ನಾನು ಹಿಂದಿನ ಬರಹದಲ್ಲಿ ಹೇಳಿದಂತೆ ನನ್ನ ‘ಖಿನ್ನ’
ಮನಃಸ್ಥಿತಿಗೆ ಔಷದೋಪಚಾರ ನಡೆದೇ ಇತ್ತು. ನಾನು ಎಷ್ಟರ ಮಟ್ಟಿಗೆ ಒಂದು ಕಾಳಿನ
ಗಾತ್ರದ ಗುಳಿಗೆಗೆ ನನ್ನ ಮನಸ್ಸನ್ನು ಒಗಿಸ್ಗಿ ಕೊಂಡಿದ್ದೆನೆಂದರೆ ‘ಅದುವೇ
ಜೀವನ. ಅದಿಲ್ಲದಿದ್ದರೆ ನಾನಿಲ್ಲ’ ಎಂಬ ಆತಂಕ ಬಂದೊದಗಿತ್ತು. ಅದರ
ಛಾಪು ಮನೆಯವರ ಮುಖದಲ್ಲೂ ಎದ್ದು ಕಾಣುತ್ತಿತ್ತು. ‘ಯಾವ ದೈಹಿಕ
ಸಮಸ್ಯೆಯೂ ಇಲ್ಲ’ ಎಂಬ ಬಲವಾದ ಆಧಾರವಿದ್ದರೂ. ಮಾನಸಿಕವಾಗಿ ‘ಮಾತ್ರಯೇ ಆಧಾರ’ ಎಂದು ನಾನು ಪರಿಗಣಿಸಿಯಾಗಿತ್ತು. ಅದು
ನನಗೇನು ಉಪಕಾರ ಮಾಡುತ್ತಿದೆ? ಎಂಬುದು ಎಲ್ಲರಿಗೂ ಯಕ್ಷ ಪ್ರಶ್ನೆಯೇ
ಆಗಿದ್ದಂತೆ ನನ್ನ ಸ್ವಬಾವವಿದ್ದರೂ, ಅದನ್ನು ‘ತೆಗೆದುಕೊಳ್ಳದಿದ್ದರೆ ನಡೆಯದು’ ಎಂದು ನನ್ನನ್ನೂ ಸೇರಿದಂತೆ
ಎಲ್ಲರೂ ನಂಬುತ್ತಿದ್ದರು - ಬಹುಷಃ ಈ ಚಟಗಳು ಒದಗಿಸುವಷ್ಟು ಮಾನಸಿಕ ‘ಆಧಾರ’ವನ್ನು ಮತ್ತೇನೂ ಒದಗಿಸಲಾರದು. ಏಕೆಂದರೆ ನಾವು ಚಟಗಳಿಗೆ ಅಂಟುಕೊಂಡೆವೆಂದರೆ ನಮ್ಮ
ದೇಹ- ಮನಸ್ಸನ್ನು ಅದಕ್ಕೆ ಸಂಪೂರ್ಣ ಅರ್ಪಿಸಿಬಿಟ್ಟಂತೆ. ಮನಸ್ಸು ಇನ್ಯಾವ ಧನಾತ್ಮಕವಾದ
ಸಾಧ್ಯತೆಗಳ ಕಡೆಗೂ ವಿಚಲಿತವಾಗದಂತೆ ‘ಚಟ’ವನ್ನು
ಆದರಿಸಿ, ಆರಾದಿಸುತ್ತಾ ಒಂದು ರೀತಿಯ ಧ್ಯಾನಸ್ಥ
ಸ್ಥಿತಿಯಲ್ಲಿದ್ದುಬಿಡುತ್ತದೆ! ಯಾವ ಸಕಾರಾತ್ಮಕ ಬದಲಾವಣೆಗಳಿಗೂ ಗಮನವೀಯದ ಮಹಾನ್ ‘ಧ್ಯಾನಸ್ಥ’ ಸ್ಥಿತಿಯದು!
ಮಾತ್ರೆಗೂ ಆತಂಕಕ್ಕೂ ಬಹಳ ಗಟ್ಟಿ ಸಂಬಂಧವಿದೆ.
ಕಾಯಿಲೆಯಿದ್ದಾಗ ‘ಓ ನನಗೆ ಅದಿದೆ’ ಎಂಬ ಆತಂಕವಾಗುವುದೆಂದಿಟ್ಟುಕೊಳ್ಳೋಣ. ಆಗ,
ಕಾಯಿಲೆ ಹಾಗೂ ‘ಆತಂಕ’ಕ್ಕೆಂದು
ಮಾತ್ರೆ ತೆಗೆದುಕೊಳ್ಳುತ್ತಿದ್ದರೂ, ಅಪ್ಪಿ ತಪ್ಪಿ ಮಾತ್ರೆ
ತಪ್ಪಿಸಿದಾಗ ಅದಕ್ಕಿಂತ ದುಪ್ಪಟು ಆತಂಕವಾಗುತ್ತದೆ. ಅದನ್ನು ಮತ್ತೆ ತಪ್ಪಿಸಲು ಮಾತ್ರೆಯೇ
ಬೇಕಾಗಿ ಬಿಡುತ್ತದೆ. ಒಟ್ಟಾರೆ, ಕಾಯಿಲೆಗೆ ಮಾತ್ರೆಯಾದರೆ ಅದು ಬೇರೆಯ
ವಿಚಾರ. ಆದರೆ ಈ ಆತಂಕ-ಮಾತ್ರೆಗಳು ಒಟ್ಟಾದವೆಂದರೆ ಅದನ್ನು ಬೇರ್ಪಡಿಸುವುದು ಸುಲಭದ ಮಾತಲ್ಲ. ‘ರೋಗ ತಂದುಕೊಳ್ಳುವ ಸಂಪೂರ್ಣ ಶಕ್ತಿ ಮಾತ್ರ ನಮ್ಮಲ್ಲಿದೆ. ಆದರೆ ಅದನ್ನು ಗುಣ ಪಡಿಸುವ
ಶಕ್ತಿ ಕೇವಲ ಮಾತ್ರೆಗಳಲ್ಲಿದೆ’ ಎಂದು ನಮ್ಮಲ್ಲಿರುವ ಬಲವಾದ ನಂಬಿಕೆಯ
ಶಕ್ತಿಯನ್ನೂ ಮತ್ತು ಅದು ರೋಗಗ್ರಸ್ತ ದೇಹದ
ಸ್ಥಿತಿಯನ್ನು ಮತ್ತೂ ಹದಗೆಡಿಸುವಷ್ಟರ ಮಟ್ಟಿಗೆ ಮೂಡಿಸುವ ಅಸಹಾಯಕತೆಯನ್ನು ಅನುಭವಿಸಿಯೇ
ನೋಡಬೇಕು!
ಹ್ಞಂ, ನನ್ನ ಹಾಗೂ ಗುಳಿಗೆಗಳ
ನಂಟು ಈ ಪಾಟೀ ಬಲವಾಗಿದ್ದ ಸಂದರ್ಭದಲ್ಲಿ ‘ನಾ ಕಂಡ ಕನಸು’ ಉಲ್ಲೇಖಿಸಲು ಬಹು ಯೋಗ್ಯವಾದುದು ಎಂದೆನಿಸುವುದು. ಅದರ ಸಾರಾಂಶ ಹೀಗಿತ್ತು- ನಾನು
ತೆಗೆದು ಕೊಳ್ಳುವ ಗುಳಿಗೆಗಳೆಲ್ಲಾ ನನ್ನ ಮುಂದೆ ನರ್ತಿಸುವುವು! ಇಷ್ಟೇ ಇಷ್ಟುದ್ದವಿರುವ
ಗುಳಿಗೆಗಳು ನನ್ನನ್ನು ಅವುಗಳ ಆಕಾರವನ್ನಾಗಿಸಿ, ಅವು ಕ್ಷಣದಿಂದ
ಕ್ಷಣಕ್ಕೆ ಬೃಹತ್ತಾಗಿ ಬೆಳೆದು ನನ್ನನ್ನು ಅಣಕಿಸುವವು. ನಂತರ ಸನ್ನಿವೇಶ ಬದಲಾದಂತಾಗಿ ಅವು ನನ್ನ
ವ್ಯಂಗ್ಯವಾಡುವುದನ್ನು ಬಿಟ್ಟು ತಮ್ಮ ಆಕಾರ ಕ್ಷೀಣಿಸಿ ಕೊಳ್ಳುತ್ತಾ ಸಾಗುವವು. ಅವು
ಕೃಶವಾಗುತ್ತಿದ್ದಂತೆ ನನ್ನ ಕುರಿತ ಆಶಯ ಹೀಗೆ ಮೂಡುವುದು- “ಬಿಟ್ಟು
ಬಿಡು ನಮ್ಮನ್ನು, ತೊರೆದು ಬಿಡು.. ನಮ್ಮೊಳಗಿನ ಶಕ್ತಿಯೆಲ್ಲಾ
ನಿನ್ನಲ್ಲೇ ಇದೆ. ಮನಗಾಣು.. ಸಾಕೀ ಅವಲಂಬನೆ.”
ಅದು ಸಾಕಷ್ಟು ಉದ್ದವಾಗಿದ್ದ ಕನಸು. ನನಗೆ
ಅಲ್ಲಿಯವರೆಗೆ ‘ಚುಟುಕು ಕನಸು’ ಗಳ ದರ್ಶನವಾಗಿತ್ತೇ ವಿನಃ ಹೀಗೆ ಉದ್ದುದ್ದದ
ಕನಸು, ಅದೂ ‘ನನ್ನದೇ ಸಮಸ್ಯೆ’ ಯನ್ನು ನೇರವಾಗಿ ವಿಶ್ಲೇಷಿಸಿದ ರೂಪಕ ಬಂದೊದಗಿದ್ದು ಇದೇ ಮೊದಲು. ನಾನು ಆ ಕನಸಿನಿಂದ
ಪ್ರಭಾವಿತಳಾಗಿದ್ದು ನಿಜವೇ ಆದರೂ ಅದನ್ನು ತತ್ತಕ್ಷಣವೇ ಕಾರ್ಯ ರೂಪಕ್ಕೆ ತರಲು ಹಿಂದೇಟು
ಹಾಕಿದೆ. ‘ನನ್ನೊಲುಮೆಯ ಗುಳಿಗೆ’ಯನ್ನು
ಅಷ್ಟು ಬೇಗ ಹಾಗೆ ಧೈರ್ಯವಾಗಿ ತೊರೆಯಲು ಮನಸ್ಸಾಗಲಿಲ್ಲವೇನೋ. ಆದರೂ ಒಂದಂತೂ ಹೇಳಲೇಬೇಕು,
ಮನಸ್ಸಿನ ಮಾತನ್ನು ನಾವೇ ಹುಟ್ಟಿಸಿಕೊಂಡಿರುವ ವಿವರಣೆಗಳಿಂದ ದಿಕ್ಕರಿಸಿ
ಬಿಡಬಹುದು. ಆದರೆ ವಿವರಣೆಗಳು ಅಸಮರ್ಪಕವಾದಾಗ ಮನಸ್ಸಿನ ಸಲಹೆಯಿಂದ ಹೆಚ್ಚು ದಿನ ತಪ್ಪಿಸಿ
ಕೊಳ್ಳಲಾಗದು. ನನ್ನ ಸ್ಥಿತಿ ‘ಕತ್ತಲಿನಲ್ಲಿರುವಾಗ ದೀಪವ
ಧಿಕ್ಕರಿಸಿದಂತೆ’ ಆಗಿತ್ತಷ್ಟೆ! ಕ್ರಮೇಣ ನಾನು ದೀಪಕ್ಕೆ ನನ್ನ
ಕೋಣೆಯೊಳಕ್ಕೆ ಅನುವು ಮಾಡಿ ಕೊಟ್ಟೆ!
“ಅಮ್ಮಾ, ನಾನು
ನಾಳೆಯಿಂದ ಮಾತ್ರೆ ತಗೋಳೋದಿಲ್ಲ", ಧೈರ್ಯವ ಒಗ್ಗೂಡಿಸಿಕೊಂಡು
ಹೇಳಿದೆ. ಅಂದೇ ನನಗನಿಸಿದ್ದು- ಧೈರ್ಯವು ಭಯದ ನೆರಳಲ್ಲೇ ಬೆಳೆಯುತ್ತಿರುವ ಮಗುವೂ ಆಗಿರಲು
ಸಾಧ್ಯವೆಂದು. ಮುಂದಿನ ಕತ್ತಲಿಂದ ಹೊರ ಬರುವ ನನ್ನೆಲ್ಲಾ ದಿಟ್ಟ ಹೆಜ್ಜೆಗಳನ್ನು ನಾನು
ಪೋಷಿಸಿದ್ದು ನನ್ನನ್ನು ಪ್ರೀತಿಯಿಂದ ಆವರಿಸಿದ್ದ ಭಯದ ಛಾಯೆಯಲ್ಲಿಯೇ!
ಅವತ್ತು, ಒಂದಿಡೀ ದಿನ
ಮಾತ್ರೆಯಿಲ್ಲದೆ ಕಳೆದ ನನ್ನ ಸ್ಥಿತಿ ‘ತಾನು ಎಂದೆಂದಿಗೂ ತನ್ನದೇ ದೇಹದ
ಭಾಗದಂತೆ ಇರಿಸಿಕೊಂಡಿದ್ದ ಊರುಗೋಲನ್ನು ತೊರೆದು ಊರು ಸುತ್ತಿದ ವೃದ್ಧೆ’ಯ ರೀತಿಯಂತಾಗಿತ್ತು. ಹಾಗೇ ಮಾತ್ರೆ ತೊರೆದ ದಿನಗಳು ಕಳೆದಂತೆ ನಾನು ಕಂಡು ಕೊಂಡಿದ್ದು-
ಆಕೆ ನಿಜವಾದ ‘ವೃದ್ಧೆ’ಯಲ್ಲ. ‘ಊರುಗೋಲು’ ಆಕೆಯನ್ನು ವೃದ್ಧೆಯನ್ನಾಗಿಸಿತ್ತು... !
(¸À±ÉõÀ)
(Image Courtesy- Web)
5 comments:
chennagide :)
Very good analysis
nice article..
channagide, nice concept.
@ ವಿನಯ್,ಕಾಕಾ,ಮನಸು & ಸೋಮು
ಧನ್ಯವಾದ.. ಬರುತ್ತಲಿರಿ :)
~ಸುಷ್ಮ
Post a Comment