Thursday, November 11, 2010

ಸಾ೦ಗತ್ಯ


ಆ ಕನಸು ಹೀಗೆ ಸಾಗಿತು...
ಟೆರೇಸಿನ ಅಂಚಿನಲ್ಲಿ ನಿಂತು ಮುಸ್ಸಂಜೆಯ ಹೊಂಬಣ್ಣದ ಬೆಳಕಲ್ಲಿ ಉಲ್ಲಸಿತಗೊಳ್ಳುತ್ತಿದ್ದೆ. ಎದುರಿಗೆ ಸುಂದರವಾಗಿ ಹರಡಿಕೊಂಡಿದ್ದ ಮೋಡಗಳು ಬೆನ್ನ ಹಿಂದೆಲ್ಲೋ ಅಡಗಿ ಕುಳಿತು ಹಾಗೇ ಮರೆಯಯಲ್ಲೇ ಹೊರಟುಬಿಡಲು ಏರ್ಪಾಡು ಮಾಡಿಕೊಳ್ಳುತ್ತಿದ್ದ ನೇಸರನೊಡನೆ ಆಟವಾಡುತ್ತಿದ್ದಂತೆ ತೋರುತ್ತಿದ್ದವು. ನಾನು ಕಳೆದ ದಿನಗಳ ನೆನಪುಗಳ ಆಶ್ರಯ ಪಡೆಯದೇ, ಮುಂಬರುವ ಕ್ಷಣಗಳ ನಿರೀಕ್ಷೆಯ ಕನಸುಗಳಲ್ಲಿ ಕಳೆದು ಹೋಗದೇ, ಬರಿಯ ನಾನೇ ಆಗಿ ಉಳಿದು 'ವಾಸ್ತವ' ದೊಂದಿಗೆ ಮಿಳಿತವಾದ ಆನಂದವನ್ನು ಮನದಲ್ಲಿ ಸೆರೆ ಹಿಡಿಯುತ್ತಿದ್ದೆ.
ಹೀಗೇ ಮುಗಿಲಿನಲ್ಲಿ ಚೆಲ್ಲಿದ್ದ ಬಣ್ಣಗಳು ತಮ್ಮ ತೀಕ್ಷ್ಣತೆಯನ್ನು ಕಳೆದುಕೊಳ್ಳುತ್ತಾ, ಮಾಸಲಾದಂತೆ ಮತ್ತೊಮ್ಮೆ ಆ ಮಾಸಲು ಬಣ್ಣವೆ ಒಂದು ನವಿರಾದ ಭಾವವಾಗಿ ಹೊಸತನವನ್ನು ತೋರಿ ಆತ್ಮೀಯವಾಗುತ್ತಾ ಬದಲಾಗುತ್ತಿತ್ತು. ಹೀಗೇ ಕಾಣದ ಅನಂತತೆಯೆಡೆಗೆ ನನ್ನ ಮನ ಹೊರಳುತ್ತಿರಲು, ಬಾನಿನ ರಂಗೆಲ್ಲಾ ಒಮ್ಮೆಲೇ ಕಸಿವಿಸಿಯಾದಂತೆ, ಯಾರಿಗೋ ಶರಣಾದಂತೆ ಕಂಡವು. ಕೆಲವೇ ನಿಮಿಷಗಳಲ್ಲಿ ಬಣ್ಣ, ಭಾವಗಳೆಲ್ಲಾ ತೂರಿಹೋಗಿ ನೆರಳೊಂದು ಆಗಸವನ್ನು ಕವಿಯಲಾರಂಭಿಸಿದಾಗ, ತನ್ನ ಕರ್ತವ್ಯಕ್ಕೆ ಹಾಜರಾಗಲು 'ಇರುಳು' ಸ್ವಲ್ಪ ಆತುರಾತುರವಾಗೇ ಇತ್ತ ಬರುತ್ತಿದ್ದುದು ಅರಿವಾಯಿತು.

ಕಣ್ಣುಗಳು ಕೊಂಚ ಸಮಯ ಪರದಾಡಿದವು. ಎಲ್ಲಿಯ ಮುಗಿಲಿನ ಆ ಹೊಳಪು? ಎಲ್ಲಿಯ ಕಪ್ಪು ಕತ್ತಲೆ? ಹೀಗೇ 'ಬದಲಾವಣೆ'ಯ ಪಜೀತಿಯಿಂದ ಕಷ್ಟಪಟ್ಟು ಹೊರಬಂದ ನಯನಗಳು ಮತ್ತೆ ತಮ್ಮ ಎಂದಿನ ಲಹರಿಗೆ ವಾಪಸ್ಸಾಗಲಾರಂಭಿಸಿದವು. 'ಅನಂತತೆ'ಯೆಡೆಗೆ ವಾಲುತ್ತಿದ್ದ ಮನದ ಹಾದಿಯನ್ನು ನಾನು ಈಗ 'ಶಾಶ್ವತತೆ'ಯೆಂದು ಹೆಸರಿಸಿ ಅದರೆಡೆಗೆ ಕರೆದೊಯ್ಯಲಾರಂಭಿಸಿದೆ. ಅಂತಹ ಅಮೋಘವಾದ ದೃಶ್ಯವನ್ನು ತನ್ನೊಳಗೆ ಸೇರಿಸಿಕೊಂಡು, ಈಗ ತನ್ನದೇ ಛಾಪು ಮೂಡಿಸಿ ಅನನ್ಯವಾಗಿ ನಿಂತ ಇರುಳು ನನಗೆ ಇಷ್ಟವಾಗತೊಡಗಿತು. ನಾನು ಇರುಳನ್ನು ಪ್ರೀತಿಸಲಾರಂಭಿಸಿದೆ. ಹೊರಗಿನ ವೈಭವಗಳಲ್ಲಿ ಸೇರಿಕೊಂಡಿದ್ದ ನನ್ನ 'ವಾಸ್ತವ' ಈಗ ಕತ್ತಲಿನ ನೀರವತೆಯಲ್ಲಿ, ನನ್ನನ್ನೇ ಮತ್ತೆ ಬಂದು ಸೇರಿತು. ನನ್ನೊಳಗಿನ 'ಮಾನವ'ನನ್ನು ನಾನು ಮರೆತೇಬಿಟ್ಟೆದ್ದೆನೇನೋ ಎನ್ನಿಸುತ್ತಲೇ, ಇರುಳು ಮತ್ತಷ್ಟು ಅಪ್ಯಾಯಮಾನವಾಯಿತು. 'ಪ್ರೀತಿ' ಮತ್ತಷ್ಟು ಗಾಢವಾಯಿತು.

ಅಷ್ಟರಲ್ಲಿ ಮೌನದ ಗಾಂಭೀರ್ಯವನ್ನು ಇಷ್ಟೂ ಅವಮಾನಿಸದೇ ಇರುಳು, ನನ್ನೊಡನೆ ಮಾತಿಗೆ ತೊಡಗಿತು., ನಾನು ಗಾಬರಿಗೊಂಡೆನೆಂದು ಬಗೆದು ಅದೆಂದಿತು, "ಸಂಜೆಯ ಸೌಂದರ್ಯವನ್ನು ಕಣ್ಣಿನಲ್ಲಿ ಪ್ರತಿಫಲಿಸುತ್ತಿದ್ದ ನೀನೂ ಈಗ ಕತ್ತಲಿನಲ್ಲಿ 'ಕತ್ತಲೆಯ' ಭಾಗವೇ ಆಗಿ ಹೋಗಿರುವೆ. ಹಾಗೆಂದು ನಿನಗೆ ನಿನ್ನ ಬಗ್ಗೆಯೇ ದಿಗಿಲೇ? ಭಯಪಡಬೇಡ. ಇಲ್ಲಿ ಎಲ್ಲರೂ ಒಂದೇ."
"ನನಗೆ ಆದದ್ದು ಭಯವಲ್ಲ, ಆಶ್ಚರ್ಯವಷ್ಟೆ" ಹಾಗೆಂದುಕೊಂಡು, ಹೇಳಲು ಹೋಗದೇ ಸುಮ್ಮನಾದೆ
ಇರುಳು ಕೇಳಿತು "ಗೆಳತೀ, ನಿನ್ನ ಪ್ರೀತಿಗೆ ಧನ್ಯವಾದಗಳು. ಆದರೆ ಇಡೀ ಜಗತ್ತೇ ನನ್ನ ವ್ಯಾಪಕತೆಗೆ ಅಳುಕುತ್ತಿರಲು , ಎಲ್ಲ ಜೀವಿಗಳೂ ತಮ್ಮನ್ನೇ ತಾವು ಮರೆತು ನಿದ್ರೆಗೆ ಜಾರಿರುವ ಈ ಹೊತ್ತಿನಲ್ಲಿ ನೀನು ನನ್ನಲ್ಲೇ ಏನೋ 'ಬೆರಗು' ಕಂಡುಕೊಂಡು ಪ್ರೀತಿಸುತ್ತಿರುವೆಯಲ್ಲಾ, ಕಾರಣ ತಿಳಿಯ ಬಹುದೇ?"

"ಗೆಳೆಯಾ, ಹಾಗೆ ತೋರುವುದು ನಿಜ. ಆದರೆ ನಾನು ನಿನ್ನ ಮೂಲಕ 'ಬದುಕ'ನ್ನು ಪ್ರೀತಿಸತೊಡಗಿದ್ದೇನೆ. ಒಮ್ಮೆ, ವರ್ಣರಂಜಿತವಾಗಿ ಸ್ಮ್ರುತಿ ಪಟಲದಲ್ಲಿ ದಾಖಲಿಸಲೂ ಅಸಾದ್ಯವಾಗದಷ್ಟು ವೈವಿಧ್ಯತೆಗಳನ್ನು ತನ್ನದಾಗಿಸಿಕೊಂಡು, ಆಹ್ಲಾದಕರವಾಗಿ ಕಂಗೊಳಿಸುತ್ತಿದ್ದ ಬದುಕು, ಮುಂಬರುವ ಕತ್ತಲೆಯನ್ನು ಮನಗೊಂಡೂ ಅದಕ್ಕೆ ಸಿದ್ದವಾಗದೇ, ಇರುಳೊಳಗೆ ಮೇಳೈಸಿರುವ ಅಂತರಾರ್ಥವನ್ನು ಮನಗಾಣದೇ, ಆಘಾತದ ಸ್ಥಿತಿಯನ್ನು ಸದಾ ಹೊದ್ದುಕೊಂಡು ಮಲಗಿ ಬಿಡುತ್ತದೆ. ಗೆಳೆಯಾ ಇಂತಹ ಬದುಕಿಗೆ, ಎಲ್ಲಾ ಸಾದ್ಯತೆಗಳು, ಎಲ್ಲಾ ಪರಿಸ್ಥಿತಿಗಳೊಳಗೂ 'ಲೀನ'ವಾಗಿರುವ ಪ್ರೀತಿಯ ಅರಿವು ಮೂಡಿಸಬೇಕಾಗಿದೆಯಲ್ಲವೇ. ಹಾಗಾಗಿಯೇ ನಾನು ನಿನ್ನನ್ನು ಅವಿರತವಾಗಿ ಪ್ರೀತಿಸತೊಡಗಿದ್ದೇನೆ."ನಾನು ಉತ್ತರಿಸಿದೆ.

ಕತ್ತಲು ಉಸುರಿತು, "ನಿನ್ನ ಮಾತು ಸತ್ಯ ಗೆಳತೀ. ನಿನ್ನ ವಿಚಾರ ನನಗೆ ಬಹಳವಾಗಿ ಇಷ್ಟವಾಯಿತು. ನನಗೂ ಬದುಕನ್ನು ಪ್ರೀತಿಸಲು ಕಲಿಸುವೆಯಾ? ನಾನು ಬಂದಕೂಡಲೇ ಎಲ್ಲರೂ ಬೆದರಿ ಓಡುವ ಪರಿಯನ್ನು ಪ್ರತಿನಿತ್ಯ ಕಾಣುತ್ತಾ, ನನಗೇ ನಾನು ಏನೋ ಆಗಿಬಿಟ್ಟಿದ್ದೇನೆನಿಸುತ್ತಿದೆ. ನಾನೇನು ಮಾಡಲಿ?"
ಇದು 'ಇರುಳಿನ; ಧನಿಯೇ? ನನಗೆ ಅಚ್ಚರಿಯಾಯಿತು!
ಪ್ರತಿಯಾಗಿ ನಾನೆಂದೆ, "ಹಾಗಾದರೆ ನೀನು ನನ್ನನ್ನು ಪ್ರೀತಿಸು.."

"ಗೆಳೆಯಾ, ಬೆಳಕಿನೊಡನೆ ಹೊಂದಿಕೊಂಡಿರುವ ಕರ್ತವ್ಯಗಳಿಂದ ಬೇಸತ್ತೋ, ಹಗಲಿನ ತೀಕ್ಷಕಿರಣಗಳಿಗೆ ಕಣ್ಣು ಸೇರಿಸಲಾರದೆಯೋ, ಬದುಕಿನ ಜಂಝಾಟಗಳ ನಡುವೆ,ಆಕಾಶದ ಬಣ್ಣಗಳಿಗೆ ಕಲ್ಪನೆಯ ಸಾಂಗತ್ಯವನ್ನು ಕಟ್ಟಿಕೊಡಲಾಗದೆಯೋ, ಇರುಳಿನ ತಂಪಿಗೆ, ಅದರ ಮಧುರ ನೀರವತೆಗೆ, ಚೆಂದದ ಮೌನಕ್ಕೆ ಮನಸೋತು ನಿನ್ನ ಬರುವಿಕೆಗೆ ಎಂದಿಗೂ ಕಾತರಿಸುತ್ತಾ, ನಿನ್ನ ಧೀರ್ಘವಾದ ಇರುವಿಕೆಯನ್ನು ಆಶಯಿಸುವ ನನ್ನನ್ನು ಕಂಡರೆ ನಿನ್ನ ಪ್ರಾಮುಖ್ಯತೆಯ ಬಗೆಗೆ ನಿನಗೇ ಅಭಿಮಾನ ಮೂಡುವುದಲ್ಲವೇ? ನನ್ನನ್ನು ಪ್ರೀತಿಸುವುದೆಂದರೆ ನಿನ್ನ 'ಬದುಕನ್ನೇ' ನೀನು ಪ್ರೀತಿಸಿಕೊಂಡಂತೆ ತಾನೆ?" ಸ್ಪಷ್ಟ ಪಡಿಸಿದೆ.
ಇರುಳು ಧ್ಯಾನಿಸಿದಂತೆ ನುಡಿಯಿತು, "ನನಗನ್ನಿಸುತ್ತಿದೆ. ಅಂತರಾಳದ 'ದೀಪ್ತಿ' ಉರಿಯಲು ಅವಶ್ಯಕವಾದ ಆಮ್ಲಜನಕವೇ ಪ್ರೀತಿ. ಅದನ್ನು ಬಾಹ್ಯ 'ವಸ್ತು'ಗಳ ಮೇಲೆ ಆರೋಪಿಸಿಕೊಂಡವರು ಜೀವಿಸುವರು ಆದರೆ ಬದುಕಲಾರರು"

ಬೆಳಕು, ಕತ್ತಲೆಯ 'ಬದಲಾವಣೆ' ಗಳಲ್ಲಿ 'ಶಾಶ್ವತ'ವಾದದ್ದು ಮೌನ. ನಮ್ಮ ಬದುಕುಗಳ 'ಸಾರಾಂಶ'ವನ್ನು ಕಂಡುಕೊಂಡ ನಾನು, ಇರುಳು ಮೌನದ 'ದ್ವನಿ'ಗಳೊಡನೆ ಸಂಭಾಷಿಸುತ್ತಾ, ಮತ್ತೆದ್ದು ಬರುವ ಹಗಲಿನ ತಿಳುವಿನಡಿಯಲ್ಲಿಯೇ ಜೀವನದ 'ಪ್ರೀತಿ' ಯನ್ನು, ಸತ್ಯದ 'ಅನಂತ'ತೆಯನ್ನು ಮನಗಂಡೆವು.
---**---

**ಇತ್ತೀಚಿನ 'ಮರಳ ಮಲ್ಲಿಗೆ' ಸ೦ಚಿಕೆಯಲ್ಲಿ ಪ್ರಕಟವಾಗಿದೆ
*Image- web

4 comments:

Dr.D.T.Krishna Murthy. said...

ನಿಮ್ಮ ಕನಸು,ಕನಸಿನಲ್ಲಿ ಕತ್ತಲೆಯ ಜೊತೆ ಸಂಭಾಷಣೆ ,ಬದುಕನ್ನು ನೀವು ವಿಶ್ಲೇಷಿಸುವ ರೀತಿ ,ಎಲ್ಲವೂ ವಿಶಿಷ್ಟವಾಗಿವೆ.ಧನ್ಯವಾದಗಳು.ನನ್ನ ಬ್ಲಾಗಿಗೆ ಭೇಟಿ ನೀಡಿ.ವೈದ್ಯ ವೃತ್ತಿ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಧಾಖಲಿಸುತ್ತಿದ್ದೇನೆ.ನಮಸ್ಕಾರ.

prabhamani nagaraja said...

ಅನೇಕ ದಿನಗಳ ನ೦ತರ ಬ್ಲಾಗ್ ನಲ್ಲಿ ನಿನ್ನ ಕನಸನ್ನು ನೋಡಿ ಸ೦ತಸವಾಯಿತು. ''..........ಅಂತರಾಳದ 'ದೀಪ್ತಿ' ಉರಿಯಲು ಅವಶ್ಯಕವಾದ ಆಮ್ಲಜನಕವೇ ಪ್ರೀತಿ. ಅದನ್ನು ಬಾಹ್ಯ 'ವಸ್ತು'ಗಳ ಮೇಲೆ ಆರೋಪಿಸಿಕೊಂಡವರು ಜೀವಿಸುವರು ಆದರೆ ಬದುಕಲಾರರು" ಬಹಳ ಅರ್ಥವತ್ತಾಗಿದೆ. `ಸಾ೦ಗತ್ಯ'ದ೦ಥಾ ಮೌಲ್ಯಯುತ ಕನಸನ್ನು ನಮ್ಮೆಲ್ಲರದಾಗಿಸಿದ್ದಕ್ಕೆ ಧನ್ಯವಾದಗಳು. ಮತ್ತಷ್ಟು ಕನಸುಗಳ ನಿರೀಕ್ಷೆಯಲ್ಲಿರುವೆ.

Sushma Sindhu said...

@ ಕೃಷ್ಣ ಮೂರ್ತಿ ಸರ್,
ಬ್ಲಾಗಿಗೆ ಸ್ವಾಗತ ಮತ್ತು ಧನ್ಯವಾದಗಳು. ನಿಮ್ಮ ಬ್ಲಾಗಿಗೆ ಕೂಡಲೇ ಬರುವೆ..

@ ಅಮ್ಮನಿಗೆ ವ೦ದನೆಗಳು :)
-ಸುಷ್ಮ

sunaath said...

ಸುಷ್ಮಾ,
ನಿಮ್ಮ ಕನಸನ್ನು ಅರಿತುಕೊಳ್ಳಲು ಅಂತರಂಗವನ್ನು ತೆರೆದಿಡಬೇಕಾಗುತ್ತದೆ. ಒಮ್ಮೆ ಕನಸಿನ ಅರ್ಥ ಹೊಳೆದ ಮೇಲೆ
ಅಂತರಂಗದಲ್ಲಿ ತಿಳಿವಿನ ಬೆಳಕು ತುಂಬುತ್ತದೆ. ನಿಮ್ಮ ಕನಸುಗಳನ್ನು ನೀವು ದಾಖಲಿಸುವ ಪರಿಯೂ ಸಹ ಉತ್ತಮವಾಗಿದೆ.