ಅನುಭವ
ಮತ್ತು ನಾನು ... !!
ಮಸ್ತಕದೊಳಗೆ ಏನೇ ಘಟಿಸುತ್ತಿದ್ದರೂ ಅದಕ್ಕೆ ಗಮನವೀಯದೇ ಪುಸ್ತಕದಿಂದ ತೆಗೆದುದನ್ನು
ಅದಕ್ಕೆ ಸೇರಿಸುವುದೇ ಅತ್ಯಂತ ಶ್ರೇಷ್ಠವಾದ ಕೆಲಸವೆಂದು ಕಾಣಲ್ಪಡುತ್ತದೆ. ನಂತರದ ಹಂತಗಳಲ್ಲಿ ವಿನಾಯಿತಿ
ಇರುವುದೇನೋ ಆದರೆ ವಿದ್ಯಾರ್ಥಿ ಹಂತದಲ್ಲಂತೂ ಅದು ಸತ್ಯವಾದ ವಿಚಾರ. ಅದರ ಹಿಂದೆ ಮಹತ್ತರವಾದ ಕಾರಣವೂ
ಇರುವುದು ಹೌದಾದರೂ ‘ಕಲಿಯುವಿಕೆ’ಗಿರುವ ವಿವಿಧ ಮುಖಗಳನ್ನು ಪರಿಗಣಿಸದಿರುವುದು ದುರದೃಷ್ಟಕರವೂ
ಹೌದು. ಈ ದುರದೃಷ್ಟ ನನ್ನನ್ನು ಹಲವು ವರುಷ ಕಾಡಿದ್ದು ನಿಜವೆನ್ನಬಹುದೇನೋ. ಹಾಗೆಯೇ ಪುಸ್ತಕದಿಂದ
ತೆಗೆದು ಒಳಸೇರಿಸಿ ಕೇಳಿದಾಗ ಹರಿಯಬಿಡುವುದಷ್ಟೇ ಅಲ್ಲ, ಬದಲಿಗೆ ಒಳ ಹೋದ
ಪ್ರತಿಯೊಂದು ವಿಚಾರವೂ ಯಾವುದಾದರೊಂದು ರೀತಿಯಲ್ಲಿ ನಮ್ಮ ಮೇಲೆ ಪ್ರಭಾವ ಬೀರಲಿಕ್ಕಾಗಿಯೇ ಬಂದು ಸೇರಿದೆ
ಎಂಬ ಪ್ರಜ್ಞೆ ಇಲ್ಲದಿರುವುದೂ ದುಃಖಕರವೇ!
ನನಗೆ ದಾರಿ ಕಾಣಿಸುತ್ತಾ
ಸಾಗಿದ ಕನಸನ್ನು ದಾಖಲಿಸಬೇಕು ಮತ್ತು ಹಂಚಿಕೊಳ್ಳಬೇಕು ಎಂಬ ಆಶಯ ಮೂಡುವ ಹಂತ ನನ್ನದಾಗಿರಲಿಲ್ಲ. ಹಾಗೆನಿಸಿದ್ದು
ಅಮ್ಮನಿಗೆ. ಅನಿಸಿದ್ದರ ಹಿಂದೆಯೇ ಆಗಿನ ಸೌಲಭ್ಯದಂತೆ ಟೇಪ್ ರೆಕಾರ್ಡರ್ ತಂದು ಕನಸು ಅಮ್ಮನಿಗೆ ಹೇಳುತ್ತಾ
ರೆಕಾರ್ಡ್ ಮಾಡುವುದೂ, ನಾನು ಹೇಳಿದ ಕನಸನ್ನು ಸಮಯವಾದಂತೆ ಅಮ್ಮ ಬರೆಯುವುದೂ ನಡೆದಿತ್ತು. ಆದರೆ ಈ ಬರೆಯಬೇಕೆಂಬ-ಹಂಚಬೇಕೆಂಬ
ಆಶಯದ ಹಾದಿಯೂ ಸುಲಲಿತವಾದದ್ದಲ್ಲ ಎಂಬುದೂ ಅರಿವಿಗೆ ಬರಲು ಶುರುವಾದಂತಿತ್ತು. ಮೊದಲನೆಯದಾಗಿ ೧೬ರ
ಆಸುಪಾಸಿನಲ್ಲಿ ಇಂತಹುಗಳು ಘಟಿಸುವುದು ಹಲವರ ಪ್ರಕಾರ ಒಳ್ಳೆಯ ಬೆಳವಣಿಗೆಯಲ್ಲ. ಅದಕ್ಕಿಂತ ಮುಖ್ಯವಾಗಿ
ಅಂತದುಹಕ್ಕೆಲ್ಲಾ ‘ಅನುಭವ ಸಾಲದು’. ನನಗೆ ಮೊದಲನೆಯ
ವಿಚಾರದ ಬಗೆಗೆ ಖುದ್ದು ಏನನಿಸದೇ ಅಭಿಪ್ರಾಯ ಕೇಳಿ ತಿಳಿದು ಗಾಬರಿಯಾಗಿದ್ದು ಹೌದಾದರೂ ಅಷ್ಟೇನು ಗಮನವಿದ್ದಂತಿರಲಿಲ್ಲ. ಆದರೆ ಅದೇಕೋ ಈ ‘ಅನುಭವ’ ಎಂಬುದರ ಬಗ್ಗೆ ಪದೇ ಪದೇ ಎಲ್ಲರಿಂದ ಕೇಳುತ್ತಿದ್ದರಿಂದ
ಅದು ಅತಿ ದೊಡ್ಡ ಪ್ರಶ್ನೆ ಹಾಗೂ ಸಮಸ್ಯೆಯಾಗಿ ಉಳಿದಿತ್ತು. ನನಗೆ ನಾನೇ ಕೇಳಿಕೊಳ್ಳುವೆ : ‘ಅನುಭವಿ’ ಎಂದು ಕರೆಯುವ ವಯಸ್ಸು ಯಾವುದು’ ನಾನು ೯೯ ವರುಷ ಬುದುಕಿದ್ದೆನೆಂದರೂ ಅದರ ನಂತರದ ದಿನದ ಅನುಭವಕ್ಕೆ ನಾನು ಹೊಸಬಳೇ’
ಅನನುಭವಿಯೇ ಅಲ್ಲವೇ’ ಮತ್ತೇಕೆ ಈ ತರಹದ ಭಾವನೆಯಿದೆ’
ಅದೇ ಸಮಯದಲ್ಲಿ ನನ್ನ ಸುಪ್ತ ಮನಸ್ಸು ಅದಕ್ಕೆ ತನ್ನದೇ ವಿವರಣೆ ನೀಡಲು
ಕಾದು ಕುಂತಂತೆ ಒಮ್ಮೆ ಕನಸಿನ ಸಂಭಾಷಣೆಯಲ್ಲಿ ಹೀಳಿತು.. “ಅನುಭವ ಎನ್ನುವುದು ಪ್ರತಿ ಕ್ಷಣದಲ್ಲೂ
ಅಡಗಿದೆ. ಮುಚ್ಚಿದ ರೆಪ್ಪೆಯಲ್ಲಿ ಕಳೆದ ಕ್ಷಣಗಳು ದಾಖಲಾಗುತ್ತಾ, ತೆರೆದ
ಕಣ್ಣುಗಳಲ್ಲಿ ಹೊಸದನ್ನು ಕಾಣುವ ಆಶಯವಿದೆ. ಒಮ್ಮೊಮ್ಮೆ ಕಣ್ಣರೆಪ್ಪೆ ಬಡಿದಾಗಲೂ ಒಳ ಹೋಗಿ ದಾಖಲಾಗುವವುಗಳೇ
ಅನುಭವಗಳು. ಈಗ
ಹೇಳು ನಮ್ಮಲ್ಯಾರು ಅನನುಭವಿಗಳು?”
ಅನುಭವದ ಬಗೆಗೆ ಇಷ್ಟೆಲ್ಲಾ ಅನ್ನಿಸಲು ಗುರುತರವಾದ ಕಾರಣಗಳೇ ಇವೆ. ಯಾರ
ಮುಂದೆ ಕನಸಿನ ಅನುಭವಗಳ ಹೇಳ ಹೊರಟರೂ ಅದು ವಯಸ್ಸಿನ ಕಾರಣಕ್ಕೆ ಅಸ್ವೀಕೃತವಾಗುತ್ತಿದ್ದರಿಂದ ಅದರ
ಬಗೆಗೆ ತುಸು ಹೆಚ್ಚೇ ಚಿಂತೆ-ಚಿಂತನೆಗಳು ನಡೆದಿರುವುದನ್ನು
ತೆಗೆದು ಹಾಕುವಂತಿಲ್ಲ.
ಮೇಲಿನ ಸುಪ್ತ ಮನಸ್ಸಿನ ಸಂಭಾಷಣೆ ಒಂದಾದರೆ. ಮತ್ತೊಮ್ಮೆ ಪಕ್ಷಿಯೊಡನೆ ನಡೆದ ಮಾತುಕತೆ ಈ ರೀತಿಯಿತ್ತು.
ಪಕ್ಷಿ ಕಟ್ಟೆಯ ಮೇಲೆ ಕುಳಿತ ನನ್ನನ್ನು ಸ್ಥಳವೊಂದಕ್ಕೆ ಕರೆದೊಯ್ಯುವುದು.
ಅಲ್ಲಿ ನೋಡಿದರೆ ಮನುಷ್ನೊಬ್ಬ ಕಲ್ಲೊಂದನ್ನು ಕುಟ್ಟುತ್ತಾ ಕುಳಿತಿರುವನು. ಅವನು ಕಣ್ಣು ಮುಚ್ಚಿಕೊಂಡು
ಕೈಯಲ್ಲಿರುವ ಹತಾರದಲ್ಲಿ ಮನಬಂದಂತೆ ಕುಟ್ಟುತ್ತಿರುವನು. ಸುತ್ತಲೂ ರಾಶಿ ರಾಶಿ ಕಲ್ಲಿನ ಪುಡಿ- ತುಂಡುಗಳು.
ಪಕ್ಷಿ ಹೇಳುವುದು. “ಹುಡುಗೀ, ನೋಡವನನ್ನ. ವರ್ಷಗಟ್ಟಲೆಯಿಂದ ಕಲ್ಲನ್ನು ಶ್ರದ್ಧೆಯಿಂದ
ಕುಟ್ಟುತ್ತಿರುವ ‘ಅನುಭವಿಯನ್ನ’”
ನಾನೆನ್ನುವೆ,
“ಇದೇಕೆ ಹೀಗೆ ಕಣ್ಣು ಮುಚ್ಚಿ ಕಲ್ಲನ್ನು ತುಂಡು ತುಂಡಾಗಿಸಿರುವ? ‘ಅನುಭವಿ’ ಯಾವುದರಲ್ಲಿ? ಕಲ್ಲನ್ನು ಚಚ್ಚುವುದರಲ್ಲೇ?”
ಪಕ್ಷಿ- “ಅದೇ ಅಲ್ಲವೇ ವಿಪರ್ಯಾಸ’ ಪಕೃತಿ ದೃಷ್ಠಿಯ, ಪ್ರತಿಭೆಯನ್ನಿತ್ತು ,ಅದರ ಸಾಕಾರವಾಗಲೆಂದೇ ಕಲ್ಲನ್ನೂ,
ಹತಾರವನ್ನೂ ದೊರಕಿಸಿಕೊಟ್ಟಿತು. ಈತನೋ ಕಣ್ಣುಮುಚ್ಚಿ ಕುಳಿತ. ಕಣ್ಣು ಮುಚ್ಚಿದ್ದು
ಯಾವುದರಿಂದಲೋ? ಅದೇನು ದರ್ಪವೋ? ಮೂರ್ಖತನವೋ? ಬಲ್ಲವರ್‍ಯಾರು? ಏನೇ ಇರಲಿ ಹೀಗೆ ಜೀವನದುದ್ದಕ್ಕೂ ಕುಳಿತ ‘ಅನುಭವಿಗಳು’ ಎಷ್ಟೋ ಏನೋ..”
ನನಗೀಗ ಅನಿಸುವುದು : ಅನುಭವ ಜೀವನದ ಒಂದೊಂದು ಹಂತವನ್ನೂ ದಾಟುತ್ತಾ ಹೋದ
ಮನಸ್ಸು ಬದುಕಿನ ರೂಪುರೇಷೆಗಳ ಕಾಣುತ್ತಾ ಪರಿಪಕ್ವಗೊಂಡಂತೆ ಲಭಿಸುವ ನಿರಂತರ ಸಾರಾಂಶ. ಯಾವ ಮನಸ್ಸು ತನ್ನಲ್ಲೇ ಮಂಥಿಸುವುದೋ ಅದು ಎಲ್ಲವನ್ನೂ
ಗ್ರಹಿಸುವುದು ಮತ್ತು ಗ್ರಹಿಕೆಯನ್ನು ನಿರಂತರವಾಗಿ ಮಂಥಿಸುತ್ತಾ ‘ಅನುಭವಿ’ಯಾಗುವುದು. ಅದಕ್ಕೆ ಪಾಠಗಳ ಕಲಿಸುವ ಬದುಕಿನ ಮಗ್ಗಿಲುಗಳೇ ಆಗಬೇಕೆಂದಿಲ್ಲ. ಕಾರಣ,
ಪಾಠಗಳಲ್ಲಿರುವುದು ಅಕ್ಷರಗಳ ಜೋಡಣೆ ಮಾತ್ರ. ಅದನ್ನು ಅರ್ಥೈಸಿಕೊಳ್ಳುವ ಶಕ್ತಿ ಓದುಗನಿಗಿರುವುದಷ್ಟೇ
ಮುಖ್ಯವಾಗುವುದು.
ವಿಚಿತ್ರವೆಂದರೆ ಈ ಅನುಭವವ ಮಂಥಿಸುವ, ಗ್ರಹಿಸುವ ಹಂತ ತಲುಪಲೂ ಮತ್ತೆ ಅನುಭವದ ಅವಶ್ಯಕತೆಯೇ ಇದೆ! ಕಾರಣ : ಅನುಭವವೆನ್ನುವುದು
ಹಂತವಲ್ಲವೇ ಅಲ್ಲ ಅದೊಂದು ಪಯಣ. ಎಡಬಿಡದೆ ನಡೆಯುತ್ತಿರುವಂತಹುದು. ಹಿಂದೆ ಕಲಿತದ್ದನ್ನು ಅರಿತುಕೊಳ್ಳಲು
ಇಂದಿನ ಹಾಗೂ ಇಂದಾದುದನ್ನು ಅರ್ಥೈಸಲು ಹಿಂದಿನದರ ಅಗತ್ಯ ನಿರಂತರವಾಗಿ ಬೇಕಾಗುತ್ತಲೇ ಇರುತ್ತದೆ..
(Image- Web)
(‘ಕಂಡೆ ನಾನೊಂದು ಕನಸು’ ಅಂಕಣ (ಸಿಹಿಗಾಳಿ ಮಾಸ
ಪತ್ರಿಕೆ)- 10)