Wednesday, March 2, 2011

‘ಫಲಾ’ಪೇಕ್ಷೆ!


೨೪-೦೬-೧೦ ರಂದು ಕಂಡ ಕನಸಿನ ನಿರೂಪಣೆ...

ನನ್ನ ಒಂದು ಕೈಯಲ್ಲಿ ಒಂದು ಸುಂದರವಾದ ಹಣ್ಣಿದೆ, ಅತ್ಯಂತ ಯೋಗ್ಯವಾದ ಹಣ್ಣನ್ನು ತಿನ್ನಲು ಇದು ಪ್ರಶಸ್ತ ಗಳಿಗೆಯಾಗಿದೆ. ನಡುವೆ ನಾನು ಅತ್ತ ಗಮನವೀಯದೇ, ಮೇಲೆಲ್ಲೋ ಅಲ್ಲೆಲ್ಲೋ ಮರದ ತುತ್ತ ತುದಿಯಲ್ಲಿ ದುಂಡು ದುಂಡಾಗಿ ಕಂಗೊಳಿಸುತ್ತಿರುವ ಹಣ್ಣನ್ನು ನನ್ನದಾಗಿಸುವ ಯತ್ನದಲ್ಲಿ ಸಂಪೂರ್ಣವಾಗಿ ನಿರತಳಾಗಿಬಿಟ್ಟಿದ್ದೀನಿ. ಅದು ನನಗೆ ಬೇಕೇಬೇಕು ಎನ್ನುವಷ್ಟು ನನಗದು ಹಿಡಿಸಿ ಇಟ್ಟಿದೆ. ನಾನು ಇನ್ನಿಲ್ಲದಂತೆ ಆ ಹಣ್ಣನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನೆಲ್ಲಾ ಗಮನವನ್ನು ಈಗ ‘ಏಕೈಕ’ ಎನಿಸುತ್ತಿರುವ ಗುರಿಯೆಡೆಗೆ ನೆಟ್ಟುಬಿಟ್ಟಿದ್ದೇನೆ. ಮೇಲಿಂದ ಮೇಲೆ ಕಲ್ಲುಗಳನ್ನಾಯ್ದು ಎಸೆದೆಸೆದು ನನಗೆ ಸುಸ್ತಾಗುತ್ತಿದೆ. ಇನ್ನು ಇದು ಅಸಾದ್ಯವೆನಿಸಿದಾಗ ಬಾಯಾರಿ, ಬಸವಳಿದು, ದೈಹಿಕವಾಗಿ ಮಾನಸಿಕವಾಗಿ ಕುಗ್ಗಿ-ನಲುಗಿ ನಾನಲ್ಲೇ ಕುಸಿದು ಕುಳಿತುಕೊಳ್ಳುತ್ತೇನೆ. ಕತ್ತು ಹಾಗೇ ಕೆಳ ಬಾಗಿ ನನ್ನ ಅಂಗೈಯೊಳಗೆ ಬೆಚ್ಚಗೆ ಕುಳಿತಿರುವ ಹಣ್ಣು ಕಾಣುತ್ತಿದೆ, “ಛೆ ಇದನ್ನಾದರೂ ತಿನ್ನೋಣ..” ಎಂದೆಂದುಕೊಳ್ಳುತ್ತಾ ಬಾಯಿಯ ಬಳಿ ತಂದೊಡನೇ ಮೂಗು ತಾಗುವ ಅಸಹನೀಯವಾದ ವಾಸನೆ, ಅದರ ಮೇಲೆ ಮೂಡಿರುವ ನೆರಿಗೆಗಳು, “ಇನ್ನು ಇದು ನಿನ್ನ ಪಾಲಿಗಿಲ್ಲ..” ಎಂಬುದನ್ನು ಸಾರಿ ಹೇಳಿಬಿಡುತ್ತವೆ. ಹಾಗೆಂದು ಅಲ್ಲೆಲ್ಲೋ ಕಂಡ ಹಣ್ಣಿನ ಮೇಲಿನ ಮೋಹಕ್ಕೆ ಬಿದ್ದು ಹೀಗಾಯ್ತು ಹಾಗೆ ಮಾಡಿದ್ದೇ ತಪ್ಪು, ಆ ಹಣ್ಣಿನ ಮೇಲಿನ ಆಸೆಯನ್ನು ಸಂಪೂರ್ಣವಾಗಿ ಬಿಟ್ಟು ಪಾಲಿಗೆ ಬಂದ ಇದೇ ಸಾಕೆಮದುಕೊಂಡಿದ್ದರೆ ಆಗಿತ್ತೆಂಬ ಆಲೋಚನೆಯನ್ನು ಮನಸ್ಸು ಒಪ್ಪುತ್ತಿಲ್ಲ.. ಮತ್ತೇನು ಮಾಡಬಹುದಿತ್ತು? ಗೊಂದಲಗಳು ಎಬ್ಬಿಸಿದ್ದ ಧೂಳನ್ನು ಅರಿವಿನ ತಂಗಾಳಿಯೊಂದು ಹಾಗೇ ಶಮನಗೊಳಿಸಲು ಯತ್ನಿಸುತ್ತಾ ಹೀಗೆ ಪಿಸುಗುಟ್ಟುತ್ತದೆ..

“ಈ ಕ್ಷಣದ ಸತ್ಯದೊಡನೆ ವ್ಯವಹರಿಸುವ ಜಾಣ್ಮೆಯಿಲ್ಲದಿರುವಾಗ ಮತ್ಯಾವುದೋ ಸತ್ಯದ ನಿರೀಕ್ಟೆಯಲ್ಲಿ, ಅದನ್ನು ತನ್ನದಾಗಿಸಿಕೊಳ್ಳುವ ಯತ್ನದಲ್ಲಿ ಕಳೆಯುವ ಸಮಯವೆಲ್ಲಾ ವ್ಯರ್ಥ. ಆ ಹಣ್ಣಿನ ಮೇಲಿಟ್ಟ ಅಪರಿಮಿತ ವ್ಯಾಮೋಹವೇ ಕಡೆಗೆ ಕೈಲಿದ್ದುದನ್ನೂ ಅನುಭವಿಸಲಾಗದ ಪರಿಸ್ಥಿತಿಗೆ ತಳ್ಳಿತೆಂಬುದು ಮೇಲ್ನೋಟಕ್ಕೆ ದಿಟವೇ. ವರ್ತಮಾನ ಅತ್ಯಂತ ಅತ್ಯಮೂಲ್ಯವಾದುದ್ದೇ ಸರಿ. ಅದರರ್ಥ ಕೈಲಿದ್ದ ಹಣ್ಣಿಗೇ ಅಂಟಿಕೊಂಡು ಮತ್ಯಾವುದನ್ನೂ ಕಣ್ಣೆತ್ತಿಯೂ ನೋಡಬಾರದೆಂದಾಗಲೀ, ಯಾವುದರದೋ ಮೇಲಿನ ಹಂಬಲದಿಂದ ಇಲ್ಲಿರುವುದನ್ನೆಲ್ಲಾ ಅಲಕ್ಷಿಸಿ ಹೊರಟುಬೆಡಬೇಕೆನ್ನುವುದಾಗಲೀ ಅಲ್ಲ. ಮನಸ್ಸಿನ ಒಂದು ಭಾಗವನ್ನು ಸಂಪೂರ್ಣವಾಗಿ ತನ್ನದಾಗಿರುವದರ ಮೆಲಿರಿಸಿ ಅದನ್ನನುಭವಿಸುತ್ತಾ, ಮತ್ತೊಂದನ್ನು ಗುರಿಯೆಡೆಗೆ ನೆಟ್ಟುಬಿಟ್ಟರಾಯಿತು. ಕಲ್ಲುಹೊಡೆದ ಆಯಾಸ ನೀಗಿ ಪುಷ್ಟಿ ಕೊಡಲು ಹಣ್ಣಿರುತ್ತದೆ. ಮತ್ತೊಂದು ಗುರಿಯ ಸಾಕಾರ ಮಾಡಿಕೊಳ್ಳುವ ಹಂಬಲ ರುಚಿಯ ಏಕತಾನತೆಯನ್ನು ನೀಗುತ್ತದೆ. ಕಡೆಗೊಮ್ಮೆ ಮರದ ಮೇಲಿನ ಹಣ್ಣು ಆ ಕ್ಷಣಕ್ಕೆ ದಕ್ಕದಿದ್ದರೂ ನಮ್ಮ ಪಾಲಿನದನ್ನು ಆಹ್ಲಾದಿಸಿದ ‘ಅನುಭವ’ ಸಂತೃಪ್ತಿಯೊಡನೆ, ಮತ್ತೊಂದು ಪ್ರಯತ್ನಕ್ಕೆ ಮನಸ್ಸನ್ನು ಅಣಿಗೊಳಿಸುತ್ತದೆ.”
(image- net)

6 comments:

sunaath said...

ಸುಷ್ಮಾ,
ಬಹಳ ದಿನಗಳ ನಂತರ ನಿಮ್ಮ ಕನಸೊಂದನ್ನು ಬರೆದಿದ್ದೀರಿ.
ನಿಮ್ಮ ಕನಸುಗಳು ಸಾಮಾನ್ಯ ಮನುಷ್ಯರ ಕನಸುಗಳಿಗಿಂತ ವಿಭಿನ್ನವಾಗಿವೆ ಎನ್ನುವದು ಎದ್ದು ಕಾಣುವಂತಹದು.

Sushma Sindhu said...

ಕಾಕಾ,
ಇಷ್ಟು ಅ೦ತರದಲ್ಲಿ ಬರೆದರೂ ಇತ್ತ ಬ೦ದುದಕ್ಕೆ ಧನ್ಯವಾದ.
ಕ್ರಿಯೆ ವಿಭಿನ್ನವಾದರೂ ಅದರಲ್ಲಿರುವ ಸತ್ಯ ಒ೦ದೇ ಅಲ್ಲವೇ :)

Pradeep Rao said...

ಉತ್ತಮವಾಗಿದೆ.. ಎರಡು ಗುರಿಗಳನ್ನು ಒಂದೇ ಸಮಯದಲ್ಲಿ ಹೇಗೆ ನಿಭಾಯಿಸುವುದು ಎಂದು ತಿಳಿಯಿತು.

prabhamani nagaraja said...

`ಮನಸ್ಸಿನ ಒಂದು ಭಾಗವನ್ನು ಸಂಪೂರ್ಣವಾಗಿ ತನ್ನದಾಗಿರುವದರ ಮೆಲಿರಿಸಿ ಅದನ್ನನುಭವಿಸುತ್ತಾ, ಮತ್ತೊಂದನ್ನು ಗುರಿಯೆಡೆಗೆ ನೆಟ್ಟುಬಿಟ್ಟರಾಯಿತು.' ಅದ್ಭುತ ಸ೦ದೇಶ ಸುಶ್ಶು, ಬಹಳ ಚೆನ್ನಾಗಿದೆ. ಅನೇಕ ದಿನಗಳ ನ೦ತರ ಬ್ಲಾಗ್ ನಲ್ಲಿ ನಿನ್ನ ಒ೦ದು ಪುಟ್ಟ ಮೌಲ್ಯಯುತ ಕನಸನ್ನು ಓದಿ ಅತೀವ ಆನ೦ದವಾಯ್ತು. ಈ ಆನ೦ದವನ್ನು ಹೀಗೇ ಮು೦ದುವರೆಸುವೆಯ?

Sushma Sindhu said...

ಪ್ರದೀಪ್ ರವರೆ,
ಧನ್ಯವಾದ .. :)

ಜಲನಯನ said...

ಸುಶ್ಮಾ ಕನಸ ಕಾಣುವ ಕನಸು ನನಸ ಮಾಡುವ ಮನಸಿನವರಿಗೆ ಸಾಧ್ಯ..ಏಕೆಂದರೆ ಏನೋ ಮಾಡಬೇಕೇಂಬ ಮನೋಭಾವ ಕನಸಿಗೆ ದಾರಿಯಾಗಬಹುದು...ನಿಮ್ಮ ಕನಸ ಪರಿ ಅದನ್ನ ಪ್ರಸ್ತಿತಿಸಿದ ಪರಿ ಇಷ್ಟವಾಯ್ತು...