುತ್ತಿರುವ ಮಗುವಿನ ಕಣ್ಣಿಗೆ ಟಾರ್ಚ್ ಬಿಟ್ಟು ಪ್ರಶ್ನೆಗಳ ಹಾದಿ ತಪ್ಪಿಸಬಹುದಷ್ಟೇ. ಆ ಬೆಳಕದಕ್ಕೆ ಉತ್ತರವೇ? ಹೀಗೆ ನನ್ನ ಮುಂದಿನ ಬೆಳಕು ತಂದ ಸಮಾಧಾನ ನನ್ನ ಪ್ರಶ್ನೆಗಳ ಆಗರವಾಗಿದ್ದ ರಚ್ಚೆ ಹಿಡಿದ ಮನವ ಒಂದು ಕ್ಷಣ ಹಿಡಿದಿಡುವ, ‘ಇಲ್ಲಿ ನೋಡು..’ ಎಂಬಂತಹ ಬೆರಗನ್ನು ಸೃಷ್ಟಿಸುವ ಮಾನಸಿಕ ಮ್ಯಾಜಿಕ್‌ನ ಭಾಗವಷ್ಟೇ! ಮನಸ್ಸು ಪದೆಪದೇ ಹೊಂದಲು ಬಯಸುತ್ತಿದ್ದ ಈ ಪ್ರಶಾಂತತೆ ಮತ್ತೆ ಮತ್ತೆ ಬಂದೊದಗಲು ಬೇಕಿರುವುದು ಬೆಳಕಲ್ಲ, ತರ್ಕ-ಉತ್ತರ! ಎಂಬುದು ನನ್ನ ಅಂತರಂಗಕ್ಕೆ ಬಹುಬೇಗ ತಿಳಿದು ಬಿಟ್ಟಿತು. “ಅದಕ್ಕೆಂದೇ ಅದು ತನ್ನಾಗಮನದ ಮುನ್ಸೂಚನೆಯನ್ನು ನೀಡಿತು, ಪೂರ್ವ ನಿಗಧಿತವಾದ ಹಂದರವೊಂದರ ಸುಳಿವು ನೀಡಿತೆಂದು ನಾನು ಹೇಳುವುದಿಲ್ಲ.’ – ‘ನನಗನಿಸುವುವಂತೆ ಸಮಯ, ‘ಸಮಯ’ದ ಹೊರತಾಗಿ ಏನನ್ನೂ ಸೂಚಿಸುವುದಿಲ್ಲ. ಸೂಚಿಸಿಕೊಳ್ಳುವವು ಸೂಚನೆಯ ನಿರೀಕ್ಷೆಯಲ್ಲಿರುವ ಮನಗಳು. ಕಾಲ ಮುಂದೆ ಸರಿದಂತೆ ಹಿಂದೆ ನಡೆದವುಗಳೆಲ್ಲಾ ಸೂಚನೆಗಳಾಗಿಯೂ, ಪ್ರೇರಣೆಗಳಾಗಿಯೂ ಕಾಣುತ್ತಾ ಹೋಗುತ್ತವೆ’. ನಾನೂ ಈಗ ಆ ‘ಬೆಳಕ’ ಪ್ರೇರಣೆ ಎಂದು ಬಿಟ್ಟರೆ ನಾನು ಆ ಕಾಲಕ್ಕೂ, ಅಂದಿನ ಮನಃಸ್ಥಿತಿಗೂ ಮಾಡಿದ ಅವಮಾನವೆಂದೇ ಕಂಡುಬಿಡುತ್ತದೆ..
(ಸಶೇಷ)
(image - Web)
