Wednesday, January 2, 2013

‘ಕಂಡೆ ನಾನೊಂದು ಕನಸು’ ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 9

 
ಮನಸ್ಸಿಗೆ ‘ಪ್ರತಿಮೆ’, ‘ಸಂಕೇತ’ಗಳು ಬಹಳ ಪ್ರಿಯ. ಅದಕ್ಕೇ ‘ಆಗಸದಷ್ಟು ವಿಶಾಲವಾದ’, ‘ಶಿಖರದದೆತ್ತರಕ್ಕೆ’ ಎಂಬಂತಹ ವಾಕ್ಯಗಳು ವಸ್ತು-ವಿಷಯಗಳ ವ್ಯಾಪ್ತಿಯನ್ನು ಅರ್ಥೈಸಿ ಆನಂದಿಸಲು ಸಹಕಾರಿಯಾಗುತ್ತವೆ. ಕನಸಿನಲ್ಲಿ ಜಾಗೃತಗೊಂಡ ಮನಸ್ಸಿನಲ್ಲಿ ಮೂಡುತ್ತಿದ್ದ ಹಕ್ಕಿಯ ರೂಪವೂ ಇದೇ ತರಹದ ಉದ್ದೇಶವನ್ನೇ ಈಡೇರಿಸುವ ಸಲುವಾಗೇ ಬಂದಂತೆ ಅನಿಸುವುದಿದೆ. ಹಕ್ಕಿ ಸ್ವತಂತ್ರ್ಯದ ಜೊತೆ ಜೊತೆಗೇ ಪ್ರಪಂಚದ ವೈಶಾಲ್ಯತೆಗೆ ತಲುಪಿಕೊಳ್ಳಬಲ್ಲ ಸಾಧ್ಯತೆಯಿರುವ ದೈಹಿಕ ಸಾಮರ್ಥ್ಯವಿರುವುದರಂತೆಯೂ, ಸಂದೇಶಗಳ ವಾಹಕದಂತೆಯೂ ಕಾಣಿಸುತ್ತದೆ: ಹೀಗೆ ಹಕ್ಕಿಯ ರೂಪಿನ ಅಸ್ಥಿತ್ವದ ಬಗೆಗೆ ಮಂಥಿಸಲು ಹೊರಟಿರುವ ಮನಸ್ಸೂ ಸಂಕೇತಗಳ ತೆರೆದಿಡುತ್ತಾ, ಅದರ ಸಾಧ್ಯಾಸಾಧ್ಯತೆಗಳನ್ನು ಒಪ್ಪಿಕೊಳ್ಳುತ್ತಾ ತನಗಿರುವ ಸಂಕೇತಗಳ ಪ್ರೀತಿಯನ್ನೇ ಹೊರಹಾಕಿ ಮನಸ್ಸಿಗೆ ಅದರ ಮೇಲಿರುವ ಒಲವನ್ನೇ ತೋರಿಸುತ್ತಲಿದೆ!

ಮತ್ತೆ ಎದುರಾದ ಕನಸುಗಳಲ್ಲಿ ಬಣ್ಣ ಬಣ್ಣದ ಆ ಹಕ್ಕಿ ಅರುಹಿತು:
“ಒಳ ಮತ್ತು ಹೊರ ಮನಸ್ಸಿನ ನಡುವೆ ಒಂದು ಸೇತುವೆ ಇರಬೇಕು. ಹೊರಗಿನ ದ್ವಂದ್ವಗಳು ಸೇತುವೆಯ ಮೇಲಿನಿಂದ ‘ಒಳ’ ಪ್ರವೇಶಿಸಿ, ಒಳಗೆ  ಸಿಕ್ಕ ‘ಪರಿಹಾರ’, ‘ಉತ್ತರಗಳು’ ಸೇತುವೆಯ ದಾಟಿ ಹೊರಗೆ ವ್ಯಕ್ತವಾಗಬೇಕು. ಇದೇ ಕೆಲಸವೇ ಅದಲುಬದಲಾದಾಗಲೇ ಮನಸ್ಸು ತನ್ನ ಸಮಸ್ಥಿತಿಯನ್ನು ಕಳೆದುಕೊಂಡು ತೊಳಲಾಡಿಬಿಡುತ್ತದೆ’’
ಪಕ್ಷಿ ಮತ್ತೊಮ್ಮೆ ಬಂದಾಗ ಹೀಗೆ ಹೇಳಿತ್ತು:  “ನೆಲದ ಮೆಲೆಯೇ ನಿಂತು ಇತರರನ್ನು ನೋಡಿದಾಗ ಯಾರ ಮುಂದೆಯೂ ನಾವು ‘ಕೀಳು’ ಎಂದೋ, ಎಲ್ಲರಿಗಿಂತ ‘ಮೇಲು’ ಎಂದೋ ಭಾವಿಸುವುದು ಅಸಾಧ್ಯ. ನಾವು ಯಾವಾಗ ನೆಲಮಟ್ಟಕ್ಕಿಂತ ಒಂದಷ್ಟಡಿ ಕೆಳಗೆ ಗುಂಡಿಯಲ್ಲಿ ನಿಂತೋ, ನೆಲದ ಮಟ್ಟದಿಂದ ಒಂದಿಷ್ಟುದ್ದ ಮೇಲೆ ನಿಂತೋ ಬೇರೆಯವರ ನೋಡುತ್ತೇವೆಯೋ ಆಗಲೇ ಈ ಭಾವನೆಗಳು ಕಾಡುವವು.”
ಹೀಗೆ ಕಾಣಸಿಗುವ ಚುಟುಕು ಸಂದೇಶಗಳುಳ್ಳ ಕನಸುಗಳು ಅಷ್ಟೇನು ಚುಟುಕಾಗಿರುತ್ತಿರಲಿಲ್ಲ. ಹಕ್ಕಿ-ನನ್ನ ನಡುವಿನ ಹಲವು ಸಂಭಾಷಣೆಗಳು ಇಂತಹ ಮಾತುಗಳಿಗೆ ಎಡೆ ಮಾಡಿ ಕೊಡುತ್ತಿದ್ದವು. ಹಕ್ಕಿ ಮೊದಮೊದಲಷ್ಟೇ ‘ನನಗೆ ಸಂಭಂದಿಸಿದೆ’ ಎನ್ನುವಂತಿದ್ದ ಸಂದೇಶಗಳ ತಂದಿದ್ದು. ನಂತರದ ದಿನಗಳಲ್ಲಿ ನಾನು ಚಿಂತಿಸಿಯೇ ಇಲ್ಲವೆನ್ನುವಂತಹ ವಿಷಯಗಳು ವಸ್ತುವಾಗಿ ಕನಸಿನಿಂದ ಎದ್ದಮೇಲೆ ನನ್ನ ಧೃತಿಗೆಡಿಸುತ್ತಿದ್ದವು. ಕನಸುಗಳು ಪದೇ ಪದೇ ಹಕ್ಕಿಯನ್ನು ಹೊತ್ತು ತರುವುದು ಹೆಚ್ಚಾದಂತೆ ನನಗೆ ಆ ಪಕ್ಷಿಯೊಡನೆ ಸಲುಗೆ ಬೆಳೆದಂತೆ ತೋರಿತು. ಅದು ನಮ್ಮ ಕನಸಿನ ಸಂಭಾಷಣೆಗಳಲ್ಲಿಯೂ ಕಾಣಿಸುತ್ತಿತ್ತು.
 ಒಂದು ಬಾರಿ ನಾನು ಹಕ್ಕಿಯ ಕೇಳುವೆ:
“ಅಲ್ಲಾ ನೀನು ಇಷ್ಟೊಂದು ವಿಷಯಗಳನ್ನು ಎಲ್ಲಿಂದ ಹುಡುಕಿ ತರುವೆ?”
ಪಕ್ಷಿ: “ಹುಡುಕುವ ಅವಶ್ಯಕತೆಯಿಲ್ಲ. ಅವು ಲಭಿಸುವುವು..”
ನಾನು : “ಸರಿ, ಪ್ರಶ್ನೆ-ಚರ್ಚೆಗಳಿಗೆ ಉತ್ತರಗಳನ್ನಾದರೋ ಹೇಗೆ ಚಿಂತಿಸುವೆ?”
ಪಕ್ಷಿ: “ಚಿಂತಿಸುವ ಅಗತ್ಯವಿಲ್ಲ. ಅವು ಇರುವವು. ಅದನ್ನು ಮುಂದಿಡುವುದಷ್ಟೇ ಕೆಲಸ”
ನಾನು:  ‘’ಇದು ಅತಿ ಒಗಟಿನ ಮಾತಾಯಿತು. ಸ್ಪಷ್ಟವಾಗಿ ಹೇಳು. ನನಗೇ ದೊರೆಯದ ಉತ್ತರ ನನ್ನಲ್ಲಿರುವ ನಿನಗೆ ಹೇಗೆ ದೊರೆಯುವುದು’’
ಪಕ್ಷಿ: “ನೀನು ‘ದೊರೆಯದ’ ಉತ್ತರಯೆಂದೆಯಲ್ಲವೆ, ‘ಇರದ’ ಉತ್ತರ ಎನ್ನಲಿಲ್ಲವಲ್ಲ! ಹಾಗಾಗಿ, ‘ಇರುವ’ ಆದರೆ ‘ದೊರೆಯದ’ ಉತ್ತರವ ನಾನು ದೊರಕಿಸುವೆ. ಸ್ಪಷ್ಟವೆ?”
ನಾನು : “ಇದು ಬರೀ ಯಾಮಾರಿಸುವ ಉತ್ತರದಂತಿದೆ, ಸ್ಪಷ್ಟ ಆದರೂ ಅಸ್ಪಷ್ಟ. ನಾನು ನಂಬುವುದಿಲ್ಲ”
ಪಕ್ಷಿ : “ನಾನು ನಂಬಿಸುವ ಅಗತ್ಯವಿಲ್ಲ, ಇರುವುದು ಇರುತ್ತದೆ. ನಂಬಿಕೆ- ಅಪನಂಬಿಕೆ  ಮನಸ್ಸಿಗೆ ಸಂಬಂಧಿಸಿದ್ದು, ಇರುವಿಕೆಗಲ್ಲ”
.........
ಈ ಕನಸು ನನಗೆ ಎರಡು ಅವಕಾಶವ ನೀಡಿತ್ತು- ಒಂದೋ, ನನ್ನಲ್ಲಿ ‘ಏನೋ ಇದೆ’ ಎಂಬ ‘ಇರುವಿಕೆ’ಯ ನಂಬಬೇಕು. ಇಲ್ಲವೇ ಈಗಾಗಲೇ ಇರುವ, ‘ನಾನು ಅಯೋಗ್ಯಳು’ ಎಂಬ ನಂಬಿಕೆಯನ್ನೇ ಇರಿಸಬೇಕು. ನಾನು ಬಹಳ ನಿಷ್ಠೆಯಿಂದ ಎರಡನೆಯದನ್ನು ಆಯ್ದುಕೊಂಡೆ! ಹಾಗೆಂದು, ಮೊದಲನೆಯ ಆಯ್ಕೆಯನ್ನು ನಾನು ಆಯ್ದುಕೊಳ್ಳಬೇಕಿತ್ತೆಂದು ನಾನು ಹೇಳುವುದೇ ಇಲ್ಲ- ನಮ್ಮಲ್ಲಿ ಏನಾದರೂ ಇದ್ದದ್ದೇ ಆದರೆ ಅದು ಇರುತ್ತದೆ, ಅದನ್ನು ನಂಬಿ ಬಲಪಡಿಸುವ ಅಗತ್ಯವಿಲ್ಲ. ಕೆಲವೊಮ್ಮೆ ನಂಬುವ ಬರದಲ್ಲಿ ಇರುವುದಕ್ಕಿಂತ ಹೆಚ್ಚೇ ಇದೆಯೆಂದು ನಂಬುವುದೂ ಆಗುವುದರಿಂದ ಅದು ಬಹಳ ಅಪಾಯಕಾರಿ ಆಯ್ಕೆಯೇ ಆಗಿದೆ. ನಂಬಿಕೆ ಇರಬೇಕು. ಅದನ್ನು ನಂಬುವ, ಇದೆ ಎಂದು ಭದ್ರ ಪಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆದರೆ ನಂಬಿಕೆ ‘ಇದೆಯೋ-ಇಲ್ಲವೋ’ ಅಥವಾ ಅದು ‘ಧನಾತ್ಮಕವೋ-ಋಣಾತ್ಮಕವೋ’ ಎನ್ನುವುದರ ಬಗೆಯೇ ಅಪನಂಬಿಕೆಯಾಗಿಬಿಟ್ಟರೆ ಕಷ್ಟವಷ್ಟೆ!
ಮೇಲಿನ ಎಲ್ಲಾ ಕನಸುಗಳ ತುಣುಕುಗಳ ಸಾರಾಂಶವ ಅವಲೋಕಿಸಿದರೆ, ಅಂದು ನಾನು ನನ್ನದಾಗಿಸಿಕೊಳ್ಳಬೇಕಿದ್ದ ಅಂಶವು ಇದೇನೋ ಎನಿಸುತ್ತದೆ- ಒಳಮನಸ್ಸು ಸಬಲತೆಗೆ ಹವಣಿಸುತ್ತದೆ, ಅದು ಯಾವ ದಿಕ್ಕನ್ನು ಅನುಸರಿಸಲು, ಗುರಿಯ  ಹೊಂದಲು ಹಂಬಲಿಸುವುದೋ ಅದರೆಡೆಗೆ ಸಾಗಬಲ್ಲ ಸಾಮರ್ಥ್ಯವನ್ನೂ ಆಗಾಗ್ಗೆ ಪ್ರತಿಫಲಿಸುತ್ತಿರುತ್ತದೆ, ತನ್ನ ಶಕ್ತಿಯ ಗುರುತಿಸಿಕೊಳ್ಳಲು ಅದಕ್ಕೆ ಸಾಧ್ಯತೆಗಳ ಪರಾಮರ್ಶಿಸುವ ಅವಶ್ಯಕತೆಯಿಲ್ಲ. ಆದರೆ ಈ ಗುರುತಿಸುವಿಕೆಯ ನಂತರ ಶಕ್ತಿಯ ‘ಹೊರಹಾಕುವಿಕೆ’ಯಾಗಲು ನಮ್ಮ ಹೊರಮನಸ್ಸು ಸಿದ್ಧವಿರಬೇಕಾಗುತ್ತದೆ. ಈ ‘ಹೊರಮನ’ ಪರಿಸ್ಥಿತಿಗಳ ಗುಲಾಮನಂತೆಯೂ, ಅಸಹಾಯಕನಾಗಿಯೂ, ಭಯಗ್ರಸ್ಥನಾಗಿಯೂ ಯಾವಾಗ ಪೀಡಿತವಾಗಿರುತ್ತದೋ ಆಗ ಅಲ್ಲಿ ಪರಸ್ಪರ ಸಹಕಾರ ನೆರವೇರುವುದಿಲ್ಲ. ಅಲ್ಲಿ ನೆರವಿಗೆ ಬರಬೇಕಾಗಿರುವುದೇ ಒಳ-ಹೊರ ಮನಗಳ ಬೆಸೆಯುವ ಸೇತುವೆ. ಎಂದು ನಮಗೆ ಇಂತಹುದೊಂದು ‘ಸಶಕ್ತಗೊಳ್ಳುವಿಕೆ’ ನಮ್ಮೊಳಗಿನಿಂದಲೇ ಆಗಬಲ್ಲದೆಂಬ ಅರಿವು ಮೂಡುವುದೋ, ಬಹುಷಃ ಅದು ತೆರೆಯೊಂದು ಸರಿಯಲು, ಹೊಸ ತೆರನಾದ ದೃಷ್ಠಿಕೋನವೊಂದು ತೆರೆದುಕೊಳ್ಳಲು ಪ್ರೇರಕವಾಗಬಲ್ಲದು. ನನ್ನ ವಿಷಯದಲ್ಲಿ ಹೀಗೆಯೇ ಆಯಿತು ಎಂದು ಹೇಳಲು ಬಾರದು- ಕಾರಣ, ಕಾಲ ಸರಿದ ಮೇಲೆ ಪ್ರೇರಣೆಗಳನ್ನು ಹೇಳುವುದು ಸುಲಭ. ಆದರೆ ಹಂತ ಹಂತವಾಗಿ ಮುಂದೆ ಸಾಗುವಾಗ ಮುಂದಿನದರ ಅರಿವಿಲ್ಲದೆ, ಅದಕ್ಕಾಗಿಯೇ ಬೆದರಿದ  ಮನಸ್ಸನ್ನು ಸಂಭಾಳಿಸುವುದು ಅಷ್ಟು ಸರಳವಲ್ಲ. ಹಾಗೆಂದು ಇದು ದುಃಖಕರವಾದ ವಿಚಾರವಲ್ಲ- ನಿಧಾನವಾಗಿ ಹಂತಹಂತವಾಗಿ ಸಾಧಿಸಲು ಹೆಣಗಿ, ‘ಆಗುವುದೋ?’ ಎಂದು ಹೆದರಿ-ಬೆದರಿ, ಬೆಂಡಾಗಿ ಹೆದರಿಕೆಯನ್ನೇ ಅನುಭವಿಸುತ್ತಾ, ಕಡೆಗೆ ಅದನ್ನೇ ಅತ್ತ ಸರಿಸಿ ರಾರಾಜಿಸುವ ಜ್ಞಾನವೇ ಎಂದಿಗೂ ಉಳಿದುಕೊಳ್ಳುವುದು. ಉಳಿದಂತೆ ಕಲಿತದ್ದೆಲ್ಲಾ ಸಾಂದರ್ಭಿಕ!
(¸À±ÉõÀ)

(Image Courtesy- Web)

Thursday, December 13, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 8



ಒಮ್ಮೊಮ್ಮೆ ಸಂದರ್ಭಕ್ಕೆ ಹೊಂದಿಕೊಂಡಂತೆ, ಇಲ್ಲವಾದಲ್ಲಿ ಹಲವು ಕಾಲ್ಪನಿಕ ಸನ್ನಿವೇಶಗಳ ತಾನೇ ಅಪ್ರಯತ್ನಪೂರ್ವಕವಾಗಿ ರೂಪಿಸಿಕೊಂಡು ಅದರ ಭಾಗವಾಗಿ ಕಾಡುವ ‘ಭಯ’ವನ್ನು ತೊರೆಯಲು ಸಾಕಷ್ಟು ಪ್ರಯತ್ನವೂ ಸಮಯವೂ ಬೇಕಾಗುವುದು. ಈ ಭಯವೆನ್ನುವುದು ಒಂದೇ ರೂಪ,ಲಕ್ಷಣಗಳ ಹೊಂದಿರುವಂತದಲ್ಲ. ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತಾ ಅತ್ಯಂತ ಆಪ್ತಮಿತ್ರನಂತೆ, ಹಿತ ಚಿಂತಕನಂತೆ ಆಗಮಿಸಿ ಆಕ್ರಮಿಸಿಕೊಳ್ಳುವ ವಿಶೇಷತೆ ಅದಕ್ಕಿದೆ. ಅದ್ಯಾವ ಪರಿ ಹೊಸ ರೂಪಗಳ ಪಡೆಯುವುದೆಂದರೆ ಮೊದಮೊದಲು “ನನಗದನ್ನು ಮಾಡುವುದೆಂದರೆ ಭಯ” ಎನ್ನುವಂತಿರುವ ನಮ್ಮ ಹೇಳಿಕೆಗಳು ಕಡೆಗೆ, “ ಅಲ್ಲಾ.. ಅದನ್ನು ಮಾಡಲಾಗೋದಿಲ್ಲ ಎಂದೇನಿಲ್ಲ. ನನಗೇ ಮಾಡೋದು ಇಷ್ಟವಾಗದು” ಎಂಬ ಅಚ್ಚರಿಯ ತಿರುವನ್ನು ಪಡೆದು ಬಿಡುತ್ತವೆ.. ಈ ಹಂತಕ್ಕೆ ತಲುಪಿಬಿಟ್ಟೆವೆಂದರೆ ಕೈ ಮೀರಿತೆಂದೇ ಅರ್ಥ! ಅಲ್ಲಿಗೆ, ಭಯಗಳಿಗೂ ಆಯ್ಕೆಗಳಿಗೂ ಇರುವ ವ್ಯತ್ಯಾಸವೇ ಕಾಣದ ಶೋಚನೀಯ ಸ್ಥಿತಿ ಬಂದೊದಗಿ ಬಿಡುತ್ತದೆ. ‘ಆಯ್ಕೆ’ಯೆಂದಾದದ ಮೇಲೆ ಇನ್ಯಾವ ಬದಲಾವಣೆ? ಯಾವುದರಿಂದ ಹೊರ ಬಂದು ಏನು ಸಾಧಿಸಲಿಕ್ಕಾಗಿ? ಈ ಹಂತ ಪ್ರಗತಿಯ ಪಾಲಿಗೆ ಪೂರ್ಣ ವಿರಾಮ...  ಇನ್ನು, ಮತ್ತೆ ನನ್ನ ಭಯಗ್ರಸ್ಥ ಬದುಕಿನತ್ತ ಇಣುಕುವುದಾದರೆ, ಹಿಂದೆ ಮುಂದೆ ಬೆಂಬಿಡದೇ ಕಾಡಿದ್ದ ಭಯ ಮೇಲಿನ ನಿಯಮಕ್ಕೇನು ಹೊರತಾಗಿರಲಿಲ್ಲ. ಅದುವೂ ನಾನು ಒಂದರಿಂದ ಹೊರಬಂತೆಂದರೆ ಮತ್ತೊಂದು ಮಗದೊಂದು ರೂಪದಲ್ಲಿ ತನ್ನ ವೇಷಗಳ ಬದಲಿಸುತ್ತಾ ಕಾಲಕ್ಕೆ ತಕ್ಕಂತೆ ಎದುರಾಗುತ್ತಲೇ ಸಾಗಿತು.ಆಗಿನ ‘ನನಗೆ’ ಭಯದ ಬೇರೆಯ ಅವತಾರಗಳು ಅತ್ಯಂತ ಸಹಜವಾಗಿ ‘ಆಯ್ಕೆ’ಗಳಂತೆಯೇ ಕಂಡುಬಿಟ್ಟವು.
ಹೀಗೇ ಭಯದ ನೆರಳಲ್ಲಿ ಬೆಳೆಯುತ್ತಾ , ಈ ನೆರಳಿಗೆ ಕಾರಣವಾಗಿರುವ ಮೂಲ ವೃಕ್ಷದ ಹುಡುಕಾಟದಲ್ಲಿರುವಾಗಲೇ ಮತ್ತೊಂದು ಅಚ್ಚರಿಯ ಕನಸಿನನುಭವ ಕಾದಿತ್ತು..  ಬಣ್ಣ ಬದಲಿಸುತ್ತಿದ್ದ ಭಯದೊಡನೆ ಗುದ್ದಾಡುತ್ತಿರುವಾಗ, ಬಣ್ಣಗಳೇ ತಾನಾಗಿರುವ ಕನಸೊಂದು ರೆಕ್ಕೆಬಿಚ್ಚಿ ಹಾರಿಬಂತು. ಹಾಗೆ ‘ಹಾರಿ’ ಬಂತೆನ್ನಲೂ ಕಾರಣವಿಲ್ಲದಿಲ್ಲ. ಕಾರಣ, ಹಾಗೆ ಕನಸಿನಲ್ಲಿ ಹಾರಿ ಬಂದದ್ದು ‘ಹಕ್ಕಿ’ಯೇ ಆಗಿತ್ತು! ಹೀಗೆ ಕನಸಿನಲ್ಲಿ ಅಂದು ಮೂಡಿದ ಹಕ್ಕಿಯ ?ಅಂತರಂU?ದಿಂದ ಎಂಬಂತೆ ಈ ವಾಕ್ಯಗಳು ಕೇಳಿದವು-
“ಹಾಡು ಹಕ್ಕಿಯ ಕೊರಳ ಧನಿಯು ನಾನಾದರೆ
ಕೊರಳು ನೀನಾಗುವೆಯ ಗೆಳತಿ...?”
ನಾನು ಥಟ್ಟನೆ ಕಣ್ಣು ಬಿಟ್ಟೆ! ಸಾಲುಗಳು ಅರ್ಥವಾಗಲಿಲ್ಲ. ಇಷ್ಟವಂತೂ ಆದವು!!! ಆದರೆ ಗಾಬರಿ ಸ್ವಲ್ಪ ಹೆಚ್ಚೇ ಆವರಿಸಿದ್ದರಿಂದ ಹಕ್ಕಿಯ ‘ಆಗಮನ’ ಮನಕ್ಕೆ ಆಹ್ಲಾದಕರವಾಗಿರಲಿಲ್ಲ
ಈ ಹಕ್ಕಿಯೇ ಮುಂದಿನ ದಿನಗಳಲ್ಲಿ ನನ್ನ ‘ಸ್ವಪ್ನಗಳಲ್ಲಿನ ಆಪ್ತ ಸಖಿ’ಯಾಯಿತು. ಪದೇ ಪದೇ ಹಾರಿ ಬರುತ್ತಾ ತನ್ನೊಡನೆ ಹಲವು ವಿಚಾರಗಳನ್ನೂ, ಸಮಸ್ಯೆ-ಸಮಾಧಾನಗಳನ್ನು ಹೊತ್ತು ತಂದು ಕನಸಿನ ‘ನನ್ನೊಡನೆ’ ದ್ವಂದ್ವಗಳ ಅವಲೋಕಿಸಿ ಚರ್ಚೆಗಿಳಿಯುತ್ತಾ,  ನನ್ನೊಳಗೆ ಸ್ಪಷ್ಟತೆಯನ್ನು ನೆಲೆಯೂರಿಸಿ ಹಾರಿ ಹೋಗುತ್ತಿತ್ತು. ಈಗೆನಿಸುವುದು- ಆ ಹಕ್ಕಿ ಹೊತ್ತು ತಂದ ಬಣ್ಣಗಳು ಅಂದಿನ ‘ನಾನು’ ಬದುಕಿನಲ್ಲಿ ಗುರುತಿಸಲಾಗದ್ದೇ ಆಗಿವೆ. “ಹಕ್ಕಿಯೇ ಏಕೆ?’ ಎಂದು ನನಗೆ ಸಾಕಷ್ಟು ಅನಿಸಿದ್ದಿದೆ- ‘ಹಕ್ಕಿಯಂತೆ ಪುರ್ರನೆ ಹಾರುತ್ತಾ...’ ಎಂದು ನನಗೆ ನಾನೇ ಮನದಲ್ಲಿ ಆರಂಭಿಸಿಕೊಂಡು ‘ಈ ಸ್ಕೂಲಿನ ಗೋಡೆಯೊಡೆದು ಹಾರಬೇಕು.’ ಎಂದು ಸರಿ ಸುಮಾರು ಹತ್ತು - ಹನ್ನೆರಡು ವರ್ಷ ಎಡಬಿಡದೇ ಶಾಲಾದಿನಗಳಲ್ಲಿ ಕಂಡ ಹಗಲುಗನಸು ಒಂದು ಕಡೆ ನೆನಪಾದರೆ ಮತ್ತೊಮ್ಮೆ ಎನಿಸುವುದು- ಮನುಷ್ಯ ಕಲ್ಪಿಸಿಕೊಂಡ ಅತಿ ರಂಜಕ, ಆನಂದ ದಾಯಕ ಪ್ರಯಾಣ ಎಂದರೆ ಹಾರುತ್ತಾ ಸಾಗುವುದು. ಹಾರುವುದು ‘ಸ್ವಾತಂತ್ರ್ಯಾಭಿಲಾಷೆ’ಯ ಸಂಕೇತ. ‘ಹಕ್ಕಿ’ ಒಮ್ಮೆ ಈ ಸ್ವಾತಂತ್ರ್ಯದ ಸಂಕೇತವಾಗಿ ತೆರೆದುಕೊಂಡರೆ ಇನ್ನೊಮ್ಮೆ ಅದು ಹೊತ್ತು ತರುವ ವಿಚಾರಗಳ ವೈವಿಧ್ಯತೆಯನ್ನವಲೋಕಿಸಿದಾಗ, “ಹಕ್ಕಿ ಎಲ್ಲೆಲ್ಲೂ ಸುತ್ತಾಡಿ  ವಿಷಯಗಳ ಹೆಕ್ಕಿ ತರುತ್ತದೆ” ಎಂದು ಎನಿಸುವುದೇ ಅದರ ಆ ರೂಪಕ್ಕೆ ಸಿಗಬಹುದಾದ ವಿವರಣೆ ಎನಿಸಿ ಬಿಡುವುದು
ಪಕ್ಷಿ ಅರುಹಿದ ಅವತ್ತಿನ ಎರಡು ಸಾಲುಗಳನ್ನು ಈಗ ‘ಪೀಠಿಕೆ’ ಎಂದು ಬೇಕಾದರೆ ಹೆಸರಿಸಬಹುದು, ಆದರೆ ಹಾಗೆ ಮಾಡುವುದೇನು ಬೇಡ! ಆದರೆ ಪಕ್ಷಿಯೊಡನೆ ಮುಂದೆಯೂ ಅನುಭವವಾಗಿರದಿದ್ದ ಹಂತದಲ್ಲಿ ನಾನು ಅದಕ್ಕೆ ಬಹಳ ಹೆದರಿಬಿಟ್ಟಿದ್ದಿದ್ದಂತೂ ನಿಜ!
ನಂತರದ ಕನಸುಗಳ ಮಧ್ಯೆ ಪಕ್ಷಿ ಮತ್ತೆ ತೂರಿ-ಹಾರಿ ಬಂತು. ಕನಸು ಹೀಗಿತ್ತು...
...ಬಹಳ ಆರಾಮವಾಗಿ, ಸುಲಲಿತವಾಗಿ, ಸರಾಗವಾಗಿ ಹಾರುತ್ತಾ ಅಂದು ಕನಸಿನಲ್ಲಿ ನನ್ನ ಭುಜದ ಮೇಲೆ ಕುಳಿತ ಹಕ್ಕಿ ನನ್ನನ್ನು ಕುರಿತು ಹೇಳಿದಂತೆಯೇ ಹೇಳಿತು, “ನೋಡು.. ಪರಿಸ್ಥಿತಿಯ ಕಗ್ಗಂಟಿನಿಂದ  ಬಿಡಿಸಿಕೊಂಡು ಅದಕ್ಕಿಂತ ಮೇಲೇರಬೇಕೆಂದು ಕನಸುವವರು ‘ಎತ್ತರ’ಕ್ಕೆ ಹೆದರಿದರೆ ಆಗುತ್ತದೆಯೇ? ಎತ್ತರಕ್ಕೆ ಅಂಜುವುದು ‘ಪರಿಹಾರಕ್ಕೆ’, ಉಪಾಯಗಳಿಗೆ, ಸಾಧ್ಯತೆಗಳಿಗೆ, ಇನ್ನೂ ವಿಸ್ತಾರಗೊಳಿಸುವುದಾದರೆ, ಬದುಕುವುದಕ್ಕೇ ಅಂಜಿದಂತೆ! “
ಪಕ್ಷಿಯ ಗುರುತು ಹಿಡಿದು ನಾನೆನ್ನುವೆ-, “ಓ ನೀನು! ಬಾ... ಅದು ನಿಜ..., ಆ ವಿಷಯ ಹಾಗಿರಲಿ. ನಾನೂ ಹಾರಬೇಕು.. ನಿನ್ನಂತೆ!”
ಪಕ್ಷಿ- “ಕಾಲ್ನಡಿಗೆ ಹೇಗೆ ಒಂದು ‘ಸ್ಥಿತಿ’ಯೋ ಹಾಗೇ ಹಾರುವಿಕೆಯೂ ಒಂದು ಸ್ಥಿತಿ! ನಾನು ಹಾರಲು ಮಾಡಲ್ಪಟ್ಟಿರುವೆ. ನೀನು ನಡಿಯಲಿಕ್ಕೆ. ನಮ್ಮ ಸ್ಥಿತಿಗಳನ್ನು ದೈಹಿಕವಾಗಿ ಬದಲಾಯಿಸಿಕೊಂಡರೆ ನಾವಿಬ್ಬರೂ- ‘ನಡೆಯಲಾರೆ’ನೆಂದು ನಾನು, ‘ಹಾರಲಾರೆ’ಎಂದು ನೀನು ಕೊರಗಿಯೇ ಸಾಯಬೇಕಾಗುತ್ತದೆ. ನಾನು ಆಗಲೇ ಪ್ರಸ್ತಾಪಿಸಿದ್ದು ಮಾನಸಿಕ, ಭೌತಿಕ ಹಂತವನ್ನ. ಮನಸ್ಸಿಗೆ ಪಕ್ಷಿಯ ದೇಹದ ಆಶ್ರಯದ ಹಂಗಿಲ್ಲದೇ ‘ಅನಂತತೆ’ಯೆಂಬ ಶಬ್ದಕ್ಕೂ ನಿಲುಕದೆತ್ತರಕ್ಕೆ ಏರುವ ಅಪರಿಮಿತ ತಾಕತ್ತಿದೆ. ಆ ಮನಸ್ಸು ಹೀಗೆ ಕಗ್ಗಂಟಿನಲ್ಲಿ ಒದ್ದಾಡುತ್ತಾ ,ಮೇಲೇರಲು ಹೆದರುತ್ತಾ ಪರಿಹಾರಕ್ಕೇ ವಿಮುಖವಾಗಿದೆ.  ‘ಏರಬೇಕು, ಹಾರಬೇಕು’ ಎಂಬ ವಾಂಛೆ ಮೊರಟಿ ಹೋದ ನಿನ್ನಂತಹವರ ಮನಸ್ಸಿಗೆ ಎಂದು ಬರುವುದೋ ಅಂದು ಎತ್ತರದ ಮಿತಿಯನ್ನೂ ದಾಟಿ ಅದು ಸಾಗುವುದು ಮತ್ತು ಸಾಗುತ್ತಲೇ ಇರುವುದು. ಯೋಚಿಸು..”
ಪಕ್ಷಿ ತನ್ನದೇ ವಿಶೇಷ ಲಯದಲ್ಲಿ ಹಾರಿ ಮರೆಯಾಗುವುದು.....
ಒಂದೊಂದು ಕನಸು ಮುಗಿದಾಗಲೂ ದಿಗಿಲಾಗಿ ಏಳುವುದು ನನಗೆ ಅಭ್ಯಾಸವಾಗಿಹೋಗಿತ್ತು! ಹಾಗಾಗಿ ಈ ಕನಸಿನ ನಂತರದ ನನ್ನ ಪ್ರತಿಕ್ರಿಯೆ ಹೇಳುವುದೇನು ಬೇಡ.. ಆದರೂ ಹೇಳಲೇಬೇಕೆಂದರೆ ಹಿಗೆ ಹೇಳಬಹುದು- ಎಲ್ಲವೂ ಬಹಳ ವಿಚಿತ್ರ. ಹೆದರಿದ ಮಗುವಿಗೆ ‘ಹೆದರಬೇಡ’ವೆಂದು ಹೇಳಲು ಶಿಕ್ಷಕರು ಕರೆಸಿದ್ದರೂ, ಕರೆಸಿದ ಕ್ಷಣದಿಂದಲೇ ಮತ್ತೆ ಹೆದರಿಕೆಯೇ ಆಗುವುದು! ನನ್ನನುಭವವೂ ಹಾಗೆಯೇ ಇತ್ತೆನ್ನಬಹುದೇನೋ.
ಆ ಕನಸಿನತ್ತ ಬರುವುದಾದರೆ, ಪಕ್ಷಿಯ ಸಂವಾದದ ಕುರಿತು ನಾನೇನು ಹೇಳುವುದಿಲ್ಲ. “ಉದ್ದೇಶವೇ ಸಂವಹನ ಮಾಡುವುದಾಗಿರುವಾಗ, ಸಂಹವನದಲ್ಲೇ ಉದ್ದೇಶವೂ ಇರುವಾಗ ಸಂವಹನದ ಬಗೆಗೆ ಹೇಳಲೇನೂ ಉಳಿದಿರುವುದಿಲ್ಲ”
ಇನ್ನು ನನ್ನ ಪ್ರತಿಕ್ರಿಯೆಯ ಬಗ್ಗೆ- ನನ್ನದೇ ಪರಿಸ್ಥಿತಿಯ ಉದ್ದೇಶಿಸಿದಂತೇ ಪಕ್ಷಿ ಮಾತನಾಡಿದರೂ ನಾನು ಅಸಂಬದ್ಧವಾಗಿ ಪ್ರತಿಕ್ರಿಯಿಸುವೆ. ಅದು ನನಗೆ ವಾಸ್ತವವ ಒಪ್ಪಿಕೊಳ್ಳದೇ ಭ್ರಮಾಲೋಕವ ಅಪ್ಪಿಕೊಂಡು ಬದಲಾವಣೆ ಬಯಸುವ, ಸಂತಸವನ್ನು ಅನುಭವಿಸುವ ಹೊರಡುವ ಮನದ ಒಂದು ‘ಹಂತ’ ದಂತೆ ಕಾಣುವುದು. ಅದು ನನ್ನ ಮನದ ಹಂತವೇ ಆಗಿತ್ತು! ಎಷ್ಟು ಅಸಾಧ್ಯಕರವಾದ ಹಂತವದು ಎಂದರೆ ಈ ಕನಸಿನ ಅಂತ್ಯದಲ್ಲಿ ಪಕ್ಷಿ ‘ಯೋಚಿಸು’ ಎಂದಿತ್ತಲ್ಲಾ, ನಾನೂ ಅಂತೂ ಯೋಚಿಸಿದೆ. “ನನಗೇ ಗೊತ್ತಾಗದ್ದನ್ನು ಇದು ನನಗೇ ಬಂದು ಹೇಳುತ್ತದಲ್ಲಾ. ಹೇಗೆ?”- ಎಂದಿಗೂ ಪ್ರಶ್ನೆಗಳು “ಚಿಂತೆಯ ಮೊದಲಿಗೂ ಚಿಂತನೆಯ ಕಡೆಗೂ ಇದ್ದಾಗ ಮಾತ್ರ ಉತ್ತರ ಲಭಿಸುತ್ತದೆ”. ನನ್ನದು ಚಿಂತೆಯಾಗಿತ್ತು ಮತ್ತು ಪ್ರಶ್ನೆ ಕಡೆಯಲ್ಲಿತ್ತು! 

(¸À±ÉõÀ)

(Image Courtesy- Web)

Saturday, November 24, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 7



 ಒಳಗಿನ ‘ಕತ್ತಲೆ’ಯನ್ನು ಹೊಡೆದೋಡಿಸುವುದರ ಬಗೆಗೆ ಕೇಳುತ್ತಿರುತ್ತೇವೆ. ಆದರೆ ಕತ್ತಲೆ ‘ಓಡಿದ’ ಸ್ಥಿತಿಯೆಂಬುದಿಲ್ಲ. ಕತ್ತಲೆ ಹೋಗುವುದು ಎನ್ನುವುದು ಬೆಳಕನ್ನು ಅದರ ಜಾಗದಲ್ಲಿ ‘ತುಂಬುತ್ತಾ’ ಬಂದಂತೆ ಆಗುವಂತದ್ದು. ಇದು ನನಗೆ ಅಚ್ಚುಕಟ್ಟಾಗಿ ಅನ್ವಯವಾಗುವುದಾಗಿತ್ತು. ಅಂದು ಮನೋಬಲವೇ ಮನಕ್ಕೆ ಅತ್ಯುತ್ತಮ ಔಷಧವೆಂದು ‘ಕನಸು’ ಬಂದಿದ್ದು ಗುಳಿಗೆಯನ್ನು ನಿಲ್ಲಿಸುವಷ್ಟು ಬಲವನ್ನೊದಗಿಸಿದ್ದಂತೂ ಹೌದೇ ಆದರೂ ಸಮಸ್ಯೆಯ ಹೆಸರಲ್ಲಿ ಪದರ ಪದರವಾಗಿ ನೆಲೆಸಿರುವ ಕತ್ತಲೆಯನ್ನು ಕಳೆಯಲು ಬೆಳಕು ಮೂಡಿ ಹೋದರೆ ಸಾಲದು, ಅದು ಅಲ್ಲೇ ನೆಲೆಸಬೇಕು! ಹಾಗೆ ನೋಡ ಹೊರಟರೆ ಶಾಶ್ವತವಾದ ಕತ್ತಲೆಯಾಗಲೀ ಸಂಪೂರ್ಣ ಬೆಳಕಾಗಲೀ ಇರುವಂತಹದ್ದು ಕಾಣಸಿಗುವುದಿಲ್ಲ- ಕತ್ತಲೆ ಬೆಳಕನ್ನೂ ಬೆಳಕು ಕತ್ತಲೆಯನ್ನೂ ಒಂದಕ್ಕೊಂದು ತಳಕು ಹಾಕಿಕೊಂಡು ಹೋಗುತ್ತಿರುವುದು ನೈಜವೆನಿಸುತ್ತದೆ. ಬಹಳ ಸಲ ಕತ್ತಲೆಯ ಕೂಪದೊಳಗೆ ಸಿಲುಕಿ ನರಳುವುದೋ ಅಥವಾ ಶಾಶ್ವತ ಬೆಳಕನ್ನು ಮೂಡಿಸಿಕೊಳ್ಳುವುದರತ್ತ ಹವಣಿಸುವುದೋ ಮಾಡುವುದೇ ದುಃಖದ ಮೂಲವಾಗಿ ತೋರುತ್ತದೆ
‘ಅಸಹಾಯಕತೆ’ ಎಂಬ ಪದದ ವ್ಯಾಪ್ತಿ ವಿಸ್ತ?ತವಾದುದ್ದು. ನಾನು ಔಷಧಿಯ ಮೇಲೆ ಅವಲಂಬಿತಳಾಗಿದ್ದವಳು, ಅದನ್ನು ಬಿಟ್ಟು ಸ್ವಾವಲಂಬಿಯಾಗುವ ಬದಲು ‘ಅಸಹಾಯಕ’ಳಾಗಿಬಿಟ್ಟೆ. ಔಷಧಿಯ ನೆಪದಲ್ಲಿ ಮರೆಯಾಗಿದ್ದ ಸಮಸ್ಯೆಗಳೆಲ್ಲಾ ಹಾಗೆಯೇ ಇದ್ದವಲ್ಲಾ ಅವು ಜೋರಾಗಿ ಎದ್ದೆದ್ದು ಕುಣಿದವು! ಅಥವಾ ಕುಣಿಯುವಂತೆ ಕಂಡವು ಎಂಬುದು ಸೂಕ್ತವೇನೋ. ಮಗುವು ತನ್ನ ಕಾಲಮೇಲೆ ನಡೆದರೆ ಸಾಕಪ್ಪಾ ಎಂಬುದು ಪಾಲಕರ ಮೊದಲ ಆಶಯವಷ್ಟೇ. ನಂತರದಲ್ಲಿ ಅದು ನಡೆದರಷ್ಟೇ ಸಾಲದು. ತನ್ನ ಕಾಲಮೇಲೆ ನಡೆಯುತ್ತಾ ಅದು ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದೇ ಅತ್ಯಂತ ಮುಖ್ಯವಾಗಿ ಬಿಡುವುದು! ಹಾಗೆಯೇ ದಿಕ್ಕುದೆಸೆ ಇಲ್ಲದ ಮನಸ್ಸು ಬಹಳ ಅಪಾಯಕಾರಿಯಾದುದು. ನಾನಿಲ್ಲಿ ಅತ್ಯಂತ ಉನ್ನತ ಗುರಿಯನ್ನಿರಿಸಿ ಅದರ ಬಳಿ ಹೋಗಲು ತವಕಿಸುವ ಮನದ ಬಗೆಗೆ ಹೇಳುತ್ತಿಲ್ಲ, ಬದಲಿಗೆ ಬೆಳಗಿನ ಜಾವ ಎದ್ದ ಮೇಲೆ ‘ಈಗೇನು ಮಾಡುವುದು?’ ಎಂದು ಆತಂಕಿಸುವ ಮನದ ಬಗೆಗೆ ಮಾತನಾಡುತ್ತಿರುವೆ. ನನ್ನ ಮನ ‘ಅಂತಹುದೇ’ ಆಗಿತ್ತು.. ಅದನ್ನು ದಾರಿಗೆ ತರುವುದು ನನ್ನ ಕೈಲಿಲ್ಲ ಎಂಬುದನ್ನು ನಾನು ನಿಷ್ಠಳಾಗಿ ನಂಬಿದ್ದರಿಂದ ಅದರ ಕೈಹಿಡಿದು ನಡೆಸುವ ಪ್ರಯತ್ನವನ್ನು ನಾನು ಮಾಡಲೇ ಇಲ್ಲ..
ಹೀಗಿರುವಾಗ ಕನಸಿನ ಅನುಭವವೊಂದು ನನ್ನನ್ನೆಚ್ಚರಿಸಲು ಕಾಣಿಸಿದಂತೆ ತೋರಿತು-
ಒಬ್ಬ ಮಧ್ಯವಯಸ್ಕರು ನನ್ನ ಮನೆಗೆ ಬಂದಿಹರು. ನನಗೆ ಅವರೆಂದರೆ ಬಹಳ ಗೌರವವಿರುವುದು. ಅವರು ನನ್ನನ್ನು ಕೋಣೆಯಲ್ಲಿ ಕುಳಿತುಕೊಂಡು ಸಮಯ ಹಾಳು ಮಾಡುವ ಬದಲು ನಡುಮನೆಗೆ ಬರುವಂತೆ ಸಲಹೆ ನೀಡುವರು. ನಾನು ನಿರಾಕರಿಸಿ ನಂತರ ಒಪ್ಪಿ ನಡೆಯುವೆ. ನಂತರ ಅಲ್ಲಿಂದ ವರಾಂಡಕ್ಕೆ, ಮನೆಯ ಗೇಟ್‌ಗೆ ಹೀಗೇ ಮುಂದೆ ಮುಂದೆ ನಡೆದಂತೆ ನನ್ನ ಮನೆಯ ಆವರಣದಿಂದ ಹೊರಗೆ ನಾನು ಕಾಲಿರಿಸುವೆ. ಅಲ್ಲಿಗೆ ಹೋದೊಡನೇ- “ಹಂತ ಹಂತವಾಗಿ ಹೋಗುತ್ತಾ ಹೋಗು ಇಲ್ಲೊಂದು ಪ್ರಪಂಚವಿದೆ. ಅದು ಎಲ್ಲರನ್ನೂ ಸ್ವೀಕರಿಸುತ್ತದೆ” ಎಂದು ಹೇಳಿ ನಡೆದು ಹೊರಟು ಹೋಗುವರು..
ಇದೇ ಕನಸು ನನಗೆ ಕೆಲ ದಿನಗಳು ಪದೇಪದೇ ಬರುತ್ತಲೇ ಇತ್ತು.. ನಾನು ನನ್ನನ್ನೇ ಕೇಳಿಕೊಂಡೆ ‘ಅಲ್ಲಾ, ಹಂತಹಂತವಾಗಿ ಹೊರಹೋಗೋದೇನೋ ಸರಿ. ಹೋಗೇನು ಮಾಡುವುದು?’. ನನ್ನ ಮನಸ್ಸು ತನಗೆ ಬೇಕಾದ ಹಾಗೆ ಎಲ್ಲಾ ನೀತಿಗಳನ್ನೂ ತಿರುಚಿ ಬಿಡುತ್ತಿತ್ತು! ಆದರೆ ಆ ಕನಸು ಪದೇಪದೇ ಬರುತ್ತಿತ್ತೆಂದೆನಲ್ಲ. ಕಡೆಗೊಂದು ಬಾರಿ ಸಣ್ಣ ಪ್ರಮಾಣದಲ್ಲಿ ನನಗೆನಿಸಿತ್ತು- ‘ನಾನು ಹೀಗಿರಬಾರದು’. ಹೇಗಿರುವೆ ನಾನು? ಮನೆಯಿಂದ ಹೊರಹೋಗಲು ರುಚಿಸದು, ಯಾರೂ ಏನೂ ಹೇಳಬಾರದು, ನನ್ನ ಭವಿಷ್ಯದ ಬಗ್ಗೆ ಚಿಂತಿಸುವುದೆಂದರೆ ನನಗಾಗದು, ಈ ಪ್ರಪಂಚ ಸರಿ ಇಲ್ಲದಿರುವುದರಿಂz, ಎಲ್ಲರೂ ಸ್ವಾರ್ಥಿಗಳಾಗಿರುವುದರಿಂದ ಯಾವುದೂ ನನಗೆ ಬೇಡ....   ಇದು ಸಣ್ಣ ಪಟ್ಟಿಯಷ್ಟೇ. ನನ್ನ ಬಳಿ ಸಾಕ್ಷ್ಯಾಧಾರ ಸಮೇತ ಇವೆಲ್ಲವನ್ನೂ ನಿರೂಪಿಸುವಂತಹಾ ದೊಡ್ಡ ಪಟ್ಟಿಯೇ ಇತ್ತು. ನಾನೀಗ ಅದನ್ನು ಕ್ಷುಲ್ಲಕ ಎನ್ನುವುದಿಲ್ಲ. ಅದು ಆರ್ಥಹೀನ ಎಂದು ಟೀಕಿಸಲು ಹೋಗುವುದೇ ಇಲ್ಲ- ನಾವು ‘ಸಣ್ಣ ಪುಟ್ಟದ್ದು’ ಎಂದು ಪರಿಗಣಿಸುವ ಕೆಲ ವಿಷಯಗಳು ಮೊದಲ ಹಂತದಲ್ಲಿ ‘ದೊಡ್ಡ’ ದಾಗಿ ಕಾಣಿಸಿಕೊಂಡು ನಂತರದ ಹಂತದಲ್ಲಿ ಸಣ್ಣಪುಟ್ಟದಾಗಿರುತ್ತದೆ. ಈ ಮೊದಲ ‘ದೊಡ್ಡ’ ಹಂತವನ್ನು ಪಾರುಮಾಡಲಾಗದ ದುರ್ಬಲ ಮನಸ್ಸಿಗೆ ‘ಆಯುಧ’ಗಳ ಅವಶ್ಯಕತೆಯಿರುತ್ತದೆ. ಈ ಆಯುಧಗಳು ‘ಸಬಲತೆ’ಯೆಡೆಗೆ ಮನಸ್ಸನ್ನು ಕೊಂಡೊಯ್ಯುತ್ತದೆ. ಬಹಳಷ್ಟು ಜನರಿಗೆ ಸರಾಗವಾಗಿ ಅನುಭವಗಳು ‘ಸನ್ನದ್ಧ’ರನ್ನಾಗಿಸಿ ಬಿಡುವುದರಿಂದ ಅದನ್ನು ಹೊಂದದಿರುವುದು ‘ವಿಚಿತ್ರ’ವಾಗಿ ತೋರುವುದು ಸಾಮಾನ್ಯವಾಗಿದೆ..ಈ ತೆರನಾಗಿ ಶಸ್ತ್ರಾಸ್ತ್ರ ಸಜ್ಜಿತಳಾಗುವುದು ಅಂದಿನ ಅವಶ್ಯಕತೆಯಾಗಿತ್ತು. ಮನವರಿಕೆ ಮಾತ್ರ ಆ ರೂಪದಲ್ಲಿ ಆಗಿರಲಿಲ್ಲ.
 ನಮ್ಮಲ್ಲಿರುವ ಲೋಪದೋಷಗಳನ್ನು ಗುರುತಿಸುವುದು ಬೆಳವಣಿಗೆಯ ಮೊದಲ ಹೆಜ್ಜೆಯೇ ಆದರೂ ಆ ಹೆಜ್ಜೆಯಲ್ಲೇ ಉಳಿದು ಬಿಡುವುದು ಖಾಯಿಲೆಯ ಲಕ್ಷಣದಂತೆ ಗೋಚರಿಸಲಾರಂಭಿಸುತ್ತದೆ. ಬದಲಾವಣೆಯ ಪ್ರೇರಣೆಯ ನೆರಳಲ್ಲಿ ಗುರುತಿಸಲ್ಪಡುವ ಲೋಪದೋಷಗಳಿಗಷ್ಟೇ ಬೆಳೆಸುವ, ಬದಲಾಯಿಸುವ ಶಕ್ತಿಯಿರುವುದು. ಆ ತರಹದ ವೇದಿಕೆಯೊಂದು ಸೃಷ್ಠಿಯಾಗುವುದು ಅತಿ ಮುಖ್ಯವಾದುದು. ಅಂತಹ ಪ್ರಜ್ಞೆ  ಯಾವುದೋ ಸಮಯದಲ್ಲಿ ಉದಯಿಸಿ ಜೀವನದ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳು ಗಮನಕ್ಕೆ ಬರುತ್ತಲೇ ಇರುತ್ತವೆ. ನನಗನಿಸುವುದು - ಕಿಡಿಯನ್ನು ಹಚ್ಚಿಸುವುದರಷ್ಟೇ ಮುಖ್ಯ ಬೆಂಕಿಯನ್ನು ಕಾಯ್ದು ಕೊಳ್ಳುವುದು! ಈ ರೀತಿ ‘ಕಾಯ್ದುಕೊಳ್ಳುವಿಕೆ’ ಆದಾಗ ಮಾತ್ರ ಉರಿಯ ಮುಂದಿನ ಉಪಯೋಗವಾಗಲು ಸಾಧ್ಯವಿದೆ. ಅದರ ಬಗೆಗೆ ಮಾತನಾಡದೇ ‘ಕಿಡಿ ಹೊತ್ತಿದ’ ಗಳಿಗೆಯನ್ನಷ್ಟೇ ಉಲ್ಲೇಖಿಸುವುದರಿಂದ ಸಂದೇಶ ಪೂರ್ಣವಾಗದು. ನನ್ನಲ್ಲಿ ಹೀಗೆ ಬದಲಾವಣೆಯ ಸಮಯವನ್ನು ‘ಕಿಡಿ ಹೊತ್ತಿದ’ ಸಂದರ್ಭವೆಂದು ನಾನು ಹೇಳಿದರೆ ಅದು ಸತ್ಯವನ್ನು ದೂರ ತಳ್ಳಿದಂತೆಯೇ ಸರಿ. ಅದನ್ನು ನಾನು ‘ಬೋರೆನಿಸುವ ಬೋರಿನ ಬಗ್ಗೆ ಬೋರುಬಂದ ಕ್ಷಣ’ ಎನ್ನಲು ಇಚ್ಛಿಸುವೆ- ಅಂದು ನನ್ನದೇ ಪ್ರತಿಬಿಂಬವನ್ನು ನಿರುಕಿಸುತ್ತಾ ಎಂದಿನಂತೆ ನನ್ನ ಬಗೆಗೆ- ನಾ ಕಂಡ ಪ್ರಪಂಚದ ಬಗೆಗೆ ದೋಷಾರೋಪ ಸಲ್ಲಿಸುತ್ತಿದ್ದವಳು ಅಚಾನಕ್ಕಾಗಿ ಅರುಹಿಕೊಂಡೆ ‘ಅಂತಹದ್ದು ನನಗೇನಾಗಿದೆ?’. ಇಷ್ಟು ದಿನ, ‘ಅಂತಹದ್ದು ನಿನಗೇನಾಗಿದೆ?’ ಎಂಬ ದೃಷ್ಟಿಕೋನವನ್ನು ಎದುರಿಸುತ್ತಿದ್ದವಳಲ್ಲಿ ಅಷ್ಟು ಮಟ್ಟದ ಮಾರ್ಪಾಟಾಗಿತ್ತು. ಇದರಲ್ಲಿ ಹೇಳಿಕೊಳ್ಳುವುದೇನಿದೆ? ಎನಿಸಿದರೆ ಅದು ಬಹಳ ನಿಜ. ಏಕೆಂದರೆ ಈಗ ಬರೆಯ ಹೊರಟರೆ ನನಗೂ ಹಾಗೇ ಎನಿಸುವುದುಂಟು! ಆದರೆ ಒಂದಂತೂ ನಿಜ- ಎಲ್ಲರಿಗೂ ತಿಳಿದಿರುವ ಸಾಮಾನ್ಯ ವಿಷಯಗಳು ಸಮಸ್ಯೆ ಇರುವವರಿಗೆ ಒಮ್ಮಮ್ಮೆ ಅವರಿಗಿಂತಲೂ ಚೆನ್ನಾಗಿಯೇ ತಿಳಿದಿರುತ್ತದೆ. ಉದಾಹರಿಸುವುದಾದರೆ, ದುರಭ್ಯಾಸಗಳು ಕೆಟ್ಟವೆಂದು ಯಾವ ‘ಆಭ್ಯಾಸಿ’ಗಾದರೂ ತಿಳಿದಿರದೇ ಇರುವುದೇ? ಇನ್ನೂ ಆಳವಾಗಿ ಮಾತನಾಡಿ ನೋಡಿಸಿದರೆ ಅವರಿಗೆ ಅದರಿಂದುಂಟಾಗುವ ದುಷ್ಪರಿಣಾಮಗಳು ಕೆಲವೊಮ್ಮೆ ವೈದ್ಯರ ಸಮನಾಗೇ ತಿಳಿದಿರುವುದೂ ಉಂಟು! ಆದರೆ ಅಲ್ಲಿ ಇರುವ ಕೊರತೆ ‘ಇದರಿಂದ  ಹೊರಬರಲು ಸಾಧ್ಯವಾಗದಂತಹದ್ದು ನನ್ನಲ್ಲಿ ಏನಿದೆ?’ ಎಂಬ ಬಲವಾದ ಪ್ರಶ್ನೆಯ ಬಲದ್ದು. ಇದನ್ನು ನನಗೆ ಅನ್ವಯಿಸ ಹೊರಟರೆ ‘ಅಂತಹದ್ದು ನನಗೇನಾಗಿದೆ?’ ಎಂದೆದ್ದ ಪ್ರಶ್ನೆಯ ಮಹತ್ವ ಸ್ವಲ್ಪ ಸ್ಪಷ್ಟವಾಗುವುದೇನೋ. ಆದರದು ಮತ್ತು ಅದೇ ಮುಖ್ಯವಾದುದು, ಬದುಕ ಬದಲಾಯಿಸುವಂತದ್ದು ಎನ್ನುವಂತಿಲ್ಲ- ಬದುಕ ಏಕೆ ಬದಲಾಯಿಸಿಕೊಳ್ಳಬೇಕಿದೆ ಎಂಬ ಪ್ರಶ್ನೆಗೆ ಉತ್ತರ ದೊರೆಯುವವರೆಗೂ ಅದು ಬದಲಾಗುವುದಿಲ್ಲ ಮತ್ತು ನಾವು ಕೇಳಿಕೊಂಡ ಪ್ರಶ್ನೆ ಸರಿಯಾಗಿದೆ ಎನಿಸುವವರೆಗೂ ಉತ್ತರವೇ ದೊರೆಯುವುದಿಲ್ಲ!
ನಾನಂತೂ ನನಗೆ ನಾನೇ ಅಪ್ರಯತ್ನಪೂರ್ವಕವಾಗಿ ಹೇಳಿಕೊಂಡು ಬಿಟ್ಟಿದ್ದೆ. ಅದರ ಹಿಂದೆಯೇ ನಿಧಾನವಾಗಿ ಉಪಾಯಗಳೂ ದೊರೆಯಲಾರಂಭಿಸುತ್ತಾ ನಡೆದವು. ನಾನು ಅದನ್ನನ್ವಯಿಸಲು ಹೊರಡುವೆ, ಎಡವುವೆ, ಬೀಳುವೆ, ಏಳಲು ತುಂಬ ಸಮಯ ತೆಗೆದುಕೊಳ್ಳುವೆ. ಅಂತೂ ಏಳುವೆ. ಈ ನಿಟ್ಟಿನಲ್ಲಿ, ನನ್ನ ಭಯಗಳಲ್ಲೊಂದಾದ ಹಿಂದೆ ಯಾರದೋ ನೆರಳಿದೆಯೆಂಬ ಭಯದಲ್ಲಿ ಅತ್ತಿತ್ತ ನೋಡಲು ಅಂಜುತ್ತಿದ್ದವಳಿಗೆ ಮನಸ್ಸಿನ ಮೂಲೆ ಕೂಗಿ ಹೇಳುವುದು- ‘ಸರಿ, ಅದೇನಿದೆಯೋ ನೋಡೇ ಬಿಡೋಣ. ಪ್ರಾಣ ಹೋದರೆ ಹೋಗಲಿ’. ಪದೇ ಪದೇ ಅನಿಸುತ್ತಿದ್ದ ಸೂಚನೆಯ ಮೇರೆಗೆ ನಾನು ಚೂರು ಚೂರೇ ಧೈರ್ಯ ತಂದುಕೊಳ್ಳಲಾರಂಭಿಸಿದೆ. ಯಾವ ಕೋಣೆ ಭಯ ತರುವುದೋ ಅಲ್ಲಿಯೇ ಹೋಗಿ ಕೂತೆದ್ದು ಬರುವೆ.  ಎಲ್ಲೇ ಶಬ್ದವೆನಿಸಿದರೂ ಅದರ ಆಕರ ತಿಳಿಯುವವರೆಗೂ ಮುಂದುವರಿಯುವೆ. ಹಗಲಿರಲಿ ರಾತ್ರಿಯಿರಲಿ ನನ್ನ ಪ್ರಯತ್ನ ಸಾಗುವುದು. ಈಗ ಇದನ್ನೋದಿ ಎನಿಸಬಹುದು- ಇಷ್ಟು ಮಾಡುವುದನ್ನು ‘ಕಂಡು’ಕೊಳ್ಳಬೇಕಾಯಿತೇ, ಯಾರೂ ಹೇಳಲಿಲ್ಲವೇ ಎಂದು. ನಮ್ಮಲ್ಲಿ ಎಲ್ಲರೂ ‘ಹೇಳುವವರೇ’ ಆಗಿರುವುದರಿಂದ ಸಲಹೆ ಬರಲಿಲ್ಲ ಎಂದರ್ಥವಲ್ಲ- ಯಾವ ಮನಸ್ಸು ಪ್ರಪಂಚವೇ ಸರಿಯಿಲ್ಲವೆಂದು ನಿರ್ಧರಿಸಿರುವುದೋ ಅದು ಎಲ್ಲಾ ಸತ್ಯಗಳಿಗೂ, ಸೌಂದರ್ಯಕ್ಕೂ ಕಿವುಡು ಹಾಗೂ ಕುರುಡಾಗಿರುತ್ತದೆ. ಅದು ತನ್ನಲ್ಲೇ ನಿಜವನ್ನು ಕಾಣಬೇಕಿರುವುದು. ಹಾಗೆ ಕಂಡುಕೊಂಡಾಗ ಮಿಥ್ಯಗಳಿಗೂ, ಕುರೂಪಕ್ಕೂ ಕಿವುಡು- ಕುರುಡಾಗುವ ಹಂತಕ್ಕೆ ಅದು ಬೆಳೆಯಬಲ್ಲದು

  (ಸಶೇಷ)
(Image Courtesy- Web)