Tuesday, February 14, 2012

ಅಂಕಣ- ಕಂಡೆ ನಾನೊಂದು ಕನಸು-೨ (ಅಂತರ್ಗಮನ )

‘ಸಿಹಿಗಾಳಿ’ ಮಾಸ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಅ೦ಕಣ ಬರಹ - ‘ಕಂಡೆ ನಾನೊಂದು ಕನಸು’ವಿನ ಎರಡನೇ ಭಾಗವನ್ನು ಪ್ರಕಟಿಸುತ್ತಿದ್ದೇನೆ. ಓದಿ ಪ್ರೊತ್ಸಾಹಿಸುವೆರೆ೦ದು ನಂಬುವೆ...... :)



ಹಿ೦ದಿನ ಬರಹದಲ್ಲಿ ಬರೆದ೦ತೆ, ಬೆಳಕಿನ ತೀಕ್ಷ್ಣ ಕಿರಣ ಕಣ್ಣ ಮುದೆ ಸರಿದು ಪ್ರಶಾತತೆಗೆ ಎಡೆ ಮಾಡಿಕೊಟ್ಟ ಘಟನೆ ಸರಿದು ತಿಂಗಳುಗಳೇ ಉರುಳಿದ್ದವು. ನನಗೇಕೋ ನನ್ನ ನಿರಾಸಕ್ತಿಅನುಪಯುಕ್ತವೂ, ಜಡವೂ ಎನಿಸಲಾರಂಭಿಸಿ ಅದುವೂ ಬೇಸರ ಬಂದು ಹೋಗಿತ್ತು. ಖಾಯಿಲೆಗೆ ಮಾತ್ರ ಔಷಧವಲ್ಲ ಸ್ಥಿತಿಗಳಿಗೂ ಔಷಧವಿದೆಎಂಬುದನ್ನು ಬಲವಾಗಿ ನಂಬಿದ ಜಗತ್ತು ನೀಡಿದ ಔಷಧಗಳ ಚಾಚೂ ತಪ್ಪದೆ ತೆಗೆದುಕೊಳ್ಳುವುದಾಗಿತ್ತು. ಪ್ರತಿ ಬಾರಿಯೂ ಆಲೋಚನೆಯೊಂದು ಪುಟಿದು ನೀರಿನೊಳಗೆ ಕರಗುತ್ತಿತ್ತು - ಮನಸ್ಸು ಚಿಂತೆ ಮಾಡುತ್ತದೆ. ಖಿನ್ನವಾಗುತ್ತದೆ. ದೇಹವ ಪ್ರಚೋಧಿಸುತ್ತದೆ. ದೇಹ ಜಡವಾಗುತ್ತದೆ, ಬಲಹೀನ ವಾಗುತ್ತದೆ, ರೋದಿಸುತ್ತದೆ. ಔಷಧ ಜಡತೆಯ, ಆಲಸ್ಯವ ದೂರ ಮಾಡಿ ಮನಸ್ಸಿಗೆ ಎದುರೇಟು ನೀಡಬಹುದು ಆಹಾ! ನೀ ಹೇಳಿದಂತೆ ಇನ್ನು ನಡೆಯೆನುಎನಿಸಬಹುದು. ನಂತರದಲ್ಲೇ ಮನ ಚಿಗುರಿ ಜೀವನದ ಬಗೆಗೆ 'ಏಕೆ'ಗಳ ಶುರುವಿಟ್ಟರೆ ನನ್ನ ಮಾತ್ರೆಯ ಗೋಲಿ ಅದನ್ನುತ್ತರಿಸುವುದೇ?”

ನನ್ನ ಪಾಲಿಗೆ ಔಷಧವೂ ಟಾರ್ಚ್ ಉಪಮೆಯಂತೆಯೇ ಗೋಚರಿಸಲಾರಂಭಿಸಿತ್ತು. ಆದರೆ ಅದರ ತೊರೆಯುವ ಕುರಿತು ನಾನೇನು ಯೋಚಿಸಲಿಲ್ಲ. – ಬದುಕಿನ ಜವಾಬ್ದಾರಿಗಳ ಜವಾಬ್ದಾರರೆಂದು ಕರೆಸಿಕೊಳ್ಳುವವರ ಕೈ ಗಿಟ್ಟು ಅವರ ಸಮ್ಮತಿಯ ಕಾಯುವುದು ನಮ್ಮ ಜಾಯಮಾನವಲ್ಲವೇ?” ನನ್ನಲ್ಲಿ ಒಂದು ಪ್ರಶ್ನೆಯಿದೆ ಎಂದೂ ತಿಳಿಯಲಸಾಧ್ಯವಾದ ವೃತ್ತಿಪರರ ಕೈಗೆ ಬದುಕು ಕೊಟ್ಟು ನೀ ಹೇಳಿದಂತೆ ನಡೆಯುವೆಎನ್ನುವುದರಲ್ಲೇ ನನಗೂ ಸಮಾಧಾನವಿದ್ದಂತಿತ್ತು - ಚಿಕ್ಕವರು ದೊಡ್ಡದರ ಬಗೆಗೆ ತಲೆ ಕೆಡಿಸಿಕೊಳ್ಳಬಾರದೆಂದು ತಿಳಿ ಹೇಳುತ್ತಾ, ಹಾಗೆಯೇ ಜವಾಬ್ದಾರಿಯೆಂಬುದು ಬಹು ದೊಡ್ಡ ಕರ್ತವ್ಯವೆಂದು ಬಿಂಬಿಸುತ್ತಾ, ಆದರೆ ಅದನ್ನು ಮಾತ್ರ ನಾವು ಹೊತ್ತುಕೊಳ್ಳಲೆಬೇಕೆಂದು ಆಜ್ಞಾಪಿಸಿ ಬಹಳ ಸಾರಿ ವಿರೋಧಾಭಾಸವ ಮೆರೆಯುವ ಸಮಾಜದ ಕಟ್ಟುನಿಟ್ಟು ಪರಿಪಾಲಕಳಲ್ಲದಿದ್ದರೂ ಅಪ್ರಜ್ಞಾಪೂರ್ವಕವಾಗಿ ಹೊತ್ತ ಸಾಮಾಜಿಕ ಜವಾಬ್ದಾರಿಯಕಾರಣದಿಂದಲೋ ಏನೋ ನನಗೆ ಹಾಗೆ ಸಮ್ಮತಿಗೆ ಕಾಯುವುದರಲ್ಲೇ ಯಾತನಾದಾಯಕವಾದ ಮುದವಿತ್ತೆನಿಸುತ್ತದೆ!

ಬೇಸರದಲ್ಲೂ ಒಂದು ಅನುಭೂತಿಯಿರಬೇಕು! ಏಕೆಂದರೆ ಅದುವೂ ಅತಿಯಾದಾಗ ಬೇಸರವೇ ಆಗುತ್ತದೆ! ಹೀಗೆ ಬೇಸರವಾಗಿ ಒಮ್ಮೆ ಸುಮ್ಮನೆ ಕುಳಿತು ನನ್ನ ಆಲೋಚನೆಯನ್ನೆಲ್ಲಾ ಪರಿಶೀಲಿಸಲು ಶುರುವಿಕ್ಕಿದೆ – ಯಾವುದು ಹೇಗೋ ತಿಳಿಯದು. ಈ ಬೆಸರ ಮಾತ್ರ ಖಂಡಿತ ಅನಂತವೇ. ಅದಕ್ಕೆ ಆರಂಭ ಎಲ್ಲೋ ಆಗುತ್ತದೆ ಆದರೆ ಕಡೆ ಎಂಬುದು ಶತಾಯಗತಾಯ ಲಭಿಸಲೇ ಒಲ್ಲದು. ನಾವು ಬೇಸರದಿಂದ ಹೊರ ಬರುವುದರಿಂದ ಅದು ಅನಂತವೆನ್ನಲು ಸಾಧ್ಯವಾಗದು. ಕಾರಣ, ನಾವು ಅಲ್ಲಿ ಬೆಸರವ ಮುಕ್ತಾಯ ಮಾಡುತ್ತಿಲ್ಲ ಬದಲಿಗೆ ಮುಂದೂಡುತ್ತಿದ್ದೇವೆ. ಮತ್ತೆ ಮತ್ತೆ ಸವಿಯಲು,ಅನುಭವಿಸಲು.. ದಿಟವಲ್ಲವೇ?” ಈ ಎಲ್ಲಾ ಲಹರಿ ನನಗೆ ಆಗ ಹೊಳೆದದ್ದಲ್ಲವೆಂದು ಈಗಾಗಲೇ ತಿಳಿದಿರಬೇಕಲ್ಲವೆ? ಹ್ಞಾಂ, ನಾನು ಆಲೋಚನೆಯ ಪರಿಶೀಲಿಸುತ್ತಾ ಕಂಡುಕೊಂಡಿದ್ದು ಒಂದೇ ಅವೆಲ್ಲವೂ ನನ್ನ ವಿರುದ್ಧವೇ ಇವೆ. ಇರಲೇಬೇಕಿದೆ. ಏಕೆಂದರೆ ನಾನು ಅದರಂತೆಯೇ ಇದ್ದೇನೆಎಷ್ಟೇ ಬಾರಿ ನಾ ಅವನ್ನು ತಿರುಚಲು ಹೊರಟರು ಅವು ನನ್ನನ್ನೇ ತಿರುಚುವವು ಮತ್ತು ಮತ್ತೆ ಮತ್ತೆ ಆರ್ಭಟಿಸುತ್ತಾ ಸವಾರಿ ಮಾಡುವವು. ಕಡೆಗೆ ನಾನು ಹತಾಶಳಾಗಿ, ಶರಣಾಗಿ ಹೊದ್ದು ಮಲಗಿ ಬಿಡುತ್ತಿದ್ದೆ. ತಿಳಿಯದೇ ನೀಡಿದ ಆಮಂತ್ರಣದಿಂದಲೋ, ಸ್ವಪ್ರೇರಣೆಯಿಂದಲೋ ಅವು ಕನಸಿನಲ್ಲೂ ದಾಂಗುಡಿಯಿಡುವವು.!

ಈ ಪೈಶಾಚಿಕ ಕನಸುಗಳು ಬರುಬರುತ್ತಾ ನನ್ನ ಮೇಲಿನ ಕರುಣೆಯಿಂದಲೋ ಏನೋ ಎಂಬಂತೆ ತಮ್ಮ ರೌದ್ರತೆಯ ಪ್ರದರ್ಶನವ ತೊರೆದು ತಣ್ಣಗಾದವು. ಕ್ರಮೇಣ ಮಾಯವೇ ಆಗಿ ಹೋದವು. ಹಲವು ದಿನಗಳ ಕಪ್ಪು ಕತ್ತಲೆಯ ಗಾಢ ನಿದ್ರೆಯನ್ನು ಸೀಳಿ ಹಿಂದಿನ ಪೈಶಾಚಿಕ ಕನಸಿನ ದಿಗಿಲಿಗೆ ಪರ್ಯಾಯವ, ಸಮಾಧಾನವ ಒದಗಿಸಲು ಬಂದಂತೆ ಆಗಮಿಸಿದ್ದು ಆ ಕನಸು’. ಅದರ ಕಿರು ನೋಟ ಇಂತಿಷ್ಟು- ನಾನು ನನ್ನ ಹಿಂದೆ ಸರಿದ ಬಣ್ಣ ಬಣ್ಣದ ಕೊಡೆಯಿಂದ ಆಕರ್ಷಕಳಾಗಿ ಅದನ್ನು ಹಿಂಬಾಲಿಸುತ್ತೇನೆ. ಹಚ್ಚಹಸುರಿನ ವಾತಾವರಣದಲ್ಲಿದ್ದ ನನ್ನನ್ನು ಅಲ್ಲಿಂದ ಮುಂದೊಯ್ದ ಕೊಡೆ ಬಂಜರು ಬರ ಭೂಮಿಯಲ್ಲಿ ಮಾಯವಾಗಿ ನನ್ನನ್ನು ಹತಾಶೆಗೆ ಕೆಡವುತ್ತದೆ. ಅದು ಸರಿದ ಜಾಗದಿಂದ ಬರುವುದು ಈ ವಾಕ್ಯಗಳು ನೀನು ಓಡಿದೆ,ಓಡಿದೆ... ಅಂದು ಆ ಗಳಿಗೆಯಲ್ಲಿ ಅಗತ್ಯವೇ ಇಲ್ಲದ ವಸ್ತುವಿಗಾಗಿ! ಮಳೆಯಾಗಲೀ ಬಿಸಿಲಾಗಲೀ ಇಲ್ಲದಿದ್ದ ಜಾಗದಲ್ಲಿ ಒಂದು ಕೊಡೆಯ ಹಿಂದೆ! ಆ ಕ್ಷಣ ನಿನಗೆ ಒದಗಿಸಲಾಗಿದ್ದ ಸಂಪತ್ತನ್ನು ನೀನು ಮನಗಾಣಲೇ ಇಲ್ಲ, ಈಗ ನೀನು ಇಲ್ಲಿದ್ದೀಯ. ತನ್ನ ಒಣ ಹುಲ್ಲಿನಷ್ಟೇ ಬರಡಾದ ಆಲೋಚನೆಗಳನ್ನು ಆಹ್ವಾನಿಸುವ ಖಾಲಿಖಾಲಿ ಜಾಗದಲ್ಲಿ ಕೈ ಚೆಲ್ಲಿ ಕುಳಿತಿದ್ದೀಯ

ಇದರರ್ಥ ಅಂದಿಗೆನಿರಬಹುದೆಂದು ಇಂಧು ಚಿಂತಿಸಿದರೆ ಅದರ ಮಗ್ಗುಲುಗಳೂ ನನ್ನೆದುರು ತೆರೆದುಕೊಳ್ಳುವವು.. ಕನಸು ನನ್ನ ವರ್ತಮಾನವಲ್ಲ. ನನ್ನ ವರ್ತಮಾನ ಹೇಳ ಹೊರಟ ಭವಿಷ್ಯ. ಋಣಾತ್ಮಕತೆಯನ್ನೇ ತನ್ನ ಸ್ವಾಭಾವಿಕ ಲಯವೆಂದು ಭಾವಿಸುವ ಮನ ಸುಲಭದಾದುರೆಡೆಗೆ ಆಕರ್ಷಿತವಾಗಿ ಓಡುತ್ತಿರುತ್ತದೆ. ಸುಲಭವಾದುದೇನು? ನಾನು ಕೆಲಸಕ್ಕೆ ಬಾರದವಳುಎಂಬುದೇ ಅಲ್ಲವೆ? ಕೆಲಸಕ್ಕೆ ಬಾರದವಳೆಂದಮೇಲೆ ಯಾವ ಕೆಲಸಕ್ಕೂ ಕೈ ಹಾಕುವ ಗೋಜಿಗೇ ಹೋಗುವುದಿಲ್ಲ ನೋಡಿ. ಸ್ವ ಬದಲಾವಣೆಯ ಅವಕಾಶಗಳ ತೊರೆದು ಈ ಸರಳ ರೀತಿಯ ಹಿಂದೋಡಿದಾಗ ಅದು ನಿಜಕ್ಕೂ ಕೆಲಸಕ್ಕೆ ಬಾರದ ಜಾಗಕ್ಕೆ ತಾನೇ ಕರೆದೊಯ್ಯುವುದು? ಬಹುಷಃ ಆ ದಿನದ ಮಟ್ಟಿಗೆ ಅದರರ್ಥವದೇ ಇತ್ತೇನು. ಈ ಭವಿಷ್ಯದ ತಿಳಿವು ನನಗಾಗಿದ್ದು ಮಾತ್ರ ಆ ಕನಸು ಭೂತಾದಿ ಭೂತಕಾಲದ ನೆನಪಾಗಿ ತೆರೆದುಕೊಂಡಾಗಲೇ. ಅಂದೇ ತಿಳಿದಿದ್ದರೆ ನಾನು ಭವಿಷ್ಯವ ಮನಗಂಡು ಏನೋ ಆಗುತ್ತಿದ್ದೆ ಎಂದಲ್ಲ. - ಆಗುಹೋಗುಗಳ, ಆಶಾದಾಯಕವಲ್ಲದ ಸಂದರ್ಭಗಳ ಎದುರಿಸುವ ಮನೋಬಲವಿಲ್ಲದ ಮನಸ್ಸಿಗೆ ಅಂತಹ ಭವಿಷ್ಯ ತೋರುವುದು ಅಪಾಯಕಾರಿಯೇ ಆಗಿದೆ. ಬದುಕಿನ ಸತ್ಯಗಳನ್ನು ಕ್ರೂರಾತಿ ಕ್ರೂರವಾಗಿ ಕಾಣುವ ಮನಸ್ಸು ಯಾವುದನ್ನೂ ಸ್ವೀಕರಿಸಲಾರದು. ಅಷ್ಟಕ್ಕೂ ಭವಿಷ್ಯವೆಂಬುದೇನು ಮಾಯಾ ಕನ್ನಡಿಯಲ್ಲಿ ತೋರುವ ಮುಂದಿನ ಸನ್ನವೇಶಗಳ ದರ್ಶನವೇ? ಅದು ಇಂದಿನ ನಾಳೆ. ಇಂದನ್ನು ಹೀಗೆಯೇ ಕಳೆದರೆ ನಾಳೆ ಏನಾಗುತ್ತದೆಂಬುದರ ಅರಿವು. ಈಗಾಗಲೇ ರೂಪಿಸಲ್ಪಟ್ಟಿರುವ ಸಾರಾಂಶವ ಎಲ್ಲ ಜೀವಿಗಳಿಗೂ ಭೂತ, ವರ್ತಮಾನ, ಭವಿಷ್ಯ ಗಳೆಂದು ವಿಂಗಡಿಸಿ ಹಂತ ಹಂತವಾಗಿ ವಿತರಿಸುವ ಪ್ರಕೃತಿಯ ಯೋಜನೆಯಲ್ಲೊಂದಂಶ

ಏರು ಧನಿಯೂ ನಡುಕ ಹುಟ್ಟಿಸುವಷ್ಟರ ಮಟ್ಟಿಗೆ ಸುಕ್ಷ್ಮಾತಿ ಸೂಕ್ಷ್ಮಳಾದವಳಿಗೆ ಬಂದ ಆ ಕನಸೂ, ಕೇಳಿಸಿದ ಧನಿಯಲ್ಲಿದ್ದ ವಿಶ್ವಾಸ, ಗಾಂಭೀರ್ಯಗಳು ಅವಕ್ಕಾಗಿಸಿ ಮತ್ತಷ್ಟು ಪರಿಸ್ಥಿತಿಯ ಕಗ್ಗಂಟೇ ಆಗಿಸಿದವು,,,,

(ಸಶೇಷ)

(Image- Web)

12 comments:

sunaath said...

ಸುಷ್ಮಾ,
ಕನಸುಗಳ ಅರ್ಥವನ್ನು ಈ ತರಹ ತರ್ಕವನ್ನು ಆಧರಿಸಿ ಮಾಡುವದನ್ನು ಕಂಡು ಬೆರಗಾಗುತ್ತಿದ್ದೇನೆ. ನಿಮ್ಮ ಕನಸುಗಾರಿಕೆ ಮುಂದುವರೆಯಲಿ.

Swarna said...

ನಿಮ್ಮ ಕನಸ ಬಿಡಿಸುವ ಬಗೆ ಚೆನ್ನಾಗಿದೆ.
You write very well.
Keep writing.
Swarna

ಮನಸು said...

ಹೀಗೆಲ್ಲಾ ಕನಸಿನ ಬಗ್ಗೆ ಯೋಚಿಸಬಹುದೇ ಎಂದೆನಿಸುತ್ತೆ... ಥಾಂಕ್ಯೂ ತುಂಬಾ ಒಳ್ಳೆ ಲೇಖನ

Ittigecement said...

ಕನಸುಗಳು ನಿಜಕ್ಕೂ ಬಹಳ ಕೌತುಕ !

ಅದರಿಂದ ಭವಿಷ್ಯ ಗೊತ್ತಾಗುತ್ತಾ?
ಕೆಲವೊಂದು ಘಟನೆಗಳ ಪೂರ್ವ ಸೂಚನೆ ದೊರೆಯುತ್ತದಾ?

ಅವುಗಳ ಅರ್ಥವನ್ನು ಬಿಡಿಸ ಬಹುದಾ?

ನಿಮ್ಮ ಲೇಖನ ಮಾಲೆ ಬಹಳ ಆಸಕ್ತಿದಾಯಕವಾಗಿದೆ...
ಮುಂದುವರೆಯಲಿ....

Siddaraj Pujar said...

sushma avre nimma kannada nijavaglu sakkatagidhe ..... baritha irii All the Best .............

chiranth said...

ಸುಷ್ಮರವರೆ,
ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಪಾಶ್ಚಾತ್ಯ ಸಂಸ್ಕ್ರುತಿಗೆ ಒಲವು ತೂರುತ್ತಿರುವಂತಹ ಕಾಲದಲ್ಲಿ, ಕನ್ನದ ಸಾಹಿತ್ಯದ ಬಗ್ಗೆ ಒಲವು ತೋರಿ, ನಿಮ್ಮ ಮನಸ್ಸಿನ ಭಾವನೆಗಳಿಗೆ ಸಾಹಿತ್ಯದ ರೂಪ ಕೊಟ್ಟು ಹೊರಹಾಕುವ ನಿಮ್ಮ ಪ್ರಯತ್ನ ಅತ್ಯಮೂಲ್ಯ ಮತ್ತು ಅಮೋಘ.
ನಿಮ್ಮ ಬರವಣಿಗೆಯ ಶೈಲಿಯು ಸುಂದರ್ರ ಮತ್ತು ಸುಲಲಿತವಾಗಿದೆ. ಇಂತಹ ಕಲೆ ಮಲೆನಾಡಿನ ಮುಗ್ಧ ಮನಸ್ಸಲ್ಲೆ ಹುಟ್ಟಲು ಸಾಧ್ಯ, ನೀವು ಹಾಸನದವರೆಂದು ತಿಳಿದು ಸಂತೋಷವಾಯಿತು, ಏಕೆಂದರೆ ನಾನು ಕೋಡ ಹಾಸನದಲೇ ವಿದ್ಯಾಭ್ಯಾಸ ಮಡಿದ್ದು, ೧೦ ನೇ ತರಗತಿಯವರೆಗು ಓದು ಮುಗಿಸಿ, ಪದವಿ ಪೋರ್ವ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದೆವು.

ನೀವು ಮನೋಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಕಾರಣ ನಿಮ್ಮ ಬರವಣಿಗೆಯಲ್ಲಿ ವ್ಯಕ್ತವಾಗಿದೆ.

ನಿಮ್ಮ ಬರವಣಿಗೆಯ ಹವ್ಯಾಸವನ್ನು ಬೆಳೆಸಿ, ಇನ್ನೂ ಹೆಚ್ಚು ಸಾಧನೆ ಮಾಡಿ ಎಂದು ಹಾರೈಸುವೆ
- ಚಿರಂತ್Unifi fauze

Subrahmanya said...

very interesting. Please continue..

Sushma Sindhu said...

@ಕಾಕಾ, ಸ್ವರ್ಣ ಮೇಡಮ್, ಮನಸು ಮೇಡಮ್, ಪ್ರಕಾಶ್ ಸರ್, ಚಿರಂತ್ ಸರ್, ಸುಬ್ರಮಣ್ಯ ಸರ್, ಸಿದ್ದರಾಜ್ ಸರ್ ಎಲ್ಲರಿಗೂ ಅನೇಕಾನೇಕ ಧನ್ಯವಾದ.. ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ.

Sushma Sindhu said...

@ಪ್ರಕಾಶ್ ಸರ್ ಇವು ಭವಿಷ್ಯವ ಕುರಿತಂತೆ ಅರಿವು ನೀಡುವ ಕನಸುಗಳಲ್ಲ. ಬದುಕ ಕುರಿತ೦ತೆ ಅರಿವು ಮೂಡಿಸುವವು ಎನ್ನಬಹುದೇನೋ :)

guruprasad said...

ಹುಟ್ಟು-ಕನಸು-ಸಾವು..! ಮದ್ಯದ ಪದಕ್ಕೆ ಪ್ರಾಶಸ್ತ್ಯ ನೀಡಿದರೆ ಬದುಕು ಬಂಗಾರವಾಗಿರುತ್ತದೆ..:) ಬಣ್ಣ-ಬಣ್ಣದ ಕನಸಿನ 'ಚಿತ್ತಾರವಾಗಲಿ'...ಮುಂದುವರೆಯಿರಿ..

guruprasad said...

ಹುಟ್ಟು-ಕನಸು-ಸಾವು..! ಮದ್ಯದ ಪದಕ್ಕೆ ಪ್ರಾಶಸ್ತ್ಯ ನೀಡಿದರೆ ಬದುಕು ಬಂಗಾರವಾಗಿರುತ್ತದೆ..:) ಬಣ್ಣ-ಬಣ್ಣದ ಕನಸಿನ 'ಚಿತ್ತಾರವಾಗಲಿ'...ಮುಂದುವರೆಯಿರಿ..

Sushma Sindhu said...

ಧನ್ಯವಾದ ಗುರುಪ್ರಸಾದ್ ರವರೆ.. ಬರುತ್ತಿರಿ